Karnataka: ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣಗಳಲ್ಲಿ ಗಣನೀಯ ಇಳಿಕೆ

ರಾಜ್ಯದಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ನೆರೆ ರಾಜ್ಯ ಮಹಾರಾಷ್ಟ್ರದ ಬಳಿಕ ಚಿಕುನ್​ ಗುನ್ಯಾದ 2ನೇ ಹಾಟ್​ಸ್ಪಾಟ್​ ಆಗಿ ಗುರುತಿಸಿಕೊಂಡಿದ್ದ ಕರ್ನಾಟಕದಲ್ಲಿ ಈ ಬಾರಿ ಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಆರೋಗ್ಯ ಇಲಾಖೆ ಕೈಗೊಂಡಿದ್ದ ಮುಂಜಾಗೃತಾ ಕ್ರಮಗಳು ಫಲ ಕೊಟ್ಟಿದ್ದು, ಈ ವರ್ಷ ಇಲ್ಲಿಯವರೆಗೂ ಯಾವುದೇ ಸಾವು ನೋವುಗಳೂ ದಾಖಲಾಗಿಲ್ಲ.

Karnataka: ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣಗಳಲ್ಲಿ ಗಣನೀಯ ಇಳಿಕೆ
ಡೆಂಗ್ಯೂ ಮತ್ತು ಚಿಕುನ್​ಗುನ್ಯಾ ಪ್ರಕರಣಗಳು

Updated on: Oct 05, 2025 | 2:43 PM

ಬೆಂಗಳೂರು, ಅಕ್ಟೋಬರ್​ 05: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಕಳೆದ ವರ್ಷ ಸೆಪ್ಟೆಂಬರ್​ ಅಂತ್ಯಕ್ಕೆ ಕರ್ನಾಟಕದಲ್ಲಿ 25,500 ಡೆಂಗ್ಯೂ ಕೇಸ್​ಗಳು ವರದಿಯಾಗಿದ್ದವು. ಆದರೆ ಈ ವರ್ಷ ಅದರ ಸಂಖ್ಯೆ 4,281ರ ಆಸುಪಾಸಿನಲ್ಲಿದೆ. ಹಾಗೆಯೇ ಕಳೆದ ವರ್ಷ 7,950 ಚಿಕುನ್​ ಗುನ್ಯಾ ಕೇಸ್​ಗಳು ಪತ್ತೆಯಾಗಿದ್ರೆ ಈ ಬಾರಿ ಅದರ ಸಂಖ್ಯೆ ಕೇವಲ 861. ಆ ಮೂಲಕ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರ ಒಗ್ಗಟ್ಟಿನ ಪ್ರಯತ್ನ ಫಲ ಕೊಟ್ಟಿದೆ.

ಡೆಂಗ್ಯೂ ಮತ್ತು ಚಿಕುನ್​ ಗುನ್ಯಾ  ಹೆಣ್ಣು ಏಡಿಸ್ ಸೊಳ್ಳೆಗಳ ಕಚ್ಚುವಿಕೆಯೆ ಬರುವಂತಹ ಖಾಯಿಲೆಗಳಾಗಿದ್ದು, ಕಳೆದ ವರ್ಷ ಇವು ರಾಜ್ಯದಲ್ಲಿ ತಾಂಡವವಾಡಿದ್ದವು. ಅದರಲ್ಲಿಯೂ 2024ರಲ್ಲಿ ಒಟ್ಟಾರೆಯಾಗಿ 32,800 ಡೆಂಗ್ಯೂ ಕೇಸ್​ಗಳು ವರದಿಯಾಗಿ, 27 ಜನ ಇದರಿಂದ ಪ್ರಾಣ ಕಳೆದುಕೊಂಡಿದ್ದರು. ಆದರೆ ಈ ವರ್ಷ ಇಲ್ಲಿಯವರೆಗೂ ಯಾವುದೇ ಸಾವು ನೋವುಗಳು ದಾಖಲಾಗಿಲ್ಲ. ನೆರೆ ರಾಜ್ಯ ಮಹಾರಾಷ್ಟ್ರದ ಬಳಿಕ ಕರ್ನಾಟಕವೇ ಚಿಕುನ್​ ಗುನ್ಯಾದ 2ನೇ ಹಾಟ್​ಸ್ಪಾಟ್​ ಆಗಿ ಗುರುತಿಸಿಕೊಂಡಿತ್ತು.

