
ಪ್ರಧಾನಿ ನರೇಂದ್ರ ಮೋದಿ (PM Narendra Modi) ಮನ್ ಕಿ ಬಾತ್ನ 129 ನೇ ಸಂಚಿಕೆಯಲ್ಲಿ ಆ್ಯಂಟಿಬಯಾಟಿಕ್ಸ್ ಔಷಧಗಳ ದುರುಪಯೋಗದ ಬಗ್ಗೆ ಮಾತನಾಡಿದ್ದು ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯಾಟಿಕ್ಸ್ ಗಳನ್ನು ಬಳಸದಂತೆ ಜನರ ಬಳಿ ಮನವಿ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ (Dr. Devi Prasad Shetty) ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ತಿಳಿಸಿದ್ದು, ತಮ್ಮ ವೃತ್ತಿ ಜೀವನದಲ್ಲಿ ನೋಡಿದಂತಹ ಬದಲಾವಣೆಗಳನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ರೋಗಿಯ ದೇಹದಲ್ಲಿ ಆ್ಯಂಟಿಬಯಾಟಿಕ್ಸ್ ಸರಿಯಾಗಿ ಕೆಲಸ ಮಾಡದಿರಲು ಕಾರಣವೇನು, ಹೀಗೆ ಮುಂದುವರಿದರೆ ಏನಾಗುತ್ತದೆ ಎಂಬುದರ ಬಗ್ಗೆ ಹೆಚ್ಚಿನ ವಿವರಣೆ ನೀಡಿದ್ದಾರೆ.
ದೇವಿ ಪ್ರಸಾದ್ ಶೆಟ್ಟಿ ಹೇಳಿರುವ ಪ್ರಕಾರ, ಅವರ ವೃತ್ತಿಯ ಮೊದಲು 15 ವರ್ಷ ತುಂಬಾ ಚೆನ್ನಾಗಿದ್ದು ಎಷ್ಟೇ ದೊಡ್ಡ ಆಪರೇಷನ್ ಮಾಡಿದರೂ ಸಹ ಎರಡು ದಿನಗಳ ಆ್ಯಂಟಿಬಯಾಟಿಕ್ಸ್ ನೀಡುತ್ತಿದ್ದು ಬಳಿಕ ಅದನ್ನು ನಿಲ್ಲಿಸಲಾಗುತ್ತಿತ್ತು. ಆದರೆ ಈ ಹತ್ತು ವರ್ಷಗಳಲ್ಲಿ ಈ ರೀತಿಯ ಅಭ್ಯಾಸ ಪೂರ್ತಿಯಾಗಿ ಬದಲಾಗಿದೆ. ಈಗ ಸರ್ಜರಿ ಆದ ಮೇಲೆ ರೋಗಿಗೆ ಇನ್ಫೆಕ್ಷನ್ ಆಗುವ ಭಯ ದುಪ್ಪಟ್ಟಾಗಿದೆ. ಸೋಂಕು ತಗಲುವುದು ಸಾಮಾನ್ಯ. ಆದರೆ ವೈದ್ಯರು ನೀಡುವಂತಹ ಆ್ಯಂಟಿಬಯಾಟಿಕ್ಸ್ ದೇಹದಲ್ಲಿ ಅಂದುಕೊಂಡ ರೀತಿ ಕಾರ್ಯನಿವಹಿಸುವುದಿಲ್ಲ ಎನ್ನುವುದು ಆತಂಕಕ್ಕೆ ಕಾರಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಈ ಅಭ್ಯಾಸಗಳಿರುವವರು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಹೆಚ್ಚು; ಈ ಬಗ್ಗೆ ಜಾಗೃತೆ ವಹಿಸಬೇಕು ಎನ್ನುತ್ತಾರೆ ಡಾ. ಸಂತೋಷ್
