Navaratri 2025: ಮಧುಮೇಹಿಗಳೇ… ಹಬ್ಬದ ಸಮಯದಲ್ಲಿ ನಿಮ್ಮ ಉಪವಾಸ ಈ ರೀತಿಯಾಗಿರಲಿ
ನವರಾತ್ರಿಯನ್ನು ಎಲ್ಲರೂ ಬಹಳ ಭಕ್ತಿ ಮತ್ತು ಶ್ರದ್ದೆಯಿಂದ ಆಚರಣೆ ಮಾಡುತ್ತಾರೆ. ಅದರಲ್ಲಿ ಅನೇಕರು ವ್ರತ, ಉಪವಾಸಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೆ ಸಕ್ಕರೆ ಕಾಯಿಲೆ ಇರುವವರು ತಾವು ಉಪವಾಸ ಮಾಡಬೇಕೋ, ಬೇಡವೋ ಎಂಬ ಗೊಂದಲದಲ್ಲಿರುತ್ತಾರೆ. ಆದರೆ ಏನನ್ನು ತಿನ್ನಬೇಕು, ಏನನ್ನು ತಪ್ಪಿಸಬೇಕು? ಜೊತೆಗೆ ಅದರ ಮೊದಲು ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಂಡರೆ ಸಕ್ಕರೆ ಕಾಯಿಲೆ ಇರುವವರು ಸಹ, ತಮ್ಮ ಸಕ್ಕರೆ ಮಟ್ಟವನ್ನು ಹೆಚ್ಚಿಸಿಕೊಳ್ಳದಂತೆ ಉಪವಾಸ ಮಾಡಬಹುದು. ಮತ್ತಷ್ಟು ಮಾಹಿತಿ ಈ ಸ್ಟೋರಿಯಲ್ಲಿದೆ.

ಹಬ್ಬಗಳು ಆರಂಭವಾದರೆ ಪೂಜೆ, ಉಪವಾಸ (fasting), ವ್ರತಾಚರಣೆಗಳು ಅದರ ಭಾಗವಾಗಿರುತ್ತದೆ. ಆದರೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿರುವವರಿಗೆ, ಅದರಲ್ಲಿಯೂ ಸಕ್ಕರೆ ಕಾಯಿಲೆ ಇರುವವರು ಈ ಉಪವಾಸಗಳನ್ನು ಮಾಡಬಹುದೇ ಎಂಬ ಗೊಂದಲ ಹಲವರಲ್ಲಿರುತ್ತದೆ. ಈ ರೀತಿ ನಿಮಗೂ ಆಗಿದ್ದರೆ ಮೊದಲು, ಉಪವಾಸವು ಮಾಡುವುದು ಸೂಕ್ತವೇ ಅಥವಾ ಅಲ್ಲವೇ ಎಂಬುದನ್ನು ವೈದ್ಯರನ್ನು ಕೇಳಿ ತಿಳಿದುಕೊಳ್ಳಿ. ಏಕೆಂದರೆ ವೈದ್ಯರು ಮಾತ್ರ ನಿಮ್ಮ ಆರೋಗ್ಯ ಸ್ಥಿತಿಯನ್ನು ಸರಿಯಾಗಿ ಬಲ್ಲವರಾಗಿರುತ್ತಾರೆ. ಅದರಲ್ಲಿಯೂ ನಾವು ಸೇವನೆ ಮಾಡುವ ಆಹಾರವು ಆರೋಗ್ಯ ಕಾಪಾಡಿಕೊಳ್ಳಲು ನಿರ್ಣಾಯಕವಾದ್ದರಿಂದ, ಉಪವಾಸ ಮಾಡುವಾಗ ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವುದನ್ನು ತಿನ್ನಬಾರದು ಜೊತೆಗೆ ಅದರ ಮೊದಲು ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗುತ್ತದೆ ಅದಕ್ಕಾಗಿಯೇ ಮುಂಚಿತವಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಅವರು ಉಪವಾಸ ಮಾಡಬಹುದು ಎಂದಲ್ಲಿ ಈ ಸ್ಟೋರಿಯಲ್ಲಿ ನೀಡಿರುವ ಸಲಹೆಗಳನ್ನು ಪಾಲಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಆರೋಗ್ಯ ತಜ್ಞರು ಹೇಳುವ ಪ್ರಕಾರ, ಉಪವಾಸ ಮಾಡುವುದರಿಂದ ದೇಹದಿಂದ ಅನಗತ್ಯ ವಿಷವನ್ನು ಹೊರಹಾಕಬಹುದು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸಡಿಲಗೊಳಿಸುತ್ತದೆ. ಇನ್ನು ಮಧುಮೇಹ ಇರುವವರು ಉಪವಾಸ ಮಾಡುವಾಗ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸುವುದು ಮಾತ್ರವಲ್ಲದೆ ಸರಿಯಾದ ಆಹಾರವನ್ನು ಸೇವಿಸುವುದು ಕೂಡ ಮುಖ್ಯವಾಗಿದೆ. ಇದು ಆಯಾಸ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳು ಬರುವುದನ್ನು ತಡೆಯುತ್ತದೆ.
ಮಧುಮೇಹಿಗಳ ಉಪವಾಸ ಹೇಗಿರಬೇಕು?
