ಕೋಟೆ ನಾಡಿನ ಊಟಿ ಈ “ಜೋಗಿಮಟ್ಟಿ”
ಕೋಟೆ ನಾಡು ಚಿತ್ರದುರ್ಗ ಪ್ರವಾಸಿಗರ ಹಾಟ್ ಫೇವರೇಟ್ ತಾಣ. ದೇಶ ವಿದೇಶಗಳಿಂದ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಐತಿಹಾಸಿಕ ತಾಣವಾಗಿರುವ ಇಲ್ಲಿನ ಕಲ್ಲಿನ ಕೋಟೆ, ಚಂದ್ರವಳ್ಳಿ ಗುಹೆ, ವಾಣಿ ವಿಲಾಸ ಅಣೆಕಟ್ಟಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬರುತ್ತಾರೆ. ಅಲ್ಲದೆ ಇಲ್ಲಿ ಜೋಗಿಮಟ್ಟಿ ಎಂಬ ಸುಂದರ ಉದ್ಯಾನವನವಿದ್ದು, ಇದು ಬಯಲು ಸೀಮೆಯ ಊಟಿ ಅಂತಾನೇ ಸಖತ್ ಹೆಸರುವಾಸಿಯಾಗಿದೆ. ಟ್ರೆಕ್ಕಿಂಗ್ ಪ್ರಿಯರು ಮತ್ತು ಪ್ರಕೃತಿ ಪ್ರಿಯರಂತೂ ಈ ತಾಣಕ್ಕೆ ಭೇಟಿ ನೀಡಲೇಬೇಕು ನೋಡಿ.

ಕೋಟೆಕೊತ್ತಲಗಳಿರುವ ಭದ್ರವಾದ ನಾಡು ಚಿತ್ರದುರ್ಗ (Chitradurga) ಎಂದಾಕ್ಷಣ ನೆನಪಾಗುವುದೇ ಕಲ್ಲಿನ ಕೋಟೆ. ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಕಣ್ಮನ ಸೆಳೆಯುವ ಈ ಏಳು ಸುತ್ತಿನ ಕಲ್ಲಿನ ಕೋಟೆಯ ಗತವೈಭವದ ಸೌಂದರ್ಯವನ್ನು ಸವಿಯಲೆಂದೇ ದೇಶ ವಿದೇಶದಿಂದ ಇಲ್ಲಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಕಲ್ಲಿನ ಕೋಟೆ ಮಾತ್ರವಲ್ಲದೆ ಚಂದ್ರವಳ್ಳಿ ಗುಹೆ, ವಾಣಿ ವಿಲಾಸ ಅಣೆಕಟ್ಟು, ಅಶೋಕ ಸಿದ್ಧಾಪುರ, ಆಡುಮಲ್ಲೇಶ್ವರ ಮೃಗಾಲಯ ಸೇರಿದಂತೆ ಚಿತ್ರದುರ್ಗದಲ್ಲಿ ಹಲವು ಆಕರ್ಷಣೀಯ ಪ್ರವಾಸಿ ತಾಣಗಳಿವೆ. ಜೊತೆಗೆ ಪ್ರಕೃತಿ ಪ್ರಿಯರಿಗೆ ಬಲು ಇಷ್ಟವಾಗುವಂತಹ ಜೋಗಿಮಟ್ಟಿ (Jogimatti) ಅಭಯಾರಣ್ಯವೂ ಇಲ್ಲಿದ್ದು, ಒತ್ತಡದ ಬದುಕಿನಿಂದ ಕೊಂಚ ಬ್ರೇಕ್ ತೆಗೆದುಕೊಂಡು, ಪ್ರಕೃತಿಯೊಂದಿಗೆ ಸಮಯ ಕಳೆಯಬೇಕು ಎಂದು ಬಯಸುವವರು ಬಯಲು ಸೀಮೆಯ ಊಟಿ ಅಂತಾನೇ ಖ್ಯಾತಿ ಪಡೆದಿರುವ ಜೋಗಿ ಮಟ್ಟಿ ಅಭಯಾರಣ್ಯಕ್ಕೆ ಭೇಟಿ ನೀಡಬಹುದು.
