Bladder Cancer: ಮೂತ್ರಕೋಶದ ಕ್ಯಾನ್ಸರ್ ಲಕ್ಷಣಗಳೇನು? ಕಾರಣ ಮತ್ತು ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ
ಮೂತ್ರಕೋಶದೊಳಗೆ ಅಸಹಜ ಕೋಶಗಳು ಅನಿಯಂತ್ರಿತವಾಗಿ ಬೆಳೆಯಲು ಮತ್ತು ಹೆಚ್ಚಾಗಲು ಪ್ರಾರಂಭಿಸಿದಾಗ ಕ್ಯಾನ್ಸರ್ ಸಂಭವಿಸುತ್ತದೆ. ಈ ಅಸಹಜ ಜೀವಕೋಶಗಳು ಗಡ್ಡೆಗಳು ರೂಪುಗೊಳ್ಳಲು ಕಾರಣವಾಗಬಹುದು. ಚಿಕಿತ್ಸೆ ನೀಡದೆ ಬಿಟ್ಟರೆ, ಸುತ್ತಮುತ್ತಲಿನ ಅಂಗಾಂಶಗಳಿಗೆ ಮತ್ತು ದೇಹದ ಇತರ ಭಾಗಗಳಿಗೆ ಹರಡಬಹುದು. ಮೂತ್ರಕೋಶದ ಕ್ಯಾನ್ಸರ್ ಲಕ್ಷಣಗಳೇನು? ಕಾರಣ ಮತ್ತು ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ
ವೈದ್ಯಕೀಯ ಸಂಶೋಧನೆಯು ಹೆಚ್ಚೆಚ್ಚು ಮುಂದುವರಿದಂತೆ ವಿವಿಧ ಕಾಯಿಲೆಗಳ ಬಗ್ಗೆ ನಮ್ಮ ತಿಳುವಳಿಕೆಯು ಗಾಢವಾಗುತ್ತದೆ. ಕಾಯಿಲೆ ಪೀಡಿತರಿಗೆ ಉತ್ತಮ ಆರೈಕೆ ಮತ್ತು ಚಿಕಿತ್ಸೆಯನ್ನು ಒದಗಿಸಲು ನಮಗೆ ಅನುವು ಮಾಡಿಕೊಡುತ್ತದೆ. ನಮ್ಮ ಗಮನ ಸೆಳೆಯುವ ಅಂತಹ ಒಂದು ಕಾಯಿಲೆಯು ಮೂತ್ರಕೋಶದ ಕ್ಯಾನ್ಸರ್ (Bladder cancer) ಆಗಿದೆ. ಇದು ವಿಶ್ವಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುತ್ತಿದೆ. ಆನ್ಕೊಲೊಜಿಸ್ಟ್ ಆಗಿ, ಈ ಕಾಯಿಲೆ, ಅದರ ಕಾರಣಗಳು, ಲಕ್ಷಣಗಳು ಮತ್ತು ಲಭ್ಯವಿರುವ ಚಿಕಿತ್ಸಾ ಆಯ್ಕೆಗಳ ಮೇಲೆ ಬೆಳಕು ಚೆಲ್ಲುವುದು ನಿರ್ಣಾಯಕ ಎಂದು ನಾನು ಭಾವಿಸುತ್ತೇನೆ. ಹಿರಿಯ ನಟ ವಿನೋದ್ ಖನ್ನಾ ಅವರು ಮೂತ್ರಕೋಶದ ಕ್ಯಾನ್ಸರ್‌ಗೆ ಬಲಿಯಾಗಿರುವುದು ಗೊತ್ತೇ ಇದೆ. ಈ ಕ್ಯಾನ್ಸರ್‌ನ ಅರಿವು ಮತ್ತು ತಿಳುವಳಿಕೆಯಿಂದ ಅವರನ್ನು ಉಳಿಸಿಕೊಳ್ಳಬಹುದಿತ್ತೇನೋ.
ಏನಿದು ಮೂತ್ರಕೋಶದ ಕ್ಯಾನ್ಸರ್ (Bladder cancer)?
