ದೇಶದ ಹಲವು ನಗರಗಳಲ್ಲಿ ಡ್ರಗ್ಸ್ ದಾಸರಾಗುತ್ತಿದ್ದಾರೆ ಮಕ್ಕಳು: ಸಮೀಕ್ಷೆ ಪಟ್ಟಿಯಲ್ಲಿದೆ ಕರ್ನಾಟಕದ ಈ ನಗರದ ಹೆಸರು

ಇತ್ತೀಚಿಗೆ ಶಾಲಾ ಮಕ್ಕಳಲ್ಲಿ ನಡೆಸಿದ ಸಂಶೋಧನೆಯೊಂದು ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದ್ದು, ಪೋಷಕರ ಆತಂಕಕ್ಕೆ ಕಾರಣವಾಗಿದೆ. ಇದು ತಿಳಿಸಿರುವ ಮಾಹಿತಿ ಪ್ರಕಾರ, ಶೇ.15 ರಷ್ಟು ವಿದ್ಯಾರ್ಥಿಗಳು ಮಾದಕ ದ್ರವ್ಯಗಳನ್ನು ಬಳಸಿದ್ದಾರೆ ಎಂದು ಸಂಶೋಧನೆ ಕಂಡುಹಿಡಿದಿದೆ. ಇನ್ನು ಹೆಚ್ಚುವರಿಯಾಗಿ, ಶೇ. 10.3 ರಷ್ಟು ವಿದ್ಯಾರ್ಥಿಗಳು ಕಳೆದ ವರ್ಷದಲ್ಲಿ ಇದನ್ನು ಬಳಸಿದ್ದು, ಶೇ. 7.2 ರಷ್ಟು ಮಕ್ಕಳು ಇದನ್ನು ಕಳೆದ ತಿಂಗಳು ಬಳಸಿದ್ದಾರೆ ಎಂದು ಹೇಳಿದೆ. ಈ ಸಮೀಕ್ಷೆ ದೇಶದ 10 ನಗರಗಳಲ್ಲಿ ನಡೆದಿದ್ದು ನಮ್ಮ ಬೆಂಗಳೂರು ಕೂಡ ಈ ಲಿಸ್ಟ್ ನಲ್ಲಿದೆ.

ದೇಶದ ಹಲವು ನಗರಗಳಲ್ಲಿ ಡ್ರಗ್ಸ್ ದಾಸರಾಗುತ್ತಿದ್ದಾರೆ ಮಕ್ಕಳು: ಸಮೀಕ್ಷೆ ಪಟ್ಟಿಯಲ್ಲಿದೆ ಕರ್ನಾಟಕದ ಈ ನಗರದ ಹೆಸರು
Opioid Use Starts at Age 11, National Medical Journal Reports

Updated on: Dec 11, 2025 | 5:23 PM

ದೇಶದಲ್ಲಿ ಮಾದಕ ದ್ರವ್ಯ (Narcotics) ಮತ್ತು ಮಾದಕ ವ್ಯಸನಕ್ಕೆ ಸಂಬಂಧಿಸಿದ ಸಮಸ್ಯೆಗಳು ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಪರಿಸ್ಥಿತಿ ಹೇಗಿದೆ ಎಂದರೆ ಚಿಕ್ಕ ಮಕ್ಕಳು ಕೂಡ ಇವುಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ದೇಶದ 10 ನಗರಗಳಲ್ಲಿ ನಡೆಸಿದ ಶಾಲಾ ಸಮೀಕ್ಷೆಯ ಪ್ರಕಾರ, ಮಕ್ಕಳು ಒಂದು ವಯಸ್ಸಿಗೆ ಬರುವ ಬಹಳ ಮೊದಲೇ ಮಾದಕ ದ್ರವ್ಯಗಳನ್ನು ಬಳಸಲು ಪ್ರಾರಂಭಿಸುತ್ತಿದ್ದಾರೆ, ಅಂದರೆ ಸರಾಸರಿ 11,12 ನೇ ವಯಸ್ಸಿಗೆ ಮಾದಕ ದ್ರವ್ಯಗಳನ್ನು ಬಳಸುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಹೊರಬಂದಿದೆ. ಕೇಳುವುದಕ್ಕೆ ಬಹಳ ಆಶ್ಚರ್ಯಕರವಾಗಿದ್ದರೂ ಕೂಡ ಪೋಷಕರು ತಮ್ಮ ಮಕ್ಕಳ ಬಗ್ಗೆ ಸ್ವಲ್ಪ ಗಮನ ಹರಿಸುವುದು ಬಹಳ ಮುಖ್ಯವಾಗಿದೆ.

10 ನಗರಗಳಲ್ಲಿ ಸಮೀಕ್ಷೆ ಹೇಗೆ ನಡೆದಿತ್ತು?

