ಮಳೆಗಾಲದ ಸಮಯದಲ್ಲಿ ಡೆಂಗ್ಯೂ, ಮಲೇರಿಯಾದಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದು ಹೆಚ್ಚು. ಜತೆಗೆ ಈ ವರ್ಷ ಕೊವಿಡ್-19 ವೈರಸ್ ಕೂಡಾ ತನ್ನ ಆರ್ಭಟ ತೋರುತ್ತಿರುವುದರಿಂದ ಹೆಚ್ಚು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಮಲೇರಿಯಾ, ಡೆಂಗ್ಯೂ ಮತ್ತು ಕೊವಿಡ್-19 ರೋಗ ಲಕ್ಷಣಗಳು ಸರಿಸುಮಾರು ಒಂದೇ ಆಗಿರುವುದರಿಂದ ಇವುಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಜತೆಗೆ ಎಲ್ಲಾ ರೋಗ ಲಕ್ಷಣಗಳು ಒಟ್ಟಿಗೆ ಕಾಣಿಸಿಕೊಂಡರೆ ಚಿಕಿತ್ಸೆ ಪಡೆಯುವುದೂ ಸಹ ಕಷ್ಟವಾಗುತ್ತದೆ.
ಡೆಂಗ್ಯೂ: ಎಲುಬು ನೋವು, ಮೈಕೈ ಸೆಳೆತ, ತೀವ್ರ ತಲೆನೋವು ಕಾಣಿಸಿಕೊಳ್ಳುತ್ತದೆ. ಜತೆಗೆ ಸ್ನಾಯು ಮತ್ತು ಕೀಲು ನೋವು, ವಾಕರಿಕೆ,ಜ್ವರ, ವಾಂತಿ ಮತ್ತು ಅತಿಸಾರದೊಂದಿಗೆ ದೇಹವು ಕುಂಠಿತಗೊಳ್ಳುತ್ತದೆ. ಇವುಗಳು ಡೆಂಗ್ಯೂ ವೈರಸ್ನ ಲಕ್ಷಣಗಳಾಗಿವೆ.
ಮಲೇರಿಯಾ: ಸಾಮಾನ್ಯವಾಗಿ ಸೊಳ್ಳೆಯ ಮೂಲಕ ಹರಡುವ, ಪ್ಲಾಸ್ಮೋಡಿಯಮ್ ಎಂಬ ಪರಾವಲಂಬಿಯಿಂದ ಹರಡುವ ಮಾರಣಾಂತಿಕ ಖಾಯಿಲೆ ಇದಾಗಿದೆ. ನಡುಕ, ತಲೆನೋವು, ಜ್ವರ ಮತ್ತು ವಾಂತಿ ಈ ರೋಗದ ಲಕ್ಷಣಗಳಾಗಿವೆ. ಹೆಚ್ಚು ಬೆವರು ಮತ್ತು ಆಯಾಸದೊಂದಿಗೆ ದೇಹವು ಕುಗ್ಗುತ್ತದೆ.
ಕೊವಿಡ್-19: ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರಹೊಮ್ಮುವ ಎಂಜಲು ಅಥವಾ ಹನಿಗಳ ಮೂಲಕ ಇನ್ನಿತರರಿಗೆ ಈ ವೈರಸ್ ಹರಡುವ ಸಾಧ್ಯತೆ ಹೆಚ್ಚು. ಜ್ವರ, ಒಣ ಕೆಮ್ಮು, ಗಂಟಲು ನೋವು, ಆಯಾಸ, ವಿಪರೀತ ತಲೆನೋವು, ಅತಿಸಾರ, ಉಸಿರಾಟದ ತೊಂದರೆ ಇವುಗಳು ಕೊರೊನಾ ವೈರಸ್ ರೋಗ ಲಕ್ಷಣಗಳಾಗಿವೆ.
ಕೊವಿಡ್-19, ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳ ಸೋಂಕಿನ ಪ್ರಕರಣಗಳು ಮಳೆಗಾಲದಲ್ಲಿ ಹೆಚ್ಚಾಗಬಹುದು. ಆದ್ದರಿಂದ ಇಂತಹ ರೋಗ ಲಕ್ಷಣಗಳ ವಿರುದ್ಧವಾಗಿ ಹೋರಾಡಲು ಕಟ್ಟು ನಿಟ್ಟಿನ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ. ಈ ಕುರಿತಂತೆ ಸರ್ಕಾರ ಮತ್ತು ಆರೋಗ್ಯ ಸಂಸ್ಥೆಗಳು ಸಿದ್ಧರಾಗಬೇಕು. ಇದೇ ಸಮಯದಲ್ಲಿ ಜನರು ತಮ್ಮ ಆರೋಗ್ಯದ ಸುಕ್ಷತೆಯ ಕುರಿತಾಗಿ ಹೆಚ್ಚು ಗಮನ ಕೊಡಲೇ ಬೇಕಾದ ಅವಶ್ಯಕತೆ ಇದೆ.
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜಾರಿಗೆ ತಂದ ಒಂದಿಷ್ಟು ನಿಯಮಾವಳಿಗಳನ್ನು ತಪ್ಪಿಸದೇ ಪಾಲಿಸಲೇಬೇಕು. ಜತೆಗೆ ಮನೆಯ ಸುತ್ತ-ಮುತ್ತಲು ಮತ್ತು ಮನೆಯನ್ನು ಹೆಚ್ಚು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಮನೆಯ ಸುತ್ತಲು ಮಲೆಗಾಳದ ನೀರು ನಿಲ್ಲು ಅವಕಾಶ ಮಾಡಿಕೊಡಬೇಡಿ. ಜತೆ ಜತೆಗೆ ಸೊಳ್ಳೆ ಪರದೆಯನ್ನು ಬಳಸಿ. ಬಿಸಿ ನೀರನ್ನು ಸೇವಿಸಿ. ತಣ್ಣಗಿನ ಗಾಳಿಯಲ್ಲಿ ಓಡಾಡುವುದನ್ನು ಕಡಿಮೆ ಮಾಡಿ.
ಮಳೆಗಾಲದ ಸಮಯದಲ್ಲಿ ಸಾಂಕ್ರಾಮಿಕ ವೈರಸ್ಗಳು ಹರಡುವುದು ಹೆಚ್ಚು. ಇದರಿಂದ ನಿಮ್ಮ ಆರೋಗ್ಯ ಕೆಡುತ್ತದೆ. ಅದರಲ್ಲಿಯೂ ಪ್ರಸ್ತುತ ಸಮಯದಲ್ಲಿ ನಿಮ್ಮ ಆರೋಗ್ಯದ ಕುರಿತಾಗಿ ಪ್ರತೀ ಕ್ಷಣವೈ ಎಚ್ಚರಿಕೆಯಿಂದ ಇರುವುದು ಅತ್ಯವಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ನಿಮ್ಮ ಅರೋಗ್ಯದ ಕುರಿತಾಗಿ ನಿರ್ಲಕ್ಷ್ಯ ಮಾಡದೇ ಎಚ್ಚರಿಕೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಇದನ್ನೂ ಓದಿ:
ಕೊಪ್ಪಳದ ಏಳು ವರ್ಷ ಮಗುವಿಗೆ ವಕ್ಕರಿಸಿದ ಕೊರೊನಾ
ಮಲೇರಿಯಾ ನಿರ್ಮೂಲನೆಗೆ ಮಂಗಳೂರಿನಲ್ಲಿ ಕೈಗೊಂಡ ಕ್ರಮಕ್ಕೆ ಜಾಗತಿಕ ಮಟ್ಟದಲ್ಲಿ ಜೈ ಹೋ…