ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್, (Kaushal Kishore) ಸಾಮಾಜಿಕ ಜಾಲತಾಣದಲ್ಲಿ ನಾನು 22 ಕೆಜಿ ತೂಕ ಇಳಿಸಿಕೊಂಡಿದ್ದು, ಮೊದಲಿಗಿಂತ ಹೆಚ್ಚು ಫಿಟ್ ಆಗಿದ್ದೇನೆ ಎಂದು ಹೇಳಿದ್ದಾರೆ. ಟ್ವಿಟರ್‌ನಲ್ಲಿ ತೂಕ ಇಳಿಸಿಕೊಳ್ಳುವ ಮೊದಲು ಮತ್ತು ನಂತರದ ಭಾವಚಿತ್ರವನ್ನು ಶೇರ್ ಮಾಡಿ ಟ್ವೀಟ್ ಮಾಡಿರುವ ಕಿಶೋರ್, 2021ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಶಿಫಾರಸಿನ ಮೇರೆಗೆ ಅಖಿಲ ಭಾರತ ಆಯುರ್ವೇದ ಸಂಸ್ಥೆಗೆ ಪ್ರವೇಶ ಪಡೆದಿದ್ದೇನೆ ಮತ್ತು ಶಿಪಾರಸು ಮಾಡಿದ ಆಹಾರಕ್ರಮವನ್ನು ಅನುಸರಿಸುತ್ತಿದ್ದೇನೆ ಎಂದು ಹೇಳಿದರು. 2021ರ ಮೊದಲು, ನಾನು 96 ಕೆಜಿ ಇದ್ದೆ. ಆದರೆ ಈಗ 22 ಕೆಜಿ ತೂಕ ಕಳೆದುಕೊಂಡು 74 ಕೆಜಿಯಾಗಿದ್ದೇನೆ. ನಾನು ಮೊದಲಿಗಿಂತ ಫಿಟ್ ಆಗಿದ್ದೇನೆ ಎಂದು ಕಿಶೋರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಅಲ್ಪಾವಧಿಗೆ ತೂಕವನ್ನು ಕಡಿಮೆ ಮಾಡುವ ಹಲವಾರು ಆಹಾರ ವಿಧಾನಗಳಿದ್ದರೂ, ಕಡಿಮೆ ಮಾಡಿದ ತೂಕವನ್ನು ಅದೇ ರೀತಿ ಉಳಿಸಿಕೊಳ್ಳುವುದು ಮತ್ತು ನಿರ್ವಹಿಸುವುದು ಕಷ್ಟ. ಆಯುರ್ವೇದವು ನಿಮ್ಮ ದೇಹ ಪ್ರಕಾರವನ್ನು ತಿಳಿದುಕೊಂಡು ಅದರ ಮೇಲೆ ಕೆಲಸ ಮಾಡುವ ಮೂಲಕ ತೂಕವನ್ನು ಕಳೆದುಕೊಳ್ಳಲು ಸೂಚಿಸುತ್ತದೆ. ಪ್ರಾಚೀನ ಭಾರತೀಯ ವಿಜ್ಞಾನದ ಪ್ರಕಾರ, ಅಧಿಕ ತೂಕ ಅಥವಾ ಬೊಜ್ಜು, ಅಧಿಕ ಕಫ ದೋಷದ ಕಾರಣದಿಂದ ಉಂಟಾಗುತ್ತದೆ. ಆದ್ದರಿಂದ ಕೆಲವು ತತ್ವಗಳನ್ನು ಅನುಸರಿಸುವ ಮೂಲಕ ಕಫವನ್ನು ಸಮತೋಲನಗೊಳಿಸುವುದು ಮುಖ್ಯವಾಗಿದೆ. ಆಯುರ್ವೇದ ತಜ್ಞರ ಪ್ರಕಾರ, ಕಫ ದೋಷವಿರುವ ಜನರು ಹಸಿವಿನಿಂದ ಬಳಲಬಾರದು ಬದಲಿಗೆ ಅವರ ದೇಹ ಪ್ರಕಾರ ಮತ್ತು ಅಗತ್ಯಗಳಿಗೆ ಅನುಗುಣವಾಗಿ ತಿನ್ನಬೇಕು.
ಊಟವನ್ನು ಎಂದಿಗೂ ಬಿಡಬೇಡಿ: ಆಯುರ್ವೇದದ ಪ್ರಕಾರ ಆರೋಗ್ಯಕರ ಚಯಾಪಚಯವನ್ನು ಕಾಪಾಡಿಕೊಳ್ಳಲು ಸರಿಯಾದ ಜೀರ್ಣಕ್ರಿಯೆಯ ಅಗತ್ಯವಿರುತ್ತದೆ. ಇದು ದೇಹಕ್ಕೆ ನಿಯಮಿತ ಮತ್ತು ವಿಶ್ವಾಸಾರ್ಹ ಇಂಧನವನ್ನು ಪೂರೈಸುವ ಮೂಲಕ ಮಾತ್ರ ಮಾಡಬಹುದು, ಆದ್ದರಿಂದ ಅನಗತ್ಯ ತಿಂಡಿಗಳನ್ನು ಸೇವಿಸದೆ ಪ್ರತಿದಿನ ಆರೋಗ್ಯಕರ ಮತ್ತು ಜೀರ್ಣವಾಗುವ ಆಹಾರವನ್ನು ಸೇವಿಸಿ.
