ಈ ಆರೋಗ್ಯ ಸಮಸ್ಯೆ ಇರುವವರು ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ವಾಕಿಂಗ್ ಹೋಗಬಾರದು!
ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಆದರೆ ಆರೋಗ್ಯ ಕಾಪಾಡಿಕೊಳ್ಳಲು ವಾಕಿಂಗ್ ಮಾಡುವುದೇ ದೇಹಕ್ಕೆ ಹಾನಿಯುಂಟುಮಾಡಬಹುದು. ಹೌದು, ಇದು ಆಶ್ಚರ್ಯ ಎನಿಸಿದರೂ ಸತ್ಯ. ಆರೋಗ್ಯ ತಜ್ಞರು ಹೇಳುವ ಪ್ರಕಾರ, ಬೆಳಗಿನ ನಡಿಗೆ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾದರೆ ವಾಕಿಂಗ್ ಮಾಡುವುದರಿಂದ ನಿಜವಾಗಿಯೂ ಹೃದಯಾಘಾತವಾಗುತ್ತದೆಯೇ? ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು ಅನಿವಾರ್ಯವಾಗುತ್ತದೆ. ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಕೂಡ ಜೀವಕ್ಕೆ ಅಪಾಯ ಉಂಟುಮಾಡಬಹುದು. ಅದಲ್ಲದೆ ಚಳಿಗಾಲದಲ್ಲಿ ಬೆಳಗಿನ ನಡಿಗೆ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ಈ ಅಭ್ಯಾಸ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು ಎಂದರೆ ನಂಬುತ್ತೀರಾ.. ಹೌದು, ಮಾಲಿನ್ಯ, ಮಂಜು ಮತ್ತು ಚಳಿ ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಬೆಳಿಗ್ಗೆ ವಾಕಿಂಗ್ (Walk) ಹೋಗುವುದು ಅತ್ಯಂತ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಯಾರು ಬೆಳಿಗ್ಗೆ ಎದ್ದು ವಾಕಿಂಗ್ ಹೋಗಬಾರದು, ಈ ಅಭ್ಯಾಸ ಯಾರಿಗೆ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ದೆಹಲಿಯ ರಾಜೀವ್ ಗಾಂಧಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಅಜಿತ್ ಜೈನ್ ಮತ್ತು ಡಾ. ಬನ್ಸಾಲ್ ನೀಡಿರುವ ಮಾಹಿತಿ ಅನುಸಾರ, ದೇಹವು ತನ್ನನ್ನು ತಾನು ಬೆಚ್ಚಗಿಡಲು ಪ್ರಯತ್ನಿಸಿದಾಗ, ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ರಕ್ತವನ್ನು ಪಂಪ್ ಮಾಡಲು ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ, ಹೃದಯಾಘಾತದ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಿರುತ್ತವೆ. ಹಾಗಾಗಿ ಹೃದ್ರೋಗಿಗಳು, ಅಧಿಕ ರಕ್ತದೊತ್ತಡ ಇರುವವರು, ವೃದ್ಧರು ಬೆಳಿಗ್ಗೆ ಎದ್ದು ವಾಕಿಂಗ್ ಹೋಗುವುದನ್ನು ಆದಷ್ಟು ತಪ್ಪಿಸಬೇಕು.
ವಾಕಿಂಗ್ ಮಾಡುವುದನ್ನು ನಿಲ್ಲಿಸಬೇಕೇ?
ವೈದ್ಯರ ಸಲಹೆಯ ಪ್ರಕಾರ ಅಪಾಯದ ಗುಂಪಿನಲ್ಲಿಲ್ಲದವರು ಅಂದರೆ ಮೇಲೆ ಹೇಳಿರುವ ಸಮಸ್ಯೆ ಇಲ್ಲದವರು ವಾಕಿಂಗ್ ಮಾಡಬಹುದು, ಆದರೆ ಕೆಲವು ಮುನ್ನೆಚ್ಚರಿಕೆಗಳು ಅಗತ್ಯ.
ಸಮಯವನ್ನು ಬದಲಾಯಿಸಿ: ಬೆಳಿಗ್ಗೆ 6- 7 ಗಂಟೆಗೆ ನಡುವೆ ನಡೆಯುವ ಬದಲು, ಸೂರ್ಯ ಉದಯಿಸಿದ ನಂತರ ಅಥವಾ ಸಂಜೆ ಹೊತ್ತು ವಾಕಿಂಗ್ ಹೋಗುವುದು ಉತ್ತಮ.
ಬಟ್ಟೆಗಳು: ನಿಮ್ಮ ತಲೆ, ಕಿವಿ ಮತ್ತು ಎದೆ ಮುಚ್ಚುವ ಬೆಚ್ಚಗಿನ ಉಣ್ಣೆಯ ಬಟ್ಟೆಗಳನ್ನು ಧರಿಸಿ.
ವೇಗ ಹೆಚ್ಚಿಸಬೇಡಿ: ಹಠಾತ್ತನೆ ನಡೆಯುವುದು ಅಥವಾ ವೇಗವಾಗಿ ಜಾಗಿಂಗ್ ಮಾಡುವುದನ್ನು ತಪ್ಪಿಸಿ.
ಒಳಾಂಗಣ ನಡಿಗೆ: ನೀವಿರುವ ಪ್ರದೇಶದಲ್ಲಿ ಮಾಲಿನ್ಯ ಹೆಚ್ಚಿದ್ದರೆ, ಒಳಾಂಗಣ ನಡಿಗೆ ಮಾಡುವುದು ಬಹಳ ಉತ್ತಮ.
ಇದನ್ನೂ ಓದಿ: ದಿನಕ್ಕೆ 10,000 ಹೆಜ್ಜೆ ನಡೆಯುವವರು ಈ ವಿಷಯ ತಿಳಿದುಕೊಳ್ಳಲೇಬೇಕು!
ನಡೆಯುವಾಗ ಈ ಲಕ್ಷಣಗಳು ಕಾಣಿಸಿಕೊಂಡರೆ ಎಂದಿಗೂ ನಿರ್ಲಕ್ಷಿಸಬೇಡಿ:
- ಉಸಿರಾಟದ ತೊಂದರೆ.
- ಹಠಾತ್ತನೆ ತೀವ್ರವಾದ ಎದೆ ನೋವು.
- ಅತಿಯಾಗಿ ಬೆವರು ಬರುವುದು.
- ತಲೆತಿರುಗುವಿಕೆ ಅಥವಾ ತಲೆ ತಿರುಗುತ್ತಿರುವಂತೆ ಭಾಸವಾಗುವುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




