AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಖಾನಾ ಆರೋಗ್ಯಕ್ಕೆ ನಿಜಕ್ಕೂ ಸೂಪರ್‌ಫುಡ್‌ ಆಗಿ ಕೆಲಸ ಮಾಡುತ್ತಾ? ತಿನ್ನುವ ಮುನ್ನ ತಿಳಿಯಬೇಕಾದ ಸಂಗತಿಗಳು

ಮಖಾನಾ ಆರೋಗ್ಯಕರ ಸ್ನ್ಯಾಕ್ ಆಗಿ ಜನಪ್ರಿಯವಾಗುತ್ತಿದೆ. ಇದರಲ್ಲಿ ಹಲವು ಪೋಷಕಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಸಂಯುಕ್ತಗಳಿವೆ. ಅದರಲ್ಲಿಯೂ ಸಂಜೆ ಸಮಯದಲ್ಲಿ ಚಿಪ್ಸ್‌, ಕರಿದ ತಿಂಡಿಗಳ ಬದಲು ಕಡಿಮೆ ಎಣ್ಣೆಯಲ್ಲಿ ತಯಾರಿಸಿದ ಈ ಸ್ನಾಕ್ಸ್ ಸೇವನೆ ಮಾಡುವುದು ಒಳ್ಳೆಯದು. ಇದು ತೂಕ ನಿಯಂತ್ರಣದಲ್ಲಿಡಲು, ಎಲುಬು, ಸ್ನಾಯು ಮತ್ತು ಹೃದಯ ಆರೋಗ್ಯಕ್ಕೆ ಹೇಗೆ ಸಹಾಯ ಮಾಡುತ್ತದೆ, ಮಖಾನಾವನ್ನು ಹೇಗೆ ಸೇವಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಖಾನಾ ಆರೋಗ್ಯಕ್ಕೆ ನಿಜಕ್ಕೂ ಸೂಪರ್‌ಫುಡ್‌ ಆಗಿ ಕೆಲಸ ಮಾಡುತ್ತಾ? ತಿನ್ನುವ ಮುನ್ನ ತಿಳಿಯಬೇಕಾದ ಸಂಗತಿಗಳು
Makhana BenefitsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Sep 05, 2026 | 6:13 PM

Share

ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಸ್ನ್ಯಾಕ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಂಜೆ ಸಮಯದಲ್ಲಿ ಚಿಪ್ಸ್‌, ಕರಿದ ತಿಂಡಿಗಳ ಬದಲು ಕಡಿಮೆ ಎಣ್ಣೆಯಲ್ಲಿ ತಯಾರಿಸಿದ ಖಾದ್ಯಗಳತ್ತ ಜನರ ಮನಸ್ಸು ವಾಲುತ್ತಿದೆ. ಇಂತಹ ಆರೋಗ್ಯಕರ ಸ್ನ್ಯಾಕ್ಸ್‌ಗಳಲ್ಲಿ ಮಖಾನಾ (Fox Nuts/Phool Makhana) ಸೇರಿಸಿಕೊಳ್ಳಬಹುದು. ಇದು ಎಲ್ಲಾ ರೀತಿಯಿಂದಲೂ ಉತ್ತಮ ಆಯ್ಕೆ ಎನ್ನುವುದರಲ್ಲಿ ಸಂಶಯವಿಲ್ಲ. ಮಖಾನಾದಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಕೆಲವು ಖನಿಜಾಂಶಗಳು ಹಾಗೂ ಉತ್ಕರ್ಷಣ ನಿರೋಧಕ ಸಂಯುಕ್ತಗಳು ಕಂಡುಬರುತ್ತವೆ. ಹೀಗಾಗಿ ಸಮತೋಲಿತ ಆಹಾರದ ಭಾಗವಾಗಿ ಮಿತವಾಗಿ ಸೇವಿಸಿದರೆ ಹಲವು ರೀತಿಯಲ್ಲಿ ಇದರಿಂದ ಪ್ರಯೋಜನಗಳನ್ನು ಪಡೆಯಬಹುದು.

ಎಲುಬು ಮತ್ತು ಸ್ನಾಯುಗಳ ಆರೋಗ್ಯ ಕಾಪಾಡುತ್ತದೆ;

ಮಖಾನಾದಲ್ಲಿ ಮ್ಯಾಗ್ನೀಷಿಯಂ, ಫಾಸ್ಫರಸ್ ಮತ್ತು ಇತರ ಖನಿಜಾಂಶಗಳು ಇರುತ್ತವೆ. ಮ್ಯಾಗ್ನೀಷಿಯಂ ಸ್ನಾಯುಗಳು ಮತ್ತು ನರಗಳ ಸಾಮಾನ್ಯ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಫಾಸ್ಫರಸ್‌ ಕೂಡ ಎಲುಬುಗಳ ಆರೋಗ್ಯಕ್ಕೆ ಅಗತ್ಯವಾದ ಖನಿಜವಾಗಿದೆ. ಆದರೆ ಮಖಾನಾ ಮಾತ್ರ ಸೇವಿಸುವುದರಿಂದ ಎಲುಬುಗಳು ಅಥವಾ ಸ್ನಾಯುಗಳು ಬಲಿಷ್ಠವಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಒಟ್ಟಾರೆ ಆಹಾರದಲ್ಲಿ ಸಾಕಷ್ಟು ಪೋಷಕಾಂಶಗಳು ಇರಬೇಕು.

