ರಾತ್ರಿ ಊಟ ಬಿಟ್ಟರೆ ತೆಳ್ಳಗಾಗೋದು ನಿಜಾನಾ?

|

Updated on: Oct 03, 2023 | 6:40 PM

ಪೌಷ್ಟಿಕತಜ್ಞರ ಪ್ರಕಾರ, ರಾತ್ರಿಯ ಊಟ ಕೇವಲ ಆ ದಿನದ ಕೊನೆಯ ಆಹಾರವಲ್ಲ. ಅದು ಆ ದಿನದಲ್ಲಿ ನೀವು ಮಲಗುವ ಮೊದಲು ನಿಮ್ಮ ದೇಹಕ್ಕೆ ಕ್ಯಾಲೋರಿ ಮತ್ತು ಪೌಷ್ಟಿಕಾಂಶವನ್ನು ನೀಡಲು ಒಂದು ಕೊನೆಯ ಅವಕಾಶವಾಗಿದೆ. ದೀರ್ಘಾವಧಿಯಲ್ಲಿ ನಿಯಮಿತವಾಗಿ ಒಂದು ಹೊತ್ತಿನ ಊಟವನ್ನು ಬಿಡುವುದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ರಾತ್ರಿ ಊಟ ಬಿಟ್ಟರೆ ತೆಳ್ಳಗಾಗೋದು ನಿಜಾನಾ?
ಸಾಂದರ್ಭಿಕ ಚಿತ್ರ
Image Credit source: iStock
Follow us on

ಬೆಳಗ್ಗೆ ತಿನ್ನುವ ಆಹಾರ ಆ ದಿನದ ಪ್ರಮುಖ ಆಹಾರ ಎಂಬ ಮಾತಿದೆ. ಕೆಲವರು ತೂಕ ಇಳಿಸಿಕೊಳ್ಳಲೆಂದು ರಾತ್ರಿ ಹೊತ್ತು ಊಟವನ್ನೇ ಮಾಡುವುದಿಲ್ಲ, ಬೆಳಗ್ಗೆ ಮತ್ತು ಮಧ್ಯಾಹ್ನ ಮಾತ್ರ ಆಹಾರ ಸೇವಿಸುತ್ತಾರೆ. ಆದರೆ, ಬೆಳಗ್ಗೆ ಮತ್ತು ಮಧ್ಯಾಹ್ನದಷ್ಟೇ ರಾತ್ರಿಯ ಊಟ ಕೂಡ ಅತ್ಯಂತ ಮುಖ್ಯವಾದುದು. ರಾತ್ರಿ ಊಟ ಮಾಡದಿದ್ದರೆ ತೆಳ್ಳಗಾಗುತ್ತಾರಾ? ರಾತ್ರಿ ಊಟ ಬಿಡುವುದರಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳು ಉಂಟಾಗುತ್ತವೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಪೌಷ್ಟಿಕತಜ್ಞರ ಪ್ರಕಾರ, ರಾತ್ರಿಯ ಊಟ ಕೇವಲ ಆ ದಿನದ ಕೊನೆಯ ಆಹಾರವಲ್ಲ. ಅದು ಆ ದಿನದಲ್ಲಿ ನೀವು ಮಲಗುವ ಮೊದಲು ನಿಮ್ಮ ದೇಹಕ್ಕೆ ಕ್ಯಾಲೋರಿ ಮತ್ತು ಪೌಷ್ಟಿಕಾಂಶವನ್ನು ನೀಡಲು ಒಂದು ಕೊನೆಯ ಅವಕಾಶವಾಗಿದೆ. ಇದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಹೀಗಾಗಿ, ಅವರು ರಾತ್ರಿ ಊಟ ಮಾಡದೆ ಬೆಳಗ್ಗಿನವರೆಗೂ ಹೊಟ್ಟೆಯನ್ನು ಖಾಲಿ ಬಿಟ್ಟಿರುತ್ತಾರೆ. ರಾತ್ರಿ ಊಟ ಮಾಡದಿರುವುದು ಖಂಡಿತ ಒಳ್ಳೆಯ ಕ್ರಮವಲ್ಲ. ಆದರೆ, ರಾತ್ರಿ ನೀವು ಎಷ್ಟು ಹೊತ್ತಿಗೆ ಆಹಾರ ಸೇವಿಸುತ್ತೀರಿ, ಏನು ತಿನ್ನುತ್ತೀರಿ ಎಂಬುದು ಮಾತ್ರ ಮುಖ್ಯವಾಗುತ್ತದೆ.

ಇದನ್ನೂ ಓದಿ: ಅತಿಯಾಗಿ ಕ್ಯಾಮೊಮೈಲ್ ಸೇವಿಸಿದರೆ ಆರೋಗ್ಯದ ಮೇಲಾಗುವ ದುಷ್ಪರಿಣಾಮವೇನು?

ಇನ್ಸ್ಟಿಟ್ಯೂಟ್ ಆಫ್ ಫುಡ್ ಟೆಕ್ನಾಲಜಿಸ್ಟ್​ (IFT) 2020ರ ಜನವರಿಯಲ್ಲಿ ಪ್ರಕಟಿಸಿದ ಲೇಖನದ ಪ್ರಕಾರ, ಜನರು ತಮ್ಮ ದೇಹಕ್ಕೆ ಅಗತ್ಯವಾದ ತರಕಾರಿಗಳನ್ನು ತಿನ್ನಲು ರಾತ್ರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ರಾತ್ರಿ ಬಹುತೇಕ ಜನರು ಸಲಾಡ್, ಹಸಿ ತರಕಾರಿಗಳು, ಹಣ್ಣುಗಳನ್ನು ಸೇವಿಸುತ್ತಾರೆ.

