ಇತ್ತೀಚಿನ ದಿನಗಳಲ್ಲಿ ಸಂಧಿವಾತವು ವಯಸ್ಕರನ್ನು ಮಾತ್ರ ಬಾಧಿಸುತ್ತಿಲ್ಲ, ಬದಲಾಗಿ ಮಕ್ಕಳಲ್ಲಿಯೂ ಕಂಡು ಬರುತ್ತಿದೆ. ತಜ್ಞರ ಪ್ರಕಾರ, ಯುವಕರ ಜೊತೆಗೆ ಮಕ್ಕಳಲ್ಲಿಯೂ ಸಹ ಜುವೆನೈಲ್ ಇಡಿಯೋಪತಿಕ್ ಆರ್ಥ್ರೈಟಿಸ್ (juvenile idiopathic arthritis) ಎಂಬ ಸಂಧಿವಾತದಿಂದ ಬಳಲುತ್ತಿದ್ದಾರೆ. ವೈದ್ಯರ ಪ್ರಕಾರ, ಈ ಸಂಧಿವಾತ ಪ್ರತಿ ವರ್ಷ ಹತ್ತು ಸಾವಿರ ಹದಿಹರೆಯದವರಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಕಳವಳಕಾರಿ ವಿಷಯವನ್ನು ಅಧ್ಯಯಯನದಿಂದ ಬಹಿರಂಗಗೊಂಡಿದೆ. ಮಕ್ಕಳ ಕೀಲುಗಳಲ್ಲಿ ನೋವು, ಮೊಣಕಾಲುಗಳ ಬಿಗಿತ ಅಥವಾ ಊತದದಿಂದ ಬಳಲುತ್ತಿದ್ದಾರೆ. ಅದನ್ನು ಲಘುವಾಗಿ ತೆಗೆದುಕೊಳ್ಳದೆಯೇ, ಮೊದಲು ವೈದ್ಯರನ್ನು ಸಂಪರ್ಕಿಸಿ. ವೈದ್ಯರು ನೀಡಿರುವ ಮಾಹಿತಿ ಪ್ರಕಾರ, ರುಮಟಾಯ್ಡ್ ಸಂಧಿವಾತವು ವಯಸ್ಕರ ಜನಸಂಖ್ಯೆಯಲ್ಲಿ ಸುಮಾರು 1% ರಷ್ಟು ಪರಿಣಾಮ ಬೀರುವ ಪ್ರಚಲಿತ ಸ್ಥಿತಿಯಾಗಿದ್ದು, ಮಕ್ಕಳಲ್ಲಿ ಕಂಡು ಬರುವ ಅದೇ ಸ್ಥಿತಿಯನ್ನು ಜುವೆನೈಲ್ ಇಡಿಯೋಪತಿಕ್ ಆರ್ಥ್ರೈಟಿಸ್ ಎಂದು ಕರೆಯಲಾಗುತ್ತದೆ.
ಆಸ್ಟರ್ ಸಿಎಂಐ ಆಸ್ಪತ್ರೆಯ ಕನ್ಸಲ್ಟೆಂಟ್ (ಪೀಡಿಯಾಟ್ರಿಕ್ ಇಮ್ಯುನಾಲಜಿ ಮತ್ತು ರುಮಟಾಲಜಿ) ಡಾ. ಸಾಗರ್ ಭಟ್ಟಾಡ್, 2 ರಿಂದ 3 ವರ್ಷ ಮತ್ತು 16 ವರ್ಷದವರೆಗಿನ ಮಕ್ಕಳು ಜುವೆನೈಲ್ ಇಡಿಯೋಪತಿಕ್ ಸಂಧಿವಾತದಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ, “ನಾನು ಪ್ರತಿ ತಿಂಗಳು 15 ಹೊಸ ರೋಗಿಗಳನ್ನು ನೋಡುತ್ತೇನೆ. ಅವರು ಜುವೆನೈಲ್ ಇಡಿಯೋಪತಿಕ್ ಸಂಧಿವಾತದಿಂದ ಬಳಲುತ್ತಿದ್ದಾರೆ. ಅವುಗಳಲ್ಲಿ 20% ಮಕ್ಕಳಲ್ಲಿ ತಡವಾಗಿ ಅವರಿಗೆ ಚಿಕಿತ್ಸೆ ನೀಡಿರುವುದರಿಂದ, ದೀರ್ಘಕಾಲದ ಪ್ರಕರಣಗಳು (ದೇಹದ ವಿರೂಪಗಳೊಂದಿಗೆ) ಕಂಡುಬರುತ್ತಿದೆ” ಎಂದು ಡಾ. ಸಾಗರ್ ಮಾಹಿತಿ ನೀಡಿದ್ದಾರೆ.
