World Rivers Day 2025: ನದಿಗಳು ಬರೀ ನೀರಿನ ಮೂಲವಲ್ಲ, ಪರಿಸರ ವ್ಯವಸ್ಥೆಯ ಜೀವನಾಡಿ; ಅವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ
ನದಿಗಳು ಸಿಹಿ ನೀರಿನ ಅತಿ ದೊಡ್ಡ ಮೂಲವಾಗಿದ್ದು, ಇವು ಪರಿಸರ ವ್ಯವಸ್ಥೆಯ ಜೀವನಾಡಿ ಅಂತಾನೇ ಹೇಳಬಹುದು. ಆದರೆ ಇಂದು ನದಿಗಳಲ್ಲಿ ಎಸೆಯುವ ಕಸ, ವಿಷಪೂರಿತ ಕೈಗಾರಿಕಾ ತ್ಯಾಜ್ಯಗಳಿಂದಾಗಿ ನದಿ ನೀರು ಕಲುಷಿತಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ನದಿಗಳನ್ನು ಸಂರಕ್ಷಿಸಬೇಕು, ಸ್ವಚ್ಛಗೊಳಿಸಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಸೆಪ್ಟೆಂಬರ್ ಕೊನೆಯ ಭಾನುವಾರದಂದು ವಿಶ್ವ ನದಿಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ನದಿಗಳು (Rivers) ಬರೀ ನೀರಿನ ಮೂಲವಲ್ಲ ಅವುಗಳು ಪರಿಸರ ವ್ಯವಸ್ಥೆಯ ಜೀವನಾಡಿ. ಹೌದು ನದಿಗಳು ಸಿಹಿ ನೀರಿನ ಅತಿದೊಡ್ಡ ಮೂಲವಾಗಿದ್ದು, ಇವುಗಳು ಶುದ್ಧ ನೀರನ್ನು ನೀಡುವ ಮೂಲಕ ಸಕಲು ಜೀವರಾಶಿಗಳನ್ನೂ ಪೋಷಿಸುತ್ತಿದೆ. ಇದೇ ಕಾರಣಕ್ಕೆ ನಮ್ಮ ದೇಶದಲ್ಲಿ ನದಿಗಳನ್ನು ದೇವರೆಂದು ಪೂಜಿಸುವುದು. ಆದರೆ ಇಂದು ಕೈಗಾರಿಕರಣ, ನಗರೀಕರಣದಂತಹ ಅಭಿವೃದ್ಧಿಯ ಕಾರಣದಿಂದಾಗಿ ಅನೇಕ ನದಿಗಳ ಒಡಲು ಕಲುಷಿತಗೊಳ್ಳುತ್ತಿದೆ. ಮಾನವನ ಸ್ವಾರ್ಥಕ್ಕೆ ಅದೆಷ್ಟೋ ನದಿಗಳು ಇಂದು ಮಾಲಿನ್ಯಗೊಂಡು, ಆ ನೀರು ಕುಡಿಯಲು ಕೂಡ ಯೋಗ್ಯವಲ್ಲದಂತಾಗಿದೆ, ಅಷ್ಟೇ ಅಲ್ಲದೆ ಇದರಿಂದ ನದಿ ನೀರಿನಲ್ಲಿ ವಾಸಿಸುವ ಜಲಚರ ಜೀವಿಗಳಿಗೂ ಅಪಾಯ ಉಂಟಾಗುತ್ತಿದೆ. ಹೀಗೆ ಮಾನವನ ಕಾರಣದಿಂದಾಗಿ ನದಿಗಳು ಕಲುಷಿತಗೊಂಡಿದ್ದು, ಸಕಲ ಜೀವರಾಶಿಗಳಿಗೂ ಜೀವನಾಧಾರವಾಗಿರುವ ನದಿಗಳನ್ನು ಸಂರಕ್ಷಣೆ ಮಾಡಬೇಕು, ಅವುಗಳನ್ನು ಸ್ವಚ್ಛಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರದಂದು ವಿಶ್ವ ನದಿಗಳ (World Rivers Day) ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ನದಿಗಳ ದಿನದ ಇತಿಹಾಸವೇನು?
ಜಲ ಮಾಲಿನ್ಯವು ಪ್ರಪಂದ ಒಂದು ಪ್ರಮುಖ ಸಮಸ್ಯೆಯಾಗಿದ್ದು, ಹೀಗಿರುವಾಗ ನದಿಗಳ ಮಾಲಿನ್ಯವನ್ನು ತಡೆಗಟ್ಟುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಜನರು ನದಿಗಳ ಬಗ್ಗೆ ತೋರುವ ನಿರ್ಲಕ್ಷ್ಯವನ್ನು ಹಾಗೂ ನದಿಗಳ ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು, 2005ರಲ್ಲಿ ಪ್ರಸಿದ್ಧ ಪರಿಸರವಾದಿ ಮಾರ್ಕ್ ಏಂಜೆಲೋ ಅವರು ತಮ್ಮ ಲೈಫ್ ಇನ್ ವಾಟರ್ ಅಭಿಯಾನದ ಸಮಯದಲ್ಲಿ ವಿಶ್ವಸಂಸ್ಥೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಅಭಿಯಾನದಲ್ಲಿ ಅವರು ವಿಶ್ವ ನದಿ ದಿನವನ್ನು ಆಚರಿಸುವ ಅಂಶವನ್ನು ಮುಂದಿಟ್ಟರು. ಮತ್ತು ಅಭಿಯಾನವನ್ನು ಮುಂದುವರಿಸಲು ಏಂಜೆಲೊ ವಾರ್ಷಿಕ ವಿಶ್ವ ನದಿ ದಿನವನ್ನು ಆಚರಿಸಬೇಕೆಂದು ಪ್ರತಿಪಾದಿಸಿದರು. ನಂತರ ಅದೇ ವರ್ಷ ಅಂದರೆ 2005 ರಲ್ಲಿ ಮೊದಲ ವಿಶ್ವ ನದಿಗಳ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್ ನಾಲ್ಕನೇ ಭಾನುವಾರದಂದು ವಿಶ್ವ ನದಿಗಳ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ದೇಶ ಸುತ್ತಿ ಜ್ಞಾನ, ಅನುಭವ ಸಂಪಾದಿಸಿ; ವಿಶ್ವ ಪ್ರವಾಸೋದ್ಯಮ ದಿನದ ಬಗ್ಗೆ ತಿಳಿಯಿರಿ
ವಿಶ್ವ ನದಿಗಳ ದಿನದ ಮಹತ್ವವೇನು?
- ಪ್ರಂಚದಾದ್ಯಂತ ನದಿಗಳ ಸ್ವಚ್ಛತೆ ಮತ್ತು ಅವುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವುದು ವಿಶ್ವ ನದಿಗಳ ದಿನದ ಆಚರಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ.
- ಭವಿಷ್ಯದ ಪೀಳಿಗೆಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ಮತ್ತು ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
- ಸರ್ಕಾರ ಮತ್ತು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ನದಿಗಳನ್ನು ಸ್ವಚ್ಛಗೊಳಿಸುವುದು ಮತ್ತು ನದಿಗಳ ಪ್ರಾಮುಖ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಗಳನ್ನು ಮಾಡುತ್ತವೆ.
ಈ ದಿನದಂದು ಯಾವ ವಿಶೇಷ ಚಟುವಟಿಕೆಗಳು ನಡೆಯುತ್ತವೆ?
ಈ ದಿನದಂದು ನದಿ ಸ್ವಚ್ಛತಾ ಅಭಿಯಾನಗಳು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:55 am, Sun, 28 September 25








