ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು ಮತ್ತು ಯಾರಾದರೂ ನಮ್ಮನ್ನು ಅಗಲಿ ಹೋಗುವ ಸಂದರ್ಭ ಊಹಿಸಲಾಗದಷ್ಟು ನೋವನ್ನು ಉಂಟು ಮಾಡುತ್ತದೆ. ವ್ಯಕ್ತಿಯು ಸಾಯುವ ಮೊದಲು ನಾನು ಸಾಯುತ್ತಿದ್ದೇನೆ ಎಂಬ ಸೂಚನೆಗಳು ಆತನ ಅರಿವಿಗೆ ಬರುತ್ತದೆಯಂತೆ ಎಂದು ಹೇಳುವ ಮಾತುಗಳನ್ನು ಸಾಮಾನ್ಯವಾಗಿ ನಾವೆಲ್ಲರೂ ಕೇಳಿರುತ್ತೇವೆ. ಒಬ್ಬ ವ್ಯಕ್ತಿಯ ಅಂತ್ಯ ಸಮೀಪಿಸುತ್ತಿದೆ ಎಂದಾಗ ಆತ ಹೇಗೆ ಭಾವಿಸುತ್ತಾನೆ ಮತ್ತು ಯಾವ ಇಂದ್ರಿಯಗಳನ್ನು ಆತ ಕಳೆದುಕೊಳ್ಳಲು ಪ್ರಾರಂಭಿಸುತ್ತಾನೆ ಎಂಬುದರ ಕುರಿತು ಸ್ಟಾನ್ ಫೋರ್ಡ್ ವಿಶ್ವವಿದ್ಯಾನಿಲಯದ ಉಪಶಾಮಕ ಆರೈಕೆ ತಜ್ಞರು ಹೇಳಿದ್ದಾರೆ. ಒಬ್ಬ ರೋಗಿಯು ಸಾಯುವ ಮೊದಲು ಅನುಕ್ರಮವಾಗಿ ಯಾವೆಲ್ಲಾ ಇಂದ್ರಿಯಗಳನ್ನು ಕಳೆದುಕೊಳ್ಳುತ್ತಾ ಬರುತ್ತಾನೆ ಎಂಬುದನ್ನು ತಜ್ಞರು ಪಟ್ಟಿ ಮಾಡಿದ್ದಾರೆ.
ಪೆಲ್ಲಿಯೆಟಿವ್ ಕೇರ್ ಪ್ರೋಸ್ಪೆಕ್ಟಿವ್ (ಉಪಶಮನ ಆರೈಕೆ ದೃಷ್ಟಿಕೋನ) ಪುಸ್ತಕದಲ್ಲಿ ಬರೆಯುತ್ತಾ, ರೋಗಿಯು ತಾನು ಸಾಯುವ ಕೊನೆಯ ದಿನಗಳಲ್ಲಿ ಮೊದಲಿಗೆ ಹಸಿವು ಮತ್ತು ಬಾಯಾರಿಕೆಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾನೆ. ನಂತರ ಮಾತು ಮತ್ತು ದೃಷ್ಟಿಯನ್ನು ಕಳೆದುಕೊಳ್ಳುತ್ತಾನೆ. ಇದರ ನಂತರ ರೋಗಿಯು ಕಳೆದುಕೊಳ್ಳುವ ಇಂದ್ರಿಯಗಳೆಂದರೆ ಸ್ಪರ್ಶ ಮತ್ತು ಶ್ರವಣ ಇಂದ್ರೀಯಗಳು ಎಂದು ತಜ್ಞರು ಹೇಳಿದ್ದಾರೆ. ವ್ಯಕ್ತಿಯು ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಂಡ ನಂತರ ಸಾಯುವಾಗ ಆ ವ್ಯಕ್ತಿ ಯಾವ ಭಾವನೆಯನ್ನು ಅನುಭವಿಸುತ್ತಾನೆ ಎಂದು ಹೇಳಲು ಕಷ್ಟಕರವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಇದು ಪ್ರಜ್ಞಾಹೀನ ಸ್ಥಿತಿಯಲ್ಲಿ ಕೋಮಾಗೆ ಹೋಗುವ ಹಾಗೆ ಇರುವುದಿಲ್ಲ. ಅವೆರಡು ಒಂದೇ ಅಲ್ಲ ಆದರೆ ಕನಸಿನ ಸ್ಥಿತಿಯಂತೆ ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಕೆಲವು ವ್ಯಕ್ತಿಗಳು ಅಥವಾ ರೋಗಿಗಳು ಚಂಡಮಾರುತ ಬರುತ್ತಿದೆ, ಸಾಗರದ ಅಲೆಗಳು ಅಪ್ಪಲಿಸಿದಂತಾಗುತ್ತದೆ ಎಂದು ವಿವರಿಸಬಹುದು. ಕ್ರಮೇಣ ಅವರು ಎತ್ತರಕ್ಕೆ ಏರುತ್ತಾರೆ. ಜೀವನದ ಅಂತ್ಯದ ಪ್ರಕ್ರಿಯೆಯ ಭಾಗವಾಗಿ ರೋಗಿಗಳು ತಮ್ಮ ಇಂದ್ರಿಯಗಳನ್ನು ಕಳೆದುಕೊಳ್ಳಬಹುದು.
ವ್ಯಕ್ತಿಯ ಜೀವನದ ಕೊನೆಯ ಹಂತದಲ್ಲಿ ಆತನಿಗೆ ಬಿಳಿ ಬೆಳಕಿನ ಅನುಭವ ಉಂಟಾಗುತ್ತದೆ. ಈ ಅನುಭವವು ಮೆದುಳಿನಲ್ಲಿ ಹೆಚ್ಚುತ್ತಿರುವ ರಾಸಾಯನಿಕಗಳಿಂದ ಬರುತ್ತದೆ ಎಂದು ಹೇಳಲಾಗುತ್ತದೆ. ಮೆದುಳಿನ ಕೆಲವು ಭಾಗಗಳು ಸಾಯುವಾಗ ಇದು ಸಂಭವಿಸುತ್ತದೆ. ಮತ್ತು ದೃಷ್ಟಿ ವ್ಯವಸ್ಥೆಯ ಭಾಗಗಳು ಓವರ್ಡ್ರೈವ್ಗೆ ಹೋಗಬಹುದು. ಇದರ ಪರಿಣಾಮವಾಗಿ ರೋಗಿಗಳು ಸಾವಿಗೆ ಸಮೀಪಿಸುತ್ತಿರುವಾಗ ಬಿಳಿ ಬೆಳಕು ಅಥವಾ ಪ್ರಪಾತಗಳನ್ನು ನೋಡಲು ಆರಂಭಿಸುತ್ತಾರೆ.
Published On - 4:23 pm, Tue, 25 April 23