ಮಾನಸಿಕ ಆರೋಗ್ಯಕ್ಕೆ ಮಹಿಳೆಯರು ಮಾಡಬಹುದಾದ ಯೋಗಾಸನಗಳು: ಬಾಬಾ ರಾಮದೇವ್ ಸಲಹೆ ಇದು

Baba Ramdev suggests few yogasanas for mental health of women: ಇಂದಿನ ವೇಗದ ಜೀವನದಲ್ಲಿ, ಅನೇಕ ಮಹಿಳೆಯರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ವಿಫಲರಾಗುತ್ತಿದ್ದಾರೆ. ಮಾನಸಿಕ ಒತ್ತಡ ಕಡಿಮೆ ಮಾಡಿ ಮನಸ್ಸನ್ನು ಹುರಿಗೊಳಿಸಲು ಯೋಗ ಬಹಳ ಸಹಾಯ ಎನಿಸುತ್ತದೆ. ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಮಹಿಳೆಯರು ಯಾವ ಯೋಗ ಭಂಗಿಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಬಾಬಾ ರಾಮದೇವ್ ವಿವರಿಸಿದ್ದಾರೆ.

ಮಾನಸಿಕ ಆರೋಗ್ಯಕ್ಕೆ ಮಹಿಳೆಯರು ಮಾಡಬಹುದಾದ ಯೋಗಾಸನಗಳು: ಬಾಬಾ ರಾಮದೇವ್ ಸಲಹೆ ಇದು
ಬಾಬಾ ರಾಮದೇವ್

Updated on: Oct 17, 2025 | 7:34 PM

ಇಂದು, ಮಹಿಳೆಯರು ಮನೆಯಲ್ಲಿ ಮತ್ತು ಹೊರಗೆ ಎರಡೂ ಕಡೆ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಇದು ಅವರಲ್ಲಿ ಮಾನಸಿಕ ಒತ್ತಡ ಹೆಚ್ಚಲು ಕಾರಣವಾಗುತ್ತದೆ. ನಿರಂತರ ಕೆಲಸದ ಹೊರೆ, ಹಾರ್ಮೋನುಗಳ ಬದಲಾವಣೆಗಳು, ನಿದ್ರೆಯ ಕೊರತೆ ಮತ್ತು ತನಗಾಗಿ ಸಮಯ ಕಂಡುಕೊಳ್ಳಲು ಸಾಧ್ಯವಾಗದೇ ಇರುವುದು, ಇವೆಲ್ಲವೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇದಲ್ಲದೆ, ಒತ್ತಡ, ಆತಂಕ ಮತ್ತು ಖಿನ್ನತೆಯಂತಹ ಸಮಸ್ಯೆಗಳು ಸಾಮಾನ್ಯವಾಗಿರುತ್ತವೆ. ಮೊಬೈಲ್ ಇತ್ಯಾದಿ ಡಿಜಿಟಲ್ ಅಡಚಣೆಗಳೂ (digital disturbances) ಸಹ ಮಾನಸಿಕ ಸಮತೋಲನವನ್ನು ಅಲುಗಾಡಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಶಾಂತ ಮತ್ತು ಸಮತೋಲಿತ ಮನಸ್ಸನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗುತ್ತದೆ. ಯೋಗವು (Yogasanas) ಈ ನಿಟ್ಟಿನಲ್ಲಿ ನೈಸರ್ಗಿಕ ಪರಿಹಾರ ಎನಿಸಿದೆ. ಮನಸ್ಸನ್ನು ಸ್ಥಿರ ಮತ್ತು ಸಕಾರಾತ್ಮಕವಾಗಿರಿಸಲು ಇದು ಸಹಾಯವಾಗುತ್ತದೆ.

ಬಾಬಾ ರಾಮದೇವ್ ಅವರ ಪ್ರಕಾರ, ಯೋಗ ಆಸನಗಳು ದೇಹವನ್ನು ಮಾತ್ರವಲ್ಲದೆ ಮನಸ್ಸನ್ನೂ ಬ್ಯಾಲನ್ಸ್ ಮಾಡುತ್ತವೆ. ಮಹಿಳೆಯರು ನಿಯಮಿತವಾಗಿ ಯೋಗಾಭ್ಯಾಸ ಮಾಡಿದಾಗ, ಅವರ ಆಮ್ಲಜನಕದ ಮಟ್ಟವು ಹೆಚ್ಚಾಗುತ್ತದೆ, ಒತ್ತಡ ಮತ್ತು ಆಯಾಸ ಕಡಿಮೆಯಾಗುತ್ತದೆ. ಯೋಗವು ಹಾರ್ಮೋನುಗಳ ಸಮತೋಲನವನ್ನು ಸುಧಾರಿಸುತ್ತದೆ. ಇದು ಮೂಡ್ ಸ್ವಿಂಗ್ಸ್, ಮಾನಸಿಕ ಕಿರಿಕಿರಿ ಇತ್ಯಾದಿಯನ್ನು ಕಡಿಮೆ ಮಾಡತ್ತದೆ. ಯೋಗದ ಜೊತೆಗೆ ಧ್ಯಾನ ಮತ್ತು ಪ್ರಾಣಾಯಾಮವೂ ಕೂಡ ಮಾನಸಿಕ ಶಾಂತಿ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತವೆ. ಮೆಂಟಲ್ ಡೀಟಾಕ್ಸಿಕೇಶನ್​ಗೂ ಯೋಗ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಯೋಗಕ್ಕೆಂದು ಮಹಿಳೆಯರು ನಿತ್ಯವೂ ಸ್ವಲ್ಪ ಸಮಯ ತೆಗೆದಿರಿಸಿದರೆ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಪತಂಜಲಿ ವೆಲ್ನೆಸ್​ನಿಂದ ಬದಲಾದ ಜೀವನ; ಜನರ ಅನುಭವಗಳ ಕಥೆ ಕೇಳಿ