ಮೂತ್ರಕೋಶದೊಳಗೆ ಅಸಹಜ ಕೋಶಗಳು ಅನಿಯಂತ್ರಿತವಾಗಿ ಬೆಳೆಯಲು ಮತ್ತು ಹೆಚ್ಚಾಗಲು ಪ್ರಾರಂಭಿಸಿದಾಗ ಕ್ಯಾನ್ಸರ್ ಸಂಭವಿಸುತ್ತದೆ. ಈ ಅಸಹಜ ಜೀವಕೋಶಗಳು ಗಡ್ಡೆಗಳು ರೂಪುಗೊಳ್ಳಲು ಕಾರಣವಾಗಬಹುದು. ಚಿಕಿತ್ಸೆ ನೀಡದೆ ಬಿಟ್ಟರೆ, ಸುತ್ತಮುತ್ತಲಿನ ಅಂಗಾಂಶಗಳಿಗೆ ಮತ್ತು ದೇಹದ ಇತರ ಭಾಗಗಳಿಗೆ ಹರಡಬಹುದು. ಮೂತ್ರಕೋಶ ಕ್ಯಾನ್ಸರ್‌ಗೆ ನಿಖರವಾದ ಕಾರಣ ತಿಳಿದುಬಂದಿಲ್ಲವಾದರೂ, ಅದರ ಬೆಳವಣಿಗೆಯ ಸಾಧ್ಯತೆಯನ್ನು ಹೆಚ್ಚಿಸುವ ಕೆಲವು ಅಪಾಯಕಾರಿ ಅಂಶಗಳನ್ನು ಗುರುತಿಸಲಾಗಿದೆ.
ಮೂತ್ರಕೋಶದ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಅಂಶಗಳು ಯಾವುವು?
ಧೂಮಪಾನವು ಮೂತ್ರಕೋಶದ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಬಲ್ಲ ಅಂಶವಾಗಿದೆ. ತಂಬಾಕಿನ ಹೊಗೆಯಲ್ಲಿರುವ ಹಾನಿಕಾರಕ ರಾಸಾಯನಿಕಗಳನ್ನು ರಕ್ತ ಹೀರಿಕೊಂಡು ಅಂತಿಮವಾಗಿ ಮೂತ್ರದ ಮೂಲಕ ಹೊರಹಾಕುತ್ತದೆ. ಇದು ಅಪಾಯಕ್ಕೆ ಆಹ್ವಾನ ಒಡ್ಡಿದಂತೆಯೇ ಸರಿ. ಇಷ್ಟೇ ಅಲ್ಲದೆ, ನಿರ್ದಿಷ್ಟವಾಗಿ ಡೈ, ರಬ್ಬರ್ ಮತ್ತು ಚರ್ಮದ ಕೈಗಾರಿಕೆಗಳಲ್ಲಿ ಬಳಸಲಾಗುವ ಕೆಲವು ಕೈಗಾರಿಕಾ ರಾಸಾಯನಿಕಗಳು ಮತ್ತು ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದು ಕೂಡ ಮೂತ್ರಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಕುಟುಂಬದಲ್ಲಿ ಯಾರಿಗಾದರೂ ಮೂತ್ರಕೋಶದ ಕ್ಯಾನ್ಸರ್ ಆಗಿದ್ದರೆ ಮತ್ತು ಈ ಹಿಂದೆ ವಿಕಿರಣ ಚಿಕಿತ್ಸೆಗೆ ಒಳಗಾದವರಲ್ಲಿಯೂ ಕ್ಯಾನ್ಸರ್ ಸಾಧ್ಯತೆ ಹೆಚ್ಚು.
ಮೂತ್ರಕೋಶದ ಕ್ಯಾನ್ಸರ್ ಲಕ್ಷಣಗಳೇನು?