ದೇವಿ ಪ್ರಸಾದ್ ಶೆಟ್ಟಿ ಹಂಚಿಕೊಂಡ ಮಾಹಿತಿಯ ಅನುಸಾರ, ಸರ್ಜರಿ ಆದ ನಂತರ ನೀಡುವ ಆ್ಯಂಟಿಬಯಾಟಿಕ್ಸ್ ಪೂರ್ತಿಯಾಗಿ ಇನ್ಫೆಕ್ಷನ್ ಕಡಿಮೆ ಮಾಡಲು ವಿಫಲವಾಗುತ್ತಿದೆ. ಇದಕ್ಕೆ ಆ್ಯಂಟಿಬಯಾಟಿಕ್ಸ್ ಗಳ ಅತಿಯಾದ ಬಳಕೆಯೇ ಕಾರಣವಾಗಿದೆ. ಸಣ್ಣ ಜ್ವರ, ಮೈಕೈ ನೋವು, ಕಫ ಹೀಗೆ ಏನಾದರೂ ಸಣ್ಣ ಬದಲಾವಣೆ ದೇಹದಲ್ಲಿ ಆದ ತಕ್ಷಣ ಆ್ಯಂಟಿಬಯಾಟಿಕ್ಸ್ ಸೇವನೆ ಮಾಡಲಾಗುತ್ತದೆ. ಈ ರೀತಿಯ ಅಭ್ಯಾಸದಿಂದ ಅಂದರೆ, ಆ್ಯಂಟಿಬಯಾಟಿಕ್ಸ್ ಅತಿಯಾದ ಸೇವನೆ ಮಾಡಿರುವುದರಿಂದ ದೇಹದಲ್ಲಿರುವ ಬ್ಯಾಕ್ಟೀರಿಯಾ ಮಾತ್ರೆಗಳಿಗೆ ಸರಿಯಾಗಿ ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿಬಿಟ್ಟಿದೆ. ಅಷ್ಟೇ ಅಲ್ಲ, ಹೊಸ ಫಾರ್ಮುಲಾ ಇರುವಂತಹ ಆ್ಯಂಟಿಬಯಾಟಿಕ್ಸ್ ಮಾರುಕಟ್ಟೆಗೆ ಬರದೇ ವರ್ಷಗಳೇ ಕಳೆದಿದೆ. ಹಾಗಾಗಿ ಯಾವುದೇ ವೈದ್ಯಕೀಯ ಸಲಹೆಯಿಲ್ಲದೆಯೇ ಆ್ಯಂಟಿಬಯಾಟಿಕ್ ಮಾತ್ರೆಗಳನ್ನು ಸೇವನೆ ಮಾಡುವುದನ್ನು ತಪ್ಪಿಸಬೇಕು. ಜೊತೆಗೆ ವೈದ್ಯರ ಬಳಿ ನನಗೆ ಆ್ಯಂಟಿಬಯಾಟಿಕ್ ಕೊಡಿ ಎಂದು ಕೇಳಬಾರದು. ಅಗತ್ಯವಿದ್ದರೆ ವೈದ್ಯರೇ ನಿಮಗೆ ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ. ಆದರೆ ವೈದ್ಯರು ಹೇಳದೆಯೇ ಮಾತ್ರೆಗಳ ಸೇವನೆ ಮಾಡಿದಲ್ಲಿ ನಾವು ಹಿಂದಿನ ಪದ್ದತಿಗೆ ಮರಳಬೇಕಾಗುತ್ತದೆ. ಅಂದರೆ ಆಪರೇಷನ್ ಆದ ನಂತರ ಯಾವುದೇ ರೀತಿಯ ಔಷಧವಿಲ್ಲದೆ ವ್ಯಕ್ತಿ ಸೋಂಕಿಗೆ ಒಳಗಾಗಿ ಸಾಯುತ್ತಿದ್ದ. ಹಾಗೆಯೇ ಈಗಲೂ ಆಗಬಹುದು. ಆ್ಯಂಟಿಬಯಾಟಿಕ್ಸ್ ದೇಹಕ್ಕೆ ಪ್ರತಿಕ್ರಿಯಿಸದೆಯೇ ಇರಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