ನಟ್ಸ್​​ಗಳನ್ನು ತಿನ್ನಿ, ಒಳ್ಳೆಯದೇ-ಆದ್ರೆ ಆಯುರ್ವೇದ ತಜ್ಞರು ತಿಳಿಸಿದ ಈ ನಿಯಮಗಳನ್ನು ಪಾಲಿಸಿ, ಅಡ್ಡಪರಿಣಾಮದಿಂದ ಪಾರಾಗಿ

ಆಯುರ್ವೇದದ ಪ್ರಕಾರ ನಟ್ಸ್​ಗಳು ಅಥವಾ ಬೀಜಗಳು ಯಥೇಚ್ಛವಾಗಿ ಆರೋಗ್ಯಕರ ಕೊಬ್ಬು, ಪ್ರೋಟಿನ್​, ಫೈಬರ್​ನ್ನು ಹೊಂದಿರುವುದರಿಂದ ಜೀರ್ಣಕ್ರಿಯೆಗೆ ಸಮಯ ತೆಗೆದುಕೊಳ್ಳುತ್ತವೆ. ಅಂದರೆ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಇವು ತುಸು ಭಾರ.

ನಟ್ಸ್​​ಗಳನ್ನು ತಿನ್ನಿ, ಒಳ್ಳೆಯದೇ-ಆದ್ರೆ ಆಯುರ್ವೇದ ತಜ್ಞರು ತಿಳಿಸಿದ ಈ ನಿಯಮಗಳನ್ನು ಪಾಲಿಸಿ, ಅಡ್ಡಪರಿಣಾಮದಿಂದ ಪಾರಾಗಿ
ನಟ್ಸ್​
Follow us
| Updated By: Lakshmi Hegde

Updated on:Apr 28, 2022 | 10:33 AM

ನಟ್ಸ್​ಗಳು ಅಥವಾ ಬಾದಾಮಿ, ಗೋಡಂಬಿ, ವಾಲ್​​ನಟ್​, ಪಿಸ್ತಾ ಮತ್ತಿತರ ಬೀಜಗಳಲ್ಲಿ ಅಪಾರ ಪ್ರಮಾಣದ ನಾರಿನಂಶ ಇರುತ್ತದೆ ಮತ್ತು ನಮ್ಮ ದೇಹಕ್ಕೆ ಅಗತ್ಯವಾದ ವಿವಿಧ ವಿಟಮಿನ್​​ಗಳು, ಖನಿಜಾಂಶಗಳ ಭಂಡಾರ ಆಗಿವೆ ಎಂಬುದರಲ್ಲಿ ಅನುಮಾನವಿಲ್ಲ. ಇಂಥ ನಟ್ಸ್​​ಗಳನ್ನು ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು, ತೂಕ ಹೆಚ್ಚಿಸಿಕೊಳ್ಳುವ ಡಯಟ್​​ಗಳಲ್ಲಿ ಬೇರೆಬೇರೆ ರೀತಿಯಲ್ಲಿ ಬಳಸಲಾಗುತ್ತದೆ. ಬರೀ ಇಷ್ಟೇ ಅಲ್ಲ, ಇವು ಡಯಾಬಿಟಿಸ್​, ಹೃದಯ ಸಮಸ್ಯೆಗಳಂತಹ ದೀರ್ಘಕಾಲಿಕ ರೋಗಗಳನ್ನು ನಿಯಂತ್ರಿಸುವಲ್ಲಿಯೂ  ಪ್ರಮುಖ ಪಾತ್ರ ವಹಿಸುತ್ತವೆ ಎಂದು ಆರೋಗ್ಯ ತಜ್ಞರೂ ಹೇಳುತ್ತಾರೆ.  

