ಸಾಂದರ್ಭಿಕ ಚಿತ್ರ
ಪ್ರತಿಯೊಂದು ಆರೋಗ್ಯ ಸಮಸ್ಯೆಗೂ ಮನೆಮದ್ದುಗಳಿರುತ್ತವೆ. ಹಾಗೆಯೇ ಗೊರಕೆ ಹೊಡೆಯುವುದನ್ನು ತಡೆಯಲು ಕೆಲವು ಮನೆಮದ್ದುಗಳಿವೆ. ಸಾಮಾನ್ಯವಾಗಿ ಗೊರಕೆ ಸಮಸ್ಯೆ ಇರುವವರ ಪಕ್ಕದಲ್ಲಿ ಅನೇಕರು ಮಲಗಲು ಹಿಂಜರಿಯುತ್ತಾರೆ. ದಿನವಿಡೀ ದುಡಿದು ಮನೆಗೆ ಬಂದು ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡಲು ಸಾಧ್ಯವಿಲ್ಲ ಎಂಬುದು ಕೆಲವರ ಕೋಪಕ್ಕೆ ಕಾರಣವಾಗಬಹುದು ಹಾಗಾಗಿ ಇಂತಹ ಸಮಸ್ಯೆಗೆ ನಾನಾ ರೀತಿಯ ಚಿಕಿತ್ಸೆ ಕೊಡುವ ಬದಲು ಮನೆಯಲ್ಲಿಯೇ ಮದ್ದುಗಳನ್ನು ನೀಡುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಈ ಸಮಸ್ಯೆ ಇರುವವರಿಗೆ ರಾತ್ರಿ ಆಗಾಗ ಎಚ್ಚರವಾಗುತ್ತದೆ. ಆದ್ದರಿಂದ ಗೊರಕೆ ಸಮಸ್ಯೆಯನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುವ ಕೆಲವು ನೈಸರ್ಗಿಕ ವಿಧಾನಗಳಿವೆ. ಇವು ಗೊರಕೆ ಹೊಡೆಯುವುದನ್ನು ಕಡಿಮೆ ಮಾಡುವುದಲ್ಲದೆ, ನಿದ್ರೆಗೆ ಭಂಗ ತರುವುದಿಲ್ಲ. ಹಾಗಾದರೆ ಯಾವ ಮನೆ ಮದ್ದುಗಳು ಒಳ್ಳೆಯದು? ಇಲ್ಲಿದೆ ಮಾಹಿತಿ.
- ಶುಂಠಿ ಮತ್ತು ಜೇನುತುಪ್ಪದ ಮಿಶ್ರಣವು ಅನೇಕ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದು ಲಾಲಾರಸ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ, ಗಂಟಲನ್ನು ಮೃದುಗೊಳಿಸುತ್ತದೆ. ಇದರಿಂದ ಗೊರಕೆಯಿಂದ ಪರಿಹಾರ ಪಡೆಯಬಹುದು. ಪ್ರತಿದಿನ ಸ್ವಲ್ಪ ಶುಂಠಿ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸುತ್ತಾ ಬನ್ನಿ, ಬಳಿಕ ಫಲಿತಾಂಶ ನೋಡಿ.
- ರಾತ್ರಿ ಮಲಗುವ ಮುನ್ನ ಅರ್ಧ ಚಮಚ ಆಲಿವ್ ಎಣ್ಣೆಯ ಜೊತೆಗೆ ಜೇನುತುಪ್ಪ ಸೇವಿಸುವುದರಿಂದ ಗೊರಕೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಇದು ಗಂಟಲಿನಲ್ಲಿ ಕಂಪನವನ್ನು ಕಡಿಮೆ ಮಾಡಿ, ಗೊರಕೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ.
- ಗೊರಕೆ ಕಡಿಮೆ ಮಾಡಲು ಶೀತವಾದಾಗ ಹಬೆ ತೆಗೆದುಕೊಳ್ಳುವಂತೆ, ರಾತ್ರಿ ಮಲಗುವ ಮುನ್ನ ಬಿಸಿನೀರಿನ ಹಬೆ ತೆಗೆದುಕೊಂಡರೆ ಗೊರಕೆಯನ್ನು ಕಡಿಮೆ ಮಾಡಬಹುದು.
- ಒಂದು ಲೋಟ ಬೆಚ್ಚಗಿನ ನೀರಿಗೆ ಸುಮಾರು ಒಂದೂವರೆ ಟೀ ಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ ಮಲಗುವ ಅರ್ಧ ಅಥವಾ ಒಂದು ಘಂಟೆ ಮೊದಲು ಕುಡಿಯಿರಿ.
- ಸಾಮಾನ್ಯ ಶೀತದಿಂದಾಗಿ ನೀವು ಗೊರಕೆ ಹೊಡೆಯುತ್ತಿದ್ದರೆ, ಹಸಿ ಬೆಳ್ಳುಳ್ಳಿ ಮತ್ತು ಲವಂಗವನ್ನು ಅಗಿಯಿರಿ. ನಂತರ ಒಂದು ಲೋಟ ನೀರನ್ನು ಕುಡಿಯಿರಿ. ಮಲಗುವ ಮುನ್ನ ಕನಿಷ್ಠ 20 ರಿಂದ 30 ನಿಮಿಷಗಳ ಮೊದಲು ಇದನ್ನು ಅನುಸರಿಸುವುದು ಉತ್ತಮ.
- ಆಲ್ಕೊಹಾಲ್ ಮತ್ತು ತಂಬಾಕು ಸೇವನೆ ಮಾಡಬೇಡಿ. ಬಿಟ್ಟುಬಿಡಲು ಸಾಧ್ಯವಾಗದಿದ್ದರೂ, ನೀವು ಆಲ್ಕೊಹಾಲ್ ಸೇವನೆ ಮತ್ತು ಸಿಗರೇಟುಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳಿ.
- ಈ ಎಲ್ಲಾ ವಿಧಾನಗಳು ಆರೋಗ್ಯದ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. ಆದರೂ ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