ತೂಕ ಇಳಿಸಿಕೊಳ್ಳುವವರಿಗೆ ಹೇಗೆ ಸಹಾಯ ಮಾಡುತ್ತದೆ?

ಮಖಾನಾವನ್ನು ಹೆಚ್ಚು ಎಣ್ಣೆ, ಬೆಣ್ಣೆ, ಸಕ್ಕರೆ ಅಥವಾ ಉಪ್ಪು ಸೇರಿಸದೆ ಹುರಿದು ಸೇವಿಸಿದರೆ ಕರಿದ ಸ್ನ್ಯಾಕ್ಸ್‌ಗಳಿಗೆ ಪರ್ಯಾಯವಾಗಬಹುದು. ಇದರಿಂದ ಅನಗತ್ಯ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡಲು ಸಹಾಯವಾಗಬಹುದು. ಆದರೆ ಮಖಾನಾ ತಿಂದ ಮಾತ್ರಕ್ಕೆ ತೂಕ ಕಡಿಮೆಯಾಗುವುದಿಲ್ಲ. ಒಟ್ಟಾರೆ ಕ್ಯಾಲೊರಿ ಸೇವನೆ, ಆಹಾರ ಪದ್ಧತಿ ಮತ್ತು ನಿಯಮಿತ ವ್ಯಾಯಾಮವೂ ಕೂಡ ಮುಖ್ಯವಾಗುತ್ತದೆ.

ಇದನ್ನೂ ಓದಿ: ಎಳ್ಳುಂಡೆ ತಿನ್ನುವುದರಿಂದ ಸಿಗುವ ಪ್ರಯೋಜನ ತಿಳಿದರೆ ಪ್ರತಿದಿನ ತಪ್ಪದೆ ತಿನ್ನುವುದರಲ್ಲಿ ಸಂಶಯವೇ ಇಲ್ಲ!

ಹೃದಯ ಆರೋಗ್ಯಕ್ಕೆ ಉತ್ತಮವೇ?

ಮಖಾನಾವನ್ನು ಕಡಿಮೆ ಎಣ್ಣೆ ಮತ್ತು ಕಡಿಮೆ ಉಪ್ಪಿನೊಂದಿಗೆ ತಯಾರಿಸಿ ಸೇವಿಸುವುದು ಆರೋಗ್ಯಕರ ಸ್ನ್ಯಾಕ್ ಆಯ್ಕೆಯಾಗಬಹುದು. ವಿಶೇಷವಾಗಿ ಹೆಚ್ಚಿನ ಉಪ್ಪು ಮತ್ತು ಎಣ್ಣೆ ಇರುವ ಪ್ಯಾಕೇಜ್ಡ್ ಸ್ನ್ಯಾಕ್ಸ್‌ಗಳ ಬದಲಿಗೆ ಇದನ್ನು ಬಳಸಬಹುದು. ಅಧಿಕ ರಕ್ತದೊತ್ತಡ ಇರುವವರು ಹೆಚ್ಚುವರಿ ಉಪ್ಪು ಸೇರಿಸುವುದನ್ನು ತಪ್ಪಿಸುವುದು ಉತ್ತಮ. ಮಖಾನಾದಲ್ಲಿ ಕೆಲವು ಆ್ಯಂಟಿಆಕ್ಸಿಡೆಂಟ್ ಸಂಯುಕ್ತಗಳು ಕಂಡುಬರುತ್ತವೆ. ಇವು ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುವ ಸಾಮರ್ಥ್ಯ ಹೊಂದಿವೆ.

ಎಷ್ಟು ಸೇವಿಸಬೇಕು?

ಸಂಜೆಯ ಸಮಯದಲ್ಲಿ ಸ್ವಲ್ಪ ಪ್ರಮಾಣದ ಮಖಾನಾವನ್ನು ಆರೋಗ್ಯಕರ ಸ್ನ್ಯಾಕ್ ಆಗಿ ಸೇವಿಸಬಹುದು. ಮಧುಮೇಹ, ಮೂತ್ರಪಿಂಡದ ಸಮಸ್ಯೆ ಅಥವಾ ಇತರ ಆರೋಗ್ಯ ಸಮಸ್ಯೆ ಇರುವವರು ತಮ್ಮ ಆಹಾರದಲ್ಲಿ ಇದನ್ನು ಸೇರಿಸುವ ಮೊದಲು ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಉತ್ತಮ. ಒಟ್ಟಿನಲ್ಲಿ, ಮಖಾನಾ ಆರೋಗ್ಯಕರ ಆಹಾರದ ಭಾಗವಾಗಬಹುದು; ಆದರೆ ಯಾವುದೇ ಕಾಯಿಲೆಗೆ ಇದು ಏಕೈಕ ಪರಿಹಾರವಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us