ತಂಬಾಕು, ಧೂಮಪಾನ ಸೇವನೆಯಿಂದ ವ್ಯಕ್ತಿ ತನ್ನ ಬದುಕನ್ನೇ ಅವನತಿಯತ್ತ ಕೊಂಡೊಯ್ಯುತ್ತಾನೆ. ಒಮ್ಮೆ ಈ ಎಲ್ಲಾ ದುರಭ್ಯಾಸಗಳನ್ನು ಬಿಟ್ಟು ನೋಡಿ ನಿಮ್ಮ ಶ್ವಾಸಕೋಶವೇ ನಿಮಗೆ ಧನ್ಯವಾದ ಹೇಳುತ್ತೆ.
ಆರೊಗ್ಯಕ್ಕೆ ದುಷ್ಪರಿಣಾಮ ಬೀರುವ ತಂಬಾಕು ಮತ್ತು ಸಿಗರೇಟ್ ಸೇವನೆಯ ಕುರಿತಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಪ್ರತೀ ವರ್ಷ ಮೇ 31ರಂದು ಆಚರಿಸಲಾಗುತ್ತದೆ. ಈ ದಿನದ ಉದ್ದೇಶವು ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಇವುಗಳ ಬಳಕೆಯನ್ನು ಕಡಿಮೆ ಮಾಡುವುದಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಪ್ರತಿ ವರ್ಷ 1 ಮಿಲಿಯನ್ಗಿಂತಲೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ. ಧೂಮಪಾನವನ್ನು ತ್ಯಜಿಸುವುದರ ಮೂಲಕ ನಿಮ್ಮ ಜೀವ ಹಾಗೂ ನಿಮ್ಮವರ ಸುರಕ್ಷತೆಯನ್ನು ಕಾಣವಹುದು.
ಧೂಮಪಾನ ಹೊಗೆಯು ಶಿಶುಮರಣ, ನ್ಯುಮೋನಿಯಾ, ಅಸ್ತಮಾ, ಕೆಮ್ಮು ಸೇರಿ ಅನೇಕ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು.
ಧೂಮಪಾನ ಅಥವಾ ತಂಬಾಕು ತ್ಯಜಿಸುವುದರಿಂದ ಏನೇನು ಲಾಭ?
ಹಣ ಉಳಿತಾಯವಾಗುವುದು
ಅಧ್ಯಯನವೊಂದರ ಪ್ರಕಾರ ಧೂಮಪಾನ ವ್ಯಸನಿಯು ನಿತ್ಯ ಕನಿಷ್ಠ 10 ಸಿಗರೇಟ್ ಅಥವಾ ಬೀಡಿಯನ್ನು ಸೇದುತ್ತಾನೆ. ಅವನು ಬಳಸುವ ಸಿಗರೇಟ್ನ ಸಂಸ್ಥೆ ಹೇಳಿರುವಷ್ಟು ಹಣವನ್ನು ನೀಡಿ ಖರೀದಿಸುತ್ತಾನೆ. ಹಣದ ಜತೆಜತೆಗೆ ಆರೋಗ್ಯವನ್ನು ಕೂಡ ಹಾಳು ಮಾಡಿಕೊಳ್ಳುತ್ತಾನೆ. ಒಂದೊಮ್ಮೆ ಧೂಮಪಾನವನ್ನು ಬಿಟ್ಟರೆ ಹಣ ಉಳಿತಾಯವಾಗಿ ನಿಮ್ಮ ಬೇರೆ ಖರ್ಚುಗಳನ್ನು ಪೂರೈಸಲು ಸಹಾಯವಾಗುತ್ತದೆ.
ಪರಿಸರವೂ ಧನ್ಯವಾದ ಹೇಳುತ್ತೆ?
ತಂಬಾಕಿನ ಹೊಗೆಯು ವಾಯುಮಾಲಿನ್ಯವನ್ನು ಉಂಟು ಮಾಡುತ್ತದೆ. ಜತೆ ಜತೆಗೆ ನಮ್ಮಂತೆಯೇ ಗಿಡ ಮರಗಳಿಗೂ ಕೂಡ ಜೀವ ಇದೆ ಎಂಬುದನ್ನು ನಾವು ಮರೆಯಬಾರದು. ಧೂಮಪಾನ ತ್ಯಜಿಸುವುದರಿಂದ ಮಾಲಿನ್ಯವನ್ನು ಕಡಿಮೆ ಮಾಡಿ, ಆರೋಗ್ಯಕರ ಗಾಳಿಯನ್ನು ಸೇವನೆ ಮಾಡುವಂತಾಗುತ್ತದೆ.
ಕರ್ನಾಟಕದಲ್ಲಿರುವ ಕ್ಯಾನ್ಸರ್ ಪ್ರಕರಣಗಳೆಷ್ಟು?
ಕರ್ನಾಟಕದಲ್ಲಿ ಪ್ರತಿ ವರ್ಷ ಅಂದಾಜು 20,935 (ಒಟ್ಟಾರೆ ಕ್ಯಾನ್ಸರ್ ಪ್ರಕರಣಗಳ ಪೈಕಿಲ್ಲಿ ಶೇ.24ರಷ್ಟು) ತಂಬಾಕು ಸಂಬಂಧಿತ ಕ್ಯಾನ್ಸರ್ ಆಗಿದೆ. ನಿಗದಿತ ಯಾವುದೇ ಸಮಯದಲ್ಲಿ 56,524 ರೋಗಿಗಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಬೆಂಗಳೂರಿನಲ್ಲಿ ತಂಬಾಕು ಸಂಬಂಧಿತ ಕ್ಯಾನ್ಸರ್ ಪ್ರಕರಣಗಳನ್ನು ಗಮನಿಸಲಾಗಿದೆ.
ವಿಶ್ವ ತಂಬಾಕು ರಹಿತ ದಿನದ ಇತಿಹಾಸ
ಕನಿಷ್ಟ 24 ಗಂಟೆಗಳ ಕಾಲವಾದರೂ ತಂಬಾಕು ಸೇವನೆಯನ್ನು ತಡೆಯಲು ವಿಶ್ವ ಸಂಸ್ಥೆ ಮೇ 1988 ರಂದು ವಿಶ್ವ ತಂಬಾಕು ರಹಿತ ದಿನವನ್ನು ಜಾರಿಗೆ ತಂದಿತು. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ 2008ರಲ್ಲಿ ತಂಬಾಕಿನ ಕುರಿತಾದ ಜಾಹಿರಾತುಗಳನ್ನು ನಿಷೇಧಿಸಿತು. ಬಹುಶಃ ಜಾಹಿರಾತುಗಳು ಯುವಕರನ್ನು ಧೂಮಪಾನದತ್ತ ಅಥವಾ ತಂಬಾಕು ಸೇವನೆಯತ್ತ ಸೆಳೆಯಲು ಸಹಾಯ ಮಾಡುತ್ತವೆ ಎಂದು ಭಾವಿಸಿ, ಜಾಹಿರಾತುಗಳಿಗೆ ನಿಷೇಧ ಹೇರಿತ್ತು.
ಆರೋಗ್ಯ ಸಂಬಂಧಿ ಸಮಸ್ಯೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