ಈ ನಟ್ಸ್​​ಗಳನ್ನು ತಿನ್ನುವುದರಿಂದ ಹಲವು ಬಗೆಯ ಆರೋಗ್ಯ ಪ್ರಯೋಜನಗಳು ಇವೆ. ಹಾಗಂತ ಅಳತೆ ಮೀರಿ ತಿನ್ನುವುದು, ಯಾವ್ಯಾವ ವೇಳೆಯಲ್ಲೋ ತಿನ್ನುವುದು ಸರಿಯಲ್ಲ. ಹೀಗೆ ಮಾಡುವುದರಿಂದ ದೇಹದ ಮೇಲೆ ಅಡ್ಡ ಪರಿಣಾಮಗಳು ಉಂಟಾಗಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರಾದ ಡಾ. ದೀಕ್ಷಾ ಭವ್ಸಾರ್​. ನಟ್ಸ್​​ಗಳನ್ನು ಸರಿಯಾದ ಸಮಯದಲ್ಲಿ, ಹದ ಪ್ರಮಾಣದಲ್ಲಿ ತಿಂದಾಗಲೇ ಅದರ ಪ್ರಯೋಜನ ಆಗುತ್ತದೆ ಎಂಬುದು ಅವರ ಹೇಳಿಕೆ. ನಟ್ಸ್​​ಗಳನ್ನು ಪ್ರತಿದಿನ ತಿನ್ನುವುದು ಒಳ್ಳೆಯದೇ ಆಗಿದೆ.  ಯಾಕೆಂದರೆ ಇದರಲ್ಲಿ ವಿಟಮಿನ್​ ಇ, ಕ್ಯಾಲ್ಸಿಯಂ, ಸೆಲೆನಿಯಮ್​, ಕಾಪರ್​, ಮ್ಯಾಗ್ನಿಸಿಯಂ ಮತ್ತು ರೈಬೋಫ್ಲಾವಿನ್​ಗಳ ಪ್ರಮಾಣ ಅಪಾರವಾಗಿರುತ್ತದೆ. ಅಷ್ಟೇ ಅಲ್ಲ, ಕಬ್ಬಿಣಾಂಶ, ಪೋಟ್ಯಾಷಿಯಂ, ಜಿಂಕ್​, ವಿಟಮಿನ್​ ಬಿ, ನಿಯಾಸಿನ್, ಥಯಾಮಿನ್ ಮತ್ತು ಫೋಲೇಟ್ ಅಂಶವೂ ಹೇರಳವಾಗಿರುತ್ತದೆ. ಹಾಗಾಗಿ ನಿತ್ಯದ ಆಹಾರ ಕ್ರಮದಲ್ಲಿ ನಟ್ಸ್​​ಗಳನ್ನು ಅಳವಡಿಸಿಕೊಳ್ಳಬೇಕು. ಆದರೆ ಅದಕ್ಕೊಂದು ಪದ್ಧತಿಯಿದೆ ಎನ್ನುತ್ತಾರೆ ಡಾ. ದೀಕ್ಷಾ.

ನೀರಿನಲ್ಲಿ ನೆನೆಸುವುದು ಯಾಕೆ?

ಆಯುರ್ವೇದದ ಪ್ರಕಾರ ನಟ್ಸ್​ಗಳು ಅಥವಾ ಬೀಜಗಳು ಯಥೇಚ್ಛವಾಗಿ ಆರೋಗ್ಯಕರ ಕೊಬ್ಬು, ಪ್ರೋಟಿನ್​, ಫೈಬರ್​ನ್ನು ಹೊಂದಿರುವುದರಿಂದ ಜೀರ್ಣಕ್ರಿಯೆಗೆ ಸಮಯ ತೆಗೆದುಕೊಳ್ಳುತ್ತವೆ. ಅಂದರೆ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಇವು ತುಸು ಭಾರ (ಆಯುರ್ವೇದದ ಶಬ್ದದಲ್ಲಿ ಗುರು)ವಾದ ಆಹಾರಗಳು.  ಹಾಗೇ, ಇವುಗಳ ಕಸುವಿನ ಸ್ವಭಾವ ಉಷ್ಣವಾಗಿದ್ದರಿಂದ (ಉಷ್ಣ ವೀರ್ಯ) ಜೀರ್ಣಕ್ರಿಯೆ ವಿಳಂಬವಾಗುತ್ತದೆ. ಹಾಗಾಗಿ ನಟ್ಸ್​​ಗಳನ್ನು ತಿನ್ನುವ ಮೊದಲು 6-8 ತಾಸುಗಳ ಕಾಲ ನೀರಿನಲ್ಲಿ ನೆನೆಸಿಟ್ಟಿಕೊಳ್ಳಬೇಕು. ಹೀಗೆ ನೆನೆಸುವುದರಿಂದ ನಟ್ಸ್​ಗಳಲ್ಲಿರುವ ಉಷ್ಣತೆ ಕಡಿಮೆಯಾಗುತ್ತದೆ. ಅಲ್ಲದೆ,  ಫೈಟಿಕ್ ಆಮ್ಲ / ಟ್ಯಾನಿನ್​​ಗಳ ಅಂಶಗಳು ನಿರ್ಮೂಲನಗೊಳ್ಳುತ್ತವೆ. ಹೀಗಾದಾಗ ನಟ್ಸ್​​ಗಳಲ್ಲಿರುವ ಪೋಶಕಾಂಶಗಳನ್ನು ನಮ್ಮ ದೇಹ ಸುಲಭವಾಗಿ ಹೀರಿಕೊಳ್ಳಬಹುದು ಎಂದು ಡಾ. ದೀಕ್ಷಾ ವಿವರಿಸಿದ್ದಾರೆ. ಒಂದೊಮ್ಮೆ ನಟ್ಸ್​​ಗಳನ್ನು ನೆನೆಸಿ ತಿನ್ನಲು ಇಷ್ಟವಿಲ್ಲ ಎಂದಾದರೆ ಅವುಗಳನ್ನು ಹುರಿದಾದರೂ ( ಡ್ರೈ ರೋಸ್ಟ್​) ತಿನ್ನಬೇಕು. ಸಾಧ್ಯವಾದಷ್ಟು ಕಚ್ಚಾ ನಟ್ಸ್​ ತಿನ್ನಬಾರದು ಎಂಬುದು ಅವರ ಸಲಹೆ.

