ಚಳಿಗಾಲದಲ್ಲಿ ಕಾಡುವ ಮಂಡಿನೋವಿನಿಂದ ಮುಕ್ತಿ ಪಡೆಯಲು ಈ ಕ್ರಮಗಳನ್ನು ಅನುಸರಿಸಿ

| Updated By: Pavitra Bhat Jigalemane

Updated on: Dec 22, 2021 | 3:11 PM

ಸಂಧಿವಾತದ ಸಮಸ್ಯೆ ಇರುವವರು ಚಳಿಗಾಲದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಸಹಿಸಲಾರದ ಮಂಡಿನೋವಿಗೆ ನೈಸರ್ಗಿಕ ಕ್ರಮಗಳನ್ನು ಅನುಸರಿಸಿದರೆ ಚಳಿಗಾಲದಲ್ಲಿಯೂ ನೋವಿನಿಂದ ಮುಕ್ತಿ ಪಡೆಯಬಹುದು.

ಚಳಿಗಾಲದಲ್ಲಿ ಕಾಡುವ ಮಂಡಿನೋವಿನಿಂದ ಮುಕ್ತಿ ಪಡೆಯಲು ಈ ಕ್ರಮಗಳನ್ನು ಅನುಸರಿಸಿ
ಸಾಂಕೇತಿಕ ಚಿತ್ರ
Follow us on

ಚಳಿಗಾಲದಲ್ಲಿ ದೇಹದಲ್ಲಿನ ಅನಾರೋಗ್ಯ ಸಮಸ್ಯೆಗಳು ತಲೆಯೆತ್ತುತ್ತವೆ. ಮಂಡಿನೋವು, ಸಂಧಿವಾತ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಉಲ್ಬಣಗೊಳುತ್ತವೆ. ಮಂಡಿನೋವು ಚಳಿಗಾಲದಲ್ಲಿ ಕಾಡುವ ದೊಡ್ಡ ಸಮಸ್ಯೆಯಾಗಿದೆ. ಮೈ ನಡುಗುವ ಚಳಿಗೆ ಕಾಲಿನ ಗಂಟು ಇನ್ನಷ್ಟು ನೋವನ್ನು ನೀಡುತ್ತದೆ. ಹೀಗಾಗಿ ಸಂಧಿವಾತದ ಸಮಸ್ಯೆ ಇರುವವರು ಚಳಿಗಾಲದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಸಹಿಸಲಾರದ ಮಂಡಿನೋವಿಗೆ ನೈಸರ್ಗಿಕ ಕ್ರಮಗಳನ್ನು ಅನುಸರಿಸಿದರೆ ಚಳಿಗಾಲದಲ್ಲಿಯೂ ನೋವಿನಿಂದ ಮುಕ್ತಿ ಪಡೆಯಬಹುದು. ಈ ಕ್ರಮಗಳನ್ನು ಅನುಸರಿಸಿದರೆ ಚಳಿಗಾಲದಲ್ಲಿ ಕಾಡುವ ಮಂಡಿನೋವಿಗೆ ಪರಿಹಾರ ಕಂಡುಕೊಳ್ಳಬಹುದು.

ಆರೋಗ್ಯಕರ ಮೈತೂಕ ಕಾಪಾಡಿಕೊಳ್ಳುವುದು
ನಿಮ್ಮ ದೇಹದ ಅತಿಯಾದ ತೂಕ ನಿಮ್ಮ ಮಂಡಿನೋವಿನ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ಹೀಗಾಗಿ ಸದಾಕಾಲ ದೇಹದ ತೂಕವನ್ನು ಸರಿಯಾದ ಪ್ರಮಾಣದಲ್ಲಿ ಕಾಪಾಡಿಕೊಳ್ಳುವತ್ತ ಗಮನಹರಿಸಿ. ಚಳಿಯೆಂದು ಮೈಮರೆತು ಫಾಸ್ಟ್​ಫುಡ್​, ಸಿಹಿ ಪದಾರ್ಥವನ್ನು ಅತಿಯಾಗಿ ಸೇವಿಸಬೇಡಿ. ಇದು ನಿಮ್ಮ ದೇಹದ ತೂಕ ಹೆಚ್ಚಿಸಿ ಮಂಡಿಯ ಮೇಲೆ ಭಾರವನ್ನು ಅಧಿಕಗೊಳಿಸುತ್ತದೆ. ಇದರಿಂದ ಚಳಿಗೆ ನೋವು ಅತಿಯೆನಿಸಿ ಹಿಂಸೆ ನೀಡಬಹುದು.

