ಇತ್ತೀಚೆಗೆ ಜನರ ಆರೋಗ್ಯದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತಲೇ ಇದೆ. ಇದರಿಂದ ದೇಹದ ತೂಕ ಜಾಸ್ತಿಯಾಗುತ್ತಿದೆ. ಮಕ್ಕಳಲ್ಲೂ ಸಹ ಹೆಚ್ಚಿನ ತೂಕದಿಂದಾಗಿ ಆರೋಗ್ಯದಲ್ಲಿ ದುರ್ಬಲತೆ ಕಂಡು ಬರುತ್ತಿದೆ. ಇದಕ್ಕೆಲ್ಲಾ ಕಾರಣ ಆಹಾರದ ವ್ಯವಸ್ಥೆ. ನಮ್ಮ ಆಹಾರ ವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ಆರೋಗ್ಯದಲ್ಲಿ ಸುಧಾರಣೆಯನ್ನು ಕಂಡುಕೊಳ್ಳಬಹುದಾಗಿದೆ. ಹಾಗಿದ್ದಾಗ ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರ ಪದಾರ್ಥಗಳು ಯಾವುದು ಎಂಬುದರ ಕುರಿತಾಗಿ ತಿಳಿಯೋಣ.
ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಳ ಬೊಜ್ಜಿಗೆ ಕಾರಣವಾಗುತ್ತದೆ. ಇದು ದೇಹದಲ್ಲಿನ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಹೆಚ್ಚು ಆಯಾಸ, ಅಸ್ವಸ್ಥತೆ, ಜತೆಗೆ ಇನ್ನಿತರ ಆರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತದೆ. ಅದರಲ್ಲಿಯೂ ಪ್ರಸ್ತುತ ಕೊರೊನಾ ಸಾಂಕ್ರಾಮಿಕದ ಹರಡುವಿಕೆಯಿದಾಗಿ ಮನೆಯಲ್ಲಿಯೇ ಇರುವ ಪರಿಸ್ಥಿತಿ ಎದುರಾಗಿತ್ತು. ಮನೆಯಲ್ಲಿ ಕುಳಿತಲ್ಲಿಯೇ ಕೆಲಸ ಮಾಡುತ್ತಿರುವ ಅದೆಷ್ಟೋ ಉದ್ಯೋಗಿಗಳಿಗೆ ಕೊಲೆಸ್ಟ್ರಾಲ್ ಮಟ್ಟ ಅಧಿಕವಾಗಿದೆ. ಇದಕ್ಕೆ ನಿಯಮಿತ ಪೌಷ್ಠಿಕ ಆಹಾರದ ಜತೆಗೆ ವ್ಯಾಯಾಮ ಅಭ್ಯಾಸ ಬೇಕು.
ಕೊಬ್ಬಿನ ಆಹಾರ ಪದಾರ್ಥಗಳಿಂದ ದೂರವಿರುವುದು
ಜಂಕ್ಫುಡ್ಗಳಲ್ಲಿ ಹೆಚ್ಚು ಕೊಬ್ಬಿನಾಂಶ ಕಂಡು ಬರುತ್ತದೆ. ಎಣ್ಣೆಯಲ್ಲಿ ಕರಿದ ತಿಂಡಿಗಳು ದೇಹದಲ್ಲಿ ಕೊಬ್ಬಿನ ಅಂಶವನ್ನು ಹೆಚ್ಚಿಸುತ್ತದೆ. ದೇಹಕ್ಕೆ ವ್ಯಾಯಾಮ ಇಲ್ಲದಿದ್ದಾಗ ಅಧಿಕ ಕೊಲೆಸ್ಟ್ರಾಲ್ ನಮ್ಮ ಆರೋಗ್ಯದಲ್ಲಿ ಸಮಸ್ಯೆಯನ್ನು ತರುತ್ತದೆ. ಹಾಗಿದ್ದಾಗ ಜಂಕ್ಫುಡ್ ಸೇವನೆಯನ್ನು ಆದಷ್ಟು ತ್ಯಜಿಸಿ. ಪಾನಿಪುರಿ, ಗೋಬಿ ಮಂಚೂರಿಯಂತಹ ಅತಿಯಾದ ಆಹಾರ ಸೇವನೆ ನಿಮ್ಮ ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ.
