ಮಾನಸಿಕ ಒತ್ತಡ, ಆತಂಕ (anxiety) ನಮ್ಮೆಲ್ಲರನ್ನು ಕಾಡುತ್ತದೆ. ಸದ್ಯದ ಅಥವಾ ಭವಿಷ್ಯದ ಬಗ್ಗೆ ಅಭದ್ರತೆ (insecurity), ಅಸಮಾಧಾನ ಮತ್ತು ಭಯದಿಂದ (fear) ನಾವು ಸುಖಾಸುಮ್ಮನೆ ವಿಚಲಿತರಾಗುತ್ತೇವೆ, ಹಾಗೆ ನೋಡಿದರೆ ನಾವು ಆತಂಕಕ್ಕೀಡಾಗುವ ಅವಶ್ಯಕತೆಯೇ ಇರೋದಿಲ್ಲ. ಭಯದ ಬಗ್ಗೆ ಹೇಳೋದಾದರೆ ಅಪಾಯ ಪಾರಾದ ಬಳಿಕ ತಾನಾಗೇ ಮಾಯವಾಗಿ ಬಿಡುತ್ತದೆ. ಆದರೆ ಅತಂಕ ಅನ್ನೋದಿದೆಯಲ್ಲ, ಅದು ಭಯ ನಮ್ಮಿಂದ ದೂರವಾಗಿದ್ದರೂ ಮತ್ತು ನಾವು ಹೆದರಿಕೊಳ್ಳುವ ಯಾವುದೇ ಕಾರಣವಿಲ್ಲದಿದ್ದರೂ ನಮ್ಮೊಳಗೆಯೇ ಉಳಿದು ಬಿಡುತ್ತದೆ. ಭಯ ಮತ್ತು ನಿರೀಕ್ಷಿತ ಆತಂಕ ಒಂದು ಸಾಮಾನ್ಯವಾದ ಭಾವನೆಯಾಗಿರುವುದರಿಂದ ಇದರೊಂದಿಗೆ ಜೀವಿಸುವುದನ್ನು ನಾವು ರೂಢಿ ಮಾಡಿಕೊಂಡಿರುದ್ದೇವೆ.
ಆದರೆ ಭಯ ಹುಟ್ಟಿಸುವ ಆತಂಕ ನಮ್ಮನ್ನು ಸುಮ್ಮನೆ ಬಿಟ್ಟು ಹೋಗದು ಮಾರಾಯ್ರೇ. ಅದು ನಮ್ಮ ದೇಹವನ್ನು ಘಾಸಿಗೊಳಿಸುತ್ತದೆ. ದೀರ್ಘ ಸಮಯದ ಆತಂಕ ನಮ್ಮ ದೇಹದ ಮೇಲೆ ಒತ್ತಡವನ್ನುಂಟು ಮಾಡುತ್ತದೆ ಮತ್ತು ಆ ಸ್ಥಿತಿ ಉಂಟಾದಾಗ, ನಮ್ಮ ದೈನಂದಿನ ಚಟುವಟಿಕೆಗಳು ಪ್ರಭಾವಕ್ಕೊಳಗಾಗುತ್ತವೆ ಮತ್ತು ನಮ್ಮ ದೈಹಿಕ ಆರೋಗ್ಯವೂ ಕೆಡಲಾರಂಭಿಸಿ ವೈದ್ಯಕೀಯ ಸಮಸ್ಯೆಗಳು ತಲೆದೋರುತ್ತವೆ.
ನಾವು ಯಾಕೆ ಆತಂಕದಿಂದ ಬಳಲುತ್ತೇವೆ?
ಆತಂಕ ಸೌಮ್ಯ ಸ್ವರೂಪದಿಂದ ಶುರುವಾಗಿ ನಮ್ಮಲ್ಲಿ ಕಿರಿಕಿರಿ ಉಂಟು ಮಾಡುವ ಹಂತ ತಲುಪಿ ಕೊನೆಗೆ ನಾವು ತೀವ್ರ ಸ್ವರೂಪದ ಭಯಕ್ಕೊಳಗಾಗುವಂಥ ಸ್ಥಿತಿಗೆ ಒಯ್ಯುತ್ತದೆ. ಒಂದು ಕಠಿಣ ಅಥವಾ ಯಾತನಾಮಯ ಆನುಭವದಿಂದ ಇದು ಆರಂಭವಾಗುತ್ತದೆ. ವಯಸ್ಕರು ನಿವೃತ್ತಿ ಹೊಂದಿದ ಬಳಿಕ ಕಳೆದುಹೋದ ತಮ್ಮ ಸ್ಟೇಟಸ್ ಬಗ್ಗೆ ಆತಂಕಿತರಾಗುತ್ತಾರೆ. ದೀರ್ಘಕಾಲದ ಸಂಗಾತಿಯ ಅಗಲಿಕೆ, ಅನಾರೋಗ್ಯ ಮತ್ತು ಹಣಕಾಸಿನ ಚಿಂತೆ ಅವರನ್ನು ಅತಂಕಕ್ಕೆ ದೂಡುವ ಸಾಧ್ಯತೆ ಇರುತ್ತದೆ.
