ಚಿತ್ರಾನ್ನ ತಿನ್ನುವುದಕ್ಕಿಂತ ಪೋಹಾ ಅಂದರೆ ಅವಲಕ್ಕಿ ಬಾತ್ ತಿನ್ನುವುದು ಉತ್ತಮ: ಇದಕ್ಕೆ 5 ಕಾರಣಗಳು ಇಲ್ಲಿವೆ
Poha: 100 ಗ್ರಾಂ ಕಚ್ಚಾ ಅವಲಕ್ಕಿಯಲ್ಲಿ 70 ಗ್ರಾಂ ಆರೋಗ್ಯಕರ ಕಾರ್ಬೋಹೈಡ್ರೇಟ್ ಇರುತ್ತದೆ. ಇದು ಅಕ್ಕಿಗಿಂತ ಭಿನ್ನ. ಅವಲಕ್ಕಿಯನ್ನು ಪಾಲಿಶ್ ಮಾಡಿರುವುದಿಲ್ಲ. ಅವಲಕ್ಕಿಯಲ್ಲಿ ಹೆಚ್ಚು ಫೈಬರ್ ಅಂಶ ಇರುವ ಕಾರಣ ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಏರುವುದಿಲ್ಲ. ಹೆಚ್ಚುವರಿಯಾಗಿ ಬೋನಸ್ ಅಂಶವೆಂದರೆ ಅವಲಕ್ಕಿ ಗ್ಲುಟನ್-ಮುಕ್ತವಾಗಿದೆ!
ಚಿತ್ರಾನ್ನಕ್ಕಿಂತ ಅವಲಕ್ಕಿ ಬಾತ್ ಆರೋಗ್ಯಕ್ಕೆ ಒಳ್ಳೆಯದು: ಇಲ್ಲಿದೆ ಮಹತ್ವದ ಮಾಹಿತಿ
Follow us on
ಚಿತ್ರಾನ್ನ ಚಿತ್ರಾನ್ನ… ಇದು ನಿಜಕ್ಕೂ ಮಧ್ಯಮವರ್ಗದ ಬಹು ಸ್ವಾದಿಷ್ಟ ತಿಂಡಿಯೇ ಸರಿ. ಚಿತ್ರಾನ್ನ ಎಂಬುದು ಬಹುತೇಕರ ಬಾಳಿನಲ್ಲಿ ಅನೇಕ ಸುಮಧುರ ಕತೆಗಳನ್ನು ಹೇಳುವಂತಹ ತಿಂಡಿ. ಅಷ್ಟಕ್ಕೂ ಚಿತ್ರಾನ್ನ ತಿನ್ನದವರು ಯಾರಾದರೂ ಈ ಭೂಮಿಯ ಮೇಲೆ ಇದ್ದಾರೆಯೇ!? ಈ ಪ್ರಶ್ನೆ ಎದುರಾದಾಗ ಸಹಜವಾಗಿಯೇ ಒಂಚೂರು ಹಿಂದೇಟು ಹಾಕಬೇಕಾಗುತ್ತದೆ. ಏಕೆಂದರೆ ಚಿತ್ರಾನ್ನ ತಿನ್ನದವರು ಯಾರೂ ಇಲ್ಲ. ಆದರೆ ಚಿತ್ರಾನ್ನ ಬೇಡ ಎನ್ನುವವರು ಇದ್ದಾರೆ. ಏಕೆಂದರೆ ಅದು ಆರೋಗ್ಯದ ದೃಷ್ಟಿಯಿಂದ ಅಷ್ಟೊಂದು ಹಿತಕರವಲ್ಲ ಎಂಬುದಾಗಿದೆ. ಹಾಗಾದರೆ ಅದಕ್ಕೆ ಪರ್ಯಾಯವಾದ ತಿಂಡಿ ಯಾವುದು ಎಂಬ ಪ್ರಶ್ನೆ ಎದುರಾದಾಗ ಬಹುತೇಕ ಚಿತ್ರಾನ್ನವನ್ನೇ ಹೋಲುವ ಮತ್ತೊಂದು ಸ್ವಾದಿಷ್ಟ ತಿಂಡಿ… ಅವಲಕ್ಕಿ ಬಾತ್ ಕಣ್ಣಿಗೆ ರಾಚುತ್ತದೆ. ಹೌದು ಅವಲಕ್ಕಿ ಬಾತ್ ಎಂಬುದು ಚಿತ್ರಾನ್ನಕ್ಕೆ ಪರ್ಯಾಯವಷ್ಟೇ ಅಲ್ಲ. ಆರೋಗ್ಯದ ದೃಷ್ಟಿಯಿಂದ ಚಿತ್ರಾನ್ನಕ್ಕಿಂತ ಅವಲಕ್ಕಿ ಬಾತ್ ಒಳ್ಳೆಯದು ಎನ್ನಲಾಗುತ್ತದೆ. ಈ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ:
