ಸಾಕಷ್ಟು ನೀರು ಕುಡಿದರೂ ಹೊಟ್ಟೆ ಸರಿಯಾಗಿ ಕ್ಲೀನ್ ಆಗುತ್ತಿಲ್ಲವೇ? ಒತ್ತಡವೂ ಕಾರಣವಾಗಿರಬಹುದು
ನಾರಿನಂಶ ಹೆಚ್ಚಿರುವ ಆಹಾರ ಸೇವಿಸುತ್ತಿದ್ದರೂ, ಸಾಕಷ್ಟು ನೀರು ಕುಡಿಯುತ್ತಿದ್ದರೂ ಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ? ಹಾಗಾದರೆ ನಿಮ್ಮ ಮಾನಸಿಕ ಒತ್ತಡವೂ ಇದಕ್ಕೆ ಕಾರಣವಾಗಿರಬಹುದು. ದೀರ್ಘಕಾಲದ ಒತ್ತಡವು ನರಮಂಡಲ ಮತ್ತು ಕರುಳಿನ ಸಹಜ ಚಲನೆಯ ಮೇಲೆ ಪರಿಣಾಮ ಬೀರಬಹುದು. ಒತ್ತಡ ಕಡಿಮೆ ಮಾಡಿಕೊಳ್ಳಲು ಯೋಗ, ವ್ಯಾಯಾಮ, ಉತ್ತಮ ನಿದ್ರೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಅಗತ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.

ಮಲಬದ್ಧತೆ (Constipation) ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಹೊಟ್ಟೆ ಸರಿಯಾಗಿ ಖಾಲಿಯಾಗದಿರುವುದು, ಹೊಟ್ಟೆ ಉಬ್ಬರ, ಭಾರವಾದ ಅನುಭವ, ಸೆಳೆತ ಮತ್ತು ವಾಕರಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಈ ಸಮಸ್ಯೆಯಿಂದ ಪರಿಹಾರ ಪಡೆಯಲು ನಾರಿನಂಶ ಹೆಚ್ಚಿರುವ ಆಹಾರ ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ. ಆದರೆ ಕೆಲವರು ಇಷ್ಟೆಲ್ಲಾ ಮುನ್ನೆಚ್ಚರಿಕೆ ವಹಿಸಿದರೂ ಮಲಬದ್ಧತೆಯಿಂದ ಮುಕ್ತಿ ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕೆ ದೀರ್ಘಕಾಲದ ಮಾನಸಿಕ ಒತ್ತಡವೂ ಒಂದು ಕಾರಣವಾಗಿರಬಹುದು ಎನ್ನುತ್ತಾರೆ ತಜ್ಞರು.
ಒತ್ತಡ ಮತ್ತು ಮಲಬದ್ಧತೆಗೆ ಏನು ಸಂಬಂಧ?
ಐಎಸ್‌ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟೋಬಿಲಿಯರಿ ಸೈನ್ಸಸ್ ವಿಭಾಗದ ನಿರ್ದೇಶಕ ಹಾಗೂ ಮುಖ್ಯಸ್ಥರಾದ ಡಾ. ಶುಭಂ ವಾತ್ಸ್ಯ ಅವರ ಪ್ರಕಾರ, ದೀರ್ಘಕಾಲದ ಒತ್ತಡವು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ಆಹಾರದಲ್ಲಿ ನಾರಿನಂಶ ಹೆಚ್ಚಿಸಿಕೊಂಡು, ನೀರು ಕುಡಿಯುವುದರ ಜೊತೆಗೆ ಅಗತ್ಯ ಔಷಧಿಗಳನ್ನು ತೆಗೆದುಕೊಂಡರೂ ಕೆಲವರಿಗೆ ಮಲಬದ್ಧತೆ ಮುಂದುವರಿಯಬಹುದು. ಇಂತಹ ಸಂದರ್ಭಗಳಲ್ಲಿ ಮಾನಸಿಕ ಆರೋಗ್ಯದ ಕಡೆಗೂ ಗಮನ ನೀಡುವುದು ಅಗತ್ಯ.
