International Day of the Girl Child 2025: ಮನೆ, ಮನ ಬೆಳಗುವ ಹೆಣ್ಣು ಸಮಾಜದ ಕಣ್ಣು; ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಸಲ್ಲದು
ಹೆಣ್ಣು ಮನೆಯ ಲಕ್ಷ್ಮೀ, ಮನೆಯ ಕಣ್ಣು ಅಂತ ಹೇಳ್ತಾರೆ. ಆದ್ರೂ ಇಂದಿಗೂ ಕೂಡ ಹೆಣ್ಣು ಮಗುವೆಂದ್ರೆ ಮೂಗು ಮುರಿಯುವ, ಹೆಣ್ಣು ಮಕ್ಕಳ ಮೇಲೆ ಶೋಷಣೆ, ದೌರ್ಜನ್ಯ ಎಸಗುವಂತಹ ಜನ ಈ ಸಮಾಜದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸವಾಲುಗಳು ಮತ್ತು ಅವರ ಹಕ್ಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿವರ್ಷ ಅಕ್ಟೋಬರ್ 11 ರಂದು ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸಲಾಗುತ್ತದೆ.

ಇಂದು ಸಮಾಜ ಎಷ್ಟೇ ಮುಂದುವರೆದಿದ್ದರೂ ಲಿಂಗ ಅಸಮಾನತೆ, ಹೆಣ್ಣು ಮಕ್ಕಳ (Girl Child) ಬಗ್ಗೆ ತಾತ್ಸಾರ ಭಾವ ಇನ್ನೂ ಕಡಿಮೆಯಾಗಿಲ್ಲ. ಹೆಣ್ಣು ಮಕ್ಕಳು ಶಿಕ್ಷಣ, ಉದ್ಯೋಗ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಷ್ಟೇ ಪ್ರಾಬಲ್ಯವನ್ನು ಸಾಧಿಸಿದರೂ ಸಮಾಜದಲ್ಲಿ ಸಮಾನ ಸ್ಥಾನಮಾನ ಎನ್ನುವಂತಹದ್ದು ದೊರೆತಿಲ್ಲ. ಹೆಣ್ಣು ಭ್ರೂಣ ಹತ್ಯೆ, ಕೌಟುಂಬಿಕ ಹಿಂಸಾಚಾರ, ಬಲವಂತದ ವಿವಾಹ, ಲೈಂಗಿಕ ದೌರ್ಜನ್ಯಕ್ಕೆ ಪ್ರಪಂಚದಾದ್ಯಂತೆ ಅದೆಷ್ಟೋ ಹೆಣ್ಣು ಮಕ್ಕಳು ಬಲಿಯಾಗಿದ್ದಾರೆ. ಪ್ರತಿನಿತ್ಯ ಅದೆಷ್ಟೋ ಹೆಣ್ಣು ಮಕ್ಕಳು ಇಂತಹ ತೊಂದರೆಗಳಿಗೆ ಸಿಲುಕಿ ನಲುಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಸ್ಥಾನಮಾನ ದೊರೆಯಬೇಕು, ಮಹಿಳೆಯರು, ಹೆಣ್ಣು ಮಕ್ಕಳು ಎದುರಿಸುತ್ತಿರುವ ಸವಾಲುಗಳು ಮತ್ತು ಅವರ ಹಕ್ಕುಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಅಕ್ಟೋಬರ್ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ (International Day of the Girl Child) ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ.
ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಇತಿಹಾಸವೇನು?
ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸುವ ಉಪಕ್ರಮವನ್ನು ಪ್ಲಾನ್ ಇಂಟರ್ನ್ಯಾಷನಲ್ ಎಂಬ ಸರ್ಕಾರೇತರ ಸಂಸ್ಥೆಯಿಂದ ಜಾರಿಗೆ ತಂದಿತು. ಈ ಸಂಸ್ಥೆಯು ‘ಏಕೆಂದರೆ ನಾನು ಹುಡುಗಿ’ ಎಂಬ ಅಭಿಯಾನವನ್ನು ಸಹ ಪ್ರಾರಂಭಿಸಿತು. ಇದರ ನಂತರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಅಭಿಯಾನವನ್ನು ವಿಸ್ತರಿಸಲು, ಕೆನಡಾ ಸರ್ಕಾರವನ್ನು ಸಂಪರ್ಕಿಸಲಾಯಿತು ಮತ್ತು ಕೆನಡಾ ಸರ್ಕಾರವು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸುವ ಪ್ರಸ್ತಾಪವನ್ನು ಮಂಡಿಸಿತು. ವಿಶ್ವ ಸಂಸ್ಥೆಯು ಡಿಸೆಂಬರ್ 19, 2011 ರಂದು ಈ ನಿರ್ಣಯವನ್ನು ಅಂಗೀಕರಿಸಿತು ಮತ್ತು ಅಕ್ಟೋಬರ್ 11 ರಂದು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಇದಾದ ನಂತ ಅಕ್ಟೋಬರ್ 11, 2012 ರಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಯಿತು. ಅಂದಿನಿಂದ ಈ ವಿಶೇಷ ದಿನವನ್ನು ಪ್ರತಿವರ್ಷ ಜಾಗತಿಕ ಮಟ್ಟದಲ್ಲಿ ಆಚರಿಸುತ್ತಾ ಬರಲಾಗುತ್ತಿದೆ.
ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಉದ್ದೇಶವೇನು?
- ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 11 ರಂದು ವಿಶ್ವದ 50 ಕ್ಕೂ ಹೆಚ್ಚು ದೇಶಗಳು ಆಚರಿಸುತ್ತವೆ. ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವು ಬಾಲ್ಯವಿವಾಹ, ಶಿಕ್ಷಣ, ತಾರತಮ್ಯ ಮತ್ತು ಹಿಂಸೆ ಸೇರಿದಂತೆ ಪ್ರಪಂಚದಾದ್ಯಂತ ಹೆಣ್ಣು ಮಕ್ಕಳು ಎದುರಿಸುತ್ತಿರುವ ಲಿಂಗ ಆಧಾರಿತ ಅಸಮಾನತೆಯನ್ನು ಕೊನೆಗೊಳಿಸುವುದಾಗಿದೆ.
- ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸುವ ಉದ್ದೇಶವೆಂದರೆ ಹೆಣ್ಣುಮಕ್ಕಳಲ್ಲಿ ಅವರ ಹಕ್ಕುಗಳು, ಅವರ ಸುರಕ್ಷತೆ ಮತ್ತು ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಇದರಿಂದ ಅವರು ಎದುರಿಸುವ ಎಲ್ಲಾ ಸವಾಲುಗಳು ಮತ್ತು ಸವಾಲುಗಳನ್ನು ಧೈರ್ಯದಿಂದ ಎದುರಿಸಬಹುದು.
- ಪ್ರಪಂಚದಾದ್ಯಂತದ ಹುಡುಗಿಯರು ಬಾಲ್ಯವಿವಾಹ, ತಾರತಮ್ಯ ಮತ್ತು ಹಿಂಸೆ, ಲೈಂಗಿಕ ದೌರ್ಜನ್ಯ, ಲಿಂಗ ತಾರತಮ್ಯ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳನ್ನು ಎತ್ತಿ ತೋರಿಸುವ, ಈ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಅವರ ಹಕ್ಕುಗಳು ಮತ್ತು ಸಬಲೀಕರಣವನ್ನು ಉತ್ತೇಜಿಸುವ ಗುರಿಯನ್ನು ಈ ದಿನ ಹೊಂದಿದೆ.
ಇದನ್ನೂ ಓದಿ: ಡಿಜಿಟಲ್ ಯುಗದಲ್ಲೂ ವಿಶ್ವಾಸಾರ್ಹ ಸೇವೆಯನ್ನು ನೀಡುತ್ತಿರುವ ಅಂಚೆ
ಈ ದಿನವನ್ನು ಹೇಗೆ ಆಚರಿಸಲಾಗುತ್ತದೆ?
- ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಮತ್ತು ಅಭಿಯಾನಗಳನ್ನು ನಡೆಸುತ್ತವೆ.
- ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನಗಳನ್ನು ನಡೆಸುವ ಮೂಲಕ ಹೆಣ್ಣುಮಕ್ಕಳ ಸಾಧನೆಗಳನ್ನು ಹಂಚಿಕೊಳ್ಳಲಾಗುತ್ತದೆ.
- ಶಿಕ್ಷಣವು ಪ್ರತಿಯೊಂದು ಹೆಣ್ಣು ಮಗುವಿಗೆ ತಲುಪಬೇಕೆಂಬ ಉದ್ದೇಶದಿಂದ ಅಭಿಯಾನಗಳನ್ನು ನಡೆಸಲಾಗುತ್ತದೆ.
- ಪ್ರತಿಯೊಂದು ಹಳ್ಳಿಯಲ್ಲೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ, ಹೆಣ್ಣು ಮಕ್ಕಳು ಹೊರೆಯಲ್ಲ, ಹೆಮ್ಮೆ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