ಇದನ್ನೂ ಓದಿ: ರಂಬುಟಾನ್ ಹಣ್ಣು ಎಲ್ಲಿ ಸಿಕ್ಕರೂ ತಿನ್ನದೇ ಇರಬೇಡಿ!

2021ರಿಂದ 2025ರ ವರೆಗಿನ ಕೇಸ್​ಗಳ ಮಾಹಿತಿ

ವರ್ಷ                         ಡೆಂಗ್ಯೂ ಪ್ರಕರಣ                 ಚಿಕುನ್​ ಗುನ್ಯಾ ಪ್ರಕರಣ

2025 (ಸೆ. ವರೆಗೆ)               4,281                                              861

2024                            32, 886                                          2,954

2023                            19,300                                            1,910

2022                             9,899                                            2,312

2021                             7,397                                             2,188

ಮಾಹಿತಿ: National Centre for Vector Borne Diseases Control

ಸಾಮಾನ್ಯವಾಗಿ ಮಳೆಗಾಲದ ಆರಂಭಕ್ಕೂ ಮುನ್ನ ಮತ್ತು ಮಳೆಗಾಲದ ತಿಂಗಳಾದ ಮೇ ನಿಂದ ಅಕ್ಟೋಬರ್​ ವರೆಗೆ ಈ ಕೇಸ್​ಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತದೆ. ಆದರೆ ಈ ಬಾರಿ ಒಟ್ಟಾರೆ ಪ್ರಕರಣಗಳ ಸಂಖ್ಯೆ ಭಾರೀ ಕಡಿಮೆಯಿದ್ದು, ಏಪ್ರಿಲ್​ ವೇಳೆಗೆ ಕೇಸ್​ಗಳು ತುಸು ಏರಿಕೆ ಕಂಡಾಗಲೇ ಆರೋಗ್ಯ ಇಲಾಖೆ ಕೈಗೊಂಡಿದ್ದ ಮುನ್ನೆಚ್ಚರಿಕಾ ಕ್ರಮಗಳು ಪರಿಸ್ಥಿತಿ ನಿಯಂತ್ರಣಕ್ಕೆ ಸಹಾಯ ಮಾಡಿವೆ. ಫೀಲ್ಡ್​ ಗೆ ಇಳಿದಿದ್ದ ಅಧಿಕಾರಿಗಳು ಡೆಂಗ್ಯೂ ಮತ್ತು ಚಿಕುನ್​ ಗುನ್ಯಾ ಪ್ರಕರಣ ಹೆಚ್ಚಿರು ಸ್ಥಳಗಳನ್ನ ಗುರುತಿಸಿದ್ದು, ಆ ಪ್ರದೇಶದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಂಡಿದ್ದರು. ಹೀಗಾಗಿ ಮತ್ತಷ್ಟು ಜನ ಇವುಗಳಿಂದ ಬಳಲುವುದು ತಪ್ಪಿದೆ. ಆರೋಗ್ಯ ಕೇಂದ್ರಗಳಲ್ಲಿಯೂ ಡೆಂಗ್ಯೂ ಮತ್ತು ಚಿಕುನ್​ ಗುನ್ಯಾ ಪ್ರಕರಣಗಳ ತುರ್ತು ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನ ಮಾಡಿಕೊಳ್ಳಲಾಗಿತ್ತು. ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಸಾಮೂಹಿಕ ಜಾಗೃತಿ ಮೂಡಿಸುವ ಕೆಲಸವನ್ನೂ ಆರೋಗ್ಯ ಇಲಾಖೆ ಮಾಡಿತ್ತು. ಸೊಳ್ಳೆಗಳ ನಿಯಂತ್ರಣಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕರ್ತರನ್ನ ಬಳಸಿಕೊಳ್ಳಲಾಗಿದ್ದು, ಮನೆ ಸಮೀಪ ನೀರು ನಿಲ್ಲದಂತೆ ನೋಡಿಕೊಳ್ಳಲು ಜನರಿಗೆ ಸೂಚನೆಯನ್ನೂ ನೀಡಲಾಗಿತ್ತು ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಾ ಗುಪ್ತಾ ತಿಳಿಸಿರೋದಾಗಿ ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:28 am, Sun, 5 October 25