ಕೊವಿಡ್ 19 (Covid 19) ಸೋಂಕಿಗೆ ಈಗ ಲಸಿಕೆ ಬಂದಿದೆ. ಜನರು ಮೊದಲಿಗಿಂತ ನಿರಾಳರಾಗಿರಬಹುದು. ಆದರೆ ಇತ್ತೀಚೆಗೆ ಸಂಶೋಧನೆಯೊಂದರಲ್ಲಿ ಹೊರಬಿದ್ದಿರುವ ಮಾಹಿತಿ ಆತಂಕ ಸೃಷ್ಟಿಸುವಂತಿದೆ. ಅದರಲ್ಲಿ ಕೊರೊನಾ ಸೋಂಕು ತಗುಲಿದ ವ್ಯಕ್ತಿಗೆ ಭವಿಷ್ಯದಲ್ಲಿ ಅಡ್ಡಪರಿಣಾಮಗಳು ಉಂಟಾಗುತ್ತದೆಯೇ ಎಂದು ಅಧ್ಯಯನ ಮಾಡಲಾಗಿತ್ತು. ಇದೀಗ ಸಂಶೋಧನೆಯಿಂದ ಸಿಕ್ಕಿದ ಮಾಹಿತಿ ಬಹಿರಂಗವಾಗಿದೆ. ಅದರಂತೆ, ಸೌಮ್ಯವಾದ ಕೊರೊನಾ ಸೋಂಕು ಕಾಣಿಸಿಕೊಂಡರೂ ಸಹ ಭವಿಷ್ಯದಲ್ಲಿ ಅದು ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು. ಅಮೇರಿಕಾದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಬಗ್ಗೆ ಅಧ್ಯಯನ ಮಾಡಿದ್ದು, ಕೊರೊನಾ ಸೋಂಕಿನಿಂದ ಉಂಟಾಗುವ ಅಡ್ಡಪರಿಣಾಮಗಳಿಗೆ ಯಾವುದೇ ವ್ಯಕ್ತಿ ವಿನಾಯಿತಿ ಹೊಂದಿಲ್ಲ ಎಂದಿದ್ದಾರೆ. ಅಧ್ಯಯನದಲ್ಲಿ ಲಭ್ಯವಾದ ಮಾಹಿತಿಗಳನ್ನು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ಟ್ವಿಟರ್ ಮೂಲಕ ಸೋಮವಾರದಂದು ಹಂಚಿಕೊಂಡಿದ್ದಾರೆ. ಕಳೆದ ತಿಂಗಳು ಅಧ್ಯಯನ ಪ್ರಕಟವಾಗಿದ್ದು ಅದರಲ್ಲಿ, ಕೋವಿಡ್ನಿಂದ ಬಳಲುತ್ತಿರುವ ಜನರಲ್ಲಿ ಸೋಂಕಿನಿಂದ ಚೇತರಿಸಿಕೊಂಡ ಒಂದು ವರ್ಷದ ನಂತರವೂ ಹೃದಯಕ್ಕೆ ಸಂಬಂಧಿಸಿದ ಉರಿಯೂತ, ಹೆಪ್ಪುಗಟ್ಟುವಿಕೆ, ಅನಿಯಮಿತ ಹೃದಯ ಬಡಿತವನ್ನು ಒಳಗೊಂಡಿರುವ ಸಮಸ್ಯೆಗಳು ಹೆಚ್ಚಾಗಬಹುದು ಎಂದು ಹೇಳಲಾಗಿದೆ.
ಕ್ಲಿನಿಕಲ್ ಎಪಿಡೆಮಿಯಾಲಜಿ ಸೆಂಟರ್‌ನ ನಿರ್ದೇಶಕರಾದ ಡಾ ಜಿಯಾದ್ ಅಲ್-ಅಲಿ ಈ ಸಂಶೋಧನೆಯನ್ನು ನಡೆಸಿದ್ದು, ಸೌಮ್ಯವಾದ ಕೊವಿಡ್ ಲಕ್ಷಣಗಳಿಂದಾಗಿ ಆಸ್ಪತ್ರೆಗೆ ದಾಖಲಾಗದ ಜನರಲ್ಲಿಯೂ ಸಹ ಹೃದಯ ಸಮಸ್ಯೆಗಳ ಅಪಾಯವು ಸಂಶೋಧನೆಗಳಲ್ಲಿ ಕಂಡುಬಂದಿದ್ದು, ಇದು ಆಶ್ಚರ್ಯ ಉಂಟುಮಾಡಿದೆ ಎಂದಿದ್ದಾರೆ.
