Global Handwashing Day 2025: ಸರಿಯಾರ ರೀತಿಯಲ್ಲಿ ಕೈ ತೊಳೆಯಿರಿ, ರೋಗ ರುಜಿನಗಳಿಂದ ದೂರವಿರಿ
ಬಹುಪಾಲು ರೋಗಗಳು ನಮ್ಮ ದೇಹಕ್ಕೆ ಅಂಟಿಕೊಳ್ಳುವುದು ಕೈಗಳ ಮೂಲಕವೇ. ಆದ್ದರಿಂದ ಕೈಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದು ತುಂಬಾನೇ ಅವಶ್ಯಕ. ಪ್ರತಿನಿತ್ಯ ಆಗಾಗ್ಗೆ ಕೈಗಳನ್ನು ತೊಳೆಯುವ ಮೂಲಕ ಪದೇ ಪದೇ ಕಾಡುವ ಆರೋಗ್ಯ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದು. ಹಾಗಾಗಿ ಸಾಬೂನಿನಿಂದ ಕೈ ತೊಳೆಯುವುದರ ಪ್ರಾಮುಖ್ಯತೆ ಮತ್ತು ಅದು ಸೋಂಕುಗಳು, ರೋಗಗಳು ಬಾರದಂತೆ ತಡೆಗಟ್ಟಲು ನಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 15 ರಂದು ಜಾಗತಿಕ ಕೈ ತೊಳೆಯುವ ದಿನವನ್ನು ಆಚರಿಸಲಾಗುತ್ತದೆ.

ಕೈ ತೊಳೆಯುವುದು (Handwash) ಉತ್ತಮ ನೈರ್ಮಲ್ಯ ಅಭ್ಯಾಸ. ಇದು ಅನೇಕ ಸಾಂಕ್ರಾಮಿಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಹೌದು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ರೋಗ ರುಜಿನಗಳು ಭಾದಿಸದಂತೆ ನೋಡಿಕೊಳ್ಳಲು ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಅದು ನಮ್ಮ ಕೈಗಳನ್ನು ಆಗಾಗ್ಗೆ ಸಾಬೂನು ಮತ್ತು ಸ್ವಚ್ಛ ನೀರಿನಿಂದ ತೊಳೆಯುವುದು. ಪ್ರತಿನಿತ್ಯ ಆಗಾಗ್ಗೆ ಕೈಗಳನ್ನು ತೊಳೆಯುವ ಮೂಲಕ ಸೋಂಕುಗಳು ಮತ್ತು ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಪ್ರವೇಶಿಸುವುದನ್ನು ತಪ್ಪಿಸಬಹುದು. ಈ ಮೂಲಕ ಆಗಾಗ್ಗೆ ಕಾಡುವ ವೈರಲ್ ಸೋಂಕು, ಜ್ವರ ಇತ್ಯಾದಿ ಆರೋಗ್ಯ ಸಮಸ್ಯೆಯಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು. ವರದಿಗಳ ಪ್ರಕಾರ ಅತಿಸಾರ ಕಾಯಿಲೆ ಪ್ರಕರಣಗಳಲ್ಲಿ 3 ರಲ್ಲಿ 1, ಶೀತ ಅಥವಾ ಜ್ವರದಂತಹ ಪ್ರಕರಣಗಳಲ್ಲಿ 5 ರಲ್ಲಿ 1% ಕಾಯಿಲೆಗಳು ಕೈಯಲ್ಲಿರುವ ಸೂಕ್ಷ್ಮ ಜೀವಿಗಳು ಮತ್ತು ಬ್ಯಾಕ್ಟೀರಿಯಾದ ಕಾರಣ ಹರಡುತ್ತವೆ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಸಾಬೂನಿನಿಂದ ಆಗಾಗ್ಗೆ ಕೈ ತೊಳೆಯುವುದು ಎಷ್ಟು ಮುಖ್ಯ ಎಂಬುದನ್ನು ನೆನಪಿಸುವ ಸಲುವಾಗಿ ಪ್ರತಿವರ್ಷ ಅಕ್ಟೋಬರ್ 15 ರಂದು ಜಾಗತಿಕ ಕೈ ತೊಳೆಯುವ (Global Handwashing Day) ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ಜಾಗತಿಕ ಕೈ ತೊಳೆಯುವ ದಿನದ ಇತಿಹಾಸವೇನು?
