World Bamboo Day 2025: ಪರಿಸರ ಸಮತೋಲನದಿಂದ ಕೃಷಿಯವರೆಗೆ ಬಿದಿರಿನ ಉಪಯೋಗ ಹಲವು
ಬಿದಿರು ವೇಗವಾಗಿ ಬೆಳೆಯುವ ಹುಲ್ಲು ಜಾತಿಯ ಸಸ್ಯವಾಗಿದ್ದು, ಇದು ಪರಿಸರದ ಸಮತೋಲನವನ್ನು ಕಾಪಾಡುವುದರಿಂದ ಹಿಡಿದು ಔಷಧಿ, ಕೃಷಿಯ ವರೆಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಹಾಗಾಗಿ ಬಿದಿರು ಕೃಷಿ ಮತ್ತು ಬಿದಿರಿನ ರಕ್ಷಣೆಗ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್ 18 ರಂದು ವಿಶ್ವ ಬಿದಿರು ದಿನವನ್ನು ಆಚರಿಸಲಾಗುತ್ತದೆ.

ಬಿದಿರು (Bamboo) ಉಷ್ಣವಲಯ ಮತ್ತು ಉಪೋಷ್ಣವಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುವಂತಹ ಹುಲ್ಲು ಜಾತಿಯ ಸಸ್ಯವಾಗಿದೆ. ಇದು ಇತರ ಮರಗಿಡಗಳಂತೆಯೇ ಭೂಮಿಯನ್ನು ರಕ್ಷಿಸುವಲ್ಲಿ, ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಹೌದು ಈ ಬಿದಿರು ಸಸ್ಯ ಮಣ್ಣಿನ ಸವೆತವನ್ನು ತಡೆಗಟ್ಟುವಲ್ಲಿ, ಆಮ್ಲಜನಕ ಮಟ್ಟವನ್ನು ಹೆಚ್ಚಿಸುವಲ್ಲಿ ತುಂಬಾನೇ ಪ್ರಯೋಜನಕಾರಿಯಾಗಿದೆ. ಅಲ್ಲದೆ ಇದೊಂದು ಬಹುಪಯೋಗಿ ಸಸ್ಯವಾಗಿದ್ದು, ಆಹಾರ, ಔಷಧಿಗಳಿಂದ ಹಿಡಿದು ಗೃಹಪಯೋಗಿ ವಸ್ತುಗಳವರೆಗೆ ಬಿದಿರು ಹತ್ತು ಹಲವು ಉಪಯೋಗಗಳನ್ನು ಹೊಂದಿವೆ. ಇದರಿಂದಾಗಿ ಬಿದಿರು ಲಾಭದಾಯಕ ಕೃಷಿಯಾಗಿದೆ. ಈ ನಿಟ್ಟಿನಲ್ಲಿ ಬಿದಿರು ಕೃಷಿಯನ್ನು ಉತ್ತೇಜಿಸಲು, ಬಿದಿರಿನ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್ 18 ರಂದು ವಿಶ್ವ ಬಿದಿರು (World Bamboo Day) ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ವಿಶ್ವ ಬಿದಿರು ದಿನದ ಆಚರಣೆ ಹೇಗೆ ಪ್ರಾರಂಭವಾಯಿತು?
‘ವಿಶ್ವ ಬಿದಿರು ದಿನ’ ಆಚರಣೆಯನ್ನು 2009 ರಲ್ಲಿ ವಿಶ್ವ ಬಿದಿರು ಸಂಸ್ಥೆ ಪ್ರಾರಂಭಿಸಿತು. ಸೆಪ್ಟೆಂಬರ್ 18, 2009 ರಲ್ಲಿ ಬ್ಯಾಂಕಾಕ್‌ನ ಥೈಲ್ಯಾಂಡ್‌ನಲ್ಲಿ ನಡೆದ 8 ನೇ ವಿಶ್ವ ಕಾಂಗ್ರೆಸ್ ಸಮ್ಮೇಳನದಲ್ಲಿ ವಿಶ್ವ ಬಿದಿರು ಸಂಸ್ಥೆಯು ಈ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಅಂದಿನಿಂದ ಪ್ರತಿವರ್ಷ ಬಿದಿರು ಕೃಷಿ ಮತ್ತು ಅದರ ಉಪಯೋಗಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಸಕಲ ಜೀವಸಂಕುಲದದ ರಕ್ಷಕವಾದ ಓಝೋನ್ ಪದರದ ಸಂರಕ್ಷಣೆ ಮನುಕುಲದ ಹೊಣೆ
ವಿಶ್ವ ಬಿದಿರು ದಿನದ ಮಹತ್ವವೇನು?
ಬಿದಿರು ಇತರ ಮರಗಳಿಗಿಂತ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ, ಇದು ಇತರ ಮರಗಳಿಗಿಂತ ಶೇಕಡಾ 35 ರಷ್ಟು ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತವೆ ಮತ್ತು ಇವು ಹೆಚ್ಚಿನ ಪ್ರಮಾಣದಲ್ಲಿ ಹಸಿರುಮನೆ ಅನಿಲಗಳನ್ನು ಹೀರಿಕೊಳ್ಳುವ ಮೂಲಕ ಇಂಗಾಲದ ಸಿಂಕ್ ಆಗಿ ಕಾರ್ಯನಿರ್ವಹಿಸುತ್ತವೆ. ಅಷ್ಟೇ ಅಲ್ಲದೆ ಬಿದಿರನ್ನು ಪಿಠೋಪಕರಣ ತಯಾರಿಕೆ, ಆಹಾರ, ಜೈವಿಕ ಇಂಧನ, ಬಟ್ಟೆ ತಯಾರಿಕೆ ಸೇರಿದಂತೆ ಇನ್ನೂ ಹೆಚ್ಚಿನ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ. ಹೀಗೆ ಇವು ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ಬಿದಿರಿನ ಸಸ್ಯ ವಹಿಸುವ ಪಾತ್ರ ಹಾಗೂ ಬಿದಿರು ಕೃಷಿ ಹಾಗೂ ಅದರ ಸುಸ್ಥಿರ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನವನ್ನು ಆಚರಿಸುವುದರ ಮುಖ್ಯ ಉದ್ದೇಶವಾಗಿದೆ. ಈ ದಿನದಂದು ಬಿದಿರು ಕೃಷಿ ಮತ್ತು ಉದ್ಯಮದ ಪ್ರಗತಿಯ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







