ನಿಮ್ಮ ಹತ್ತಿರದ ಕೇಂದ್ರದಲ್ಲಿ ಕೊವ್ಯಾಕ್ಸಿನ್​ ಅಥವಾ ಕೊವಿಶೀಲ್ಡ್​ ಇವೆರಡರಲ್ಲಿ ಯಾವುದು ಲಭ್ಯವಿದೆ ಎಂದು ತಿಳಿಯಲು ಹೀಗೆ ಮಾಡಿ

|

Updated on: May 08, 2021 | 3:08 PM

Covishield and Covaxin: ಕೊವಿನ್​ ಪೋರ್ಟಲ್ ಮೂಲಕ ನಿಮ್ಮ ಹತ್ತಿರದ ಕೇಂದ್ರಗಳಲ್ಲಿ ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ ಲಸಿಕೆಗಳ ಲಭ್ಯತೆ ಯಾವ ಪ್ರಮಾಣದಲ್ಲಿದೆ ಎನ್ನುವುದನ್ನೂ ತಿಳಿದುಕೊಳ್ಳಬಹುದಾಗಿದೆ.

ನಿಮ್ಮ ಹತ್ತಿರದ ಕೇಂದ್ರದಲ್ಲಿ ಕೊವ್ಯಾಕ್ಸಿನ್​ ಅಥವಾ ಕೊವಿಶೀಲ್ಡ್​ ಇವೆರಡರಲ್ಲಿ ಯಾವುದು ಲಭ್ಯವಿದೆ ಎಂದು ತಿಳಿಯಲು ಹೀಗೆ ಮಾಡಿ
ಕೊವಿಶೀಲ್ಡ್​​, ಕೊವ್ಯಾಕ್ಸಿನ್​
Follow us on

ದೆಹಲಿ: ಭಾರತದಲ್ಲಿ 2021ರ ಜನವರಿ 16ರಿಂದ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿದೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಮೇ 7ರ ತನಕ ದೇಶದಲ್ಲಿ ಒಟ್ಟಾರೆಯಾಗಿ 16,73,46,544 ಡೋಸ್ ಕೊರೊನಾ ಲಸಿಕೆಯನ್ನು ನೀಡಲಾಗಿದೆ. ಆರಂಭದಲ್ಲಿ ಕೊರೊನಾ ವಾರಿಯರ್ಸ್​, ವೈದ್ಯರು, ಹಿರಿಯ ನಾಗರೀಕರು ಹಾಗೂ ಬಹು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಗುರಿಯಾಗಿಸಿಕೊಂಡು ಲಸಿಕೆ ನೀಡಲಾಗಿತ್ತು. ನಂತರದ ಹಂತದಲ್ಲಿ ಅದನ್ನು ವಿಸ್ತರಿಸುತ್ತಾ ಬಂದು ಇದೀಗ ಮೇ 1 ರಿಂದ 18ರಿಂದ 44 ವರ್ಷ ವಯೋಮಾನದವರಿಗೂ ಲಸಿಕೆ ನೀಡುವ ಕಾರ್ಯ ಆರಂಭಿಸಲಾಗಿದೆ. ಇಷ್ಟಾದರೂ ದೇಶದ ಹಲವೆಡೆ ಕೊರೊನಾ ಲಸಿಕೆ ಅಭಾವ, ಜನರಲ್ಲಿ ಲಸಿಕೆಯೆಡೆಗಿನ ನಿರುತ್ಸಾಹ, ಮಾಹಿತಿ ಕೊರತೆ ಇರುವುದರಿಂದ ಲಸಿಕೆ ವಿತರಣೆ ಕಾರ್ಯಕ್ಕೆ ಬಹಳಷ್ಟು ಹಿನ್ನಡೆಯೂ ಆಗಿದೆ. ಇದೀಗ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ತಜ್ಞರು ಲಸಿಕೆ ವಿತರಣೆಗೆ ಹೆಚ್ಚು ಮಹತ್ವ ನೀಡುವಂತೆ ಸಲಹೆ ವ್ಯಕ್ತಪಡಿಸಿದ್ದು ಆರೋಗ್ಯ ಇಲಾಖೆಯೂ ಲಸಿಕೆ ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ. ಈಗ ಕೊವಿನ್​ ಪೋರ್ಟಲ್ ಮೂಲಕ ನಿಮ್ಮ ಹತ್ತಿರದ ಕೇಂದ್ರಗಳಲ್ಲಿ ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ ಲಸಿಕೆಗಳ ಲಭ್ಯತೆ ಯಾವ ಪ್ರಮಾಣದಲ್ಲಿದೆ ಎನ್ನುವುದನ್ನೂ ತಿಳಿದುಕೊಳ್ಳಬಹುದಾಗಿದೆ.

ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ ಲಸಿಕೆಗಳು ವೈದ್ಯಕೀಯ ಪರಿಭಾಷೆಯಲ್ಲಿ ವಿಭಿನ್ನ ತಾಂತ್ರಿಕತೆಯೊಂದಿಗೆ ತಯಾರಿಸಲಾಗಿರುವ ಲಸಿಕೆಗಳಾದರೂ ಇವೆರಡೂ ಸಮಾನವಾಗಿ ಪರಿಣಾಮ ಬೀರುತ್ತವೆ. ಆದರೆ, ವ್ಯಕ್ತಿಯೊಬ್ಬರು ಮೊದಲ ಡೋಸ್​ನಲ್ಲಿ ಯಾವ ಲಸಿಕೆ ತೆಗೆದುಕೊಂಡಿರುತ್ತಾರೋ ಅದೇ ಲಸಿಕೆಯನ್ನು ಎರಡನೇ ಡೋಸ್​ ವೇಳೆಗೂ ತೆಗೆದುಕೊಳ್ಳಬೇಕೆಂಬುದು ಮಾತ್ರ ಕಡ್ಡಾಯವಾಗಿದೆ. ಸಾಧಾರಣವಾಗಿ ಬಹುತೇಕ ಕೇಂದ್ರಗಳಿಗೆ ಈ ಎರಡರ ಪೈಕಿ ಯಾವುದಾದರೊಂದನ್ನು ಮಾತ್ರ ಕಳುಹಿಸುತ್ತಿರುವುದರಿಂದ ಜನಸಾಮಾನ್ಯರು ಗೊಂದಲಕ್ಕೀಡಾಗಬೇಕಾಗಿದ್ದೇನೂ ಇಲ್ಲ. ಗ್ರಾಮೀಣ ಭಾಗಗಳಲ್ಲಿ ಇದುವರೆಗೂ ಸಾಮಾನ್ಯವಾಗಿ ಲಸಿಕೆ ತೆಗೆದುಕೊಳ್ಳಲು ಇಚ್ಛಿಸುವವರು ತಮ್ಮ ಗುರುತಿನ ಚೀಟಿಯೊಂದಿಗೆ ನಿಗದಿತ ದಿನಗಳಲ್ಲಿ ನೇರವಾಗಿ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯುತ್ತಿದ್ದಾರೆ. ಆದರೆ, ಜನಸಂಖ್ಯೆ ಹೆಚ್ಚಿರುವ ಭಾಗಗಳಲ್ಲಿ ಅಥವಾ ನಗರ ಪ್ರದೇಶಗಳಲ್ಲಿ ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕೊವಿನ್​ ಪೋರ್ಟಲ್​ ಮೂಲಕ ನೋಂದಣಿ ಮಾಡಿಕೊಂಡು ನಂತರ ಅಲ್ಲಿ ತಿಳಿಸಲಾದ ದಿನದಂದು ಲಸಿಕೆ ಪಡೆಯಲು ಬರುವುದಕ್ಕೆ ಒತ್ತು ನೀಡಲಾಗುತ್ತಾ ಬಂದಿದೆ.

