ಇತ್ತೀಚಿನ ದಿನಗಳಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ದೇಹದಲ್ಲಿ ಇನ್ಸುಲಿನ್ ಕೊರತೆಯಾದಾಗ ಮಧುಮೇಹ ಅಥವಾ ಡಯಾಬಿಟಿಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇನ್ಸುಲಿನ್ ಒಂದು ಹಾರ್ಮೋನ್ ಆಗಿದ್ದು, ಜೀವಕೋಶಗಳು ಆಹಾರದಿಂದ ಪಡೆಯುವ ಗ್ಲೂಕೋಸ್ ಅನ್ನು ಶಕ್ತಿಯಾಗಿ ಪರಿವರ್ತನೆ ಮಾಡುತ್ತದೆ. ಮೆದೋಜೀರಕ ಗ್ರಂಥಿಯಿಂದ ಬಿಡುಗಡೆಯಾಗುವ ಇನ್ಸುಲಿನ್ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುವುದನ್ನು ತಡೆಯುತ್ತದೆ. ಸಕ್ಕರೆ ಪ್ರಮಾಣವು ರಕ್ತದಲ್ಲಿ ಶೇಖರಣೆಗೊಳ್ಳುವ ಬದಲು ಜೀವಕೋಶಗಳಿಗೆ ಸರಬರಾಜಾಗುವಂತೆ ಮಾಡುತ್ತದೆ.
ಮಧುಮೇಹವನ್ನು ವೈದ್ಯರ ಔಷಧಗಳ ಮೂಲಕ ಕಡಿಮೆ ಮಾಡಿಕೊಳ್ಳುವುದು ಕಷ್ಟ. ಹೀಗಾಗಿ ಆಹಾರದ ಅಭ್ಯಾಸದಲ್ಲಿ ಬದಲಾವಣೆ, ಕೆಲವು ವ್ಯಾಯಾಮಗಳು, ಆಹಾರದಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಸೇವಿಸದಿರುವುದರ ಮೂಲಕ ಡಯಾಬಿಟಿಸ್ ಅನ್ನು ನಿಯಂತ್ರಿಸಿಕೊಳ್ಳಬಹುದು. ಅದರ ಜತೆಗೆ ಕಾರ್ಬೋಹೈಡ್ರೇಟ್ ಅಂಶ ಕಡಿಮೆ ಇರುವ ಆಹಾರಗಳ ಸೇವನೆ ಉತ್ತಮ ಎನ್ನುತ್ತಾರೆ ತಜ್ಞರು. ಆದರೆ ಇತ್ತೀಚೆಗೆ ಪ್ರಕಟವಾದ ಅಧ್ಯಯನವೊಂದರ ವರದಿಯಲ್ಲಿ ನೇರಳೆ ಹಣ್ಣು ಅಥವಾ ಬ್ಲ್ಯೂ ಬೆರಿ ಹಣ್ಣು ಮಧುಮೇಹ ನಿಯಂತ್ರಣ ಮಾಡಲಿದೆ ಎಂದು ಹೇಳಲಾಗಿದೆ. ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೂ ಈ ನೇರಳೆ ಹಣ್ಣು ಪರಿಹಾರ ನೀಡಲಿದೆ.
ನೆರಳೆ ಹಣ್ಣುಗಳಲ್ಲಿ ಯಥೇಚ್ಛವಾದ ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಸಿ, ಕ್ಯಾನ್ಸರ್ ವಿರೋಧಿ ಗುಣ ಸೇರಿದಂತೆ ಇತರ ಪೋಷಕಾಂಶಗಳು ಸಮೃದ್ಧವಾಗಿವೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ನೇರಳೆ ಹಣ್ಣು ಒಂದು ಪರಿಪೂರ್ಣ ಆಹಾರವಾಗಿದೆ ಎಂದು ಅಧ್ಯಯನದಲ್ಲಿ ಸಾಬೀತಾಗಿದೆ.
ನೇರಳೆ ಹಣ್ಣುಗಳು ಮಧುಮೇಹ ತಡೆಗೆ ಸಹಕಾರಿ ಎಂದು ಪತ್ತೆ ಮಾಡಲು ಅಧ್ಯಯನದಲ್ಲಿ ಪಾಲ್ಗೊಂಡವರನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಮೊದಲ ಗುಂಪಿಗೆ ಬ್ರೆಡ್ ಮತ್ತು ನೇರಳೆ ಹಣ್ಣುಗಳನ್ನು, ಎರಡನೇ ಗುಂಪಿಗೆ ನೇರಳೆ ಹಣ್ಣುಗಳನ್ನು ಹಾಗೂ ಮೂರನೇ ಗುಂಪಿಗೆ ಕೇವಲ ಬ್ರೆಡ್ಅನ್ನು ನೀಡಲಾಗಿತ್ತು. 7 ದಿನಗಳ ಬಳಿಕ ರಕ್ತದ ಮಾದರಿಗಳನ್ನು ಕಲೆ ಹಾಕಿ ಪರೀಕ್ಷಿಸಲಾಯಿತು. ಆಗ ನೇರಳೆ ಹಣ್ಣುಗಳನ್ನು ತಿಂದ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ಪ್ರಮಾಣ ಸಮತೋಲನದಲ್ಲಿ ಇರುವುದು ಕಂಡುಬಂದಿದೆ. ಹೀಗಾಗಿ ತಜ್ಞರು ನಿಯಮಿತ ನೇರಳೆ ಹಣ್ಣಿನ ಸೇವನೆ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಕಾರಿಯಾಗಿದೆ ಎಂದು ಕಂಡುಕೊಂಡಿದ್ದಾರೆ. ಬ್ರಿಟಿಷ್ ಜರ್ನಲ್ನಲ್ಲಿ ಈ ಅಧ್ಯಯನದ ವರದಿ ಪ್ರಕಟವಾಗಿದೆ.
ಇದನ್ನೂ ಓದಿ:
Beauty Benefits: ತೆಂಗಿನ ಎಣ್ಣೆಯ ಜತೆಗೆ ಕರ್ಪೂರ; ತ್ವಚೆಯ ಆರೋಗ್ಯಕ್ಕೆ ಈ ಪ್ರಯೋಗ ನೀವು ಮಾಡಲೇಬೇಕು
Published On - 12:59 pm, Tue, 11 January 22