ನಿಯಮಿತ ಊಟದ ಸಮಯದಲ್ಲಿ ಸಣ್ಣ ಬದಲಾವಣೆಗಳಾದಾಗಲೂ ಅದು ನಿಮ್ಮ ಹಸಿವನ್ನು ನಿಯಂತ್ರಿಸುವ ನಿಮ್ಮ ಸಾಮರ್ಥ್ಯವನ್ನು ಕುಂಠಿತಗೊಳಿಸಬಹುದು. ಏಕೆಂದರೆ ದಿನನಿತ್ಯದ ಆಹಾರದ ದಿನಚರಿಯು ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ. ದೀರ್ಘಾವಧಿಯಲ್ಲಿ ನಿಯಮಿತವಾಗಿ ಒಂದು ಹೊತ್ತಿನ ಊಟವನ್ನು ಬಿಡುವುದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ದಿನಕ್ಕೆ ಒಂದು ಹೊತ್ತು ತಿಂಡಿ ಮತ್ತು ಒಂದು ಹೊತ್ತಿನ ಊಟವನ್ನು ಮಾತ್ರ ಸೇವಿಸುವುದರಿಂದ ಮರಣದ ಅಪಾಯಗಳು ಉಂಟಾಗುತ್ತವೆ. ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟವನ್ನು ಬಿಟ್ಟುಬಿಡುವುದರಿಂದ ಹೃದಯರಕ್ತನಾಳದ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ ಎಂದು 2023ರ ಮಾರ್ಚ್ ತಿಂಗಳಲ್ಲಿ ಅಕಾಡೆಮಿ ಆಫ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: ಅತಿಯಾದ ಗೆಣಸು ಸೇವನೆಯಿಂದ ಆರೋಗ್ಯಕ್ಕೆ ತೊಂದರೆಯಾಗುತ್ತಾ?

ಅಲ್ಪಾವಧಿಯಲ್ಲಿ ರಾತ್ರಿಯ ಊಟವನ್ನು ಬಿಟ್ಟುಬಿಡುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಏರಿಳಿತಗಳು ಉಂಟಾಗಬಹುದು. ಅದರಿಂದ ನಿಮ್ಮ ದೇಹದಲ್ಲಿ ಶಕ್ತಿ ಕಡಿಮೆಯಾಗಬಹುದು. ಇದರಿಂದ ನಿಮ್ಮ ದೇಹಕ್ಕೆ ಒತ್ತಡ ಉಂಟಾಗಿ, ನಿದ್ರೆ ಮಾಡಲು ಕಷ್ಟವಾಗಬಹುದು ಎನ್ನಲಾಗಿದೆ.

ಆದರೆ, ಮಧುಮೇಹ ಅಥವಾ ಇತರ ಆರೋಗ್ಯ ಸಮಸ್ಯೆಗಳಿಲ್ಲದವರು ರಾತ್ರಿ ಊಟ ಮಾಡದಿದ್ದರೆ ಹೆಚ್ಚಿನ ಸಮಸ್ಯೆಯೇನೂ ಆಗುವುದಿಲ್ಲ. ಇಂಥವರು ಒಂದುವೇಳೆ ನೀವು ತಡವಾಗಿ ಬಂದರೆ ರಾತ್ರಿಯ ಊಟವನ್ನು ಬಿಟ್ಟುಬಿಡುವುದು ಉತ್ತಮ. ಮಲಗುವುದಕ್ಕೂ ಕನಿಷ್ಟ 2 ಗಂಟೆಗಳ ಮೊದಲು ಊಟ ಮಾಡಬೇಕೆಂದು ಪೌಷ್ಟಿಕತಜ್ಞರು ಶಿಫಾರಸು ಮಾಡುತ್ತಾರೆ. ಏಕೆಂದರೆ, ತಡರಾತ್ರಿ ಆಹಾರ ಸೇವಿಸುವುದರಿಂದ ಹಸಿವು ಹೆಚ್ಚುತ್ತದೆ. ಹಾಗೇ, ಲೆಪ್ಟಿನ್ ಎಂಬ ಹಾರ್ಮೋನ್​ನಿಂದಾಗಿ ನಿಮಗೆ ಬೊಜ್ಜು ಉಂಟಾಗುವ ಅಪಾಯ ಹೆಚ್ಚು.

ಹೀಗಾಗಿ, ರಾತ್ರಿ ಊಟ ಮಾಡುವುದನ್ನೇ ಬಿಟ್ಟುಬಿಡುವ ಬದಲು ಆದಷ್ಟೂ ಕಡಿಮೆ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಸಲಾಡ್, ಹಣ್ಣು, ಜ್ಯೂಸ್​ ಸೇವನೆ ಮಾಡಿ. 2021ರ ಜನವರಿಯಲ್ಲಿ ನ್ಯೂಟ್ರಿಯೆಂಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ರಾತ್ರಿಯ ಊಟವನ್ನು ಬಿಟ್ಟುಬಿಡುವುದರಿಂದ ತೂಕ ಹೆಚ್ಚಾಗುವ ಅಪಾಯವಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