AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಟೆಗಟ್ಟಲೆ ಕುಳಿತು ಕೆಲಸ ಮಾಡುತ್ತಿದ್ದೀರಾ? ಮೊಣಕಾಲು ಮತ್ತು ಬೆನ್ನು ನೋವಿಗೆ ಇದೇ ಕಾರಣವಾಗಿರಬಹುದು!

ದಿನಕ್ಕೆ 8ರಿಂದ 10 ಗಂಟೆಗಳ ಕಾಲ ಕುಳಿತು ಕೆಲಸ ಮಾಡುವ ಅಭ್ಯಾಸವಿದೆಯೇ? ಹಾಗಾದರೆ ಮೊಣಕಾಲು ಮತ್ತು ಬೆನ್ನು ನೋವಿನ ಬಗ್ಗೆ ಎಚ್ಚರಿಕೆ ವಹಿಸಿ. ಒಂದೇ ಭಂಗಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಸ್ನಾಯುಗಳ ಮೇಲೆ ಒತ್ತಡ ಹೆಚ್ಚಾಗಿ ನೋವು ಮತ್ತು ಬಿಗಿತ ಕಾಣಿಸಿಕೊಳ್ಳಬಹುದು. ಈ ಸಮಸ್ಯೆಗಳನ್ನು ತಡೆಯಲು ಸರಿಯಾದ ಭಂಗಿ, ಸಣ್ಣ ವಿರಾಮಗಳು ಮತ್ತು ನಿಯಮಿತ ವ್ಯಾಯಾಮದ ಜೊತೆಗೆ ವೈದ್ಯರು ತಿಳಿಸಿದ ಈ ಸಲಹೆಗಳನ್ನು ತಪ್ಪದೆ ಪಾಲಿಸಿ.

ಗಂಟೆಗಟ್ಟಲೆ ಕುಳಿತು ಕೆಲಸ ಮಾಡುತ್ತಿದ್ದೀರಾ? ಮೊಣಕಾಲು ಮತ್ತು ಬೆನ್ನು ನೋವಿಗೆ ಇದೇ ಕಾರಣವಾಗಿರಬಹುದು!
Sitting For Long HoursImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Nov 09, 2026 | 5:22 PM

Share

ಇಂದಿನ ಡಿಜಿಟಲ್ ಯುಗದಲ್ಲಿ ಅನೇಕ ಉದ್ಯೋಗಿಗಳು ದಿನಕ್ಕೆ 8ರಿಂದ 10 ಗಂಟೆಗಳ ಕಾಲ ಲ್ಯಾಪ್‌ಟಾಪ್ ಮುಂದೆ ಕುಳಿತು ಕೆಲಸ ಮಾಡುತ್ತಾರೆ. ಕೆಲಸದ ಒತ್ತಡ, ಡೆಡ್‌ಲೈನ್‌ಗಳು ಮತ್ತು ಹೆಚ್ಚು ಹೊತ್ತು ಕೆಲಸ ಮಾಡುವ ಕಾರಣದಿಂದ ಒಂದೇ ಭಂಗಿಯಲ್ಲಿ ಕುಳಿತಿರುವುದನ್ನೇ ಮರೆತುಬಿಡುತ್ತಾರೆ. ಇದರಿಂದ ಸ್ನಾಯುಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದಿರುವುದು ಮತ್ತು ಸಮಯಕ್ಕೆ ಸರಿಯಾಗಿ ವಿರಾಮ ತೆಗೆದುಕೊಳ್ಳದಿರುವುದು ಮೊಣಕಾಲು ಹಾಗೂ ಬೆನ್ನಿನ ಮೇಲೆ ನಿರಂತರ ಒತ್ತಡ ಉಂಟುಮಾಡಬಹುದು. ಇದರಿಂದ ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಇಂತಹ ಸಮಸ್ಯೆಗಳನ್ನು ಸಾಮಾನ್ಯ ನೋವೆಂದು ನಿರ್ಲಕ್ಷಿಸಬಾರದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮೊಣಕಾಲು ಮತ್ತು ಸೊಂಟದ ಮೂಳೆಗಳ ತಜ್ಞ ಶಸ್ತ್ರಚಿಕಿತ್ಸಕ ಡಾ. ಯೋಗೀಶ್ ಕಾಮತ್ ಅವರು ನೀಡಿದ್ದಾರೆ.