ಬಯಲು ಸೀಮೆಯ ಊಟಿ ಜೋಗಿಮಟ್ಟಿಯ ಸೌಂದರ್ಯ ಕಣ್ತುಂಬಿಕೊಳ್ಳಲೇಬೇಕು:
ವೀಕೆಂಡ್‌ನಲ್ಲಿ ರಿಲ್ಯಾಕ್ಸ್ ಮಾಡುವ ಸಲುವಾಗಿ ಎಲ್ಲಾದ್ರೂ ಹೋಗಬೇಕೆಂದುಕೊಂಡಿದ್ದರೆ ನೀವು ಬಯಲು ಸೀಮೆಯ ಊಟಿ ಜೋಗಿಮಟ್ಟಿ ಅಭಯಾರಣ್ಯಕ್ಕೆ ಭೇಟಿ ನೀಡಬಹುದು. ಹಚ್ಚಹಸಿರಿನಿಂದ ಕೂಡಿರುವ ಈ ತಾಣ ಚಿತ್ರದುರ್ಗ, ಹಿರಿಯೂರು ಮತ್ತು ಹೊಳಲ್ಕೆರೆ ತಾಲೂಕುಗಳಲ್ಲಿ ಸುಮಾರು 100 ಚದರ ಕಿ.ಮೀ ಗಳಷ್ಟು ಹರಡಿರುವ ಮನಮೋಹಕವಾದ ಉದ್ಯಾನವನವಾಗಿದೆ. ಈ ಜೋಗಿಮಟ್ಟಿ ಅಭಯಾರಣ್ಯದಲ್ಲಿ ಸುಂದರವಾದ ಬೆಟ್ಟಗುಡ್ಡಗಳ ಜೊತೆಗೆ ಅಳಿವಿನಂಚಿನಲ್ಲಿರುವ ಪ್ರಾಣಿ ಸಂಕುಲಗಳನ್ನು ಕೂಡ ಕಣ್ತುಂಬಿಕೊಳ್ಳಬಹುದು.
ಚಿತ್ರದುರ್ಗದ ಗುಪ್ತ ರತ್ನ ಜೋಗಿಮಟ್ಟಿ:
ನಮ್ಮ ನಾಡಿನ ಹಿಡನ್‌ಜೆಮ್ ತಾಣಗಳಲ್ಲಿ ಜೋಗಿಮಟ್ಟಿಯೂ ಒಂದು. ಈ ತಾಣವನ್ನು ಬಯಲು ಸೀಮೆಯ ಊಟಿ ಅಂತಾನೇ ಕರಿತಾರೆ. ಜೋಗಿಮಟ್ಟಿ ಚಿತ್ರದುರ್ಗದ ಬಳಿಯಿರುವ ಒಂದು ಶಾಂತ ಗಿರಿಧಾಮವಾಗಿದ್ದು, ಪ್ರಕೃತಿಪ್ರಿಯರಿಗೆ ಭೇಟಿ ನೀಡಲು ಹೇಳಿ ಮಾಡಿಸಿದಂತಹ ತಾಣವಾಗಿದೆ. ನಗರ ಜೀವನದ ಜಂಜಾಟದಿಂದ ಕೊಂಚ ಬ್ರೇಕ್ ತೆಗೆದುಕೊಂಡು ಶಾಂತ ವಾತಾವರಣದಲ್ಲಿ ಸಮಯ ಕಳೆಯಬೇಕು ಎಂದಾದರೆ ನೀವು ಊಟಿಯಂತೆ ತಂಪಾದ ಹವಾಮಾನ, ಹಚ್ಚ ಹಸಿರಿನ ಶಾಂತ ವಾತಾವರಣವನ್ನು ಹೊಂದಿರುವ ಜೋಗಿಮಟ್ಟಿಗೆ ಬರಲೇಬೇಕು.

ಚಿತ್ರದುರ್ಗ, ಹಿರಿಯೂರು ಮತ್ತು ಹೊಳಲ್ಕೆರೆ ತಾಲೂಕುಗಳಲ್ಲಿ 100 ಚದರ ಕಿಲೋಮೀಟರ್ ಗಳಷ್ಟು ಹರಡಿರುವ ಜೋಗಿಮಟ್ಟಿ ಅದರ ಶಾಂತ ವಾತಾವರಣ, ಹಸಿರು ಭೂ ದೃಶ್ಯ ಅದ್ಭುತ ನೋಟಗಳಿಗೆ ಹೆಸರುವಾಗಿಯಾಗಿದೆ. ಅಷ್ಟೇ ಅಲ್ಲದೆ ಅದೆಷ್ಟೋ ಪ್ರಾಣಿಗಳ ಆಶ್ರಯ ತಾಣವಾಗಿದೆ. ಜೋಗಿಮಟ್ಟಿ ಅಭಯಾರಣ್ಯದಲ್ಲಿ ಬ್ಲ್ಯಾಕ್ ಪ್ಯಾಂಥರ್, ಚಿರತೆ, ನರಿ, ತೋಳ, ಕರಡಿಗಳು, ಮಲಬಾರ್ ದೈತ್ಯ ಅಳಿಲುಗಳು ಸೇರಿದಂತೆ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿ ಸಂಕುಲಗಳನ್ನು ನೋಡಬಹುದು. ಇದರ ಜೊತೆಗೆ ಇಲ್ಲಿ ನವಿಲುಗಳು, ಹದ್ದು, ಗೂಬೆ, ಕಾಡು