ICMR Dietary Guidelines Part 5: ಮಕ್ಕಳು ಹಾಗೂ ಹದಿಹರೆಯದವರಿಗೆ ಆಹಾರ ಪದ್ಧತಿ ಹೇಗಿರಬೇಕು? ಏನು ತಿನ್ನಬೇಕು, ತಿನ್ನಬಾರದು?

| Updated By: ಅಕ್ಷತಾ ವರ್ಕಾಡಿ

Updated on: May 15, 2024 | 5:51 PM

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಮಾತಿನಂತೆ ಸಣ್ಣ ವಯಸ್ಸಿನಲ್ಲಿಯೇ ಮಕ್ಕಳಿಗೆ ಯೋಗ್ಯವಾದ ಆಹಾರ ಕ್ರಮವನ್ನು ಮೈಗೂಡಿಸಿಕೊಳ್ಳಬೇಕು. ಅದಲ್ಲದೇ ಹದಿಹರೆಯಕ್ಕೆ ತಲುಪಿದ ಮಕ್ಕಳಿಗೂ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡುವುದರಿಂದ ಅಪೌಷ್ಟಿಕತೆ ಕಾಡುವುದಿಲ್ಲ ಎಂದು ಐಸಿಎಂಆರ್ ಭಾರತೀಯರಿಗೆ ಪರಿಷ್ಕೃತ ಆಹಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

ICMR Dietary Guidelines Part 5: ಮಕ್ಕಳು ಹಾಗೂ ಹದಿಹರೆಯದವರಿಗೆ ಆಹಾರ ಪದ್ಧತಿ ಹೇಗಿರಬೇಕು? ಏನು ತಿನ್ನಬೇಕು, ತಿನ್ನಬಾರದು?
ICMR Dietary Guidelines,
Follow us on

ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ನೀಡುವ ಸಮತೋಲಿತ ಆಹಾರವು ಅತ್ಯುತ್ತಮ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೇ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್, ಹೈದರಾಬಾದ್, ಭಾರತೀಯರಿಗೆ ಪರಿಷ್ಕೃತ ಆಹಾರ ಮಾರ್ಗಸೂಚಿಯಲ್ಲಿ ನೀಡಿದ 17 ಸಲಹೆಗಳಲ್ಲಿ ಉಲ್ಲೇಖಿಸಿದೆ.

ನವಜಾತ ಶಿಶುವು ಮೊದಲ ಎರಡು ತಿಂಗಳುಗಳಲ್ಲಿ ದಿನಕ್ಕೆ ಸುಮಾರು 28 ಗ್ರಾಂನಷ್ಟು ವೇಗವಾಗಿ ಬೆಳೆಯುತ್ತದೆ. ಹೀಗಾಗಿ ಬೆಳೆಯುವ ಮಗುವಿಗೆ ಸರಿಯಾದ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡುವುದು ಅಗತ್ಯ. ಅದಲ್ಲದೇ ಈ ಹದಿಹರೆಯದ ಅವಧಿ (10-19 ವರ್ಷಗಳು)ಯಲ್ಲಿ ಎತ್ತರ, ತೂಕದಲ್ಲಿ ತ್ವರಿತ ಹೆಚ್ಚಳ, ಹಾರ್ಮೋನುಗಳ ಬದಲಾವಣೆಗಳು, ಲೈಂಗಿಕ ಪಕ್ವತೆ ಮತ್ತು ಭಾವನೆಗಳಲ್ಲಿ ವ್ಯಾಪಕವಾದ ಬದಲಾವಣೆಗಳಾಗುತ್ತದೆ. ಹದಿಹರೆಯದ ಹುಡುಗಿಯರ ಪೌಷ್ಟಿಕಾಂಶದ ಆರೈಕೆಯು ಭವಿಷ್ಯದಲ್ಲಿ ತಾಯ್ತನದ ತಯಾರಿಗೆ ಅಗತ್ಯವಾಗಿ ಬೇಕಾಗುತ್ತದೆ. ಹೀಗಾಗಿ ಈ ದೇಹದ ತೂಕಕ್ಕೆ ಹೆಚ್ಚಿನ ಪೋಷಕಾಂಶಗಳು ಬೇಕಾಗುತ್ತವೆ.