ಇದನ್ನೂ ಓದಿ: Acidity: ನಿಮ್ಮ ಆಹಾರ ಕ್ರಮ ಹಾಗೂ ಜೀವನ ಶೈಲಿ ಬದಲಾಯಿಸಿ, ಆ್ಯಸಿಡಿಟಿ ಸಮಸ್ಯೆಯನ್ನು ತಪ್ಪಿಸಿ
ನಿಮ್ಮ ದಿನದ ಕೊನೆಯ ಊಟವನ್ನು ಸಂಜೆ 7 ಗಂಟೆಗೆ ಮೊದಲು ಸೇವಿಸಿ: ಸಂಜೆ 7 ಗಂಟೆಯ ಮೊದಲು ಲಘು ಭೋಜನವನ್ನು ಸೇವಿಸುವುದು ಕಡ್ಡಾಯವಾಗಿದೆ. ಏಕೆಂದರೆ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸ್ವತಃ ಖಾಲಿಯಾಗಲು ಮತ್ತು ನಿರ್ವಿಶೀಕರಣದ ಪ್ರಕ್ರಿಯೆಗೆ ಒಳಗಾಗಲು ಸಾಕಷ್ಟು ಸಮಯವನ್ನು ನೀಡುತ್ತದೆ. ನೀವು ಈ ಸಮಯದಲ್ಲಿ ಸೂಪ್, ಸಲಾಡ್ ಅಥವಾ ಸುಲಭವಾಗಿ ಜೀರ್ಣವಾಗುವ ಲಘು ಆಹಾರವನ್ನು ಸೇವಿಸಬಹುದು.
ಕಫವನ್ನು ಕಡಿಮೆಗೊಳಿಸುವ ಆಹಾರವನ್ನು ಸೇವಿಸಿ: ನಿಮ್ಮ ದೈನಂದಿನ ಮೆನುವಿನಲ್ಲಿ ಕಫ-ಶಾಂತಗೊಳಿಸುವ ಆಹಾರವನ್ನು ಸೇರಿಸುವುದು ಮುಖ್ಯವಾಗಿದೆ. ಇದರಿಂದಾಗಿ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು ಮತ್ತು ತೂಕವನ್ನು ಆರೋಗ್ಯಕರ ರೀತಿಯಲ್ಲಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಸಂಸ್ಕರಿಸಿದ ಹಾಗೂ ಜಂಕ್ ಫುಡ್‌ಗಳನ್ನು ಸೇವಿಸುವ ಬದಲು ಆರೋಗ್ಯಕರವಾಗಿ ತಾಜಾವಾಗಿ ತಯಾರಿಸಿದ ಆಹಾರ ಸೇವಿಸಿ.
ಬಿಸಿ ನೀರು ಕುಡಿಯಿರಿ: ಆಯುರ್ವೇದ ಪ್ರಕಾರ ಬಿಸಿನೀರು ದೇಹದಿಂದ ವಿಷಕಾರಿ ಅಂಶವನ್ನು ಹೊರ ಹಾಕುತ್ತದೆ. ಆದ್ದರಿಂದ ಪ್ರತಿನಿತ್ಯ ಬಿಸಿ ನೀರನ್ನು ಕುಡಿಯುವುದು ಅಗತ್ಯವಿರುತ್ತದೆ. ಇದು ನಿಮ್ಮನ್ನು ಹೈಡ್ರೇಟಿಕರಿಸುವುದರ ಜೊತೆಗೆ ದೇಹದಲ್ಲಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ವ್ಯಾಯಾಮ: ನೀವು ಆಯುರ್ವೇದ ಆಹಾರ ಪದ್ಧತಿಯನ್ನು ಅನುಸರಿಸಿ ಅಥವಾ ಇನ್ನಾವುದಾದರೂ ಆಹಾರ ಕ್ರಮವನ್ನು ಅನುಸರಿಸಿ, ಆದರೆ ನೀವು ಧೀರ್ಘಾವಧಿಯಲ್ಲಿ ತೂಕವನ್ನು ಕಳೆದುಕೊಳ್ಳಲು ಬಯಸಿದರೆ ನಿಯಮಿತವಾಗಿ ವ್ಯಾಯಮ ಮಾಡುವುದು ಬಹಳ ಮುಖ್ಯ. ವ್ಯಾಯಾಮವು ಚಯಾಪಚಯ ದರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಹಾಗೂ ದೇಹದಲ್ಲಿನ ಕೊಬ್ಬನ್ನು ಸುಲಭವಾಗಿ ಸುಡುತ್ತದೆ.
ನಿಮ್ಮ ನಿದ್ರೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ: ಅನಿಯಂತ್ರಿತ ನಿದ್ರೆ ಅಥವಾ ನಿದ್ರಾಹೀನತೆ ಈ ರೀತಿಯ ಅನಾರೋಗ್ಯಕರ ಜೀವನಶೈಲಿಯು ವಿವಿಧ ಕಾಯಿಲೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಪ್ರತಿದಿನ 7-9 ಗಂಟೆಗಳ ನಿದ್ರೆಯ ಅಗತ್ಯವಿರುತ್ತದೆ.
Published On - 5:11 pm, Mon, 6 March 23