ಮೊದಲ ಜಾಗತಿಕ ಕೈ ತೊಳೆಯುವ ದಿನವನ್ನು 2008 ರಲ್ಲಿ ಆಚರಿಸಲಾಯಿತು, ಆಗ ಪ್ರಪಂಚದಾದ್ಯಂತ 70 ಕ್ಕೂ ಹೆಚ್ಚು ದೇಶಗಳಲ್ಲಿ 120 ಮಿಲಿಯನ್‌ಗಿಂತಲೂ ಹೆಚ್ಚು ಮಕ್ಕಳು ಸೋಪಿನಿಂದ ಕೈ ತೊಳೆದರು. ಕೈ ತೊಳೆಯುವುದನ್ನು ಉತ್ತೇಜಿಸಲು ಮತ್ತು ರೋಗ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ಗ್ಲೋಬಲ್ ಹ್ಯಾಂಡ್ ವಾಶಿಂಗ್ ಪಾರ್ಟ್ನರ್ಶಿಪ್ ಎಂಬ ಸಂಸ್ಥೆ ಗ್ಲೋಬಲ್ ಹ್ಯಾಂಡ್‌ವಾಷಿಂಗ್ ದಿನವನ್ನು ಸ್ಥಾಪಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಅಕ್ಟೋಬರ್ 15 ರಂದು ಆಚರಿಸುತ್ತಾ ಬರಲಾಗುತ್ತಿದೆ.
ಜಾಗತಿಕ ಕೈ ತೊಳೆಯುವ ದಿನದ ಮಹತ್ವ:
- ಜಾಗತಿಕ ಕೈ ತೊಳೆಯುವ ದಿನವು ಪ್ರತಿಯೊಬ್ಬರೂ ಸ್ವಚ್ಛವಾಗಿ ಕೈ ತೊಳೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಉತ್ತೇಜಿಸುತ್ತದೆ.
- ಸರಿಯಾಗಿ ಕೈ ತೊಳೆಯುವ ಅಭ್ಯಾಸವು ಅತಿಸಾರದಂತಹ ಕಾಯಿಲೆಯನ್ನು 24 ರಿಂದ 40% ರಷ್ಟು, ಮಕ್ಕಳಲ್ಲಿ ಜಠರಗರುಳಿನ ಕಾಯಿಲೆಯನ್ನು 29 ರಿಂದ 57% ರಷ್ಟು ಮತ್ತು ಶೀತ, ಜ್ವರ ಮುಂತಾದ ವೈರಲ್ ಕಾಯಿಲೆಗಳನ್ನು 16 ರಿಂದ 20% ರಷ್ಟು ಕಡಿಮೆ ಮಾಡುತ್ತದೆ ಎಂದು ವರದಿಗಳು ಹೇಳಿವೆ.
- ಅದಕ್ಕಾಗಿಯೇ ನೀವು ಶೌಚಾಲಯಕ್ಕೆ ಹೋಗಿ ಬಂದ ನಂತರ, ಅಡುಗೆ ಮಾಡುವ ಮೊದಲು, ಊಟಕ್ಕೆ ಮೊದಲು ಮತ್ತು ಸೀನುವಿಕೆ ಅಥವಾ ಕೆಮ್ಮಿದ ನಂತರ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳುವುದು ಬಹಳ ಅವಶ್ಯಕ.
- ಜಾಗತಿಕ ಕೈ ತೊಳೆಯುವ ದಿನದ ಮುಖ್ಯ ಉದ್ದೇಶವೆಂದರೆ ಜನರಿಗೆ ತಮ್ಮ ಕೈಗಳ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದು.
ಕೈ ತೊಳೆಯುವುದು ಏಕೆ ಮುಖ್ಯ?