ಮಕ್ಕಳು ಹಾಗೂ ಹದಿಹರೆಯದವರ ಬೆಳವಣಿಗೆ ಯಾವ ಆಹಾರಗಳು ಸೂಕ್ತ:

ಬೆಳೆಯುತ್ತಿರುವ ಮಕ್ಕಳು ಮತ್ತು ಹದಿಹರೆಯದವರಿಗೆ ಹೆಚ್ಚಿನ ಕ್ಯಾಲ್ಸಿಯಂ ಅಗತ್ಯವಿರುತ್ತದೆ. ಹಾಲು ಮತ್ತು ಹಾಲಿನ ಉತ್ಪನ್ನಗಳು, ಫಾಕ್ಸ್‌ಟೈಲ್ ರಾಗಿ, ರಾಗಿ, ಎಳ್ಳು ಮುಂತಾದ ಕ್ಯಾಲ್ಸಿಯಂ-ಭರಿತ ಆಹಾರಗಳನ್ನು ಸೇವಿಸಬೇಕು. ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಬೇಳೆಕಾಳುಗಳು, ಬೀಜಗಳು, ಎಣ್ಣೆ, ತುಪ್ಪ ಹಾಲು ಮತ್ತು ಮೊಟ್ಟೆ, ಸೊಪ್ಪು, ಹಸಿರು ತರಕಾರಿಗಳು ಮತ್ತು ಸ್ಥಳೀಯವಾಗಿ ಲಭ್ಯವಿರುವ ಋತುಮಾನದ ಹಣ್ಣುಗಳು ಸೇರಿದಂತೆ ದೈನಂದಿನ ಆಹಾರದಲ್ಲಿ ಸೇರಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.

ಸಮುದ್ರದಲ್ಲಿ ಸಿಗುವ ಮೀನು, ಕೋಳಿ, ಮೆಂತ್ಯ ಬೀಜಗಳು, ಅಗಸೆ ಬೀಜಗಳು, ಚಿಯಾ ಬೀಜಗಳು, ತುಳಸಿ ಬೀಜಗಳು ಹೀಗೆ ಆರೋಗ್ಯವನ್ನು ಉತ್ತೇಜಿಸುವ ಆಹಾರಗಳನ್ನು ವಾರಕ್ಕೆ ಕನಿಷ್ಠ ಮೂರರಿಂದ ನಾಲ್ಕು ಬಾರಿ ಸೇವಿಸುವುದು ಉತ್ತಮ. ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟವನ್ನು ಸರಿಯಾದ ಸಮಯಕ್ಕೆ ಮಾಡಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

ಈ ಆಹಾರಗಳ ಸೇವನೆಯಿಂದ ದೂರವಿರಿ:

ಪ್ಯಾಕ್ ಮಾಡಲಾದ ಆಹಾರಗಳು ಮತ್ತು ಹೆಚ್ಚುವರಿ ಎಣ್ಣೆ, ಉಪ್ಪು, ಸಕ್ಕರೆ, ಬಣ್ಣಗಳನ್ನು ಸೇರಿಸಿದ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ. ಕೊಬ್ಬಿನಾಂಶ, ಸಕ್ಕರೆ ಮತ್ತು ಉಪ್ಪನ್ನು ಹೊಂದಿರುವ ಆಹಾರಗಳನ್ನು ಅತಿಯಾಗಿ ಸೇವಿಸುವುದನ್ನು ಒಳ್ಳೆಯದಲ್ಲ. ಹದಿಹರೆಯವು ಅನಾರೋಗ್ಯಕರ ಜಂಕ್ ಫುಡ್ ಗಳ ಸೇವನೆ, ಧೂಮಪಾನ, ತಂಬಾಕು ಜಗಿಯುವುದು ಅಥವಾ ಮದ್ಯಪಾನದಂತಹ ಹಾನಿಕಾರಕ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳುವ ಹಂತವಾಗಿದ್ದು, ಈ ಅನಾರೋಗ್ಯಕರ ಅಭ್ಯಾಸಗಳನ್ನು ದೂರವಿಡಬೇಕು. ಪೌಷ್ಟಿಕಾಂಶದ ಸಮತೋಲಿತ ಆಹಾರ ಸೇವನೆಯ ಜೊತೆಗೆ, ಮಕ್ಕಳು ಮತ್ತು ಹದಿಹರೆಯದವರಲ್ಲಿ ಸೂಕ್ತವಾದ ಜೀವನಶೈಲಿ, ಆಟಗಳು, ಕ್ರೀಡೆಗಳಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಪ್ರೋತ್ಸಾಹಿಸಬೇಕೆಂದು ಐಸಿಎಂಆರ್ ಆಹಾರ ಮಾರ್ಗಸೂಚಿಯಲ್ಲಿ ಹೇಳಿದೆ.