ಫೈಬರ್ ಯುಕ್ತ ಮತ್ತು ಆರೋಗ್ಯಕರ ಕಾರ್ಬೋಹೈಡ್ರೇಟ್ ಗಳ ಮೂಲ: 100 ಗ್ರಾಂ ಕಚ್ಚಾ ಅವಲಕ್ಕಿಯಲ್ಲಿ 70 ಗ್ರಾಂ ಆರೋಗ್ಯಕರ ಕಾರ್ಬೋಹೈಡ್ರೇಟ್ ಇರುತ್ತದೆ. ಇದು ಅಕ್ಕಿಗಿಂತ ಭಿನ್ನ. ಅವಲಕ್ಕಿಯನ್ನು (ಪೋಹಾ Poha) ಪಾಲಿಶ್ ಮಾಡಿರುವುದಿಲ್ಲ. 100 ಗ್ರಾಂ ಅವಲಕ್ಕಿ ಸೇವನೆಯಲ್ಲಿ 2-4 ಗ್ರಾಂ ಫೈಬರ್ ಇರುತ್ತದೆ. ಅವಲಕ್ಕಿಯಲ್ಲಿ ಹೆಚ್ಚು ಫೈಬರ್ ಅಂಶ ಇರುವ ಕಾರಣ ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಏರುವುದಿಲ್ಲ. ಜೊತೆಗೆ ಇದು ನಿಮ್ಮನ್ನು ಹೆಚ್ಚು ಕಾಲ ಹೊಟ್ಟೆ ತುಂಬಿದಂತೆ ಇಡಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ ಬೋನಸ್ ಅಂಶವೆಂದರೆ ಅವಲಕ್ಕಿ ಗ್ಲುಟನ್-ಮುಕ್ತವಾಗಿದೆ (Gluten Free)!
ಕಬ್ಬಿಣಾಂಶ ಭರಿತ ಅವಲಕ್ಕಿ: ಉಬ್ಬಿದ ಅಕ್ಕಿಯನ್ನು ಚಪ್ಪಟೆಯಾದ ಅವಲಕ್ಕಿ ಅಥವಾ ಪೋಹಾ ರೂಪಿಸಲು ಸಂಸ್ಕರಿಸಿದಾಗ, ಅದರಲ್ಲಿರುವ ಕಬ್ಬಿಣಾಂಶವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹಾಗಾಗಿ ರಕ್ತಹೀನತೆಯಿಂದ ಬಳಲುತ್ತಿರುವವರು ಅವಲಕ್ಕಿ ಬಳಕೆಗೆ ಮುಂದಾಗಬಹುದು. ಈ ತಿಂಡಿಯಲ್ಲಿ ಕಬ್ಬಿಣಾಂಶ ಹೆಚ್ಚಿದ್ದು, ಇದನ್ನು ಪ್ರತಿದಿನ ತಿಂದರೆ ಯಾವತ್ತೂ ಕಬ್ಬಿಣಾಂಶದ ಕೊರತೆ ಕಾಡುವುದಿಲ್ಲ. ಅದರ ಆರೋಗ್ಯ ಪ್ರಯೋಜನಗಳನ್ನು ಇನ್ನಷ್ಟು ಹೆಚ್ಚಿಸಲು ಅದರ ಮೇಲೆ ಸ್ವಲ್ಪ ನಿಂಬೆ ರಸವನ್ನು ಹಿಂಡಿ, ಏಕೆಂದರೆ ಇದು ನಿಮ್ಮ ದೇಹದ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಅವಲಕ್ಕಿ ಹೊಟ್ಟೆಯನ್ನು ಹಗುರವಾಗಿಡುತ್ತದೆ: ಜೀರ್ಣಿಸಿಕೊಳ್ಳಲು ಸುಲಭವಾದ ಅವಲಕ್ಕಿ ಹೊಟ್ಟೆಯನ್ನು ಹಗುರವಾಗಿಡುತ್ತದೆ. ಜೀರ್ಣಿಸಿಕೊಳ್ಳಲು ಹಗುರವಾಗಿರುತ್ತದೆ. ಹಾಗಾಗಿ ಹೆಚ್ಚು ಚಿಂತಿಸದೆ ಅವಲಕ್ಕಿಯನ್ನು ಹೊಟ್ಟೆಗೆ ತುಂಬಿಸಿ. ಇದು ನಿಮಗೆ ದಪ್ಪವಾಗಲು ಬಿಡುವುದಿಲ್ಲ. ಪೋಹಾ ತಿನ್ನಲು ಬೆಳಗ್ಗೆ-ಮಧ್ಯಾಹ್ನ-ಸಂಜೆ ಅಂತೇನೂ ಇಲ್ಲ. ಯಾವಾಗ ಬೇಕಾದರೂ ಅವಲಕ್ಕಿ ತಿನ್ನಬಹುದು. ಇದಲ್ಲದೆ, ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ, ಹಾಗಾಗಿ ದೇಹದ ತೂಕ ಇಳಿಸಲು ಇದು ಅತ್ಯುತ್ತಮ ತಿಂಡಿಯಾಗಿದೆ!