ಕೈಗಳನ್ನು ತೊಳೆಯುವುದು ಬಹಳ ಮುಖ್ಯ. ಇದು ನೈರ್ಮಲ್ಯದ ಒಂದು ಭಾಗವಾಗಿದೆ. ಕೈಗಳನ್ನು ತೊಳೆಯದಿದ್ದರೆ ಅಥವಾ ಸರಿಯಾಗಿ ಕೈ ತೊಳೆಯದಿದ್ದರೆ, ವೈರಸ್ ಅಥವಾ ಬ್ಯಾಕ್ಟೀರಿಯಾವು ಕೈಗಳ ಮುಖಾಂತರ ನಮ್ಮ ದೇಹವನ್ನು ಸುಲಭವಾಗಿ ಪ್ರವೇಶಿಸಬಹುದು. ಇದರಿಂದಾಗಿ ನಾವು ಅನಾರೋಗ್ಯಕ್ಕೆ ಒಳಗಾಗಬಹುದು. ಆದ್ದರಿಂದ ಕೈಗಳನ್ನು ಸಾಬೂನಿನಿಂದ ತೊಳೆದರೆ ಅನೇಕ ರೋಗಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಬರಿ ಕೈತೊಳೆದರೆ ಸಾಕಾಗುವುದಿಲ್ಲ, ಕೈಗಳನ್ನು ಸರಿಯಾಗಿ ತೊಳೆಯುವುದು ಮುಖ್ಯ. ಸಾಬೂನು ಮತ್ತು ನೀರಿನಿಂದ ಕೈಗಳನ್ನು ತೊಳೆದ ಬಳಿಕ ನಿಮ್ಮ ಕೈಗಳನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿ. ಹೀಗೆ ಮಾಡುವುದರಿಂದ ಕೈಗಳ ಮೂಲಕ ಹರಡುವ ಕಾಯಿಲೆಯನ್ನು ತಡೆಯಬಹುದು.
ಇದನ್ನೂ ಓದಿ: ಮನೆ, ಮನ ಬೆಳಗುವ ಹೆಣ್ಣು ಸಮಾಜದ ಕಣ್ಣು; ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಸಲ್ಲದು
ಕೈಗಳನ್ನು ತೊಳೆಯುವ ಸರಿಯಾದ ಮಾರ್ಗ:
- ಮೊದಲು, ನಿಮ್ಮ ಕೈಗಳನ್ನು ನೀರಿನಿಂದ ಒದ್ದೆ ಮಾಡಿ.
- ಇದರ ನಂತರ, ನಿಮ್ಮ ಅಂಗೈಗಳ ಮೇಲೆ ಸೋಪನ್ನು ಉಜ್ಜಿಕೊಳ್ಳಿ.
- ಆ ಸಾಬೂನಿನ ನೊರೆಯಲ್ಲಿ ಕೈಗಳನ್ನು ಚೆನ್ನಾಗಿ ತಿಕ್ಕಿಕೊಳ್ಳಿ.
- ಅಂಗೈಗಳ ಹೊರತಾಗಿ, ಬೆರಳುಗಳ ನಡುವಿನ ಪ್ರದೇಶಗಳನ್ನು ಸಹ ಚೆನ್ನಾಗಿ ಸ್ವಚ್ಛಗೊಳಿಸಿ.
- ಇದಾದ ಬಳಿಕ ನಿಮ್ಮ ಕೈಗಳನ್ನು ಸ್ವಚ್ಛ ನೀರಿನಿಂದ ತೊಳೆಯಿರಿ.
- ಇದಾದ ನಂತರ, ನಿಮ್ಮ ಕೈಗಳನ್ನು ಸ್ವಚ್ಛವಾದ ಟವೆಲ್ ಅಥವಾ ಟಿಶ್ಯೂ ಕಾಗದದಿಂದ ಒರೆಸಿ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸಾಬೂನಿನಿಂದ ಕೈ ತೊಳೆಯುವಾಗ ಕನಿಷ್ಠ 40 ರಿಂದ 60 ಸೆಕೆಂಡುಗಳ ಕಾಲ ಕೈಗಳನ್ನು ಸಾಬೂನಿನಿಂದ ಉಜ್ಜುವುದು ಅವಶ್ಯಕ. ಅದೇ ರೀತಿ ಸ್ಯಾನಿಟೈಸರಿಂದ ಕನಿಷ್ಠ 20 ರಿಂದ 30 ಸೆಕೆಂಡುಗಳ ಕಾಲ ಕೈಗಳಿಗೆ ಉಜ್ಜಿಕೊಳ್ಳಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