ಇದನ್ನೂ ಓದಿ: Coffee: ದಿನಕ್ಕೆ 3 ಲೋಟಕ್ಕಿಂತ ಹೆಚ್ಚು ಕಾಫಿ, ಟೀ ಕುಡಿದರೆ ಏನಾಗುತ್ತದೆ?

ಮಕ್ಕಳಲ್ಲಿ ಕಾಡುವ ಸೋಂಕುಗಳು ಅಪೌಷ್ಟಿಕತೆಗೆ ಹೇಗೆ ಕಾರಣವಾಗುತ್ತವೆ?

ಮಕ್ಕಳಲ್ಲಿ ಕಾಡುವ ಸೋಂಕುಗಳಾದ ಅತಿಸಾರ, ನ್ಯುಮೋನಿಯಾ ಮತ್ತು ಅನಾರೋಗ್ಯದ ಸಮಯದಲ್ಲಿ ಮತ್ತು ಅನಾರೋಗ್ಯದ ನಂತರದ ಪೌಷ್ಟಿಕಾಂಶದ ಕೊರತೆಯು ಅಪೌಷ್ಟಿಕತೆಯನ್ನು ಉಂಟುಮಾಡುತ್ತದೆ. ಸೋಂಕಿನ ಅವಧಿಯಲ್ಲಿ, ಹಸಿವು ಕಡಿಮೆಯಾಗುವುದರಿಂದ ಮಕ್ಕಳು ಕಡಿಮೆ ತಿನ್ನುತ್ತಾರೆ. ಹೀಗಾಗಿ ಅನಾರೋಗ್ಯದಿಂದ ಚೇತರಿಸಿಕೊಂಡ ನಂತರದಲ್ಲಿ ಪೌಷ್ಟಿಕಾಂಶದ ಕೊರತೆಯನ್ನು ತಡೆಗಟ್ಟಲು ಮಗುವಿಗೆ ಹೆಚ್ಚಿನ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಬೇಕಾಗುತ್ತದೆಕಾಗುತ್ತದೆ ಎನ್ನಲಾಗಿದೆ

ಅನಾರೋಗ್ಯದ ಸಮಯದಲ್ಲಿ ಯಾವ ಆಹಾರವು ಸೂಕ್ತ:

ಅನಾರೋಗ್ಯದ ಸಮಯದಲ್ಲಿ ಹಾಗೂ ಚೇತರಿಸಿಕೊಳ್ಳುವ ಹಂತದಲ್ಲಿ ಹಾಲು, ತರಕಾರಿಗಳು, ಹಣ್ಣುಗಳು ಹಾಗೂ ದ್ವಿದಳ ಧಾನ್ಯಗಳನ್ನು ಆಹಾರದಲ್ಲಿ ಸೇರಿಸುವುದು ಒಳ್ಳೆಯದು. ಅನಾರೋಗ್ಯದ ಸಮಯದಲ್ಲಿ ಸಾಕಷ್ಟು ದ್ರವ ರೂಪದ ಆಹಾರಗಳು ಉತ್ತಮ. ನಿಶಕ್ತಿಯ ಕಾರಣ ಮಧ್ಯಂತರದಲ್ಲಿ ಸಣ್ಣ ಪ್ರಮಾಣದ ಆಹಾರಗಳಾದ ಹಣ್ಣು ಹಂಪಲನ್ನು ಸೇವಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:50 pm, Wed, 15 May 24