ಡಾ. ಯೋಗೀಶ್ ಹೇಳುವ ಪ್ರಕಾರ, ಕೆಲವರಲ್ಲಿ ಹುಟ್ಟಿನಿಂದಲೇ ಮೂಳೆಗಳ ಆಕಾರದಲ್ಲಿ ಸಣ್ಣ ಬದಲಾವಣೆಗಳು ಅಥವಾ ಅಸ್ಥಿರಜ್ಜುಗಳು (ಲಿಗಮೆಂಟ್‌ಗಳು) ಸ್ವಲ್ಪ ಸಡಿಲವಾಗಿರುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಇವುಗಳಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದಿರುವುದು ಮತ್ತು ದೈಹಿಕ ಚಟುವಟಿಕೆ ಕಡಿಮೆಯಾಗುವುದು ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳಲು ಕಾರಣವಾಗಬಹುದು.

ಮೊಣಕಾಲು ಮತ್ತು ಬೆನ್ನಿನ ಸಮಸ್ಯೆಗಳಿಗೆ ಕಾರಣವೇನು?

ಇತ್ತೀಚಿಗೆ ಸಂಧಿವಾತ ಸೇರಿದಂತೆ ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮುಂದಿನ ಹತ್ತು ವರ್ಷಗಳಲ್ಲಿ ಇಂತಹ ಸಮಸ್ಯೆಗಳು ಎರಡು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ಶೇ. 50ಕ್ಕಿಂತ ಹೆಚ್ಚು ಜನರು ಇವುಗಳಲ್ಲಿ ಯಾವುದಾದರೂ ಒಂದು ಸಮಸ್ಯೆಯಿಂದ ಬಳಲುವ ಸಾಧ್ಯತೆ ಇದೆ. ಮೊಣಕಾಲಿನ ಸಮಸ್ಯೆಗಳು ಸಾಮಾನ್ಯವಾಗಿ ಕೀಲಿನ ಮೇಲ್ಮೈಯಲ್ಲಿರುವ ಕಾರ್ಟಿಲೆಜ್ ಮೃದುವಾಗುವುದರಿಂದ ಉಂಟಾಗಬಹುದು. ಆದರೆ, ಇಂತಹ ನೋವನ್ನು ಕೆಲವೊಮ್ಮೆ ಮೆನಿಸ್ಕಸ್‌ (ಮೊಣಕಾಲಿನೊಳಗೆ ಕುಶನ್‌ನಂತೆ ಕೆಲಸ ಮಾಡುವ ಅಂಗಾಂಶ) ಹರಿದಿರುವ ಸಮಸ್ಯೆ ಎಂದು ತಪ್ಪಾಗಿ ಭಾವಿಸಲಾಗುತ್ತದೆ. ಇದರಿಂದ ಅಗತ್ಯವಿಲ್ಲದಿದ್ದರೂ ಎಂಆರ್‌ಐ ಸ್ಕ್ಯಾನ್ ಮಾಡಿಸುವ ಅಥವಾ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಂದರ್ಭಗಳೂ ಎದುರಾಗಬಹುದು.

ಇದನ್ನೂ ಓದಿ: ಫೈಬರ್ ಅಂಶದ ಕೊರತೆ ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವೇ? ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಿ

ಬೆನ್ನಿನ ಕೆಳಭಾಗದಲ್ಲಿ ನರಗಳ ಮೇಲೆ ಒತ್ತಡ ಬೀಳುವುದರಿಂದಲೂ ನೋವು ಕಾಣಿಸಿಕೊಳ್ಳಬಹುದು. ಆದರೆ, ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಇಂತಹ ಹಲವು ಸಮಸ್ಯೆಗಳನ್ನು ಶಸ್ತ್ರಚಿಕಿತ್ಸೆಯಿಲ್ಲದೆ ನಿರ್ವಹಿಸಬಹುದು. ಅದೇ ರೀತಿ, ಕುತ್ತಿಗೆ ನೋವು ಕಾಣಿಸಿಕೊಳ್ಳಲು ಹೆಚ್ಚಿನ ಸಂದರ್ಭಗಳಲ್ಲಿ ಸ್ನಾಯುಗಳ ಸೆಳೆತವೂ ಕಾರಣವಾಗಿರುತ್ತದೆ.

ಯಾವ ಲಕ್ಷಣಗಳು ಕಂಡುಬಂದರೆ ಎಚ್ಚರಿಕೆ ಅಗತ್ಯ?