ಕೋಳಿ, ಹಳದಿ ಗಂಟಲಿನ ಬುಲ್‌ಬುಲ್, ಜಿಪ್ಸ್ ಬೆಂಗಾಲೆನ್ಸಿಸ್, ಪೈಕ್ನೋನೋಟಸ್ ಕ್ಸಾಂಥೋಲೇಮಸ್ ಸೇರಿದಂತೆ ಅಪರೂಪದ ಜಾತಿಯ ಪಕ್ಷಿಗಳನ್ನು ಕಾಣಬಹುದು. ಅಷ್ಟೇ ಅಲ್ಲದೆ ಟ್ರೆಕ್ಕಿಂಗ್ ಮಾಡುತ್ತಾ ಜೋಗಿಮಟ್ಟಿ ಶಿಖರವನ್ನೇರಿ ಹೋದಂತೆ ಅಲ್ಲಿ ಹಿಮವತ್ಕೇದ್ರ ಜಲಪಾತ, ಹತ್ತಿರದ ಗುಹೆಗಳಲ್ಲಿ ಶಿವಲಿಂಗ, ಬಸವಣ್ಣ ಮತ್ತು ವೀರಭದ್ರ ಪ್ರತಿಮೆಗಳನ್ನು ಕಣ್ತುಂಬಿಕೊಳ್ಳಬಹುದು.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಭೇಟಿ ನೀಡಬಹುದಾದ ಹತ್ತಿರದ ಸ್ಥಳಗಳು:
ಜೋಗಿಮಟ್ಟಿಗೆ ಪ್ರವಾಸ ಹೋದ್ರೆ, ಹತ್ತಿರದಲ್ಲಿರುವ ಐತಿಹಾಸಿಕ ತಾಣವಾಗಿರುವ ಚಿತ್ರದುರ್ಗದ ಕಲ್ಲಿನ ಕೋಟೆ, ವಾಣಿ ವಿಲಾಸ ಸಾಗರ ಅಣೆಕಟ್ಟು, ಚಂದ್ರವಳ್ಳಿ ಗುಹೆಗಳು, ಅಂಕಲಿ ಮಠ, ಆಡುಮಲ್ಲೇಶ್ವರ ಜಲಪಾತ ಇತ್ಯಾದಿ ಅದ್ಭುತ ತಾಣಗಳಿಗೆ ಭೇಟಿ ನೀಡಲು ಮರೆಯದಿರಿ.
ಇದನ್ನೂ ಓದಿ: ಹಚ್ಚಹಸಿರಾದ ವನರಾಶಿಯ ಸೊಬಗು, ಬೆಟ್ಟದ ಮೇಲೆ ದುರ್ಗಾದೇವಿ ದೇವಾಲಯ
ತಲುಪುವುದು ಹೇಗೆ:
ಜೋಗಿಮಟ್ಟಿ ಬೆಂಗಳೂರಿನಿಂದ ಸುಮಾರು 245 ಕಿ.ಮೀ ದೂರದಲ್ಲಿದೆ. 4 ಗಂಟೆಗಳ ಪಯಣವಾಗಿದ್ದು, ರಸ್ತೆ ಮಾರ್ಗದ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದು. ರೈಲಿನ ಮೂಲಕವೂ ನೀವು ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಬಹುದು.

ಪ್ರಯಾಣ ಸಲಹೆ:
ಜೋಗಿಮಟ್ಟಿ ಅಭಯಾರಣ್ಯದಲ್ಲಿ ಗಿರಿಧಾಮಗಳನ್ನು ಹತ್ತುವುದು ಇಳಿಯುವುದು, ನಡೆಯುವುದು ಇರುವ ಕಾರಣ ಆರಾಮದಾಯಕ ವಾಕಿಂಗ್ ಶೂಗಳನ್ನು ಧರಿಸಿ. ಜೊತೆಗೆ ನೀರು, ಅಗತ್ಯವಿರುಹ ಆಹಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಇನ್ನೊಂದು ಮುಖ್ಯವಾದ ಅಂಶ ಯಾವುದೇ ಕಸ, ತ್ಯಾಜ್ಯವನ್ನು ಎಸೆದು ಪ್ರಾಣಿ ಪಕ್ಷಿಗಳಿಗೆ ತೊಂದರೆ ಮಾಡಬೇಡಿ, ಪ್ರಕೃತಿಯನ್ನು ಹಾಳುಗೆಡವಬೇಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








