World Post Day 2025: ಡಿಜಿಟಲ್ ಯುಗದಲ್ಲೂ ವಿಶ್ವಾಸಾರ್ಹ ಸೇವೆಯನ್ನು ನೀಡುತ್ತಿರುವ ಅಂಚೆ
ಅಂಚೆ ಸೇವೆಗಳು ದೇಶ ಮತ್ತು ಜಗತ್ತನ್ನು ಸಂಪರ್ಕಿಸುವ ವಿಶ್ವಾಸಾರ್ಹ ಮಾಧ್ಯಮವಾಗಿದೆ. ಸ್ಮಾರ್ಟ್‌ಫೋನ್, ಇಂಟರ್‌ನೆಟ್ ಯುಗದಲ್ಲೂ ಅಂಚೆ ವಿಶ್ವಾಸಾರ್ಹ ಸೇವೆಯನ್ನು ನೀಡುತ್ತಿದೆ. ಹೀಗೆ ಜನರ ದೈನಂದಿನ ವ್ಯವಹಾರ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಅಂಚೆ ವಹಿಸುವ ಪಾತ್ರದ ಬಗ್ಗೆ ಜಾಗೃತಿಯನ್ನು ಮೂಡಿಸಲು ಪ್ರತಿವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ.

ಅಂಚೆ ಸೇವೆಯು (Post service) ಅತ್ಯಂತ ಹಳೆಯ ಮತ್ತು ಅತ್ಯಂತ ವಿಶ್ವಾಸಾರ್ಹ ಸೇವೆಯಾಗಿದೆ. ಹಿಂದೆಲ್ಲಾ ಜನರು ಅಂಚೆಯ ಮುಂಖಾತರವೇ ತಮ್ಮವರ ಬಳಿ ವ್ಯವಹರಿಸುತ್ತಿದ್ದರು, ಸಂವಹನ ನಡೆಸುತ್ತಿದ್ದರು. ಈಗಲೂ ಕೂಡ ಅಂಚೆ ತನ್ನ ಸೇವೆಯನ್ನು ನೀಡುತ್ತಿದೆ. ಹೌದು ದೂರವಾಣಿ ವ್ಯವಸ್ಥೆ ಬಂದರೂ, ಸ್ಮಾರ್ಟ್‌ಫೋನ್ ಇಂಟರ್‌ನೆಟ್ ಬಂದ್ರೂ, ಅಂಚೆಯ ಜನಪ್ರಿಯತೆಯು ಕಡಿಮೆಯಾಗದೆ ಗಟ್ಟಿಯಾಗಿ ಬೇರೂರಿದೆ. ವೈಯಕ್ತಿಕ ಪತ್ರಗಳು, ಪ್ರಮುಖ ದಾಖಲೆಗಳಿಂದ ಇ-ಕಾಮರ್ಸ್ ಮತ್ತು ಆನ್‌ಲೈನ್ ಶಾಪಿಂಗ್ ಪ್ಯಾಕೆಜ್‌ವರೆಗೆ ಇಂದು ಅಂಚೆ ಎಲ್ಲಾ ರೀತಿಯ ಸೇವೆಗಳನ್ನು ನೀಡುತ್ತಿದೆ. ಅಲ್ಲದೆ ಇಂದು ಅಂಚೆ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳಾಗಿದ್ದು, ಜನಸಾಮಾನ್ಯರಿಗೆ ಸಹಾಯವಾಗುವಂತಹ ಹಲವಾರು ಯೋಜನೆಗಳನ್ನು ಸಹ ಜಾರಿಗೆ ತಂದಿದೆ. ಹೀಗೆ ಜನರ ದೈನಂದಿನ ಜೀವನದ ವ್ಯವಹಾರ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಅಂಚೆ ವ್ಯವಸ್ಥೆ ವಹಿಸುವ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ (World Post Day) ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ವಿಶ್ವ ಅಂಚೆ ದಿನವನ್ನು ಏಕೆ ಆಚರಿಸಲಾಗುತ್ತದೆ?
ದೈನಂದಿನ ಜೀವನದ ವ್ಯವಹಾರದಿಂದ ಹಿಡಿದು ದೇಶಗಳ ಆರ್ಥಿಕ ಅಭಿವೃದ್ಧಿಯವರೆಗೆ ಸಮಾಜದಲ್ಲಿ ಅಂಚೆ ಸೇವೆಗಳ ಮಹತ್ವ ಮತ್ತು ಉಪಯುಕ್ತತೆಯನ್ನು ಎತ್ತಿ ತೋರಿಸಲು ಪ್ರತಿ ವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಅಂಚೆ ದಿನದ ಇತಿಹಾಸವೇನು?