ಅತಿಯಾದ ಮಾಂಸ ಸೇವನೆಯನ್ನು ತ್ಯಜಿಸಿ
ನೀವು ಮಾಂಸಾಹಾರಿಗಳಾಗಿದ್ದರೆ ಕೆಂಪು ಮಾಂಸವನ್ನು ಅತಿಯಾಗಿ ಸೇವಿಸುವುದನ್ನು ತ್ಯಜಿಸಿ. ಮಾಂಸ ಸೇವನೆಯು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಗಟ್ಟಿ ಮಾಂಸದ ಬದಲಾಗಿ ತೆಳ್ಳಗಿನ ಮಾಂಸ ಸೇವನೆ ಮಾಡಿ.
ಕಡಿಮೆ ಕ್ಯಾಲ್ಸಿಯಂ ಆಹಾರ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ
ನಮ್ಮ ದೇಹವು ಆರೋಗ್ಯಕರವಾಗಿರಲು ಮತ್ತು ಸದೃಢವಾಗಿರಲು ಕ್ಯಾಲ್ಸಿಯಂ ಬಹಳ ಮುಖ್ಯವಾದ ಪೋಷಕಾಂಶ. ಮೂಳೆಗಳು ಮತ್ತು ಮೆದುಳಿನ ಬೆಳವಣಿಗೆಗೆ ಇದು ಸಹಾಯಕವಾಗಿದೆ. ಹೆಚ್ಚಿನ ಅಧ್ಯಯನಗಳಿಂದ ತಿಳಿದು ಬಂದಂತೆ ಕ್ಯಾಲ್ಸಿಯಂ ಪೋಷಕಾಂಶ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ, ಡೈರಿ ಉತ್ಪನ್ನಗಳಾದ ಹಾಲು- ಮೊಸರು ಇತ್ಯಾದಿಗಳು, ಮೊಟ್ಟೆ, ಪಾಲಾಕ್ನಂತಹ ಆಹಾರ ಪದಾರ್ಥಗಳನ್ನು ಸೇವಿಸದಿದ್ದರೆ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುವ ಸಾಧ್ಯತೆ ಇದೆ.
ಆಲ್ಕೋಹಾಲ್ ಸೇವನೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ
ಮದ್ಯಪಾನ ಸೇವನೆಯು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಮಾನಸಿಕ ಸಮಸ್ಯೆಯ ಜತೆಗೆ ದೈಹಿಕ ಸಮಸ್ಯೆಗೂ ಕಾರಣವಾಗುತ್ತದೆ. ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೆ ಕಾರಣವಾಗುತ್ತದೆ. ಜತೆಗೆ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಿರುವಾಗ ಮದ್ಯಪಾನ ಸೇವನೆಯಿಂದ ದೂರವಿರುವುದು ಅವಶ್ಯಕವಾಗಿದೆ.
ಮಾನಸಿಕ ಒತ್ತಡ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ. ಕೆಲಸದಲ್ಲಿ ಒತ್ತಡ, ಕೌಟುಂಬಿಕ ಕಲಹ, ಆರ್ಥಿಕ ತೊಂದರೆಗಳು, ಭಾವನಾತ್ಮಕ ಒತ್ತಡ ಇವುಗಳು ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ. ಇದು ತಲೆನೋವು, ರಕ್ತದೊತ್ತಡದಂತಹ ಸಮಸ್ಯೆಗೆ ಕಾರಣವಾಗಬಹುದು. ಹಾಗಿರುವಾಗ ಒತ್ತಡವನ್ನು ನಿಯಂತ್ರಿಸಲು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳುವ ಅವಶ್ಯಕತೆ ಇದೆ.
ಇದನ್ನೂ ಓದಿ:
Obesity: ಕೊರೊನಾ ಸಮಯದಲ್ಲಿ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಕಾಡುತ್ತಿದೆಯೇ? ಪರಿಹಾರ ಕ್ರಮಗಳು ಹೀಗಿವೆ
Curry Leaves: ಕರಿಬೇವಿನ ಚಹಾ ಮಾಡಿ ಸವಿಯಿರಿ; ಇದರಲ್ಲಿರುವ ಔಷಧೀಯ ಗುಣ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