AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದೇ ಪದೇ ಗ್ಯಾಸ್ ಆಗುವುದಕ್ಕೆ ಈ ತಪ್ಪುಗಳೇ ಕಾರಣ! ಜೀರ್ಣಕ್ರಿಯೆ ಸಮಸ್ಯೆ ತಡೆಯಲು ಈ ಸಲಹೆಗಳನ್ನು ಅನುಸರಿಸಿ

ಹೊಟ್ಟೆಯಲ್ಲಿ ಆಗಾಗ ಗ್ಯಾಸ್ ಆಗುವುದು ಸಾಮಾನ್ಯ ಸಮಸ್ಯೆಯಾಗಿದ್ದರೂ, ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಸರಿಯಾದ ಆಹಾರ ಪದ್ಧತಿ, ನಿಧಾನವಾಗಿ ಆಹಾರ ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು ಹಾಗೂ ನಿಯಮಿತ ವ್ಯಾಯಾಮ ಮಾಡುವುದರಿಂದ ಈ ಸಮಸ್ಯೆಯನ್ನು ಬಹುತೇಕ ನಿಯಂತ್ರಿಸಬಹುದು. ಅದರ ಜೊತೆಗೆ ಹೊಟ್ಟೆಯಲ್ಲಿ ಗ್ಯಾಸ್ ಏಕೆ ಉಂಟಾಗುತ್ತದೆ, ಅದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪದೇ ಪದೇ ಗ್ಯಾಸ್ ಆಗುವುದಕ್ಕೆ ಈ ತಪ್ಪುಗಳೇ ಕಾರಣ! ಜೀರ್ಣಕ್ರಿಯೆ ಸಮಸ್ಯೆ ತಡೆಯಲು ಈ ಸಲಹೆಗಳನ್ನು ಅನುಸರಿಸಿ
Digestive HealthImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 30, 2026 | 9:36 PM

Share

ಮುಖ್ಯಾಂಶಗಳು

  • ಗ್ಯಾಸ್ ಸಮಸ್ಯೆ ಕಡಿಮೆ ಮಾಡಲು ಅನುಸರಿಸಬೇಕಾದ ಸಲಹೆಗಳು
  • ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಉಂಟಾಗುವುದಕ್ಕೆ ಕಾರಣ ಮತ್ತು ಪರಿಹಾರಗಳು ಇಲ್ಲಿವೆ
  • ಊಟ ಮಾಡುವಾಗ ಹೆಚ್ಚು ಮಾತನಾಡುವುದು ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತಾ?

ಇತ್ತೀಚಿನ ದಿನಗಳಲ್ಲಿ ಅನೇಕರು ಹೊಟ್ಟೆಯಲ್ಲಿ ಗ್ಯಾಸ್, ಹೊಟ್ಟೆ ಉಬ್ಬರ, ಆಗಾಗ ಡಕ್ಕು ಬರುವುದು ಹಾಗೂ ಹೊಟ್ಟೆ ಭಾರವಾದ ಅನುಭವದಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಇದು ಗಂಭೀರ ಕಾಯಿಲೆಯ ಲಕ್ಷಣವಾಗದೇ ಇದ್ದರೂ, ನಮ್ಮ ದಿನನಿತ್ಯದ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಕೆಲವು ಅಭ್ಯಾಸಗಳಿಂದಲೇ ಈ ಸಮಸ್ಯೆ ಹೆಚ್ಚಾಗುತ್ತದೆ. ಆದರೆ ಗ್ಯಾಸ್ ಸಮಸ್ಯೆ ಪದೇ ಪದೇ ಕಂಡುಬಂದರೆ, ತೀವ್ರ ಹೊಟ್ಟೆನೋವು ಅಥವಾ ಇತರ ಲಕ್ಷಣಗಳೊಂದಿಗೆ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಹೊಟ್ಟೆಯಲ್ಲಿ ಗ್ಯಾಸ್ ಏಕೆ ಉಂಟಾಗುತ್ತದೆ?

