ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೀರಾ? ಈ 4 ವಿಷಯಗಳನ್ನು ತಿಳಿದುಕೊಳ್ಳಿ!
ವಿಟಮಿನ್ ಮಾತ್ರೆಗಳು ಮತ್ತು ಆರೋಗ್ಯ ಪೂರಕಗಳನ್ನು ಸೇವಿಸುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬರಿಗೂ ಇವುಗಳ ಅಗತ್ಯವಿರುವುದಿಲ್ಲ. ಪೋಷಕಾಂಶಗಳ ಕೊರತೆ, ಸರಿಯಾದ ಪ್ರಮಾಣ, ಔಷಧಿಗಳೊಂದಿಗೆ ಉಂಟಾಗುವ ಪ್ರತಿಕ್ರಿಯೆ ಹಾಗೂ ಆರೋಗ್ಯದ ಸ್ಥಿತಿಯನ್ನು ಗಮನಿಸಬೇಕು. ವೈದ್ಯರ ಸಲಹೆಯಿಲ್ಲದೆ ಮಾತ್ರೆಗಳನ್ನು ಆರಂಭಿಸುವುದು ಅಪಾಯಕಾರಿ. ಸಮತೋಲಿತ ಆಹಾರಕ್ಕೆ ಮೊದಲ ಆದ್ಯತೆ ನೀಡುವುದು ಉತ್ತಮ.

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅನೇಕರು ವಿಟಮಿನ್ ಮಾತ್ರೆಗಳು ಮತ್ತು ಆರೋಗ್ಯ ಪೂರಕಗಳನ್ನು ಸೇವಿಸುತ್ತಿದ್ದಾರೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗಲಿ ಎಂಬ ಉದ್ದೇಶದಿಂದ ಮಲ್ಟಿವಿಟಮಿನ್, ವಿಟಮಿನ್ ಡಿ, ಕ್ಯಾಲ್ಸಿಯಂ, ಕಬ್ಬಿಣಾಂಶ ಸೇರಿದಂತೆ ವಿವಿಧ ಮಾತ್ರೆಗಳನ್ನು ಬಳಸುತ್ತಾರೆ. ಆದರೆ ಪ್ರತಿಯೊಬ್ಬರಿಗೂ ಆರೋಗ್ಯ ಪೂರಕಗಳ ಅಗತ್ಯವಿರುವುದಿಲ್ಲ. ಆಹಾರ ಪದ್ಧತಿ, ದೇಹದಲ್ಲಿನ ಪೋಷಕಾಂಶಗಳ ಪ್ರಮಾಣ ಮತ್ತು ಆರೋಗ್ಯದ ಸ್ಥಿತಿಯನ್ನು ಆಧರಿಸಿ ಅವುಗಳ ಅವಶ್ಯಕತೆ ನಿರ್ಧಾರವಾಗುತ್ತದೆ. ಹೀಗಾಗಿ ಮಾತ್ರೆಗಳನ್ನು ಆರಂಭಿಸುವ ಮುನ್ನ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಯಾವ ಕಾರಣಕ್ಕಾಗಿ ಮಾತ್ರೆ ಸೇವಿಸುತ್ತಿದ್ದೀರಿ?
ಮೊದಲು ಯಾವ ಪೋಷಕಾಂಶದ ಕೊರತೆಯನ್ನು ಸರಿಪಡಿಸಲು ಮಾತ್ರೆ ತೆಗೆದುಕೊಳ್ಳುತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳಬೇಕು. ಉದಾಹರಣೆಗೆ, ದೇಹದಲ್ಲಿ ವಿಟಮಿನ್ ಡಿ ಕೊರತೆಯಿದ್ದರೆ ವೈದ್ಯರ ಸಲಹೆಯಂತೆ ಅದರ ಪೂರಕಗಳನ್ನು ಸೇವಿಸಬಹುದು. ಅದೇ ರೀತಿ ಕಬ್ಬಿಣಾಂಶದ ಕೊರತೆಯಿದ್ದರೆ ಕಬ್ಬಿಣದ ಮಾತ್ರೆಗಳು ಅಗತ್ಯವಾಗಬಹುದು. ಯಾವುದೇ ಕೊರತೆಯಿಲ್ಲದೆ ಸುಮ್ಮನೆ ಆರೋಗ್ಯ ಚೆನ್ನಾಗಿರಲಿ ಎಂಬ ಕಾರಣಕ್ಕೆ ಎಲ್ಲ ರೀತಿಯ ಮಾತ್ರೆಗಳನ್ನು ಸೇವಿಸುವುದು ಸರಿಯಾದ ಕ್ರಮವಲ್ಲ.
ನಿಜವಾಗಿಯೂ ನಿಮಗೆ ಅವುಗಳ ಅಗತ್ಯವಿದೆಯೇ?