ಹಾಗಾಗಿ ಜುಲೈ ತಿಂಗಳನ್ನು ಸಂಧಿವಾತ ಜಾಗೃತಿ ತಿಂಗಳು ಎಂದು ಆಚರಿಸುವುದರೊಂದಿಗೆ, ಈ ರೋಗದ ಬಗ್ಗೆ ನಿರ್ಲಕ್ಷಿಸಬಾರದು ಎಂಬ ಧ್ಯೇಯ ವಾಕ್ಯದೊಂದಿಗೆ ವೈದ್ಯರು ಜಾಗೃತಿ ಮೂಡಿಸುತ್ತಿದ್ದಾರೆ. ಬೆಳೆಯುತ್ತಿರುವ (3 ರಿಂದ 8) ಮಕ್ಕಳು ಆಗಾಗ ಕೀಲು ನೋವುಗಳ ಬಗ್ಗೆ ತಮ್ಮ ಪೋಷಕರಲ್ಲಿ ದೂರುತ್ತಿದ್ದಾರೆ, ಆದರೆ ಅದನ್ನು ಪೋಷಕರು ಗಂಭೀರವಾಗಿ ಪರಿಗಣಿಸುವುದಿಲ್ಲ ಏಕೆಂದರೆ ಆ ವಯಸ್ಸಿನಲ್ಲಿ ಸಂಧಿವಾತ ಸಂಭಾವಿಸಲಾರದು ಎಂದು ಅವರು ಭಾವಿಸುತ್ತಾರೆ. ವೈದ್ಯರ ಪ್ರಕಾರ, ಮೊಣಕಾಲುಗಳ ಊತವು ಜುವೆನೈಲ್ (ಚಿಕ್ಕ ವಯಸ್ಸಿನ) ಇಡಿಯೋಪತಿಕ್ ಸಂಧಿವಾತದ ಮೊದಲ ಲಕ್ಷಣ ಅಥವಾ ಚಿಹ್ನೆಯಾಗಿದೆ. ಡಾ. ಸಾಗರ್ ಅವರು ತಮ್ಮ ಆಸ್ಪತ್ರೆಯಲ್ಲಿ ಐದು ವರ್ಷಗಳಲ್ಲಿ 500 ಮಕ್ಕಳು ಜುವೆನೈಲ್ ಇಡಿಯೋಪತಿಕ್ ಸಂಧಿವಾತದಿಂದ ಬಳಲುತ್ತಿದ್ದಾರೆ ಎಂಬ ತಿಳಿಸಿದ್ದಾರೆ.
ಇದನ್ನೂ ಓದಿ: ಚಳಿಗಾಲದಲ್ಲಿ ಕೀಲು ನೋವು ಕಾಡುತ್ತಿದೆಯೇ?; ಸಂಧಿವಾತವನ್ನು ನಿಯಂತ್ರಿಸಲು ನೈಸರ್ಗಿಕ ಪರಿಹಾರ ಇಲ್ಲಿದೆ
ಜುವೆನೈಲ್ ಇಡಿಯೋಪತಿಕ್ ಆರ್ಥ್ರೈಟಿಸ್ ಒಂದು ಸ್ವಯಂ ನಿರೋಧಕ ಕಾಯಿಲೆಯಾಗಿದ್ದು, ಇದು ಹಲವಾರು ತಿಂಗಳುಗಳವರೆಗೆ ನಮ್ಮನ್ನು ಕಾಡುತ್ತದೆ. ಒಂದು ಮಗು, ವಿಶೇಷವಾಗಿ ಬೆಳೆಯುವ ವಯಸ್ಸಿನಲ್ಲಿ, ದೇಹದ ಅಂಗಗಳು ಸಮರ್ಪಕವಾಗಿ ಬೆಳೆಯದಿರುವುದು. ಇನ್ನೂ ಅನೇಕ ಶಾಶ್ವತ ಸಮಸ್ಯೆಗಳಿಂದ ಬಳಲುತ್ತದೆ. ಇದೆಲ್ಲದರಿಂದ ಶಾಲೆಯಲ್ಲಿ ಮುಜುಗರಕ್ಕೆ ಅಥವಾ ಅಪಹಾಸ್ಯಕ್ಕೆ ಒಳಲಾಗಿ ಮಾಸಿಕವಾಗಿ ಕುಗ್ಗಿ ಶಾಲೆಗೆ ಹೋಗಲು ಹಿಂಜರಿಯಬಹುದು. ಈ ಎಲ್ಲ ಅಂಶಗಳು ಜೀವನದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಕಾಲಾನಂತರದಲ್ಲಿ ಇದಕ್ಕೆ ಚಿಕಿತ್ಸೆ ಲಭ್ಯವಿದ್ದಾಗ ಮಾತ್ರ, ಮಕ್ಕಳು ಆರೋಗ್ಯಕರ ವಯಸ್ಕರಾಗಿ ಬೆಳೆಯಲು ಸಾಧ್ಯ.
“ಸ್ಥಿತಿ ಹದಗೆಡುವುದನ್ನು ತಪ್ಪಿಸಲು ಆರಂಭಿಕ ಹಂತದಲ್ಲಿ ಅದನ್ನು ಗುರುತಿಸುವುದು ಮುಖ್ಯವಾಗಿರುತ್ತದೆ. ಮತ್ತು ಇದು ಚಿಕಿತ್ಸೆಗೂ ಸಹಾಯವಾಗುತ್ತದೆ ಎಂದು ಡಾ. ಸಾಗರ್ ಹೇಳಿದ್ದಾರೆ. ಜುವೆನೈಲ್ ಇಡಿಯೋಪತಿಕ್ ಸಂಧಿವಾತದಲ್ಲಿ, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಸಾಮಾನ್ಯವಾಗಿ ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಕಡಿತ ಮತ್ತು ಗಾಯವನ್ನು ಗುಣಪಡಿಸಲು ಸಹಾಯ ಮಾಡುವುದಿಲ್ಲ, ಬದಲಾಗಿ ಅವು ಕೆಲವು ಆರೋಗ್ಯಕರ ಕೋಶಗಳು ಮತ್ತು ಅಂಗಾಂಶಗಳ ಮೇಲೆ ತಪ್ಪಾಗಿ ದಾಳಿ ಮಾಡುತ್ತದೆ ಎಂದು ಅಧ್ಯಯನಗಳು ವಿವರಿಸಿವೆ. ಹಾಗಾಗಿ ಮೊದಲು ಎಚ್ಛೆತ್ತುಕೊಂಡು, ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಸಂಪರ್ಕಿಸಿ.