Ajwain health benefits: ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನವೇ ಒಂದು ಚಮಚ ಓಮು ಕಾಳಿನ ಚೂರ್ಣ!

| Updated By: ಸಾಧು ಶ್ರೀನಾಥ್​

Updated on: May 31, 2022 | 6:06 AM

ಸ್ವಚ್ಛವಾದ ಬಿಳಿಯ ಬಟ್ಟೆಯಲ್ಲಿ ಸ್ವಲ್ಪ ಅಜವಾನ ಹಾಕಿ ತಾಯಿಯಾದವಳು ತಾನು ಬಾಯಿಯಲ್ಲಿ ಅಗಿದು ಮಗುವಿಗೆ ಚೀಪಿಸುವುದರಿಂದ ಮಗುವಿನ ಹೊಟ್ಟೆಯುಬ್ಬರ ಕಡಿಮೆಯಾಗಿ, ಜೀರ್ಣ ಶಕ್ತಿ ಹೆಚ್ಚುತ್ತದೆ.

Ajwain health benefits: ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನವೇ ಒಂದು ಚಮಚ ಓಮು ಕಾಳಿನ ಚೂರ್ಣ!
ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನವೇ ಟೀ ಚಮಚ ಓಮು ಕಾಳಿನ ಚೂರ್ಣ!
Follow us on

ನೆಲದ ಮೇಲೆ ಚೆಲ್ಲಿದರೆ ತಕ್ಷಣ ಕಣ್ಣಿಗೆ ಕಾಣದಷ್ಟು ಚಿಕ್ಕ ಗಾತ್ರದ ಆದರೆ ಅದರ ಹತ್ತಾರು ಪಟ್ಟು ಹೆಚ್ಚು ಔಷಧೀಯ ಗುಣಗಳನ್ನು ಹೊಂದಿರುವ ಈ ಮಸಾಲೆ ಕಾಳುಗಳಿಗೆ… ಕನ್ನಡ ಭಾಷೆಯಲ್ಲಿ ಓಮು ಕಾಳು, ಅಜಮೋದ, ಅಜಮೂಲ, ಅಜವಾನ ಎಂದೂ ಸಂಸ್ಕೃತ ಭಾಷೆಯಲ್ಲಿ ಯವನಿ, ಅಜಮೋದಿಕಾ ಮತ್ತು ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಅಜವಾಯಿನ್, ಆಂಗ್ಲ ಭಾಷೆಯಲ್ಲಿ Ajowan, Ajwain ಎಂದೂ ಕರೆಯುತ್ತಾರೆ (Ajwain health benefits).

ವಿಶಿಷ್ಟವಾದ ಪರಿಮಳ ಅಲ್ಪ ಖಾರದ ರುಚಿ ಇರುವ ಈ ಓಮು ಕಾಳು ಎಲ್ಲರಿಗೂ ಪರಿಚಿತ. ಪ್ರಾಚೀನ ಕಾಲದಿಂದಲೂ ಮನೆ ಮದ್ದಾಗಿ ಬಳಕೆಯಲ್ಲಿರುವ ಅಜವಾನ ಅನುಪಮ ಔಷಧೀಯ ಗುಣಗಳನ್ನು ಹೊಂದಿದೆ.

ಓಮು ಕಾಳಿನ ಪ್ರಯೋಜನಗಳು ಹೀಗಿವೆ:

  1. * ಪ್ರಸವದ ನಂತರ ಬಾಣಂತಿಯರಿಗೆ ಅಜವಾನ ತಿನ್ನಲು ಕೊಡುತ್ತಾರೆ.ಅಥವಾ ಕಷಾಯ ಮಾಡಿ ಕೊಡುತ್ತಾರೆ.ಇದರಿಂದ ಹಸಿವು ಹೆಚ್ಚಾಗುತ್ತದೆ. ಉಂಡ ಆಹಾರ ಜೀರ್ಣವಾಗುತ್ತದೆ.ಇದು ಕ್ರಿಮಿನಾಶಕ ಗುಣ ಹೊಂದಿದ್ದು ಗರ್ಭಾಶಯ ಕೂಡ ಸ್ವಚ್ಛವಾಗುತ್ತದೆ.
  2. * ನವಜಾತ ಶಿಶು ಹೆಚ್ಚು ಅಳುತ್ತಿದ್ದರೆ ಮನೆಯ ಹಿರಿಯರು ಅಜವಾನ ತಿಂದು ಮಗುವಿನ ಮುಖಕ್ಕೆ ಊದಲು ಹೇಳುತ್ತಾರೆ. ಏಕೆಂದರೆ ತಾಯಿಯಾದವಳು ಅಜವಾನ ತಿಂದು ಮಗುವಿನ ಮುಖಕ್ಕೆ ಊದುವ ಮಾತ್ರದಿಂದ ಇದರ ವಿಶಿಷ್ಟ ಪರಿಮಳ ಮಗುವಿನ ಶ್ವಾಸದೊಂದಿಗೆ ಹೊಟ್ಟೆಗೆ ಸೇರಿ, ಮಗುವಿನ ಹೊಟ್ಟೆಯುಬ್ಬರ ಕಡಿಮೆಯಾಗಿ ಮಗುವಿಗೆ ಆರಾಮವೆನಿಸುತ್ತದೆ.
  3. * ಸ್ವಚ್ಛವಾದ ಬಿಳಿಯ ಬಟ್ಟೆಯಲ್ಲಿ ಸ್ವಲ್ಪ ಅಜವಾನ ಹಾಕಿ ತಾಯಿಯಾದವಳು ತಾನು ಬಾಯಿಯಲ್ಲಿ ಅಗಿದು ಮಗುವಿಗೆ ಚೀಪಿಸುವುದರಿಂದ ಮಗುವಿನ ಹೊಟ್ಟೆಯುಬ್ಬರ ಕಡಿಮೆಯಾಗಿ, ಜೀರ್ಣ ಶಕ್ತಿ ಹೆಚ್ಚುತ್ತದೆ.
  4. * ಅರ್ಧ ಟೀ ಚಮಚ ಓಮು ಕಾಳಿನ ಚೂರ್ಣವನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿದರೆ ಉದರ ಕ್ರಿಮಿಗಳು ನಾಶವಾಗುತ್ತವೆ.
  5. * ಊಟದ ನಂತರ ಅಜವಾನ ಮತ್ತು ಜೀರಿಗೆ ಸೇರಿಸಿ ತಿನ್ನುವುದರಿಂದ ಹೊಟ್ಟೆಯುಬ್ಬರ, ಎದೆಯುರಿ ಶಮನವಾಗುತ್ತದೆ. ಆಹಾರವೂ ಜೀರ್ಣವಾಗುತ್ತದೆ.
  6. * ಚಿಕ್ಕ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದ್ದರೆ ಅಜವಾನ ಹಾಗೂ ಕರಿ ಎಳ್ಳು ಬೆಲ್ಲ ಸೇರಿಸಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ (ದಿನದಲ್ಲಿ ಎರಡು ಬಾರಿ) ತಿನ್ನಿಸಬೇಕು.
  7. * ಬಹು ಮೂತ್ರ ರೋಗವನ್ನು ಹತೋಟಿಯಲ್ಲಿ ಇಡಲು ಅಜವಾನ ಹಾಗೂ ಬೆಲ್ಲವನ್ನು ಸಮ ಪ್ರಮಾಣದಲ್ಲಿ ಸೇರಿಸಿ ಕುರಿ ಹಿಕ್ಕೆ ಗಾತ್ರದ ಗುಳಿಗೆಗಳನ್ನು ತಯಾರಿಸಿ ದಿನದಲ್ಲಿ ಮೂರ್ನಾಲ್ಕು ಬಾರಿ ಸೇವಿಸಬೇಕು.
  8. * ಸ್ತ್ರೀಯರ ಮಾಸಿಕ ಧರ್ಮ ಏರು ಪೇರಾದಾಗ ಅಜವಾನ ಹಾಗೂ ಬೆಲ್ಲವನ್ನು ಸೇರಿಸಿದ ಕಷಾಯ ಸೇವನೆ ಒಳ್ಳೆಯದು.
  9. * ಇದರ ಕಷಾಯ ಸೇವನೆಯಿಂದ ಕೆಮ್ಮು ದಮ್ಮು ನಿವಾರಣೆಯಾಗುತ್ತದೆ.
  10. * ಕಫ ಕೆಮ್ಮುಗಳಿಗೆ ಎದೆಯ ಮೇಲೆ ಸಾಸಿವೆ ಎಣ್ಣೆ ಯನ್ನು ಸವರಿ, ಒಂದು ಬಟ್ಟೆಯಲ್ಲಿ ಓಮು ಕಾಳು ಸ್ವಲ್ಪ ಪಚ್ಚ ಕರ್ಪುರ ಹಾಕಿ ಚೂರು ಬಿಸಿ ಮಾಡಿ ಎದೆಯ ಮೇಲೆ ಸವರಬೇಕು. ಇದರ ವಾಸನೆಯನ್ನು ಕೂಡ ತೆಗೆದುಕೊಳ್ಳಬಹುದು.
  11. * ಇದಲ್ಲದೇ ಪುರುಷತ್ವ ವೃದ್ಧಿಗೆ, ಮದ್ಯಪಾನ ತ್ಯಜಿಸಲು, ಕಿಡ್ನಿ ಸ್ಟೋನ್ ಕರಗಿಸಲು ಹಾಗೂ ಜ್ವರ ನಿವಾರಣೆಗೆ ಈ ಅನುಪಮ ಗುಣದ ಅಜವಾನ ಬಳಕೆ ಯಾಗುತ್ತದೆ. (ಮಾಹಿತಿ ಸಂಗ್ರಹ: ಎಸ್​ ಹೆಚ್​ ನದಾಫ್)