ಇದನ್ನೂ ಓದಿ: ಪ್ರತಿದಿನ ಸೋಂಪು ನೀರು ಕುಡಿದರೆ ಏನಾಗುತ್ತದೆ? ಜೀರ್ಣಕ್ರಿಯೆಯಿಂದ ಚರ್ಮದ ಆರೋಗ್ಯದವರೆಗೆ ಪ್ರಯೋಜನಗಳು
ದೀರ್ಘಕಾಲದ ಒತ್ತಡದಿಂದ ಕರುಳಿನ ಚಲನೆ ನಿಧಾನ!
ನಿರಂತರ ಒತ್ತಡದಲ್ಲಿರುವಾಗ ದೇಹದ ನರಮಂಡಲವು ಹೋರಾಟದ ಸ್ಥಿತಿಯಲ್ಲಿ ಇರಬಹುದು. ಇದರಿಂದ ಕರುಳಿನ ಸಹಜ ಚಲನೆಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಪರಿಣಾಮವಾಗಿ ಮಲವಿಸರ್ಜನೆಯ ಕ್ರಮದಲ್ಲಿ ಬದಲಾವಣೆ ಉಂಟಾಗಿ ಮಲಬದ್ಧತೆ ಹೆಚ್ಚಾಗಬಹುದು. ಇದಲ್ಲದೆ, ಒತ್ತಡದಲ್ಲಿರುವಾಗ ಕೆಲವರು ಸಮಯಕ್ಕೆ ಸರಿಯಾಗಿ ಊಟ ಮಾಡುವುದಿಲ್ಲ. ದೈಹಿಕ ಚಟುವಟಿಕೆ ಕಡಿಮೆ ಮಾಡುತ್ತಾರೆ. ಮಲವಿಸರ್ಜನೆಯ ಬಯಕೆಯನ್ನು ಮುಂದೂಡುತ್ತಾರೆ. ಕೆಲವರಿಗೆ ಶೌಚಾಲಯದಲ್ಲಿ ಕುಳಿತಾಗ ಸೊಂಟದ ಕೆಳಭಾಗದ ಸ್ನಾಯುಗಳನ್ನು ಸರಿಯಾಗಿ ಸಡಿಲಗೊಳಿಸಲು ಸಾಧ್ಯವಾಗುವುದಿಲ್ಲ. ಇವೆಲ್ಲವೂ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು.
ಒತ್ತಡ ಕಡಿಮೆ ಮಾಡಲು ಅನುಸರಿಸಬೇಕಾದ ಕ್ರಮಗಳು
- ಪ್ರತಿದಿನ ನಡಿಗೆ, ಸೈಕ್ಲಿಂಗ್, ಈಜು ಅಥವಾ ಲಘು ವ್ಯಾಯಾಮ ಮಾಡಿ.
- ಬಾಲಾಸನ, ಭ್ರಮರಿ ಮತ್ತು ಅನುಲೋಮ ವಿಲೋಮದಂತಹ ಯೋಗ ಹಾಗೂ ಉಸಿರಾಟದ ಅಭ್ಯಾಸಗಳನ್ನು ಮಾಡಿ.
- ಪ್ರತಿದಿನ 7ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ರೆ ಪಡೆಯಿರಿ.
- ಕೆಫೀನ್ ಮತ್ತು ಮದ್ಯಪಾನದಂತಹ ಅಭ್ಯಾಸಗಳನ್ನು ಮಿತಿಗೊಳಿಸಿ.
- ಪ್ರಕೃತಿಯ ನಡುವೆ ಸಮಯ ಕಳೆಯಿರಿ ಮತ್ತು ಇಷ್ಟವಾದ ಸಂಗೀತ ಆಲಿಸಿ.
- ಮನಸ್ಸಿನಲ್ಲಿರುವ ಭಾವನೆಗಳನ್ನು ನಂಬಿಕಸ್ಥ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಗಮನಿಸಿ: ಮಲಬದ್ಧತೆ ದೀರ್ಘಕಾಲ ಮುಂದುವರಿದರೆ, ಹೊಟ್ಟೆನೋವು ತೀವ್ರವಾಗಿದ್ದರೆ ಅಥವಾ ಮಲದಲ್ಲಿ ರಕ್ತ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು. ಆಹಾರ, ನೀರು ಮತ್ತು ವ್ಯಾಯಾಮದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡುವುದು ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
