ಜ್ವರ, ಶೀತ, ಕಫ ಎಂದು ಮನಬಂದಂತೆ ಆ್ಯಂಟಿಬಯಾಟಿಕ್ ಸೇವಿಸಬೇಡಿ; ಐಎಂಎ ಎಚ್ಚರಿಕೆ

|

Updated on: Mar 03, 2023 | 9:50 PM

ಜ್ವರ, ಶೀತ, ಕಫ ಮತ್ತಿತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕೂಡಲೇ, ಅನಿವಾರ್ಯವಲ್ಲದ ಹೊರತು ಆ್ಯಂಟಿ ಬಯಾಟಿಕ್​ಗಳನ್ನು ಸೇವಿಸಬಾರದು. ವೈದ್ಯರು ಕೂಡ ರೋಗಿಗಳಿಗೆ ಆ್ಯಂಟಿಬಯಾಟಿಕ್ಸ್​ ತೆಗೆದುಕೊಳ್ಳುವಂತೆ ಸಲಹೆ ನೀಡಬಾರದು ಎಂದು ಭಾರತೀಯ ವೈದ್ಯಕೀಯ ಸಂಘ ಎಚ್ಚರಿಕೆಯ ಸಂದೇಶ ಬಿಡುಗಡೆ ಮಾಡಿದೆ.

ಜ್ವರ, ಶೀತ, ಕಫ ಎಂದು ಮನಬಂದಂತೆ ಆ್ಯಂಟಿಬಯಾಟಿಕ್ ಸೇವಿಸಬೇಡಿ; ಐಎಂಎ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಜ್ವರ, ಶೀತ, ಕಫ ಮತ್ತಿತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕೂಡಲೇ, ಅನಿವಾರ್ಯವಲ್ಲದ ಹೊರತು ಆ್ಯಂಟಿಬಯಾಟಿಕ್​ಗಳನ್ನು ಸೇವಿಸಬಾರದು. ವೈದ್ಯರು ಕೂಡ ರೋಗಿಗಳಿಗೆ ಆ್ಯಂಟಿಬಯಾಟಿಕ್ಸ್ (antibiotics) ತೆಗೆದುಕೊಳ್ಳುವಂತೆ ಸಲಹೆ ನೀಡಬಾರದು ಎಂದು ಭಾರತೀಯ ವೈದ್ಯಕೀಯ ಸಂಘ (IMA) ಎಚ್ಚರಿಕೆಯ ಸಂದೇಶ ಬಿಡುಗಡೆ ಮಾಡಿದೆ. ಅನಿವಾರ್ಯವಲ್ಲದ ಹೊರತು ಆ್ಯಂಟಿಬಯಾಟಿಕ್ಸ್ ಬಳಸದಂತೆ ಸಂಘವು ಸಂದೇಶ ಬಿಡುಗಡೆ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದೆ ಎಂದು ‘ಎಎನ್​ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. ಕಫ, ವಾಕರಿಕೆ, ವಾಂತಿ, ಗಂಟಲು ಕಿರಿಕಿರಿ, ಜ್ವರ, ಮೈಕೈ ನೋವು, ಭೇದಿ ಪ್ರಕರಣಗಳಲ್ಲಿ ಹಠಾತ್ ಹೆಚ್ಚಳ ಕಂಡುಬಂದಿದೆ. ಸೋಂಕು ಸಾಮಾನ್ಯವಾಗಿ ಐದರಿಂದ ಏಳು ದಿನಗಳವರೆಗೆ ಇರುತ್ತದೆ. ಜ್ವರವು ಮೂರು ದಿನಗಳಲ್ಲಿ ಕಡಿಮೆಯಾಗುತ್ತದೆ. ಆದರೆ, ಕೆಮ್ಮು ಮಾತ್ರ ಮೂರು ವಾರಗಳವರೆಗೆ ಇರುತ್ತದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಮಾಹಿತಿ ಪ್ರಕಾರ, ಇದು ಎಚ್​3ಎನ್​2 ಇನ್​ಫ್ಲುಯೆಂಜಾ ವೈರಸ್​ನಿಂದಾಗಿ (H3N2 influenza virus) ಸಂಭವಿಸುತ್ತದೆ ಎಂದು ಸಂದೇಶದಲ್ಲಿ ವೈದ್ಯಕೀಯ ಸಂಘ ತಿಳಿಸಿದೆ.