ಜೀರ್ಣಕ್ರಿಯೆ ನಡೆಯುವ ವೇಳೆ ಆಹಾರ ವಿಭಜನೆಯಾಗುವಾಗ ಸ್ವಾಭಾವಿಕವಾಗಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ಜೊತೆಗೆ ಆಹಾರ ಸೇವಿಸುವಾಗ ಅಥವಾ ನೀರು ಕುಡಿಯುವಾಗ ಗಾಳಿ ಹೊಟ್ಟೆಯೊಳಗೆ ಸೇರಿದರೂ ಗ್ಯಾಸ್ ಉಂಟಾಗಬಹುದು. ಕೆಲವು ಆಹಾರ ಪದಾರ್ಥಗಳ ಸೇವನೆ ವಿಧಾನವೂ ಗ್ಯಾಸ್ ಸಮಸ್ಯೆಯನ್ನು ಹೆಚ್ಚಿಸಬಹುದು.

ಈ ಅಭ್ಯಾಸಗಳು ಗ್ಯಾಸ್ ಸಮಸ್ಯೆಗೆ ಪ್ರಮುಖ ಕಾರಣ

ಆಹಾರವನ್ನು ತುಂಬಾ ವೇಗವಾಗಿ ತಿನ್ನುವುದು: ಆಹಾರವನ್ನು ಸರಿಯಾಗಿ ಜಗಿಯದೇ ಬೇಗನೆ ತಿಂದರೆ ಹೆಚ್ಚು ಗಾಳಿ ಹೊಟ್ಟೆಗೆ ಸೇರುತ್ತದೆ. ಇದರಿಂದ ಗ್ಯಾಸ್ ಹಾಗೂ ಹೊಟ್ಟೆ ಉಬ್ಬರ ಉಂಟಾಗಬಹುದು.

ಊಟ ಮಾಡುವಾಗ ಹೆಚ್ಚು ಮಾತನಾಡುವುದು: ಊಟದ ವೇಳೆ ಮಾತನಾಡುವುದರಿಂದ ಗಾಳಿ ಒಳಗೆ ಹೋಗುವ ಪ್ರಮಾಣ ಹೆಚ್ಚುತ್ತದೆ. ಇದು ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ.

ಕೋಲ್ಡ್ ಡ್ರಿಂಕ್ಸ್ ಮತ್ತು ಕಾರ್ಬೊನೇಟೆಡ್ ಪಾನೀಯಗಳು: ಸೋಡಾ, ಸಾಫ್ಟ್ ಡ್ರಿಂಕ್ಸ್ ಹಾಗೂ ಕಾರ್ಬೊನೇಟೆಡ್ ಪಾನೀಯಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಇರುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಹೆಚ್ಚಾಗಬಹುದು.

ಚ್ಯೂಯಿಂಗ್ ಗಮ್ ಅಥವಾ ಸ್ಟ್ರಾ ಬಳಕೆ: ಚ್ಯೂಯಿಂಗ್ ಗಮ್ ಜಗಿಯುವುದು ಅಥವಾ ಸ್ಟ್ರಾ ಮೂಲಕ ಪದೇ ಪದೇ ನೀರು ಅಥವಾ ಇನ್ನಿತರ ಪಾನೀಯಗಳ ಸೇವನೆಯಿಂದ ಗಾಳಿ ಹೊಟ್ಟೆಗೆ ಸೇರುತ್ತದೆ.

ಕೆಲವು ಆಹಾರಗಳಿಂದ ಗ್ಯಾಸ್ ಹೆಚ್ಚಾಗಬಹುದು: ಕೆಲವರಿಗೆ ಬೀನ್ಸ್, ಎಲೆಕೋಸು, ಬ್ರೊಕೊಲಿ, ಈರುಳ್ಳಿ, ಸೇಬು, ಪಿಯರ್ ಹಣ್ಣು, ಹಾಲು ಮತ್ತು ಹಾಲಿನ ಉತ್ಪನ್ನಗಳು (ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರಲ್ಲಿ) ಗ್ಯಾಸ್ ಸಮಸ್ಯೆ ಕಾಣಿಸಬಹುದು. ಪ್ರತಿಯೊಬ್ಬರ ದೇಹದ ಪ್ರತಿಕ್ರಿಯೆ ವಿಭಿನ್ನವಾಗಿರುವುದರಿಂದ ಯಾವ ಆಹಾರದಿಂದ ಸಮಸ್ಯೆಯಾಗುತ್ತಿದೆ ಎಂಬುದನ್ನು ಗಮನಿಸುವುದು ಉತ್ತಮ.