ಮೂತ್ರಕೋಶದ ಕ್ಯಾನ್ಸರ್‌ಗೆ ಸಂಬಂಧಿಸಿದ ಸಾಮಾನ್ಯ ರೋಗಲಕ್ಷಣಗಳ ಅರಿವು, ಬೇಗನೆ ರೋಗನಿರ್ಣಯ ಮಾಡುವುದು ಹೆಚ್ಚು ಪರಿಣಾಮಕಾರಿ ಚಿಕಿತ್ಸೆಗೆ ನೆರವಾಗಬಹುದು. ಮೂತ್ರದಲ್ಲಿ ರಕ್ತ ಪ್ರಮುಖ ಸೂಚಕವಾಗಿದೆ. ಹೆಮಟೂರಿಯಾ ಎಂದು ಕರೆಯಲ್ಪಡುವ ಈ ಸ್ಥಿತಿಯು ಆಗಾಗ್ಗೆ ಕಾಣಿಸಿಕೊಂಡು ಇಲ್ಲವಾಗಬಹುದು. ಇದು ಬಿಟ್ಟರೆ, ಆಗಾಗ್ಗೆ ಮೂತ್ರ ವಿಸರ್ಜನೆ, ಮೂತ್ರ ವಿಸರ್ಜನೆ ವೇಳೆ ನೋವು ಮತ್ತು ಸೊಂಟ ನೋವು ಇತರ ರೋಗಲಕ್ಷಣಗಳಾಗಿವೆ. ಆದಾಗ್ಯೂ, ಈ ರೋಗಲಕ್ಷಣಗಳು ಸಾಮಾನ್ಯವಾಗಿ ಮೂತ್ರ ಸಂಬಂಧಿತ ಇತರ ಸಮಸ್ಯೆಗಳೊಂದಿಗೆ ಕೂಡ ಅತಿಕ್ರಮಿಸಬಹುದು. ಅವುಗಳು ಮುಂದುವರಿದರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಭೇಟಿಯಾಗಬೇಕು.
ಮೂತ್ರಕೋಶದ ಕ್ಯಾನ್ಸರ್ ಪತ್ತೆಹಚ್ಚುವ ವಿಧಾನಗಳು
ಮೂತ್ರಕೋಶದ ಕ್ಯಾನ್ಸರ್ ರೋಗದ ಇರುವಿಕೆಯನ್ನು ಖಚಿತಪಡಿಸಲು ವೈದ್ಯರು ವಿವಿಧ ರೋಗನಿರ್ಣಯ ಸಾಧನಗಳನ್ನು ಬಳಸುತ್ತಾರೆ. ಇವುಗಳಲ್ಲಿ ಅಸಹಜ ಕೋಶಗಳನ್ನು ಗುರುತಿಸಲು ಮೂತ್ರ ಪರೀಕ್ಷೆಗಳು, ಅಲ್ಟ್ರಾಸೌಂಡ್‌ಗಳಂತಹ ಸ್ಕ್ಯಾನಿಂಗ್ಗಳು ಮತ್ತು ಮೂತ್ರಕೋಶದ ಮತ್ತು ಸುತ್ತಮುತ್ತಲಿನ ಪ್ರದೇಶಗಳ ತಪಾಸಣೆಗೆ ಸಿಟಿ / ಎಂಆರ್ಐ ಸ್ಕ್ಯಾನ್‌ಗಳು ಸೇರಿವೆ. ಮೂತ್ರಕೋಶದ ಒಳಕ್ಕೆ ಕ್ಯಾಮೆರಾದೊಂದಿಗೆ ತೆಳುವಾದ, ಹೊಂದಿಕೊಳ್ಳುವ ಟ್ಯೂಬ್ ಅನ್ನು ಸೇರಿಸುವ ಮೂಲಕವೂ ಪರೀಕ್ಷಿಸಲಾಗುತ್ತದೆ. ಈ ವಿಧಾನವನ್ನು ಸಿಸ್ಟೊಸ್ಕೋಪಿ ಎನ್ನುತ್ತಾರೆ.
ಮೂತ್ರಕೋಶದ ಕ್ಯಾನ್ಸರ್‌ಗೆ ಚಿಕಿತ್ಸೆ ಹೇಗೆ?
ಮೂತ್ರಕೋಶದ ಕ್ಯಾನ್ಸರ್‌ಗೆ ಚಿಕಿತ್ಸೆಯ ವಿಧಾನವು ಹೆಚ್ಚಾಗಿ ರೋಗದ ಹಂತ ಮತ್ತು ತೀವ್ರತೆಯನ್ನು ಅವಲಂಬಿಸಿರುತ್ತದೆ. ಮೂರು ಪ್ರಾಥಮಿಕ ಚಿಕಿತ್ಸಾ ವಿಧಾನಗಳಿವೆ; ಅವುಗಳೆಂದರೆ ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆ.