ಪದೇ ಪದೇ ಶೀತ, ಜ್ವರ ಬರೋದೇಕೆ?

ಇನ್​ಫ್ಲುಯೆಂಜಾ ಹಾಗೂ ಇತರ ವೈರಸ್​ಗಳ ಕಾರಣದಿಂದಾಗಿ ಅಕ್ಟೋಬರ್​​ನಿಂದ ಫೆಬ್ರುವರಿ ನಡುವಣ ಅವಧಿಯಲ್ಲಿ ಕಾಲೋಚಿತವಾಗಿ ಶೀತ, ಕಫ ಮತ್ತಿತರ ಆರೋಗ್ಯ ಸಮಸ್ಯೆಗಳು ಕಾಣುವುದು ಸಹಜ. 50 ವರ್ಷ ಮೇಲ್ಪಟ್ಟ ಹಾಗೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭ ಜನರಲ್ಲಿ ಜ್ವರದ ಜತೆಗೆ ಉಸಿರಾಟದ ಸಮಸ್ಯೆಯೂ ಕಂಡುಬರುತ್ತದೆ. ಹೆಚ್ಚಿರುವ ವಾಯುಮಾಲಿನ್ಯ ಕೂಡ ಇದಕ್ಕೆ ಕಾರಣವಾಗುತ್ತದೆ ಎಂದು ವೈದ್ಯಕೀಯ ಸಂಘ ಹೇಳಿದೆ.


ಈ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಬೇಕು. ಆದರೆ ಈಗ ಜನರು ಆ್ಯಂಟಿಬಯಾಟಿಕ್ಸ್​​ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಡೋಸ್​ ಬಗ್ಗೆ ಕಾಳಜಿ ವಹಿಸದೆ ಬೇಗ ಗುಣವಾಗಬೇಕೆಂದು ಹೆಚ್ಚು ಡೋಸ್​ ತೆಗೆದುಕೊಳ್ಳಲಾಗುತ್ತದೆ. ಇದು ಆ್ಯಂಟಿಬಯಾಟಿಕ್ ಪ್ರತಿರೋಧಕ್ಕೆ ಕಾರಣವಾಗಬಹುದಾದ್ದರಿಂದ ಇದನ್ನು ನಿಲ್ಲಿಸಬೇಕಾಗಿದೆ. ಇಲ್ಲಾವಾದಲ್ಲಿ ಮುಂದೆ ನಿಜವಾಗಿಯೂ ಅಗತ್ಯ ಎದುರಾದಾಗ ಆ್ಯಂಟಿಬಯಾಟಿಕ್​ಗಳು ಕಾರ್ಯನಿರ್ವಹಿಸದೇ ಹೋಗಬಹುದು ಎಂದು ಸಂಘ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Adenovirus in Children: ಪುಟಾಣಿ ಮಕ್ಕಳನ್ನು ಕಾಡುತ್ತಿದೆ ಅಡೆನಾಯ್ಡ್ ವೈರಸ್ ಹಾಗೂ ಬಿ -12 ಸಮಸ್ಯೆ

ಅಮೋಕ್ಸಿಲಿನ್, ನಾರ್ಫ್ಲೋಕ್ಸಾಸಿನ್, ಸಿಪ್ರೊಫ್ಲೋಕ್ಸಾಸಿನ್, ಆಫ್ಲೋಕ್ಸಾಸಿನ್, ಲೆವೊಫ್ಲೋಕ್ಸಾಸಿನ್​ನಂಥ ಆ್ಯಂಟಿಬಯಾಟಿಕ್​ಗಳು ಹೆಚ್ಚೆಚ್ಚು ಬಳಕೆಯಾಗುತ್ತಿವೆ. ಇದರ ಅಡ್ಡಪರಿಣಾಮಗಳ ಬಗ್ಗೆ ಈಗಾಗಲೇ ಗಮನಕ್ಕೆ ಬಂದಿದೆ. ಈ ಕುರಿತು ಜನರು ಹಾಗೂ ವೈದ್ಯರು ಬಹಳ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ವೈದ್ಯಕೀಯ ಸಂಘ ಹೇಳಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