ಹಣ್ಣುಗಳ ರಾಜ ಮಾವು ಈಗ ಮಾರುಕಟ್ಟೆಯಲ್ಲಿ ನಳನಳಿಸುತ್ತಿದೆ. ಮಾವಿನ ಹಣ್ಣು ತಿಂದ ನಂತರ ಗೊರಟೆಗಳನ್ನು (Mango Seed) ಕಸವೆಂದು ಬಿಸಾಡದೆ ಈ ರೀತಿ ಉಪಯೋಗಿಸಿ (Health benefits of Mango Seed).
* ಮಾವಿನ ಗೊರಟೆಗಳನ್ನು ( ಗುಟ್ಟಲಿ) ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು.
* ಗೊರಟೆಯಯೊಳಗಿನ ಬೀಜಗಳನ್ನು ಬೇರ್ಪಡಿಸಿಕೊಂಡು, ಕುದಿಯುವ ನೀರಿಗೆ ಸ್ವಲ್ಪ ಉಪ್ಪು ಹಾಕಿ ಬೇಯಿಸಿ, ನಂತರ ಮೇಲಿನ ಕಪ್ಪು ಸಿಪ್ಪೆಯನ್ನು ತೆಗೆದು ನೆರಳಲ್ಲಿ ಒಣಗಿಸಿ.
* ಈ ಬೀಜಗಳನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಕತ್ತರಿಸಿ, ಕತ್ತರಿಸಿದ ಚೂರುಗಳನ್ನು ಸ್ವಲ್ಪ ತುಪ್ಪ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
* ಹುರಿದ ಈ ಚೂರುಗಳಿಗೆ ಕರಿ ಉಪ್ಪು ಸೇರಿಸಿ.
* ಊಟದ ನಂತರ ಒಂದಿಷ್ಟು ಚೂರುಗಳನ್ನು ತಿಂದರೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ.
* ಈ ಬೀಜಗಳನ್ನು ಕೊಬ್ಬರಿ ಎಣ್ಣೆ ಅಥವಾ ಸಾಸಿವೆ ಎಣ್ಣೆಯಲ್ಲಿ ಕುದಿಸಿ ಶೋಧಿಸಿ ಇಟ್ಟುಕೊಳ್ಳಿ. ಈ ಎಣ್ಣೆಯನ್ನು ಉಪಯೋಗಿಸಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಕೂದಲಿಗೆ ಹೊಳಪು ಬರುತ್ತದೆ.
* ಬೀಜಗಳ ಪೌಡರ್ 10 ಗ್ರಾಂ ನಷ್ಟು ಬೆಳಿಗ್ಗೆ ಮೊಸರಿನಲ್ಲಿ ತೆಗೆದುಕೊಂಡರೆ ಅತಿಸಾರ ಭೇದಿ ಕಡಿಮೆಯಾಗುತ್ತದೆ.
* ಚಿಕ್ಕ ಮಕ್ಕಳ ಭೇದಿ ತಡೆಗಟ್ಟಲು ಹುರಿದ ಪೌಡರ್ 05 ಗ್ರಾಂ ನಷ್ಟು ಜೇನುತುಪ್ಪ ಸೇರಿಸಿ ಕೊಡಬಹುದು.
* ಹೊಟ್ಟೆ ನೋವಿಗೆ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.
* ಹುರಿದ ಬೀಜಗಳ ಚೂರುಗಳ ಸೇವನೆ ಮಧುಮೇಹಿಗಳಿಗೆ ಕೂಡ ಉತ್ತಮ.
* ಒಂದು ಬಾರಿಗೆ 5 ಗ್ರಾಂ ನಷ್ಟು ಉಪಯೋಗಿಸಬಹುದು.
* ತುಪ್ಪದಲ್ಲಿ ಹುರಿದ ಚೂರುಗಳಿಗೆ ಸಿಹಿ ಬೇಕಾದರೆ ಜೇಷ್ಠ ಮಧು ಪೌಡರ್ ಉಪಯೋಗಿಸಬಹುದು.
* ಒಣಗಿದ ಮಾವಿನ ಎಲೆಗಳು ಮತ್ತು ಈ ಬೀಜಗಳನ್ನು ಸೇರಿಸಿ ನಯವಾದ ಪುಡಿ ಮಾಡಿ ಸೋಸಿಕೊಳ್ಳಿ. ಈ ಪುಡಿಯಿಂದ ಹಲ್ಲು ಉಜ್ಜಿದರೆ ವಸಡುಗಳು ಗಟ್ಟಿಯಾಗಿ ಹಲ್ಲುಗಳು ಕೂಡ ಸ್ವಚ್ಛವಾಗಿ, ಬಾಯಿಯ ದುರ್ಗಂಧ ಕೂಡ ದೂರವಾಗುತ್ತದೆ.
* ಸಂಗ್ರಹಿಸಿದ ವಿವಿಧ ಜಾತಿಯ ಮಾವಿನ ಗೊರಟೆಗಳಿಂದ ಮಾವಿನ ಸಸಿಗಳನ್ನು ಕೂಡ ತಯಾರಿಸಬಹುದು.
(ಮಾಹಿತಿ ಲೇಖನ -ಎಸ್ ಹೆಚ್ ನದಾಫ್)