ಕ್ಯಾನ್ಸರ್ ಚಿಕಿತ್ಸೆ ಇನ್ನಷ್ಟು ಸರಳ; 7 ನಿಮಿಷಗಳಲ್ಲಿ ನೀಡಬಹುದಾದ ವಿಶ್ವದ ಮೊದಲ ಇಂಜೆಕ್ಷನ್ ಅಭಿವೃದ್ಧಿಪಡಿಸಿದ ಬ್ರಿಟನ್

|

Updated on: Sep 01, 2023 | 7:50 AM

Cancer Treatment; ಎನ್​ಎಚ್​ಎಸ್​​ ಕ್ಯಾನ್ಸರ್​ ಚಿಕಿತ್ಸೆಗೆ ಬಳಸುವ ಚುಚ್ಚುಮದ್ದನ್ನು ಸಾಮಾನ್ಯವಾಗಿ ಡ್ರಿಪ್ ಮೂಲಕ ದೇಹಕ್ಕೆ ನೀಡಲಾಗುತ್ತಿದ್ದು, ಇದು ಸುಮಾರು 30 ನಿಮಿಷಗಳಿಂದ 1 ಗಂಟೆವರೆಗೆ ಸಮಯ ತೆಗೆದುಕೊಳ್ಳುತ್ತಿತ್ತು. ಚುಚ್ಚುಮದ್ದು ರಕ್ತನಾಳಗಳ ಒಳಗೆ ಹರಿದುಹೋಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಇದೀಗ ಹೊಸ ಇಂಜೆಕ್ಷನ್ ಕೇವಲ 7 ನಿಮಿಷಗಳಲ್ಲಿ ರಕ್ತನಾಳಗಳ ಒಳಗೆ ಸೇರಿಕೊಂಡುಬಿಡುತ್ತದೆ

ಕ್ಯಾನ್ಸರ್ ಚಿಕಿತ್ಸೆ ಇನ್ನಷ್ಟು ಸರಳ; 7 ನಿಮಿಷಗಳಲ್ಲಿ ನೀಡಬಹುದಾದ ವಿಶ್ವದ ಮೊದಲ ಇಂಜೆಕ್ಷನ್ ಅಭಿವೃದ್ಧಿಪಡಿಸಿದ ಬ್ರಿಟನ್
ಸಾಂದರ್ಭಿಕ ಚಿತ್ರ
Follow us on

ಲಂಡನ್, ಸೆಪ್ಟೆಂಬರ್ 1: ಜಗತ್ತಿನಾದ್ಯಂತ ಲಕ್ಷಾಂತರ ಮಂದಿಯ ಪ್ರಾಣಕ್ಕೆ ಮಾರಕವಾಗಿ ಪರಿಣಮಿಸಿರುವ ಕ್ಯಾನ್ಸರ್​ಗೆ (Cancer) ಚಿಕಿತ್ಸೆ ನೀಡಲು ಸರಳ ವಿಧಾನವೊಂದನ್ನು ಬ್ರಿಟನ್​ನ ವೈದ್ಯಕೀಯ ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಕೇವಲ 7 ನಿಮಿಷಗಳಲ್ಲಿ ಕ್ಯಾನ್ಸರ್​​ ರೋಗಿಗೆ ನೀಡಬಹುದಾದ ಟೆಸೆಂಟ್ರಿಕ್ ಚುಚ್ಚುಮದ್ದು ಅಥವಾ ಇಂಜೆಕ್ಷನ್​ (Tecentriq) ಅನ್ನು ಬ್ರಿಟನ್​​ನ ರಾಷ್ಟ್ರೀಯ ಆರೋಗ್ಯ ಸೇವೆಗಳ ಇಲಾಖೆ (NHS) ಬಿಡುಗಡೆ ಮಾಡಿದೆ. ಕ್ಯಾನ್ಸರ್ ಚಿಕಿಯತ್ಸೆಯಲ್ಲಿ ಇಷ್ಟೊಂದು ಕಡಿಮೆ ಅವಧಿಯಲ್ಲಿ ರೋಗಿಗೆ ನೀಡಬಹುದಾದ ವಿಶ್ವದ ಮೊದಲ ಚುಚ್ಚುಮದ್ದು ಇದಾಗಿದೆ.

ಹೆಲ್ತ್​ಕೇರ್ ಪ್ರಾಡಕ್ಟ್ಸ್​ ರೆಗ್ಯುಲೇಟರಿ ಏಜೆನ್ಸಿಯ (ಎಂಎಚ್​ಆರ್​ಎ) ಅನುಮೋದನೆ ದೊರೆತ ಬಳಿಕ ನೂರಾರು ರೋಗಿಗಳಿಗೆ ಚುಚ್ಚುಮದ್ದು ನೀಡಲಾಗಿದೆ ಎಂದು ಎನ್​ಎಚ್​​ಎಸ್ ತಿಳಿಸಿದೆ. ಇಮ್ಯುನೋಥೆರಪಿ, ಅಟೆಝೋಲಿಜುಮಾಬ್ (ಟೆಸೆಂಟ್ರಿಕ್ ಬ್ರ್ಯಾಂಡ್ ಅಡಿಯಲ್ಲಿ ನೀಡಲಾಗುವ ಚುಚ್ಚುಮದ್ದು) ಇಂಜೆಕ್ಷನ್ ಇದಾಗಿದ್ದು, ಕ್ಯಾನ್ಸರ್ ಚಿಕಿತ್ಸೆಯ ಸಂಕೀರ್ಣತೆಯನ್ನು ಇದು ಕಡಿಮೆ ಮಾಡುತ್ತದೆ ಎಂದು ಎನ್​ಎಚ್​​ಎಸ್ ಹೇಳಿದೆ.

