World Tourism Day 2025: ದೇಶ ಸುತ್ತಿ ಜ್ಞಾನ, ಅನುಭವ ಸಂಪಾದಿಸಿ; ವಿಶ್ವ ಪ್ರವಾಸೋದ್ಯಮ ದಿನದ ಬಗ್ಗೆ ತಿಳಿಯಿರಿ
ಪ್ರವಾಸೋದ್ಯಮವು ವಿವಿಧ ದೇಶಗಳ ಸಂಸ್ಕೃತಿ , ವೈವಿಧ್ಯತೆಯ ಬಗ್ಗೆ ಪ್ರವಾಸಿಗರಿಗೆ ತಿಳಿದುಕೊಳ್ಳಲು ಅವಕಾಶವನ್ನು ಒದಗಿಸಿಕೊಂಡುವಂತೆ, ಈ ಕ್ಷೇತ್ರವು ಉದ್ಯೋಗ ಸೃಷ್ಟಿಸುವಲ್ಲಿ, ದೇಶದ ಆರ್ಥಿಕತೆಯನ್ನು ಹೆಚ್ಚಿಸುಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಇಷ್ಟು ಮಾತ್ರವಲ್ಲದೆ ಇದು ದೇಶದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರತಿವರ್ಷ ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ.

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತಿದೆ. ಪುಸ್ತಕ ಓದುವುದರಿಂದ ಜ್ಞಾನ ವೃದ್ಧಿಸುವಂತೆ ಬೇರೆ ಬೇರೆ ಊರುಗಳಿಗೆ ಪ್ರವಾಸ ಹೋಗಿ ಅಲ್ಲಿನ ಜನರ ಆಚಾರ ವಿಚಾರಗಳು, ಸಂಸ್ಕೃತಿ, ವೈವಿಧ್ಯತೆ, ಧಾರ್ಮಿಕ ಅಂಶಗಳು, ಜೀವನಶೈಲಿಯ ಒಂದಷ್ಟು ವಿಚಾರಗಳನ್ನು ತಿಳಿದುಕೊಳ್ಳುವ ಮೂಲಕ ಲೋಕ ಜ್ಞಾನವೂ ಬೆಳೆಯುತ್ತದೆ. ಇದೊಂದು ಕಡೆಯಾದರೆ, ಇನ್ನೊಂದು ಕಡೆ ಪ್ರವಾಸೋದ್ಯಮವು (Tourism) ಯಾವುದೇ ಒಂದು ದೇಶದ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ, ಉದ್ಯೋಗವನ್ನು ಸೃಷ್ಟಿಸುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಪ್ರಸ್ತುತ ಈ ಪ್ರವಾಸೋದ್ಯಮ ಪ್ರಪಂಚದಾದ್ಯಂತ ಅತಿ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಉದ್ಯಮ ವಲಯವಾಗಿ, ಆರ್ಥಿಕತೆಗೆ ಗಣನೀಯ ಕೊಡುಗೆಯನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ವಿಶ್ವ ಪ್ರವಾಸೋದ್ಯಮ (World Tourism Day) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ವಿಶ್ವ ಪ್ರವಾಸೋದ್ಯಮ ದಿನದ ಇತಿಹಾಸವೇನು?