ಶಸ್ತ್ರಚಿಕಿತ್ಸೆ: ಕ್ಯಾನ್ಸರ್ ಮೂತ್ರಕೋಶದ ಒಳಪದರಕ್ಕಷ್ಟೇ ಸೀಮಿತವಾಗಿದ್ದರೆ, ಮೂತ್ರಕೋಶದ ಗೆಡ್ಡೆಯ ಟ್ರಾನ್ಸ್ಯುರೆಥ್ರಲ್ ರೆಸೆಕ್ಷನ್ (TURBT) ಎಂದು ಕರೆಯಲ್ಪಡುವ ವಿಧಾನವನ್ನು ನಿರ್ವಹಿಸಬಹುದು. ಇದು ಮೂತ್ರನಾಳದ ಮೂಲಕ ಗಡ್ಡೆಯನ್ನು ತೆಗೆದುಹಾಕುವ ವಿಧಾನವಾಗಿದೆ. ಹೆಚ್ಚು ಮುಂದುವರಿದ ಸಂದರ್ಭಗಳಲ್ಲಿ, ಮೂತ್ರಕೋಶದ (ಸಿಸ್ಟೆಕ್ಟಮಿ) ಭಾಗಶಃ ಅಥವಾ ಸಂಪೂರ್ಣ ತೆಗೆಯುವಿಕೆ ಅಗತ್ಯವಾಗಬಹುದು.
ಕೀಮೋಥೆರಪಿ: ಈ ಚಿಕಿತ್ಸೆಯು ಕ್ಯಾನ್ಸರ್ ಕೋಶಗಳನ್ನು ನಾಶಮಾಡಲು ಅಥವಾ ಅವುಗಳ ಬೆಳವಣಿಗೆಯನ್ನು ನಿಲ್ಲಿಸಲು ಔಷಧಿಗಳನ್ನು ಬಳಸುತ್ತದೆ. ಗಡ್ಡೆಗಳನ್ನು ಕುಗ್ಗಿಸಲು ಶಸ್ತ್ರಚಿಕಿತ್ಸೆಯ ಮೊದಲು (ನಿಯೋಅಡ್ಜುವಂಟ್) ಕೀಮೋಥೆರಪಿಯನ್ನು ನಿರ್ವಹಿಸಬಹುದು, ಶಸ್ತ್ರಚಿಕಿತ್ಸೆಯ ನಂತರ (ಸಹಾಯಕ) ಉಳಿದ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಅಥವಾ ಮುಂದುವರಿದ ಪ್ರಕರಣಗಳಿಗೆ ಪ್ರಾಥಮಿಕ ಚಿಕಿತ್ಸೆಯಾಗಿ ನೀಡಬಹುದು.
ವಿಕಿರಣ ಚಿಕಿತ್ಸೆ: ಕೆಲವು ಸಂದರ್ಭಗಳಲ್ಲಿ, ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಲು ಮತ್ತು ಕೊಲ್ಲಲು ವಿಕಿರಣ ಚಿಕಿತ್ಸೆಯನ್ನು ಬಳಸಲಾಗುತ್ತದೆ. ಇದನ್ನು ಏಕಾಂಗಿಯಾಗಿ ಅಥವಾ ಶಸ್ತ್ರಚಿಕಿತ್ಸೆ ಮತ್ತು ಕೀಮೋಥೆರಪಿಯ ಸಂಯೋಜನೆಯಲ್ಲಿ ಬಳಸಬಹುದು.