ಅವಲಕ್ಕಿಯಲ್ಲಿದೆ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಸಮೃದ್ಧ ಖನಿಜಗಳು: ಅವಲಕ್ಕಿ ಬಾತ್ನಲ್ಲಿ ಈರುಳ್ಳಿ, ಟೊಮ್ಯಾಟೊ ಮುಂತಾದ ತರಕಾರಿಗಳಿವೆ. ಇವೆಲ್ಲವೂ ವಿಟಮಿನ್‌ಗಳು ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳ ಅತ್ಯುತ್ತಮ ಮೂಲಗಳಾಗಿವೆ. ನಿಂಬೆ, ಹಸಿರು ಮೆಣಸಿನಕಾಯಿ ಇತ್ಯಾದಿಗಳು ವಿಟಮಿನ್ ಸಿ ಯನ್ನು ಪೂರೈಸುತ್ತವೆ!
ಇದು ಪ್ರೋಬಯಾಟಿಕ್ ಆಹಾರ: ಅವಲಕ್ಕಿ ಕೂಡ ಉತ್ತಮ ಪ್ರೋಬಯಾಟಿಕ್ (probiotic) ತಿಂಡಿಯಾಗಿದೆ. ಇದು ಕೆಲವರಿಗೆ ಆಶ್ಚರ್ಯವಾಗಬಹುದು. ಭತ್ತವನ್ನು ಬೇಯಿಸಿ ನಂತರ ಬಿಸಿಲಿನಲ್ಲಿ ಕೆಲವು ಗಂಟೆಗಳ ಕಾಲ ಒಣಗಿಸಿ, ಬಳಿಕ ಅವಲಕ್ಕಿವನ್ನು ಸಿದ್ಧಪಡಿಸುವುದು ಇದಕ್ಕೆ ಕಾರಣ. ಒಣಗಿದ ವಸ್ತುವನ್ನು ನಂತರ ಚಪ್ಪಟೆಯಾಗಿ ಬಡಿದು ಅವಲಕ್ಕಿಯನ್ನು ರೂಪಿಸಲಾಗುತ್ತದೆ. ಪೂರ್ಣಗೊಂಡ ಅವಲಕ್ಕಿ ಹುದುಗಿಸಿದ್ದರ ಕಾರಣವಾಗಿ, ಭಾಗಶಃ ಜೀರ್ಣವಾಗುವ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳನ್ನು ಸಂರಕ್ಷಿಸಲಾಗಿದೆ. ಇದು ಕರುಳಿಗೆ ಪ್ರಯೋಜನಕಾರಿಯಾಗಿದೆ.
ಕಚ್ಚಾ ಅವಲಕ್ಕಿಯಲ್ಲಿ ಶೂನ್ಯ ಪ್ರಮಾಣದ ಸಕ್ಕರೆ ಮತ್ತು ಶೂನ್ಯ ಕೊಬ್ಬಿನಾಂಶ ಇರುತ್ತದೆ. ನೀವು ತರಕಾರಿಗಳನ್ನು ಸೇರಿಸಿ ಮತ್ತು ಸ್ವಲ್ಪವೇ ಫ್ರೈ ಮಾಡಿದರೂ ಅವಲಕ್ಕಿಯಲ್ಲಿ ಕೊಬ್ಬಿನಾಂಶ ಹೆಚ್ಚಳವಾಗುವುದಿಲ್ಲ. ಅವಲಕ್ಕಿ ತಿಂಡಿ ಮಾಡುವಾಗ ನೀವು ಸರಿಯಾದ ಅಡುಗೆ ಎಣ್ಣೆ ಬಳಸುವುದು ಮುಖ್ಯವಾಗುತ್ತದೆ. ಪೋಹಾವನ್ನು ಹೆಚ್ಚು ಸ್ವಾದಿಷ್ಟ ಮತ್ತು ವರ್ಣರಂಜಿತವಾಗಿ ಮಾಡುವ ಮೂಲಕ ಮತ್ತಷ್ಟು ಆರೋಗ್ಯಕರವಾಗಿ ಮಾಡಬಹುದು. ಅಂದರೆ ಅದಕ್ಕೆ ಹೆಚ್ಚಿನ ತರಕಾರಿಗಳನ್ನು ಸೇರಿಸುವುದು. ನಿಮ್ಮ ಆಯ್ಕೆಯ ಮತ್ತು ರುಚಿಗೆ ತಕ್ಕಂತೆ ನೀವು ಕೊತ್ತುಂಬರಿ, ಕರಿಬೇವು ಎಲೆಗಳನ್ನು ಸೇರಿಸಬಹುದು.