ಈ ಅಧ್ಯಯನವು ದೆಹಲಿ, ಬೆಂಗಳೂರು, ಮುಂಬೈ, ಚಂಡೀಗಢ, ಹೈದರಾಬಾದ್, ಲಕ್ನೋ, ಇಂಫಾಲ್, ಜಮ್ಮು, ದಿಬ್ರುಗಢ ಮತ್ತು ರಾಂಚಿಯಲ್ಲಿ ನಡೆದಿದ್ದು, ಸುಮಾರು 14.7 ವರ್ಷ ವಯಸ್ಸಿನ 5,920 ವಿದ್ಯಾರ್ಥಿಗಲು ಇದರಲ್ಲಿ ಭಾಗವಹಿಸಿದ್ದರು. ಈ ತಿಂಗಳು ನ್ಯಾಷನಲ್ ಮೆಡಿಕಲ್ ಜರ್ನಲ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರತಿ ಏಳು ಶಾಲಾ ವಿದ್ಯಾರ್ಥಿಗಳಲ್ಲಿ ಒಬ್ಬರು ಒಮ್ಮೆಯಾದರೂ ಮನೋವಿಕೃತ ವಸ್ತುವನ್ನು ಬಳಸಿದ್ದರು ಎಂಬುದು ತಿಳಿದು ಬಂದಿದೆ. ಶೇ. 15 ರಷ್ಟು ವಿದ್ಯಾರ್ಥಿಗಳು ಮಾದಕ ದ್ರವ್ಯಗಳನ್ನು ಬಳಸಿದ್ದಾರೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಇನ್ನು ಹೆಚ್ಚುವರಿಯಾಗಿ, ಶೇ. 10.3 ರಷ್ಟು ವಿದ್ಯಾರ್ಥಿಗಳು ಕಳೆದ ವರ್ಷದಲ್ಲಿ ಇದನ್ನು ಬಳಸಿದ್ದು, ಶೇ. 7.2 ರಷ್ಟು ಮಕ್ಕಳು ಇದನ್ನು ಕಳೆದ ತಿಂಗಳು ಬಳಸಿದ್ದಾರೆ. ಇದರಲ್ಲಿ ತಂಬಾಕು (4%) ಮತ್ತು ಆಲ್ಕೋಹಾಲ್ (3.8%) ನಂತರ, ಒಪಿಯಾಯ್ಡ್‌ಗಳು (2.8%), ಗಾಂಜಾ (2%) ಮತ್ತು ಇನ್ಹಲೇಂಟ್‌ಗಳು (1.9%), ಹೆಚ್ಚಿನ ಒಪಿಯಾಯ್ಡ್ ಬಳಕೆಯು ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಗಳ ಮೂಲಕ ಆಗಿದೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ: HIV ಪಾಸಿಟಿವಿಟಿ ರೇಟಿಂಗ್​​ನಲ್ಲಿ ಕರ್ನಾಟಕದಲ್ಲೇ ಬಾಗಲಕೋಟೆ ನಂಬರ್ 1

ಹುಡುಗರಲ್ಲಿ ತಂಬಾಕು, ಗಾಂಜಾ ಸೇವನೆ ಹೆಚ್ಚಳ

ದೆಹಲಿಯ ಏಮ್ಸ್‌ನ ರಾಷ್ಟ್ರೀಯ ಮಾದಕ ದ್ರವ್ಯ ಅವಲಂಬನಾ ಚಿಕಿತ್ಸಾ ಕೇಂದ್ರದ ಮುಖ್ಯಸ್ಥೆ ಡಾ. ಅಂಜು ಧವನ್ ಅವರು ಬೆಂಗಳೂರು, ಚಂಡೀಗಢ, ದಿಬ್ರುಗಢ, ಲಕ್ನೋ, ಶ್ರೀನಗರ, ಮುಂಬೈ, ಇಂಫಾಲ್, ಹೈದರಾಬಾದ್ ಮತ್ತು ರಾಂಚಿಯ ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ಬಹುನಗರ ಅಧ್ಯಯನವನ್ನು ನಡೆಸಿದ್ದಾರೆ. ಇದರಲ್ಲಿ 8 ನೇ ತರಗತಿಯ ವಿದ್ಯಾರ್ಥಿಗಳಿಗಿಂತ 11- 12 ನೇ ತರಗತಿಯ ವಿದ್ಯಾರ್ಥಿಗಳು ಎರಡು ಪಟ್ಟು ಹೆಚ್ಚು ಮಾದಕ ದ್ರವ್ಯಗಳನ್ನು ಬಳಸುವ ಸಾಧ್ಯತೆ ಇದೆ ಎಂಬುದು ಸಂಶೋಧನೆ ಬಹಿರಂಗಪಡಿಸಿದೆ. ಹುಡುಗರಲ್ಲಿ, ತಂಬಾಕು ಮತ್ತು ಗಾಂಜಾ ಸೇವನೆ ಹೆಚ್ಚಾಗಿದ್ದು, ಹುಡುಗಿಯರ ದೇಹದಲ್ಲಿ ಇನ್ಹಲೇಂಟ್‌ಗಳು ಮತ್ತು ಔಷಧೀಯ ಒಪಿಯಾಯ್ಡ್‌ಗಳ ಬಳಕೆ ಹೆಚ್ಚಾಗಿದೆ ಎಂಬುದನ್ನು ತಿಳಿಸಿದ್ದಾರೆ. ಈ ಸಮೀಕ್ಷೆಯಲ್ಲಿ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆಯನ್ನು ಮರೆಮಾಚುತ್ತಿದ್ದು, ಹೇಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಹಾಗಾಗಿ ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:05 pm, Wed, 10 December 25