ಮದ್ಯ ಮತ್ತು ಡ್ರಗ್ಸ್ ಸೇವನೆ ಕೂಡ ನಮ್ಮೊಳಗೆ ಆತಂಕ ಸೃಷ್ಟಿಯಾಗಲು ಕಾರಣವಾಗಬಹುದು. ತೀವ್ರ ಸ್ವರೂಪದ ಆತಂಕದಿಂದ ಬಳಲುವ ವ್ಯಕ್ತಿ ಖಿನ್ನತೆ ಇಲ್ಲವೇ ಮಾನಸಿಕ ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆ ಇರುತ್ತದೆ.
ಲಕ್ಷಣಗಳು
ವಿನಾಕಾರಣದ ಕೋಪ, ಉದ್ವೇಗ, ಬೆವರುವಿಕೆ, ಉಸಿರಾಟದಲ್ಲಿ ಏರುಪೇರು, ಇದ್ದಕ್ಕಿದ್ದಂತೆ ಉಸಿರುಗಟ್ಟಿದಂತಾಗುವುದು, ಏದುಸಿರು ಬಿಡುವುದು, ಸಣ್ಣ ನಡುಕ, ಪದೇಪದೆ ಮೂತ್ರವಿಸರ್ಜನೆ, ವಾಂತಿಯಾಗುವಂಥ ಅನಿಸಿಕೆ, ವಾಂತಿ, ಬೇಧಿ ಅಥವಾ ಮಲಬದ್ಧತೆ. ಒತ್ತಡ, ವಿಶ್ರಾಂತಿಯ ಭಾವ ತಳೆಯಲು ಸಾಧ್ಯವಾಗದಿರೋದು, ಏಕಾಗ್ರತೆ ಸಾಧಿಸುವಲ್ಲಿ ವೈಫಲ್ಯತೆ, ನಿದ್ರಾಹೀನತೆ, ಲೈಂಗಿಕ ಸಮಸ್ಯೆಗಳು ಕೂಡ ಎದುರಾಗುತ್ತವೆ.
ಪರಿಹಾರ ಹೇಗೆ?
ಯಾವುದೇ ಸ್ವರೂಪದ ಆತಂಕದ ಸಮಸ್ಯೆಯನ್ನು ತಜ್ಞ ವೈದ್ಯರು ಟ್ರೀಟ್ ಮಾಡಬಲ್ಲರು. ಸಮಸ್ಯೆಯಿಂದ ಬಳಲುತ್ತಿರುವವರು ಮದ್ಯ, ಕಾಫೀ, ಕೋಲಾಪೇಯ ಮೊದಲಾದವುಗಳ ಸೇವನೆಯನ್ನು ನಿಲ್ಲಿಸಬೇಕು. ಆತಂಕ ಕಡಿಮೆ ಮಾಡಲು ವೈದ್ಯರು ಔಷಧಿ ಬರೆದುಕೊಡಬಹುದು. ಫಿಸಿಯೋಥರಪಿಯಿಂದಲೂ ಆತಂಕವನ್ನು ಕಡಿಮೆ ಮಾಡಬಹುದು.
ರಿಲ್ಯಾಕ್ಸ್ ಮಾಡುವ ಉಪಾಯಗಳು, ಯೋಗ ಸಹ ಆತಂಕ ನಿವಾರಿಸುವಲ್ಲಿ ಫಲಕಾರಿಯಾಗಿವೆ. ದಿನದ ಸಮಯದಲ್ಲಿ ಸಾಕಷ್ಟು ಪ್ರಮಾಣದ ವಿಶ್ರಾಂತಿ ಮತ್ತು ರಾತ್ರಿಯಲ್ಲಿ ಸೊಂಪಾದ ನಿದ್ರೆ ಆತಂಕವನ್ನು ನಮ್ಮಿಂದ ದೂರವಿಡಲು ಶಕ್ತವಾಗಿವೆ.
ಇದನ್ನೂ ಓದಿ: Health Tips: ಮಳೆಗಾಲದ ಸೀಸನ್ ರೋಗಗಳ ಬಗ್ಗೆ ಇರಲಿ ಎಚ್ಚರ, ಡೆಂಗ್ಯೂ ರೋಗದಿಂದ ಪಾರಾಗಲು ಇಲ್ಲಿದೆ ವೈದ್ಯಕೀಯ ಸಲಹೆಗಳು