ವಿಶ್ವ ಪ್ರವಾಸೋದ್ಯಮ ದಿನದ ಆಚರಣೆಯನ್ನು 1980 ರಲ್ಲಿ ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆಯ (UNWTO) ಪ್ರಾರಂಭಿಸಿತು. ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ಸ್ಪೇನ್ ದೇಶದ ಟೊರೆಮೊಲಿನೋಸ್ನಲ್ಲಿ ನಡೆದ ತನ್ನ ಮೂರನೇ ಅಧಿವೇಶನದಲ್ಲಿ ಈ ದಿನವನ್ನು ಆಚರಿಸಲು ನಿರ್ಧರಿಸಿತು. ಸೆಪ್ಟೆಂಬರ್ 27 ರಂದು ಈ ದಿನವನ್ನು ಆಚರಿಸಲು ಕಾರಣವೇನೆಂದರೆ, 1970 ರಲ್ಲಿ ವಿಶ್ವಸಂಸ್ಥೆಯ ಪ್ರವಾಸೋದ್ಯಮ ಸಂಸ್ಥೆಯ ಶಾಸನಗಳನ್ನು ಈ ದಿನದಂದು ಅಂಗೀಕರಿಸಲಾಯಿತು. ಈ ನೆನಪಿಗಾಗಿ ಪ್ರತಿವರ್ಷ ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಮತ್ತು ಅದರ ಅಭಿವೃದ್ಧಿಯನ್ನು ಉತ್ತೇಜಿಸುವುದು ಈ ದಿನದ ಆಚರಣೆಯ ಉದ್ದೇಶವಾಗಿದೆ.
ಇದನ್ನೂ ಓದಿ: ಮಾನವನ ಕ್ಷೇಮಕ್ಕೆ ಸುಸ್ಥಿರ, ಆರೋಗ್ಯಕರ ಪರಿಸರ ಅತ್ಯಗತ್ಯ
ವಿಶ್ವ ಪ್ರವಾಸೋದ್ಯಮ ದಿನದ ಮಹತ್ವವೇನು?
- ವಿಶ್ವ ಪ್ರವಾಸೋದ್ಯಮ ದಿನವು ಪ್ರವಾಸೋದ್ಯಮದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಪ್ರಯೋಜನಗಳನ್ನು ಎತ್ತಿ ತೋರಿಸುತ್ತದೆ. ಪ್ರವಾಸೋದ್ಯಮವು ಜನರಿಗೆ ವಿವಿಧ ಸ್ಥಳಗಳ ಸಂಸ್ಕೃತಿಗಳನ್ನು ಅನುಭವಿಸಲು ಮತ್ತು ಕಲಿಯಲು ಸಹಾಯ ಮಾಡುತ್ತದೆ.
- ಪ್ರವಾಸೋದ್ಯಮದ ಮೂಲಕ ಉದ್ಯೋಗವನ್ನು ಉತ್ತೇಜಿಸುವುದು, ಪ್ರವಾಸೋದ್ಯಮ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಪ್ರವಾಸಿ ತಾಣಗಳ ಬಗ್ಗೆ ಪ್ರವಾಸಿಗರಿಗೆ ಹೆಚ್ಚು ಹೆಚ್ಚು ಮಾಹಿತಿ ನೀಡುವುದು ಪ್ರವಾಸೋದ್ಯಮ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ.
- ಈ ದಿನವು ಪ್ರವಾಸೋದ್ಯಮದ ಪ್ರಾಮುಖ್ಯತೆ ಮತ್ತು ಅದರ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಗುರಿಯನ್ನು ಹೊಂದಿದೆ.
- ಈ ವಿಶೇಷ ದಿನವು ವಿವಿಧ ದೇಶಗಳ ಸಂಸ್ಕೃತಿಗಳ ನಡುವೆ ಉತ್ತಮ ತಿಳುವಳಿಕೆಯನ್ನು ಬೆಳೆಸುವಲ್ಲಿ ಪ್ರವಾಸೋದ್ಯಮದ ಪಾತ್ರವನ್ನು ಒತ್ತಿ ಹೇಳುತ್ತದೆ.
- ಮುಖ್ಯವಾಗಿ ಪ್ರವಾಸೋದ್ಯಮವು ಜಾಗತಿಕ ಸಾಮರಸ್ಯ ಮತ್ತು ಶಾಂತಿ, ಬಡತನ ನಿರ್ಮೂಲನೆ, ಉದ್ಯೋಗ ಸೃಷ್ಟಿ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
- ವಿಶ್ವ ಪ್ರವಾಸೋದ್ಯಮ ದಿನವು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