ಈ ಕೊವಿನ್​ ಪೋರ್ಟಲ್​ನಲ್ಲಿ ನೀವು ನಿಮ್ಮ ಪ್ರದೇಶದ ಪಿನ್​ಕೋಡ್​ ಲಗತ್ತಿಸಿದರೆ ಸಮೀಪದ ಕೇಂದ್ರಗಳಲ್ಲಿ ಯಾವ ಲಸಿಕೆ ಎಷ್ಟು ಡೋಸ್ ಲಭ್ಯವಿದೆ ಹಾಗೂ ಯಾವ ದಿನಾಂಕದಂದು ಯಾವ ವಯೋಮಾನದವರಿಗೆ ನೀಡಲಾಗುತ್ತದೆ ಎಂಬೆಲ್ಲಾ ವಿವರಗಳು ಕ್ಷಣಾರ್ಧದಲ್ಲಿ ಲಭ್ಯವಾಗುತ್ತದೆ. ಪಿನ್​ಕೋಡ್ ಬದಲಿಗೆ ರಾಜ್ಯ ಹಾಗೂ ಜಿಲ್ಲೆಯ ಹೆಸರನ್ನು ನಮೂದಿಸಿದರೆ ಇಡೀ ಜಿಲ್ಲೆಯ ಲಸಿಕಾ ಕೇಂದ್ರಗಳ ಪಟ್ಟಿ ಹಾಗೂ ಅಲ್ಲಿ ನೀಡಲಾಗುತ್ತಿರುವ ಲಸಿಕೆ ಬಗ್ಗೆ ಮಾಹಿತಿ ದೊರೆಯುತ್ತದೆ. ಇದನ್ನಾಧರಿಸಿ ನೀವು ನಿಮ್ಮ ಹತ್ತಿರದ ಕೇಂದ್ರದಲ್ಲಿ ಕೊವ್ಯಾಕ್ಸಿನ್​ ಅಥವಾ ಕೊವಿಶೀಲ್ಡ್​ ಇವೆರಡರಲ್ಲಿ ಯಾವ ಲಸಿಕೆ ಲಭ್ಯವಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

ಲಸಿಕೆಯ ವಿವರದ ಜತೆಗೆ ಕೊವಿನ್​ ಪೋರ್ಟಲ್​ನಲ್ಲಿ ಯಾವ ಕೇಂದ್ರಗಳಲ್ಲಿ ಉಚಿತ ಲಸಿಕೆ ಲಭ್ಯವಿದೆ ಹಾಗೂ ಯಾವ ಕೇಂದ್ರದಲ್ಲಿ ಹಣಕೊಟ್ಟು ಲಸಿಕೆ ಪಡೆಯಬೇಕು ಎಂಬ ವಿವರವೂ ಸಿಗಲಿದೆ. ಲಸಿಕೆ ಪಡೆಯಲು ನೀವು ಅರ್ಹರಾಗಿದ್ದು, ನೋಂದಣಿ ಮಾಡಿಕೊಳ್ಳಬೇಕೆಂದರೆ ನಿಮ್ಮ ಮೊಬೈಲ್ ನಂಬರ್ ಲಗತ್ರಿಸಿ ಓಟಿಪಿ ಪಡೆಯುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಆರೋಗ್ಯ ಸೇತು ಆ್ಯಪ್​ ಮೂಲಕವೂ ಲಸಿಕೆಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ.

ಕೊವಿನ್​ ಪೋರ್ಟಲ್​ ಮೂಲಕ ನಿಮ್ಮ ಹತ್ತಿರದಲ್ಲಿ ಯಾವ ಲಸಿಕೆ ಲಭ್ಯವಿದೆ ಎಂದು ತಿಳಿಯಲು ಇಲ್ಲಿ ಕ್ಲಿಕ್​ ಮಾಡಿ

ಇದನ್ನೂ ಓದಿ:
CoWIN Security Code: ಕೊವಿನ್ ಪೋರ್ಟಲ್​ಗೆ ಹೊಸ ಸೆಕ್ಯುರಿಟಿ ಸೌಲಭ್ಯ; ಬಳಸುವುದು ಹೇಗೆ? ಇಲ್ಲಿದೆ ವಿವರ