ಇದನ್ನೂ ಓದಿ: ಮಕ್ಕಳಲ್ಲಿ ನಿದ್ರೆಯ ಕೊರತೆ ಆರೋಗ್ಯಕ್ಕೆ ಅಪಾಯ! ಉತ್ತಮ ನಿದ್ರೆಗೆ ಪೋಷಕರು ಪಾಲಿಸಬೇಕಾದ ಸಲಹೆಗಳು

ಗ್ಯಾಸ್ ಸಮಸ್ಯೆ ಕಡಿಮೆ ಮಾಡಲು ಏನು ಮಾಡಬೇಕು?

  • ಆಹಾರವನ್ನು ನಿಧಾನವಾಗಿ ಹಾಗೂ ಚೆನ್ನಾಗಿ ಜಗಿದು ಸೇವಿಸಿ.
  • ದಿನಕ್ಕೆ ಸಾಕಷ್ಟು ನೀರು ಕುಡಿಯಿರಿ.
  • ಊಟದ ಬಳಿಕ 10-15 ನಿಮಿಷ ನಡೆಯಿರಿ.
  • ಕಾರ್ಬೊನೇಟೆಡ್ ಪಾನೀಯಗಳನ್ನು ಕಡಿಮೆ ಮಾಡಿ.
  • ಫೈಬರ್ ಇರುವ ಆಹಾರವನ್ನು ನಿಧಾನವಾಗಿ ಆಹಾರದಲ್ಲಿ ಸೇರಿಸಿ.
  • ಒಂದೇ ಬಾರಿ ಹೆಚ್ಚು ತಿನ್ನುವ ಬದಲು ಸಣ್ಣ ಪ್ರಮಾಣದಲ್ಲಿ ಹಲವಾರು ಬಾರಿ ಆಹಾರ ಸೇವಿಸಿ.
  • ನಿಯಮಿತ ವ್ಯಾಯಾಮ ಮತ್ತು ಯೋಗ ಅಭ್ಯಾಸ ಮಾಡಿ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

  • ತೀವ್ರ ಹೊಟ್ಟೆನೋವು
  • ನಿರಂತರ ಹೊಟ್ಟೆ ಉಬ್ಬರ
  • ಮಲಬದ್ಧತೆ ಅಥವಾ ಅತಿಸಾರ
  • ಮಲದಲ್ಲಿ ರಕ್ತ
  • ಕಾರಣವಿಲ್ಲದೆ ತೂಕ ಕಡಿಮೆಯಾಗುವುದು
  • ವಾಂತಿ
  • ಆಹಾರ ನುಂಗಲು ಕಷ್ಟವಾಗುವುದು

ಪ್ರತಿದಿನ 25–30 ಗ್ರಾಂ ಫೈಬರ್ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಆದರೆ ಫೈಬರ್ ಅನ್ನು ನಿಧಾನವಾಗಿ ಹೆಚ್ಚಿಸಬೇಕು, ಇಲ್ಲದಿದ್ದರೆ ಆರಂಭದಲ್ಲಿ ಗ್ಯಾಸ್ ಹೆಚ್ಚಾಗಬಹುದು. ಮೊಸರು, ಮಜ್ಜಿಗೆ ಮತ್ತು ಪ್ರೋಬಯೋಟಿಕ್ ಆಹಾರಗಳು ಕರುಳಿನ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಶುಂಠಿ, ಜೀರಿಗೆ, ಸೋಂಪು ಹಾಗೂ ಓಮ (ಅಜ್ವೈನ್) ಮುಂತಾದ ಸಾಂಪ್ರದಾಯಿಕ ಮಸಾಲೆಗಳು ಕೆಲವರಲ್ಲಿ ಗ್ಯಾಸ್ ಹಾಗೂ ಹೊಟ್ಟೆ ಉಬ್ಬರ ಕಡಿಮೆ ಮಾಡಲು ನೆರವಾಗಬಹುದು.

ಗಮನಿಸಿ: ಈ ಲೇಖನವು ಮಾಹಿತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರ ಸಲಹೆಯಂತೆ ಮಾತ್ರ ಆಹಾರ ಬದಲಾವಣೆ ಮಾಡಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us