ಮಾನಸಿಕ ಆರೋಗ್ಯಕ್ಕಾಗಿ ಮಹಿಳೆಯರು ಮಾಡಬಹುದಾದ ಯೋಗಾಸನಗಳು

ಬಾಲಾಸನ

ಮನಸ್ಸನ್ನು ಬಹಳ ಬೇಗ ಶಾಂತಗೊಳಿಸಬಲ್ಲ ಒಂದು ಭಂಗಿ ಬಾಲಾಸನ. ಇದು ತಲೆ ಮತ್ತು ಬೆನ್ನುಮೂಳೆಯಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಗಾಢ ನಿದ್ರೆಯನ್ನು ಉತ್ತೇಜಿಸುತ್ತದೆ. ಮಾನಸಿಕ ಆಯಾಸ ಅಥವಾ ಚಡಪಡಿಕೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ವಿಪರೀತ ಕರ್ಣಿ ಆಸನ

ಇದು ಆಯಾಸವನ್ನು ನಿವಾರಿಸಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಈ ಆಸನವು ಆತಂಕ, ತಲೆನೋವು ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸಿನಲ್ಲಿ ಹಗುರವಾದ ಭಾವನೆಯನ್ನು ಉಂಟುಮಾಡುತ್ತದೆ.

ಸೇತುಬಂಧಾಸನ

ಈ ಆಸನವು ಹಾರ್ಮೋನುಗಳ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಮೂಡ್ ಸ್ವಿಂಗ್ಸ್, ಮಾನಸಿಕ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಬೆನ್ನುಮೂಳೆಯ ಸ್ನಾಯುಗಳನ್ನು ಬಲಪಡಿಸುತ್ತದೆ.

ಶವಾಸನ

ಶವಾಸನವು ಮಾನಸಿಕ ಶಾಂತಿಯ ಭಂಗಿ ಎಂದು ಕರೆಯಲ್ಪಡುತ್ತದೆ. ಇದು ಮನಸ್ಸು ಮತ್ತು ದೇಹ ಎರಡಕ್ಕೂ ಸಂಪೂರ್ಣ ವಿಶ್ರಾಂತಿ ನೀಡುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ದೂರ ತಳ್ಳಿ, ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ.

ಸುಖಾಸನದಲ್ಲಿ ಮುಂದಕ್ಕೆ ಬಾಗಿರುವ ಭಂಗಿ

ಈ ಆಸನವು ಗಮನ ಮತ್ತು ಭಾವನಾತ್ಮಕ ಸ್ಥಿರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ, ದೇಹವನ್ನು ವಿಶ್ರಾಂತಿ ಮಾಡುತ್ತದೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ: ಬೆನ್ನು ನೋವು ಶಮನಕ್ಕೆ ಪರಿಣಾಮಕಾರಿ ಈ ಯೋಗಾಸನಗಳು: ಬಾಬಾ ರಾಮದೇವ್ ಸಲಹೆ

ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ

  • ಯಾವಾಗಲೂ ಖಾಲಿ ಹೊಟ್ಟೆಯಲ್ಲಿ ಅಥವಾ ಲಘು ಊಟದ ನಂತರ ಯೋಗ ಮಾಡಿ.
  • ಆರಂಭದಲ್ಲಿ, ಉತ್ತಮ ಯೋಗ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಿರಿ.
  • ಪ್ರತಿದಿನ ಕನಿಷ್ಠ 20-30 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡಿ.
  • ಸಾಕಷ್ಟು ನಿದ್ರೆ ಪಡೆಯಿರಿ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ.
  • ಮೊಬೈಲ್ ಮತ್ತು ಸ್ಕ್ರೀನ್ ಸಮಯವನ್ನು ಕಡಿಮೆ ಮಾಡಿ ಮನಸ್ಸಿಗೆ ವಿಶ್ರಾಂತಿ ಸಿಗುವಂತೆ ನೋಡಿಕೊಳ್ಳಿ.
  • ದೀರ್ಘ ಉಸಿರಾಟದ ಅಭ್ಯಾಸವನ್ನು ಮಾಡಿಕೊಳ್ಳಿ, ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