ವಿಟಮಿನ್​ ಡಿ ಪೂರೈಸಿ
ದೇಹದ ಸ್ನಾಯುಗಳ ಬಲವರ್ಧನೆಗೆ ವಿಟಮಿನ್​ ಡಿ ಅವಶ್ಯಕವಾಗಿದೆ. ವಿಟಮಿನ್​ ಡಿ ಸೂರ್ಯನ ಕಿರಣಗಳಿಂದ ಹೆಚ್ಚು ಸಿಗುವ ಕಾರಣ ಬೆಳಗ್ಗಿನ ಎಳೆ ಕಿರಣಗಳಿಗೆ ನಿಮ್ಮ ದೇಹವನ್ನು ಒಡ್ಡಿಕೊಳ್ಳಿ. ಇದರಿಂದ ನಿಮ್ಮ ದೇಹದ ಭಾಗಗಳು ಬಲವಾಗುತ್ತದೆ. ಮೂಳೆಗಳ ಬೆಳವಣಿಗೆಗೂ ಉತ್ತಮವಾಗುವುದರಿಂದ ಆದಷ್ಟು ಬೆಳಗ್ಗೆ 9 ಗಂಟೆಯೊಳಗಿನ ಬಿಸಿಲಿನಲ್ಲಿ ಓಡಾಡಿ.

ನಿಯಮಿತ ವ್ಯಾಯಾಮ
ನಿಯಮಿತ ವ್ಯಾಯಾಮ ನಿಮ್ಮ ದೇಹವನ್ನು ಆರೋಗ್ಯಯುತವಾಗಿಡುವಂತೆ ಮಾಡುತ್ತದೆ. ಹೀಗಾಗಿ ಸರಳ ಆಸನಗಳನ್ನಾದರೂ ಮಾಡಿ. ಆದರೆ ನಿಮ್ಮ ಮಂಡಿಗೆ ಆರಾಮ ಎನಿಸುವ ಯೋಗಾಸನಗಳನ್ನು ರೂಡಿಸಿಕೊಳ್ಳಿ. ಇದರಿಂದ ನಿಮ್ಮ ದೇಹದಲ್ಲಿರುವ ಅತಿಯಾದ ಬೊಜ್ಜು ಹಾಗೂ ಕೊಬ್ಬಿನ ಅಂಶ ಕರಗಿ ಮಂಡಿನೋವು ಬರದಂತೆ ತಡೆಯುತ್ತದೆ.

ಥೆರಪಿ ಪಡೆದುಕೊಳ್ಳಿ
ಮಂಡಿನೋವು ಚಳಿಗಾಲದಲ್ಲಿ ಅತಿಯಾಗಿ ಕಾಡುವುದು ಸಾಮಾನ್ಯ ಹೀಗಾಗಿ ನೀವು ಥೆರಪಿಯನ್ನು ಪಡೆದುಕೊಳ್ಳಬಹುದು. ಬಿಸಿ ಎಣ್ಣೆಯ ಮಸಾಜ್​, ಬಿಸಿ ನೀರಿನ ಶಾಖ, ಆಯರ್ವೇದ ಚಿಕಿತ್ಸೆ, ಆಕ್ಯೂಪಂಕ್ಚರ್ ಗಳಂತಹ ಥೆರಪಿಯನ್ನು ಪಡೆದುಕೊಳ್ಳಬಹುದು.

ಗ್ರೀನ್​ ಟೀ ಸೇವಿಸಿ
ಗ್ರೀನ್​ ಟೀ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿರಿಸಲು ಸಹಾಯ ಮಾಡುತ್ತದೆ. ಇದರಿಂದ ಮಂಡಿನೋವಿನಂತಹ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಗ್ರೀನ್​ ಟೀ ಕಾರ್ಟಿಲೇಜ್​ ಮತ್ತಷ್ಟು ಹದಗೆಡುವುದನ್ನು ತಡೆಗಟ್ಟಿ ಮಂಡಿಯ ಸ್ವಾಸ್ಥ್ಯವನ್ನು ಕಾಪಾಡುತ್ತದೆ.

ಆಹಾರದ ಆಯ್ಕೆ ಬಗ್ಗೆ ಗಮನವಿರಲಿ
ಬಾಯಿಗೆ ರುಚಿ ಎಂದು ತಿನ್ನುವ ಕೆಲವು ಆಹಾರಗಳು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆ. ನಿಮ್ಮ ಮಂಡಿಗಳಲ್ಲಿ ಊತ ಕಾಣಿಸಿಕೊಂಡು ನೋವು ಅತಿಯಾಗಲು ಎಡೆಮಾಡಿಕೊಡಬಹುದು. ಹೀಗಾಗಿ ಚಳಿಗಾಲದಲ್ಲಿ ಆಹಾರದ ಆಯ್ಕೆ ಬಗ್ಗೆ ಎಚ್ಚರವಿರಲಿ. ಅತಿಯಾದ ಸಕ್ಕರೆ ಅಂಶವಿರುವ ಸಿಹಿ ಪದಾರ್ಥ, ಮಟನ್​ ಅಥವಾ ಚಿಕನ್​ಗಳ ಬಳಕೆ ಕಡಿಮೆಯಿರಲಿ.

ಇದನ್ನೂ ಓದಿ:

Brinjal Benefits: ಬದನೆಕಾಯಿ ಸೇವಿಸುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ಒಮ್ಮೆ ಗಮನಿಸಿ