  • ಮೊಣಕಾಲಿನಲ್ಲಿ ನಿರಂತರ ನೋವು ಅಥವಾ ಊತ.
  • ಮೊಣಕಾಲು ಲಾಕ್ ಆದಂತೆ ಅನಿಸುವುದು.
  • ನಡೆಯುವಾಗ ಕಾಲಿಗೆ ಸರಿಯಾಗಿ ಹಿಡಿತ ಸಿಗದಿರುವುದು.
  • ಕಾಲಿನ ಮೇಲೆ ದೇಹದ ಭಾರ ಹಾಕಲು ಕಷ್ಟವಾಗುವುದು.
  • ಬೆನ್ನು ನೋವು ದೀರ್ಘಕಾಲ ಮುಂದುವರಿಯುವುದು. ಇಂತಹ ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ತಪಾಸಣೆ ಮಾಡಿಸಿಕೊಳ್ಳಬೇಕು.

ನೋವು ಕಡಿಮೆ ಮಾಡಲು ಏನು ಮಾಡಬೇಕು?

ಡಾ. ಬಿಶ್ವರಾಜನ್ ದಾಸ್ ಅವರ ಸಲಹೆಯಂತೆ ದೇಹದ ಚಲನವಲನ ಸುಧಾರಿಸುವುದು ಮತ್ತು ಸ್ನಾಯುಗಳನ್ನು ಬಲಪಡಿಸುವುದು ಮುಖ್ಯ.

  • ಕೆಲಸದ ನಡುವೆ ಆಗಾಗ ಎದ್ದು ನಡೆಯಿರಿ.
  • ಕುರ್ಚಿ ಮತ್ತು ಕಂಪ್ಯೂಟರ್ ಅನ್ನು ಸರಿಯಾದ ಎತ್ತರದಲ್ಲಿ ಹೊಂದಿಸಿಕೊಳ್ಳಿ.
  • ಬೆನ್ನು ಮತ್ತು ಕಾಲಿನ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮ ಮಾಡಿ.
  • ನಿಯಮಿತವಾಗಿ ದೇಹವನ್ನು ಹಿಗ್ಗಿಸುವ ಅಥವಾ ಮೈ ಮುರಿಯುವ ಅಭ್ಯಾಸ ಬೆಳೆಸಿಕೊಳ್ಳಿ.
  • ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಸಮಯವನ್ನು ಸರಿಯಾಗಿ ನಿರ್ವಹಿಸಿ.

ಒಂದೇ ಭಂಗಿಯಲ್ಲಿ ಕುಳಿತುಕೊಳ್ಳಬೇಡಿ!

ದಿನವಿಡೀ ಒಂದೇ ಭಂಗಿಯಲ್ಲಿ ಕುಳಿತು ಕೆಲಸ ಮಾಡುವ ಬದಲು ಆಗಾಗ್ಗೆ ನಿಂತು ನಡೆಯುವುದು ಮತ್ತು ಕುಳಿತುಕೊಳ್ಳುವ ಭಂಗಿಯನ್ನು ಬದಲಾಯಿಸುವುದು ಉತ್ತಮ. ಅಗತ್ಯವಿದ್ದರೆ ಕುಳಿತು ಮತ್ತು ನಿಂತು ಕೆಲಸ ಮಾಡಲು ಅನುಕೂಲವಾಗುವ ಎತ್ತರ ಹೊಂದಿಸಬಹುದಾದ ಡೆಸ್ಕ್ ಬಳಸಬಹುದು. ಒಟ್ಟಿನಲ್ಲಿ, ದೀರ್ಘಕಾಲ ಕುಳಿತು ಕೆಲಸ ಮಾಡುವವರು ತಮ್ಮ ದೈಹಿಕ ಚಟುವಟಿಕೆಗೆ ಆದ್ಯತೆ ನೀಡಬೇಕು. ಸಣ್ಣ ವಿರಾಮಗಳು, ಸರಿಯಾದ ಕುಳಿತುಕೊಳ್ಳುವ ಭಂಗಿ ಮತ್ತು ನಿಯಮಿತ ವ್ಯಾಯಾಮದಿಂದ ಮೊಣಕಾಲು ಹಾಗೂ ಬೆನ್ನಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ
ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ
ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಆಸ್ಪತ್ರೆ
ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಆಸ್ಪತ್ರೆ
ಸ್ಟಿಂಗ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಸ್ಟಿಂಗ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಛಲವಾದಿ ಮನೆಗೆ ಚಾಕು, ಚೂರಿ ಪಾರ್ಸೆಲ್; ಇತ್ತ ಜೋರಾಯ್ತು ಪೋಸ್ಟರ್ ವಾರ್!
ಛಲವಾದಿ ಮನೆಗೆ ಚಾಕು, ಚೂರಿ ಪಾರ್ಸೆಲ್; ಇತ್ತ ಜೋರಾಯ್ತು ಪೋಸ್ಟರ್ ವಾರ್!