ನಿಮ್ಮ ದೈನಂದಿನ ಆಹಾರದಲ್ಲಿ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಅಗತ್ಯವಿದ್ದರೆ ವೈದ್ಯರ ಸಲಹೆಯಂತೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬಹುದು. ಸುಸ್ತು, ಆಯಾಸ ಅಥವಾ ನಿಶ್ಶಕ್ತಿ ಕಾಣಿಸಿಕೊಂಡ ತಕ್ಷಣ ಮಲ್ಟಿವಿಟಮಿನ್ ಮಾತ್ರೆಗಳನ್ನು ಸೇವಿಸಬಾರದು. ನಿದ್ರೆಯ ಕೊರತೆ, ರಕ್ತಹೀನತೆ, ಥೈರಾಯ್ಡ್ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ಆಯಾಸ ಉಂಟಾಗಬಹುದು. ಮೊದಲು ನಿಖರವಾದ ಕಾರಣ ತಿಳಿದುಕೊಳ್ಳಬೇಕು.
ಇದನ್ನೂ ಓದಿ: ಫೈಬರ್ ಅಂಶದ ಕೊರತೆ ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವೇ? ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಿ
ಸರಿಯಾದ ಪ್ರಮಾಣದಲ್ಲಿ ಮಾತ್ರ ಸೇವಿಸಿ
ವಿಟಮಿನ್ ಮಾತ್ರೆಗಳನ್ನು ಹೆಚ್ಚು ಸೇವಿಸಿದರೆ ಹೆಚ್ಚಿನ ಪ್ರಯೋಜನ ಸಿಗುತ್ತದೆ ಎಂಬುದು ತಪ್ಪು ಕಲ್ಪನೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯದ ಮೇಲೆ ಅಡ್ಡಪರಿಣಾಮಗಳು ಉಂಟಾಗಬಹುದು. ವಿಶೇಷವಾಗಿ ವಿಟಮಿನ್ ಎ, ಡಿ, ಇ ಮತ್ತು ಕೆ ಕೊಬ್ಬಿನಲ್ಲಿ ಕರಗುವ ಜೀವಸತ್ವಗಳಾಗಿದ್ದು, ದೇಹದಲ್ಲಿ ಸಂಗ್ರಹವಾಗಬಹುದು. ಇವುಗಳನ್ನು ಅತಿಯಾಗಿ ಸೇವಿಸುವುದು ಅಪಾಯಕಾರಿ. ಒಂದಕ್ಕಿಂತ ಹೆಚ್ಚು ಪೂರಕಗಳನ್ನು ಬಳಸುವಾಗ ಒಂದೇ ಪೋಷಕಾಂಶ ಎರಡು ಬಾರಿ ಸೇರುತ್ತಿದೆಯೇ ಎಂಬುದನ್ನೂ ಗಮನಿಸಬೇಕು.
ನಿಮ್ಮ ಆರೋಗ್ಯಕ್ಕೆ ಸುರಕ್ಷಿತವೇ?
ಈಗಾಗಲೇ ಔಷಧಿಗಳನ್ನು ಸೇವಿಸುತ್ತಿರುವವರು ವೈದ್ಯರ ಸಲಹೆಯಿಲ್ಲದೆ ಯಾವುದೇ ಆರೋಗ್ಯ ಪೂರಕಗಳನ್ನು ಆರಂಭಿಸಬಾರದು. ಕೆಲವು ಪೂರಕಗಳು ಔಷಧಿಗಳೊಂದಿಗೆ ಪ್ರತಿಕ್ರಿಯೆ ಉಂಟುಮಾಡಬಹುದು. ವಿಶೇಷವಾಗಿ ಮೂತ್ರಪಿಂಡ ಅಥವಾ ಯಕೃತ್ತಿನ ಸಮಸ್ಯೆ ಇರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ವೃದ್ಧರು ಕೂಡ ವೈದ್ಯರ ಮಾರ್ಗದರ್ಶನ ಪಡೆಯಬೇಕು.
ಸಮತೋಲಿತ ಆಹಾರಕ್ಕೆ ಮೊದಲ ಆದ್ಯತೆ ನೀಡಿ
ಆರೋಗ್ಯ ಪೂರಕಗಳಿಗಿಂತ ನೈಸರ್ಗಿಕ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಹಸಿರು ಸೊಪ್ಪುಗಳು, ತರಕಾರಿಗಳು, ಹಣ್ಣುಗಳು, ಬೇಳೆಕಾಳುಗಳು, ಹಾಲು, ಮೊಟ್ಟೆ ಮತ್ತು ಒಣಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಆರೋಗ್ಯ ಪೂರಕಗಳು ಸಮತೋಲಿತ ಆಹಾರಕ್ಕೆ ಪರ್ಯಾಯವಲ್ಲ. ಅಗತ್ಯವಿದ್ದಾಗ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಮಾತ್ರ ಬಳಸಬೇಕು. ಒಟ್ಟಿನಲ್ಲಿ, ವಿಟಮಿನ್ ಮಾತ್ರೆಗಳನ್ನು ಸೇವಿಸುವ ಮೊದಲು ಅವುಗಳ ಅವಶ್ಯಕತೆ, ಪ್ರಮಾಣ ಮತ್ತು ಸುರಕ್ಷತೆಯನ್ನು ತಿಳಿದುಕೊಳ್ಳುವುದು ಮುಖ್ಯ. ವೈದ್ಯರ ಸಲಹೆಯಂತೆ ಮಾತ್ರ ಆರೋಗ್ಯ ಪೂರಕಗಳನ್ನು ಬಳಸುವ ಮೂಲಕ ಅನಗತ್ಯ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