ಯಾವ ಸಮಯದಲ್ಲಿ ತಿನ್ನಬೇಕು-ಪ್ರಮಾಣ ಎಷ್ಟಿರಬೇಕು?

ಡಾ. ದೀಕ್ಷಾ ಪ್ರಕಾರ, ಸಾಮಾನ್ಯವಾಗಿ ನಟ್ಸ್​ಗಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿಂದರೆ ಉತ್ತಮ ಎಂಬುದನ್ನು ಆಯುರ್ವೇದ ಹೇಳುತ್ತದೆ. ಬೆಳಗ್ಗೆ ತಿನ್ನಬಹುದು. ಇಲ್ಲವೆ, ಮಧ್ಯಾಹ್ನ ಅಥವಾ ಸಂಜೆ ಸ್ನ್ಯಾಕ್ಸ್​ ರೂಪದಲ್ಲಿಯೂ ತಿನ್ನಬಹುದು. ಆದರೆ ಈ ನಟ್ಸ್​​ಗಳು ಸಿಕ್ಕಾಪಟೆ ತಿನ್ನುವಂಥದ್ದಲ್ಲ. ಜೀರ್ಣಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಇಲ್ಲದವರು, ಪ್ರತಿದಿನ ವ್ಯಾಯಾಮ ಮಾಡುವವರು, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವವರು, ಯಾವುದೇ ಕಾಯಿಲೆಗಳು ಇಲ್ಲದೆ ಇರುವವರು ದಿನಕ್ಕೆ ಒಂದು ಔನ್ಸ್​ ಅಥವಾ 28 ಗ್ರಾಂ ಗಳಷ್ಟು ಪ್ರಮಾಣದ ನಟ್ಸ್​ ತಿನ್ನಬಹುದು. ಆದರೆ ಬೇರೆನಾದರೂ ಸಮಸ್ಯೆಯಿದ್ದವರು ವೈದ್ಯರನ್ನು ಸಂಪರ್ಕಿಸಿ ಕೇಳಿಕೊಳ್ಳಬೇಕು.

ಅಡ್ಡಪರಿಣಾಮಗಳೇನು?

ನಟ್ಸ್​ಗಳು ತಿನ್ನಲೂ ಬಲು ರುಚಿ. ಆರೋಗ್ಯಕ್ಕೂ ಒಳ್ಳೆಯದು ಎಂದು ಬೇಕಾಬಿಟ್ಟಿ ತಿನ್ನುವಂತಿಲ್ಲ. ಹೀಗೆ ತಿನ್ನುವುದರಿಂದ ಆರೋಗ್ಯದ ಮೇಲೆ ಕೆಲವು ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಅಜೀರ್ಣ, ಹೊಟ್ಟೆ ಭಾರ, ದೇಹ ಉಷ್ಣವಾಗುವುದು, ಸಿಕ್ಕಾಪಟೆ ತೂಕ ಏರುವುದು, ಹಸಿವಾಗದೆ ಇರುವಂಥ ಸಮಸ್ಯೆಗಳು ಎದುರಾಗಬಹುದು ಎಂದು ಹೇಳಿರುವ ಡಾ. ದೀಕ್ಷಾ, ಯಾರು ನಟ್ಸ್​​ಗಳನ್ನು ತಿನ್ನಲೇಬಾರದು ಎಂಬುದನ್ನೂ ತಿಳಿಸಿದ್ದಾರೆ.  ಕರುಳಿನ ಆರೋಗ್ಯ ಸರಿ ಇಲ್ಲದೆ ಇರುವವರು, ಜೀರ್ಣ ವ್ಯವಸ್ಥೆಯಲ್ಲಿ ತೊಂದರೆ ಇರುವವರು, ಹೊಟ್ಟೆ ಉಬ್ಬರ, ಆಮ್ಲೀಯತೆ, ಅತಿಸಾರ, ನಟ್ಸ್ ಅಲರ್ಜಿ ಇರುವವರು ಬೀಜಗಳನ್ನು ಸೇವಿಸಬಾರದು. ಆರೋಗ್ಯ ಸರಿಯಾದ ಮೇಲೆ ತಿನ್ನಬಹುದು ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: Covid 19: ಕೊವಿಡ್ ಸೋಂಕಿತರಿಗೆ ಭವಿಷ್ಯದಲ್ಲಿ ಅಡ್ಡಪರಿಣಾಮಗಳು ಉಂಟಾಗುತ್ತವೆಯೇ? ಸಂಶೋಧನೆಯಲ್ಲಿ ಮಾಹಿತಿ ಬಹಿರಂಗ

Published On - 8:33 am, Thu, 28 April 22