ಇಮ್ಯುನೊಥೆರಪಿ: ಇಮ್ಯುನೊಥೆರಪಿ ಒಂದು ಭರವಸೆಯ ಮಾರ್ಗವಾಗಿ ಹೊರಹೊಮ್ಮಿದೆ. ಈ ವಿಧಾನದಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಕ್ಯಾನ್ಸರ್ ಕೋಶಗಳನ್ನು ಗುರುತಿಸಲು ಮತ್ತು ದಾಳಿ ಮಾಡಲು ಸಹಾಯ ಮಾಡುವಂತೆ ಮಾಡಲಾಗುತ್ತದೆ. ಮೂತ್ರಪಿಂಡ ದುರ್ಬಲವಾಗಿರುವ ರೋಗಿಗಳಿಗೆ ಇವು ವಿಶೇಷವಾಗಿ ಉಪಯುಕ್ತವಾಗಿವೆ. ಹೆಚ್ಚಿನ ಆರೈಕೆಗಾಗಿ ಹೊಸ ಉದ್ದೇಶಿತ ಔಷಧಗಳು ಲಭ್ಯವಿದೆ. ಅಂತಹ ಚಿಕಿತ್ಸೆಗಳ ಬಗ್ಗೆ ನಿರ್ಧರಿಸಲು ಜೀನೋಮಿಕ್ ಪ್ರೊಫೈಲಿಂಗ್ ಸಹಾಯ ಮಾಡುತ್ತದೆ.
ತಡೆಗಟ್ಟುವಿಕೆ: ಮೂತ್ರಕೋಶದ ಕ್ಯಾನ್ಸರ್‌ನ ಎಲ್ಲಾ ಪ್ರಕರಣಗಳನ್ನು ತಡೆಯಲು ಸಾಧ್ಯವಾಗದಿದ್ದರೂ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ತಂಬಾಕು ಉತ್ಪನ್ನಗಳ ಸೇವನೆ ತಪ್ಪಿಸುವುದು, ಹೆಚ್ಚು ನೀರು ಕುಡಿಯುವುದು, ಹಣ್ಣುಗಳು ಮತ್ತು ತರಕಾರಿಗಳಿಂದ ಕೂಡಿದ ಸಮತೋಲಿತ ಆಹಾರವನ್ನು ಸೇವಿಸುವುದರಿಂದ ರೋಗ ಬರುವ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯವಾಗಲಿದೆ. ಆರಂಭಿಕ ಪತ್ತೆಗಾಗಿ ನಿಯಮಿತ ವೈದ್ಯಕೀಯ ತಪಾಸಣೆ ಮತ್ತು ಸ್ಕ್ರೀನಿಂಗ್‌ಗಳು ಸಹ ಅತ್ಯಗತ್ಯವಾಗಿದೆ.
ಇದನ್ನೂ ಓದಿ: ಹೆಚ್ಚುತ್ತಿರುವ ಗುದ ಕ್ಯಾನ್ಸರ್, ಇದು ಮಾರಣಾಂತಿಕವೇ? ಲಕ್ಷಣಗಳು, ರೋಗ ಪತ್ತೆ, ಚಿಕಿತ್ಸೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ಮೂತ್ರಕೋಶದ ಕ್ಯಾನ್ಸರ್ ಒಂದು ಸಂಕೀರ್ಣ ಕಾಯಿಲೆಯಾಗಿದ್ದು, ರೋಗನಿರ್ಣಯ ಮತ್ತು ಚಿಕಿತ್ಸೆಗೆ ಬಹುಮುಖಿ ವಿಧಾನದ ಅಗತ್ಯವಿರುತ್ತದೆ. ಹೆಚ್ಚಿದ ಅರಿವು, ಅಪಾಯದ ಅಂಶಗಳನ್ನು ಅರ್ಥಮಾಡಿಕೊಳ್ಳುವುದು, ರೋಗಲಕ್ಷಣಗಳನ್ನು ಗುರುತಿಸುವುದು ಮತ್ತು ಲಭ್ಯವಿರುವ ಚಿಕಿತ್ಸಾ ಆಯ್ಕೆಗಳ ಬಗ್ಗೆ ತಿಳಿಸುವ ಮೂಲಕ, ಕ್ಯಾನ್ಸರ್ ವಿರುದ್ಧ ಹೋರಾಡಬಹುದಾಗಿದೆ.
– ಡಾ. ನೀತಿ ಕೃಷ್ಣ ರೈಜದ (ಲೇಖಕರು ಹಿರಿಯ ನಿರ್ದೇಶಕರು, ಮೆಡಿಕಲ್ ಆನ್ಕೊಲೊಜಿ & ಹೆಮಟೊ ಆನ್ಕೊಲೊಜಿ, ಫೋರ್ಟಿಸ್ ಆಸ್ಪತ್ರೆ, ರಿಚ್ಮಂಡ್ ರಸ್ತೆ, ಬೆಂಗಳೂರು)