ಅಕ್ಟೋಬರ್ 9, 1874 ರಂದು ಸ್ವಿಟ್ಜರ್ಲೆಂಡ್‌ನ ಸ್ಥಾಪನೆಯಾದ ಯುನಿವರ್ಸಲ್ ಪೋಸ್ಟಲ್ ಯೂನಿಯನ್ (UPU) ನ ವಾರ್ಷಿಕೋತ್ಸವದ ನೆನಪಿಗಾಗಿ ಅಕ್ಟೋಬರ್ 9 ರಂದು ಪ್ರತಿವರ್ಷ ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ. 1840 ರಲ್ಲಿ ಇಂಗ್ಲೇಂಡಿನ ಸರ್ ರೋಲ್ಯಾಂಡ್ ಹಿಲ್ ಎಂಬವರು ಪತ್ರಗಳನ್ನು ಸಿದ್ಧಪಡಿಸುವ ಹೊಸ ವ್ಯವಸ್ಥೆಯನ್ನು ಮೊದಲ ಬಾರಿಗೆ ಪ್ರಾರಂಭಿಸಿದರು. ಹೀಗೆ 1800 ರ ದಶಕದ ಅಂತ್ಯದಲ್ಲಿ ಅಂತರಾಷ್ಟ್ರೀಯ ಪತ್ರವಿನಿಮಯದ ನಿಧಾನಗತಿಯ ಬೆಳವಣಿಗೆಯೊಂದಿಗೆ, ಜಾಗತಿಕ ಮಟ್ಟದಲ್ಲಿ ಅಂಚೆ ವ್ಯವಸ್ಥೆಯು ಹೊರಹೊಮ್ಮಿತು. ಅದರ ನಂತರ ಮೊದಲ ಬಾರಿಗೆ ಅಕ್ಟೋಬರ್ 09, 1874 ರಲ್ಲಿ ಸ್ವಿಟ್ಜರ್ಲೆಂಡ್ನ ಬರ್ನ್ ನಲ್ಲಿ ಯುನಿವರ್ಸಲ್ ಪೋಸ್ಟಲ್ ಯುನಿಯನ್ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಇದರ ನೆನಪಿಗಾಗಿ 1969 ರಲ್ಲಿ ಜಪಾನಿನ ಟೋಕಿಯೋದಲ್ಲಿ ನಡೆದ ಯುನಿವರ್ಸಲ್ ಪೋಸ್ಟಲ್ ಯೂನಿಯನ್ ಸಮ್ಮೇಳನದಲ್ಲಿ ಮೊದಲ ಬಾರಿಗೆ ವಿಶ್ವ ಅಂಚೆ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 09 ರಂದು ವಿಶ್ವ ಅಂಚೆ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಗ್ರಾಹಕರಿಗೆ ಅಂಚೆ ಇಲಾಖೆಯ ಬಗ್ಗೆ ಮಾಹಿತಿ ನೀಡುವುದು, ಅಂಚೆ ಸೇವಗಳ ಬಗ್ಗೆ ಅರಿವು ಮೂಡಿಸುವುದು ವಿಶ್ವ ಅಂಚೆ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ: ದೇಶದ ಶೌರ್ಯದ ಸಂಕೇತ ವಾಯುಪಡೆ; ಭಾರತೀಯ ವಾಯುಸೇನೆ ಎಷ್ಟು ಶಕ್ತಿಶಾಲಿ ಎಂದು ತಿಳಿಯಿರಿ
ವಿಶ್ವ ಅಂಚೆ ದಿನದ ಮಹತ್ವವೇನು?
- ದೇಶಗಳ ಅಭಿವೃದ್ಧಿಯಲ್ಲಿ ಅಂಚೆ ಸೇವೆಗಳ ಆರ್ಥಿಕ ಮತ್ತು ಸಾಮಾಜಿಕ ಮಹತ್ವವನ್ನು ಉತ್ತೇಜಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.
- ಜನರ ದೈನಂದಿನ ಜೀವನದಲ್ಲಿನ ವ್ಯವಹಾರ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಅಂಚೆ ಇಲಾಖೆಯ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ.
- ಈ ದಿನದಂದು ಅಂಚೆ ಇಲಾಖೆಗಳು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಮುಖ್ಯವಾಗಿ ಈ ವಿಶೇಷ ದಿನದಂದು ಇಂದಿನ ಡಿಜಿಟಲ್ ಲೋಕದಲ್ಲಿ ಮರೆಯಾದ ಪತ್ರಗಳು ಮತ್ತು ಅಂಚೆ ಇಲಾಖೆಯ ಅನುಪಮ ಕೊಡುಗೆಯನ್ನು ಸ್ಮರಿಸಲಾಗುತ್ತದೆ.
- ಈ ದಿನ ಅನೇಕ ದೇಶಗಳ ಅಂಚೆ ಸಂಸ್ಥೆಗಳು ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರಾರಂಭಿಸುತ್ತವೆ ಮತ್ತು ತಮ್ಮ ಉದ್ಯೋಗಿಗಳನ್ನು ಗೌರವಿಸುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








