
ಬೆಂಗಳೂರು, ಅಕ್ಟೋಬರ್ 14: ತುರ್ತು ಸಂದರ್ಭದಲ್ಲಿ ರೋಗಿಗಳ ಚಿಕಿತ್ಸೆಗೆ ವೈದ್ಯಕೀಯ ಸಾಮಗ್ರಿಗಳು, ಔಷಧ ಅತ್ಯಗತ್ಯ. ಆದರೆ ರಾಜ್ಯ ರಾಜಧಾನಿ ಬೆಂಗಳೂರಲ್ಲಿನ ಟ್ರಾಫಿಕ್ ಸಮಸ್ಯೆಯಿಂದಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಜೀವ ಕಳೆದುಕೊಂಡವರು ಅದೆಷ್ಟೋ ಮಂದಿ ಇದ್ದಾರೆ. ಈ ವಿಷಯವನ್ನ ಗಮನದಲ್ಲಿರಿಸಿ ಏರ್ ಬಾಂಡ್ ಸಂಸ್ಥೆ ತುರ್ತು ಸಂದರ್ಭ ಮೆಡಿಕಲ್ ಉಪಕರಣಗಳನ್ನು ಸಾಗಿಸಬಲ್ಲ ಡ್ರೋನ್ ಆವಿಷ್ಕಾರ ಮಾಡಿದೆ. ರಕ್ತ ಸೇರಿದಂತೆ ಇತರೆ ಮೆಡಿಕಲ್ ಪರಿಕರಗಳು ಸಾಗಿಸಲು ಈ ಡ್ರೋನ್ ನೆರವಾಗಲಿದೆ.
ಏರ್ಬಾಂಡ್ ಮತ್ತು ನಾರಾಯಣ್ ಹೆಲ್ತ್ ಸಹಯೋಗದೊಂದಿಗೆ ಈ ಡ್ರೋನ್ ಸೇವೆ ಸಿಗಲಿದ್ದು, ಗಂಟೆಗೆ 60 ಕಿ.ಮೀ. ವೇಗ ಮತ್ತು 400 ಮೀಟರ್ ಎತ್ತರದಲ್ಲಿ ಹಾರುವ ಸಾಮರ್ಥ್ಯವನ್ನು ಇದು ಹೊಂದಿದೆ. 2.5 ಕೆ.ಜಿ. ತೂಕವಿರುವ ಈ ಡ್ರೋನ್, ಸುಮಾರು 1 ಕೆ.ಜಿ.ಯಷ್ಟು ಭಾರವಿರುವ ಪರಿಕರಗಳನ್ನು ಹೊತ್ತು ಸಾಗಬಹುದಾಗಿದೆ. ಸಾಗಾಟದ ವೇಳೆ ಮಳೆ, ಗಾಳಿ, ಬಿಸಿಲು ಸೇರಿ ಯಾವುದೇ ರೀತಿಯ ವಾತಾವರಣ ಇದ್ದರೂ ವೈದ್ಯಕೀಯ ಪರಿಕರಗಳಿಗೆ ಯಾವುದೇ ಹಾನಿ ಆಗದ ರೀತಿಯಲ್ಲಿ ಡ್ರೋನ್ ವಿನ್ಯಾಸಗೊಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯ ಏರ್ಬಾಂಡ್ ಸಂಸ್ಥೆ ಸಿಬ್ಬಂದಿ ಈಗಾಗಲೇ ಪ್ರಾಯೋಗಿಕವಾಗಿ 5 ಡ್ರೋನ್ಗಳ ಯಶಸ್ವಿ ಹಾರಾಟ ನಡೆಸಿದ್ದಾರೆ. ಇವು ಹೊಸಕೋಟೆಯಲ್ಲೇ ನಿರ್ಮಾಣಗೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಆವಿಷ್ಕಾರಗಳ ಮೂಲಕ ಹೆಚ್ಚು ಡ್ರೋನ್ ಗಳ ನಿರ್ಮಾಣದ ಗುರಿಯನ್ನು ಸಂಸ್ಥೆ ಹೊಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:08 pm, Tue, 14 October 25