Navaratri 2025: ನವಜೋಡಿಗೆ ಉಡುಗೊರೆಯಾಗಿ ನೀಡಲಾಗುತ್ತೆ ಈ ಪಟ್ಟದ ಗೊಂಬೆ, ಇಲ್ಲಿದೆ ವಿಶೇಷತೆ
ನವರಾತ್ರಿ ಹಬ್ಬದ ಸಂಭ್ರಮವು ಜೋರಾಗಿದೆ, ಕೆಲವರ ಮನೆಯಲ್ಲಿ ವಿಭಿನ್ನ ಆಕರ್ಷಕ ಗೊಂಬೆಗಳನ್ನು ಕೂರಿಸಲಾಗಿದೆ. ಇದೊಂದು ಸಂಪ್ರದಾಯಿಕ ಆಚರಣೆಯಾಗಿದ್ದು, ಇದರಲ್ಲಿ ಪಟ್ಟದ ಗೊಂಬೆ ತುಂಬಾನೇ ವಿಶೇಷ. ಹೊಸದಾಗಿ ಮದುವೆಯಾದ ಜೋಡಿಗೆ ಈ ಗೊಂಬೆಯನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವು ಇದೆ. ಹಾಗಾದ್ರೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ದಸರಾ (Dasara) ಎಂದರೆ ಮೊದಲು ನೆನಪಿಗೆ ಬರುವುದೇ ಈ ಗೊಂಬೆಗಳು. ಸಿಂಗರಿಸಿಟ್ಟ ಬಣ್ಣ ಬಣ್ಣದ ಸಾಲು ಬೊಂಬೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ನವರಾತ್ರಿಯ (Navaratri) ಸಂದರ್ಭದಲ್ಲಿ ಪುರಾಣದ ಕಥೆಯನ್ನು ಹೇಳುವ ಈ ಗೊಂಬೆಗಳನ್ನು ತಮ್ಮ ಮನೆಯಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಗುತ್ತದೆ. ರಾಮಾಯಣ, ಮಹಾಭಾರತ ಕಥೆಗಳು, ಹಳ್ಳಿ ಜೀವನ, ಗಣಪತಿ, ದೇವರ ಪ್ರತಿಮೆಗಳು ಹೀಗೆ ವಿವಿಧ ಕಥೆಗಳನ್ನು ಸಾರುವ ಗೊಂಬೆಗಳನ್ನು ಒಳಗೊಂಡಿರುತ್ತವೆ. ಅದರಲ್ಲೂ ಪಟ್ಟದ ಗೊಂಬೆಗಳು ಪ್ರಮುಖ ಆಕರ್ಷಣೆಯಾಗಿರುತ್ತದೆ. ಹಾಗಾದ್ರೆ ಈ ಪಟ್ಟದ ಗೊಂಬೆಗಳ ವಿಶೇಷತೆಗಳೇನು? ನವಜೋಡಿಗೆ ಈ ಗೊಂಬೆಯನ್ನು ಉಡುಗೊರೆಯಾಗಿ ನೀಡುವುದು ಏಕೆ? ಈ ಬಗ್ಗೆ ನೀವು ತಿಳಿದುಕೊಳ್ಳಿ.
ಪಟ್ಟದ ಗೊಂಬೆಯ ವಿಶೇಷ
ದಸರಾದ ವೇಳೆ ತಮ್ಮ ಮನೆಯಲ್ಲಿ ಕೂರಿಸುವ ಗೊಂಬೆಗಳಲ್ಲಿ ಈ ಪಟ್ಟದ ಗೊಂಬೆಗಳಿಗೆ ಹೆಚ್ಚು ಪ್ರಾಮುಖ್ಯತೆ, ಅಲಂಕಾರ ಮತ್ತು ಗೌರವವನ್ನು ನೀಡಲಾಗುತ್ತದೆ. ಈ ಪಟ್ಟದ ಗೊಂಬೆಗಳನ್ನು ಶ್ರೀನಿವಾಸ-ಪದ್ಮಾವತಿ ಅಥವಾ ಶಿವ-ಪಾರ್ವತಿಯಂತಹ ದೇವತಾ ಸ್ವರೂಪಗಳಾಗಿ ಪೂಜಿಸುವುದು ವಿಶೇಷ.ಮುಖ್ಯವೆಂದು ಪರಿಗಣಿಸಲಾಗುವ ಈ ಪಟ್ಟದ ಗೊಂಬೆಗಳು ಗಂಡು ಹೆಣ್ಣನ್ನು ಪ್ರತಿನಿಧಿಸುತ್ತದೆ.
ಇದನ್ನೂ ಓದಿ: Navaratri 2025: ಮೈಸೂರು ದಸರಾಕ್ಕಿಂತ ಕುಡ್ಲದ ದಸರಾ ಭಿನ್ನ; ಶಾರದಾ ದೇವಿಯ ವಿಗ್ರಹವೇ ಪ್ರಮುಖ ಆಕರ್ಷಣೆ
ಪಟ್ಟದ ಗೊಂಬೆ ನೀಡುವುದರ ಹಿಂದಿದೆ ಈ ಕಾರಣ
ಪಟ್ಟದ ಗೊಂಬೆಗಳು ವಿವಾಹವಾದ ಗಂಡು ಹೆಣ್ಣಿನ ಜೋಡಿಯಾಗಿದೆ. ಕೆಲವು ಕಡೆಗಳಲ್ಲಿ ಈ ಗೊಂಬೆಯನ್ನು ಮದುವೆಯ ಸಂಪ್ರದಾಯದ ವೇಳೆ ಮಗಳಿಗೆ ನೀಡುವ ಸಂಪ್ರದಾಯವು ತಲೆಮಾರುಗಳಿಂದಲೂ ಬಂದಿದೆ. ಹೌದು, ಮಗಳು ಮದುವೆಯಾದಾಗ ಪೋಷಕರು ಸಂಪ್ರದಾಯದಂತೆ ಒಂದು ಜೊತೆ ಪಟ್ಟದ ಗೊಂಬೆಗಳನ್ನು ನವಜೋಡಿಗೆ ನೀಡುತ್ತಾರೆ. ಇದು ಹೊಸ ಕುಟುಂಬ ಪ್ರಾರಂಭಿಸಲು ಮತ್ತು ಗೊಂಬೆ ಹಬ್ಬದ ಸಂಪ್ರದಾಯವನ್ನು ಮುಂದುವರಿಸಲು ಹೇಳುವುದರ ಸಂಕೇತ ಎನ್ನಲಾಗಿದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