ಚುಚ್ಚುಮದ್ದಿಗೆ ಅನುಮೋದನೆ ದೊರೆತಿರುವುದರಿಂದ ನಮ್ಮ ರೋಗಿಗಳಿಗೆ ಅನುಕೂಲಕರ ಮತ್ತು ವೇಗವಾದ ಆರೈಕೆ ನೀಡಲು ನಮಗೆ ಸಾಧ್ಯವಾಗಲಿದೆ. ದಿನವಿಡೀ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಲು ನಮ್ಮ ತಂಡಗಳಿಗೆ ಸುಲಭವಾಗಲಿದೆ ಎಂದು ಎನ್​ಎಚ್ಎಸ್​ ಫೌಂಡೇಶನ್ ಟ್ರಸ್ಟ್​​ನ ಆನ್​ಕಾಲಜಿಸ್ಟ್ ಡಾ. ಅಲೆಕ್ಸಾಂಡರ್ ಮಾರ್ಟಿನ್ ಹೇಳಿದ್ದಾರೆ.

ಎನ್​ಎಚ್​ಎಸ್​​ ಕ್ಯಾನ್ಸರ್​ ಚಿಕಿತ್ಸೆಗೆ ಬಳಸುವ ಚುಚ್ಚುಮದ್ದನ್ನು ಸಾಮಾನ್ಯವಾಗಿ ಡ್ರಿಪ್ ಮೂಲಕ ದೇಹಕ್ಕೆ ನೀಡಲಾಗುತ್ತಿದ್ದು, ಇದು ಸುಮಾರು 30 ನಿಮಿಷಗಳಿಂದ 1 ಗಂಟೆವರೆಗೆ ಸಮಯ ತೆಗೆದುಕೊಳ್ಳುತ್ತಿತ್ತು. ಚುಚ್ಚುಮದ್ದು ರಕ್ತನಾಳಗಳ ಒಳಗೆ ಹರಿದುಹೋಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಇದೀಗ ಹೊಸ ಇಂಜೆಕ್ಷನ್ ಕೇವಲ 7 ನಿಮಿಷಗಳಲ್ಲಿ ರಕ್ತನಾಳಗಳ ಒಳಗೆ ಸೇರಿಕೊಂಡುಬಿಡುತ್ತದೆ ಎಂದು ರೋಚೆ ಪ್ರಾಡಕ್ಟ್ಸ್ ಲಿಮಿಟೆಡ್​ನ ವೈದ್ಯಕೀಯ ನಿರ್ದೇಶಕ ಮಾರಿಯಸ್ ಸ್ಕೋಲ್ಟ್ಜ್ ತಿಳಿಸಿದ್ದಾರೆ.

ಅಟೆಝೋಲಿಝುಮಾಬ್ ಎಂಬುದು ರೋಚೆ ಕಂಪನಿಯ ಅಧೀನ ಸಂಸ್ಥೆ ಜೆನೆಂಟೆಕ್​ನಿಂದ ತಯಾರಿಸಲ್ಪಟ್ಟಿದೆ. ಇದು ಇಮ್ಯುನೊಥೆರಪಿ ಔಷಧವಾಗಿದ್ದು, ಕ್ಯಾನ್ಸರ್ ಕೋಶಗಳನ್ನು ಹುಡುಕಲು ಮತ್ತು ನಾಶಮಾಡಲು ರೋಗಿಯ ಸ್ವಂತ ಪ್ರತಿರಕ್ಷಣಾ ವ್ಯವಸ್ಥೆಯನ್ನು ಶಕ್ತಗೊಳಿಸುತ್ತದೆ. ಶ್ವಾಸಕೋಶ, ಸ್ತನ, ಪಿತ್ತಜನಕಾಂಗ ಮತ್ತು ಮೂತ್ರಕೋಶ ಸೇರಿದಂತೆ ಹಲವಾರು ವಿಧದ ಕ್ಯಾನ್ಸರ್‌ಗಳಿಂದ ಬಳಲುತ್ತಿರುವ ರೋಗಿಗಳಿಗೆ ಇಂಜೆಕ್ಟ್ ಮಾಡುವ ಮೂಲಕ ಪ್ರಸ್ತುತ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Bladder Cancer: ಮೂತ್ರಕೋಶದ ಕ್ಯಾನ್ಸರ್​ ಲಕ್ಷಣಗಳೇನು? ಕಾರಣ ಮತ್ತು ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ

ಇಂಗ್ಲೆಂಡ್‌ನಲ್ಲಿ ಪ್ರತಿ ವರ್ಷ ಅಟೆಝೋಲಿಜುಮಾಬ್‌ನ ಚಿಕಿತ್ಸೆಯನ್ನು ಪಡೆಯುವ ಸುಮಾರು 3,600 ರೋಗಿಗಳಲ್ಲಿ ಹೆಚ್ಚಿನವರು ಇನ್ನು ಸಮಯ ಉಳಿಸುವ ಚುಚ್ಚುಮದ್ದನ್ನು ಪಡೆಯಬಹುದಾಗಿದೆ ಎಂದು ಎನ್​ಎಚ್​ಎಸ್ ಹೇಳಿದೆ.

ಸದ್ಯ ಇಂಗ್ಲೆಂಡ್​ನ ಎನ್​ಎಚ್​ಎಸ್ ಅಧೀನದಲ್ಲಿರುವ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳಲ್ಲಿ ಮಾತ್ರ ನೂತನ ಚುಚ್ಚುಮದ್ದಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿ, ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