‘‘ಹೃದಯ ಅಥವಾ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ಜನರು, ಮಧುಮೇಹಿಗಳು, ಧೂಮಪಾನಿಗಳು ಮತ್ತು ಇತರ ಕೆಲವು ಅಪಾಯಕಾರಿ ಅಂಶಗಳನ್ನು ಹೊಂದಿರುವ ಜನರಿಗೆ ಕೊವಿಡ್ ಸೋಂಕಿನಿಂದ ಅಪಾಯಗಳು ಹೆಚ್ಚು ಎಂದು ಸಂಶೋಧಕರು ನಿರೀಕ್ಷಿಸಿದ್ದರು. ಆದರೆ ಯಾವುದೇ ಹೃದಯ ಸಮಸ್ಯೆಗಳಿಲ್ಲದ ಜನರು, ಅಥ್ಲೆಟಿಕ್ ಜೀವನಶೈಲಿ ಇರುವವರು, ಹೆಚ್ಚಿನ BMI ಹೊಂದಿರದ, ಬೊಜ್ಜು ಇಲ್ಲದ, ಧೂಮಪಾನಿಗಳಲ್ಲದ ಮತ್ತು ಮೂತ್ರಪಿಂಡ ಕಾಯಿಲೆ ಸೇರಿದಂತೆ ಯಾವುದೇ ಕಾಯಿಲೆಯಿಂದ ಬಳಲುತ್ತಿರದ ಜನರಲ್ಲೂ ಸೋಂಕು ಪರಿಣಾಮ ಬೀರುತ್ತದೆ’’ ಎಂದಿದ್ದಾರೆ ಸಂಶೋಧಕರು.
ಕೊವಿಡ್ ಸೋಂಕು ತಗುಲದವರನ್ನು ಹೋಲಿಸಿದಾಗ ಕೋವಿಡ್ಗೆ ತುತ್ತಾದವರಲ್ಲಿ ಈ ಲಕ್ಷಣಗಳು ಕಂಡುಬಂದಿವೆ ಎಂದು ಸಂಶೋಧನೆ ಹೇಳಿದೆ. ‘‘ಪಾರ್ಶ್ವವಾಯು, ಕಾಲುಗಳು ಮತ್ತು ಶ್ವಾಸಕೋಶಗಳ ಮೇಲೆ ಪರಿಣಾಮ ಬೀರುವ ರಕ್ತ ಹೆಪ್ಪುಗಟ್ಟುವಿಕೆ, ಹೃದಯಾಘಾತ’’ದ ಸಾಧ್ಯತೆಗಳು ಕೊರೊನಾ ಸೋಂಕಿಗೆ ತುತ್ತಾದರೆ ಹೆಚ್ಚು ಎಂದು ಅಧ್ಯಯದನಲ್ಲಿ ಬಹಿರಂಗವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಅಧ್ಯಯನದ ಬಗ್ಗೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ಟ್ವೀಟ್:
?“IT SPARES NO ONE”—new @JohnsHopkins evidence has revealed that anyone infected with COVID is at higher risk for heart issues—clots, inflammation, arrhythmias—a risk that **persists even in relatively healthy people** long after the illness has passed ?https://t.co/OKl4eFOKeT pic.twitter.com/qlXlyBCSeZ
— Eric Feigl-Ding (@DrEricDing) April 25, 2022
11 ಮಿಲಿಯನ್ (1.1 ಕೋಟಿ) ಜನರನ್ನು ಪರೀಕ್ಷಿಸಿ ಈ ಅಧ್ಯಯನ ನಡೆಸಲಾಗಿದೆ. ಇದರಲ್ಲಿ 10 ಪ್ರತಿಶತ ಮಹಿಳೆಯರನ್ನು ಪರೀಕ್ಷಿಸಲಾಗಿತ್ತು. ಕೊವಿಡ್ ಸೋಂಕಿನಿಂದ ಉಂಟಾಗುವ ಅಡ್ಡಪರಿಣಾಮಗಳು ಯಾರನ್ನೂ ಬಿಟ್ಟಿಲ್ಲ ಎಂದು ಡಾ.ಅಲ್ ಅಲಿ ಹೇಳಿದ್ದಾರೆ.
ಇದನ್ನೂ ಓದಿ: ಕೊವಿಡ್ ಲಸಿಕೆಯ 2ನೇ ಡೋಸ್- ಬೂಸ್ಟರ್ ಡೋಸ್ ನಡುವಿನ ಅಂತರ 6 ತಿಂಗಳಿಗೆ ತಗ್ಗುವ ಸಾಧ್ಯತೆ
Published On - 8:21 am, Thu, 28 April 22