ಆಯುರ್ವೇದದಲ್ಲಿ ಬಳಕೆ ಮಾಡುವ ಬೇರು, ಎಲೆಗಳಿಗೆ ತುಂಬಾ ಮಹತ್ವವಿರುತ್ತದೆ. ಏಕೆಂದರೆ ಅವು ತುಂಬಾ ರೋಗಗಳಿಗೆ ರಾಮಬಾಣವಾಗಿರುತ್ತವೆ. ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲಿರುವ ಎಷ್ಟೋ ಗಿಡಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ ಜೊತೆಗೆ ಅವು ಹೇಗೆ ಬಳಕೆಯಾಗುತ್ತದೆ ಎಂಬುದು ಕೂಡ ಗೊತ್ತಿರುವುದಿಲ್ಲ ಹಾಗಾಗಿ ಕೆಲವು ಮನೆಮದ್ದುಗಳ ಬಗ್ಗೆ ತಿಳಿದಿರಬೇಕಾಗುತ್ತದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಅದನ್ನು ಬಗೆಹರಿಸಿಕೊಳ್ಳಲು ಕೆಲವು ಆಯುರ್ವೇದ ಔಷಧಿಗಳನ್ನು ಬಳಕೆ ಮಾಡುವುದನ್ನು ಅರಿತಿದ್ದರೆ ಒಳ್ಳೆಯದು. ಆ ಸಾಲಿನಲ್ಲಿ, ಹೆಸರಿಗೆ ತಕ್ಕಂತೆ ಸಾವಿರಾರು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿರುವ ಅಮೃತಬಳ್ಳಿಯು ಪ್ರತಿಯೊಬ್ಬರ ಮನೆಯಲ್ಲಿಯೂ ಇರಬೇಕು. ವಾತ, ಪಿತ್ತ ಮತ್ತು ಕಫದಿಂದ ಬಳಲುತ್ತಿರುವವರಿಗೆ, ಇದು ಬಹಳ ಉಪಯುಕ್ತವಾಗಿದೆ ಎಂದು ತಜ್ಞರು ಹೇಳುತ್ತಾರೆ. ದೇಹದಿಂದ ವಿಷ ಮತ್ತು ಹಾನಿಕಾರಕ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ಜ್ವರ, ಮಧುಮೇಹ, ಕಾಮಾಲೆ, ಸಂಧಿವಾತ, ಮಲಬದ್ಧತೆ, ಆಮ್ಲೀಯತೆ, ಅಜೀರ್ಣ, ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಈ ಎಲೆಯನ್ನು ಬಳಸಲಾಗುತ್ತದೆ.
ಈ ಬಳ್ಳಿಯಿಂದ ಮಾಡಿದ ಕಷಾಯವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ. ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿರುವ ಆರೋಗ್ಯಕರ ಗುಣಗಳು ನಿಮ್ಮ ಹೃದಯವನ್ನು ರಕ್ಷಿಸುತ್ತವೆ. ನಿಮಗೆ ಜೀರ್ಣಕ್ರಿಯೆಯ ಸಮಸ್ಯೆ ಇದ್ದರೆ ಅದು ಸುಧಾರಣೆಯಾಗುತ್ತದೆ. ಈ ಎಲೆಯಿಂದ ಮಾಡಿದ ಕಷಾಯವನ್ನು ಸೇವನೆ ಮಾಡುವುದರಿಂದ ನಿಮ್ಮ ಒತ್ತಡ, ಆತಂಕ ಕಡಿಮೆಯಾಗುತ್ತದೆ. ಜೊತೆಗೆ ನಿಮ್ಮ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಇದರಿಂದ ದೇಹವು ಸೋಂಕುಗಳು ಮತ್ತು ರೋಗಗಳ ವಿರುದ್ಧ ಚೆನ್ನಾಗಿ ಹೋರಾಡುತ್ತದೆ. ಇದೆಲ್ಲದರ ಜೊತೆಗೆ ಇದು ನಿಮ್ಮ ಜ್ಞಾಪಕ ಶಕ್ತಿಯನ್ನು ಸುಧಾರಿಸುತ್ತದೆ.
ಇದನ್ನೂ ಓದಿ: ನಾನ್- ಸ್ಟಿಕ್ ಪಾತ್ರೆಗಳನ್ನು ಬಳಸುವವರು ಈ ವಿಷಯಗಳನ್ನು ಎಂದಿಗೂ ಮರೆಯಬೇಡಿ
ನಿಮಗೆ ಉಸಿರಾಟದ ಕಾಯಿಲೆ ಇದ್ದರೆ ಅದನ್ನು ತಡೆಯುತ್ತದೆ. ಅಂದರೆ ಅಸ್ತಮಾ, ಕೆಮ್ಮು, ಶೀತ, ಟಾನ್ಸಿಲ್ಸ್ ಮತ್ತು ಉಸಿರಾಟದ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ಸಂಧಿವಾತ ಮತ್ತು ಕೀಲು ಉರಿಯೂತವನ್ನು ಕಡಿಮೆ ಮಾಡುತ್ತದೆ. ಪಿತ್ತಜನಕಾಂಗವನ್ನು ರಕ್ಷಿಸುತ್ತದೆ. ಈ ಎಲೆಯು ಜೀವಕೋಶಗಳ ಹಾನಿಯನ್ನು ತಡೆಯುತ್ತದೆ. ಹೊಸ ಜೀವಕೋಶದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಚರ್ಮಕ್ಕೆ ಉತ್ತಮ ಪೋಷಣೆಯನ್ನು ಸಹ ಒದಗಿಸುತ್ತದೆ. ಮುಖದ ಮೇಲೆ ವಯಸ್ಸಾದ ಚಿಹ್ನೆಗಳು ಬರುವುದನ್ನು ಕಡಿಮೆ ಮಾಡುತ್ತದೆ ಮತ್ತು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