ಉಪವಾಸದ ಸಮಯದಲ್ಲಿ, ಊಟ ಮಾಡದಿರುವುದು ತಲೆ ತಿರುಗುವಿಕೆ, ಮೂರ್ಛೆ ಮತ್ತು ದೌರ್ಬಲ್ಯದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಪ್ರತಿ 2 ರಿಂದ 3 ಗಂಟೆಗಳಿಗೊಮ್ಮೆ ಪೌಷ್ಟಿಕಾಂಶ ಇರುವುದರ ಜೊತೆಗೆ, ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವಿರುವ ಆಹಾರವನ್ನು ಸೇವಿಸಬೇಕು. ಅಂದರೆ ಹುರುಳಿ, ಬೇಯಿಸಿದ ಸಿಹಿ ಗೆಣಸು, ಮಖಾನ ಮತ್ತು ಪನೀರ್ ಈ ರೀತಿಯ ಆಹಾರಗಳು ಒಳ್ಳೆಯದು. ಏಕೆಂದರೆ ಈ ಆಹಾರಗಳು ನಿಧಾನವಾಗಿ ಜೀರ್ಣವಾಗುತ್ತವೆ, ಇದರಿಂದ ಹಸಿವನ್ನು ತಡೆಯಲು ನಿಮಗೆ ಸಹಾಯ ಮಾಡುತ್ತದೆ. ಮಾತ್ರವಲ್ಲ ಇದನ್ನು ಸೇವಿಸಿದ ತಕ್ಷಣವೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಇನ್ನು ಉಪವಾಸದ ಸಮಯದಲ್ಲಿ ಮೊಸರಿನ ಸೇವನೆಯನ್ನು ಕೂಡ ಮಾಡಬಹುದು. ಇದು ಕೂಡ ಅತಿಯಾಗಿ ತಿನ್ನಬೇಕೆಂಬ ಪ್ರಚೋದನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅತಿಯಾದ ಸಿಹಿತಿಂಡಿ ಮತ್ತು ಎಣ್ಣೆ ಪದಾರ್ಥಗಳ ಸೇವನೆ
ಹಬ್ಬಗಳೆಂದರೆ ಸಿಹಿತಿಂಡಿ ಮತ್ತು ಕರಿದ ಆಹಾರಗಳು ಯಥೇಚ್ಛವಾಗಿ ಲಭ್ಯವಿರುತ್ತದೆ. ಆದರೆ ಅವುಗಳನ್ನು ಅತಿಯಾಗಿ ತಿನ್ನಬಾರದು. ಕರಿದ ಆಹಾರಗಳ ಬದಲಿಗೆ, ನೀವು ಬೇಯಿಸಿದ ಅಥವಾ ಲಘುವಾಗಿ ಬೇಯಿಸಿದ ಆಹಾರವನ್ನು ಸೇವನೆ ಮಾಡುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಸಿಹಿತಿಂಡಿ ತಿನ್ನಬೇಕು ಎಂದೆನಿಸಿದಲ್ಲಿ ಸಕ್ಕರೆಯ ಬದಲಿಗೆ ಸ್ಟೀವಿಯಾ ಅಥವಾ ಬೆಲ್ಲದಂತಹ ಪರ್ಯಾಯಗಳೊಂದಿಗೆ ತಯಾರಿಸಿದ ಆಹಾರವನ್ನು ಸೇವನೆ ಮಾಡಬಹುದು. ಆದರೆ ಅಗತ್ಯವಿರುವಷ್ಟು ಮಾತ್ರ ತಿನ್ನಬೇಕು.
ಇದನ್ನೂ ಓದಿ: Navaratri 2025: ಮೈಸೂರು ದಸರಾಕ್ಕಿಂತ ಕುಡ್ಲದ ದಸರಾ ಭಿನ್ನ; ಶಾರದಾ ದೇವಿಯ ವಿಗ್ರಹವೇ ಪ್ರಮುಖ ಆಕರ್ಷಣೆ
ನೀರಿನ ಪ್ರಮಾಣ ಸರಿಯಾಗಿರಲಿ
ಉಪವಾಸ ಮಾಡುವ ಸಮಯದಲ್ಲಿ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಇಲ್ಲದಿದ್ದರೆ, ಅದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಅದರಲ್ಲಿಯೂ ಮಧುಮೇಹ ಇರುವವರು ನಿರ್ಜಲೀಕರಣಕ್ಕೆ ಒಳಗಾಗುವುದು ಒಳ್ಳೆಯದಲ್ಲ. ಆದ್ದರಿಂದ, ಕೇವಲ ನೀರಿನ ಬದಲು, ಎಳನೀರು, ಸಿಹಿ ನಿಂಬೆ ರಸ ಮತ್ತು ಮಜ್ಜಿಗೆಯಂತಹ ಆರೋಗ್ಯಕರ ಪಾನೀಯಗಳನ್ನು ನಿಮ್ಮ ವೈದ್ಯರ ಸಲಹೆ ಪಡೆದುಕೊಂಡು ಕುಡಿಯಿರಿ. ಇದು ಸರಿಯಾದ ಮಟ್ಟದ ಎಲೆಕ್ಟ್ರೋಲೈಟ್‌ಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದೇ ರೀತಿ, ನಿಮ್ಮ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುವುದು ಒಳ್ಳೆಯದು. ಇನ್ನು ಆಹಾರ ಪದ್ಧತಿ ಎಷ್ಟು ಮುಖ್ಯವೋ, ನೀವು ತೆಗೆದುಕೊಳ್ಳುವ ಔಷಧಿಯೂ ಅಷ್ಟೇ ಮುಖ್ಯ. ಆದ್ದರಿಂದ, ಸೂಕ್ತ ಸಮಯದಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




