
ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲಿಯೂ ದಿನದಿಂದ ದಿನಕ್ಕೆ ಚಳಿ (winter) ಹೆಚ್ಚಾಗುತ್ತಿದೆ. ಈ ರೀತಿ ತಾಪಮಾನ ಕಡಿಮೆಯಾದಾಗ, ಸ್ವಾಭಾವಿಕವಾಗಿ ಚಳಿಯಿಂದ ರಕ್ಷಣೆ ಪಡೆಯಲು ಮುಖದ ವರೆಗೆ ಬೆಡ್ ಶಿಟ್ ಅಥವಾ ಕಂಬಳಿ ಹೊದ್ದು ಮಲಗುತ್ತೇವೆ. ಇದು ಉಷ್ಣತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ಬಹಳ ಆರಾಮದಾಯಕವೆನಿಸುತ್ತದೆ, ಆದರೆ ಇತ್ತೀಚಿನ ಸಂಶೋಧನೆ ಹೇಳುವ ಪ್ರಕಾರ, ಈ ರೀತಿಯ ಅಭ್ಯಾಸ ಉಸಿರಾಟದ ವ್ಯವಸ್ಥೆಯ ಮೇಲೆ ಗಮನಾರ್ಹ ಒತ್ತಡವನ್ನು ಬೀರುತ್ತದೆ ಎಂದು ತಿಳಿಸಿದೆ. ಹೌದು, ರಾತ್ರಿ ಮಲಗುವಾಗ ಮುಖ ಮುಚ್ಚಿಕೊಳ್ಳುವುದರಿಂದ (Face Covering at Night) ಉಸಿರಾಟ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಉಂಟಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹಾಗಾದರೆ ಇದು ಆರೋಗ್ಯದ ಮೇಲೆ ಯಾವ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ನಿದ್ರೆ ಮಾಡುವ ಸಮಯದಲ್ಲಿ ಮುಖವನ್ನು ಕಂಬಳಿ ಅಥವಾ ಬೆಡ್ ಶಿಟ್ ನಿಂದ ಮುಚ್ಚಿಕೊಂಡು ಮಲಗುವುದರಿಂದ, ನಾವು ಹೊರಹಾಕುವ ಗಾಳಿ (ಕಾರ್ಬನ್ ಡೈಆಕ್ಸೈಡ್) ಹೊರಹೋಗಲು ಜಾಗವಿಲ್ಲದೆ ಅಲ್ಲಿಯೇ ಸಿಲುಕುತ್ತದೆ. ಪರಿಣಾಮವಾಗಿ, ನಾವು ಅರಿವಿಲ್ಲದೆಯೇ ಪದೇ ಪದೇ ಇಂಗಾಲದ ಡೈಆಕ್ಸೈಡ್ ಅನ್ನು ಉಸಿರಾಡುತ್ತೇವೆ. ಇದು ದೇಹವು ಪಡೆಯುವ ತಾಜಾ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಬೆಳಿಗ್ಗೆ ಎಚ್ಚರಗೊಳ್ಳುವಾಗ ತಲೆನೋವು ಕಂಡುಬರುವುದು, ದಿನವಿಡೀ ದಣಿದ ಅನುಭವ, ಏಕಾಗ್ರತೆಯ ಕೊರತೆ, ನಿದ್ರೆ ಮಾಡುವಾಗ ಆಗಾಗ ಎಚ್ಚರಗೊಳ್ಳುವಂತಹ ಸಮಸ್ಯೆಗಳು ಉದ್ಭವಿಸಬಹುದು. ಅಷ್ಟು ಮಾತ್ರವಲ್ಲ, ಮುಖ ಮುಚ್ಚಿಕೊಳ್ಳುವುದರಿಂದ ಆ ಪ್ರದೇಶದಲ್ಲಿ ತೇವಾಂಶ ಮತ್ತು ಬೆವರು ಸಂಗ್ರಹವಾಗುತ್ತದೆ. ಕಂಬಳಿಯ ಮೇಲಿನ ಧೂಳು ಮತ್ತು ಬ್ಯಾಕ್ಟೀರಿಯಾಗಳು ಕೂಡ ಚರ್ಮದ ಸಂಪರ್ಕಕ್ಕೆ ಬರಬಹುದು, ಇದು ಮೊಡವೆ ಮತ್ತು ಉರಿಯೂತದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ನಿದ್ರೆಯ ಸಮಯದಲ್ಲಿ ದೇಹದ ಉಷ್ಣತೆಯ ಹೆಚ್ಚಳವು ನಿದ್ರೆಗೆ ಅಡ್ಡಿಪಡಿಸುತ್ತದೆ.
ಈ ಅಭ್ಯಾಸವು ಅಸ್ತಮಾ, ಸೈನಸ್ ಮತ್ತು ಅಲರ್ಜಿ ಸಮಸ್ಯೆಗಳಿರುವವರಿಗೆ ತುಂಬಾ ಅಪಾಯಕಾರಿ. ಅದರಲ್ಲಿಯೂ ಶಿಶುಗಳಲ್ಲಿ ಈ ಅಪಾಯ ಹೆಚ್ಚಾಗಿರುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಇತರರಿಗಿಂತ ತುಸು ಹೆಚ್ಚೆ ನಿಮ್ಗೆ ಚಳಿಯಾಗುತ್ತಾ? ಇದಕ್ಕೆ ಈ ವಿಟಮಿನ್ ಕೊರತೆಯೇ ಕಾರಣ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