ಬೆಂಗಳೂರು: ಕೊರೊನಾ ಮೇಲಿಂದ ಮೇಲೆ ನೀಡುತ್ತಿರುವ ಆಘಾತಕ್ಕೆ ಜನಸಾಮಾನ್ಯರು ಹೈರಾಣಾಗಿದ್ದಾರೆ. ಎರಡನೇ ಅಲೆಯ ಸೋಂಕಿನಿಂದ ಹೇಗೋ ಬಚಾವಾದೆ ಎಂದು ನಿಟ್ಟುಸಿರು ಬಿಡುವವರನ್ನೂ ಈಗ ಮತ್ತೊಂದು ಸಮಸ್ಯೆ ಬೆಂಬತ್ತಿ ಕಾಡಲಾರಂಭಿಸಿದೆ. ಬ್ಲಾಕ್ ಫಂಗಸ್ ಅಥವಾ ಮ್ಯೂಕೋಮೈಕೋಸಿಸ್ ಎಂದು ಕರೆಯಲ್ಪಡುವ ಈ ಸೋಂಕು ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಭಾರತದ ಕೆಲ ರಾಜ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಬಹುಮುಖ್ಯವಾಗಿ ಕೊರೊನಾದಿಂದ ಚೇತರಿಸಿಕೊಳ್ಳುವವರಲ್ಲಿ ಸೋಂಕು ಉಲ್ಬಣಿಸುತ್ತಿದ್ದು, ಕೆಲ ಪ್ರಕರಣಗಳಲ್ಲಿ ರೋಗಿಗಳನ್ನು ಸಾವಿನ ದವಡೆಗೂ ತಳ್ಳಿದೆ. ಇದಕ್ಕೆ ಬೇಕಾದ ಸೂಕ್ತ ಚಿಕಿತ್ಸೆ ನೀಡಲು ಭಾರತ ಸರ್ಕಾರದ ಆರೋಗ್ಯ ಇಲಾಖೆ ಹಾಗೂ ಐಸಿಎಂಆರ್ ನಿರ್ದಿಷ್ಟ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿವೆ. ಫಂಗಸ್ನಿಂದ ಬರುವ ಈ ಸೋಂಕು ಉಲ್ಬಣಗೊಂಡರೆ ಕೊರೊನಾದಂತೆಯೇ ಮಾರಣಾಂತಿಕವಾಗಿರುವುದರಿಂದ ಜನರು ಕೆಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಸೋಂಕಿನ ಬಗ್ಗೆ ಅರಿವು ಮೂಡಿಸಿಕೊಳ್ಳುವಂತೆ ತಜ್ಞರು ಮನವಿ ಮಾಡಿದ್ದಾರೆ.
ಮ್ಯೂಕೋಮೈಕೋಸಿಸ್ ಅಥವಾ ಬ್ಲಾಕ್ ಫಂಗಸ್ ಸೋಂಕಿನ ಆರಂಭಿಕ ಲಕ್ಷಣಗಳೇನು?
ಜ್ವರ
ತಲೆನೋವು
ಕೆಮ್ಮು, ಕಫ
ರಕ್ತ ವಾಂತಿ
ಮಾನಸಿಕ ಒತ್ತಡ
ಉಸಿರಾಟದ ಸಮಸ್ಯೆ
ಮುಖದಲ್ಲಿ ನೋವು
ಕಣ್ಣಿನ ಸುತ್ತ ನೋವು
ಕಣ್ಣು ಅಥವಾ ಮೂಗಿನ ಸುತ್ತಲೂ ಕೆಂಪಾಗುವುದು
ಕಣ್ಣು ಉರಿಯುವುದು, ಕಣ್ಣೀರು ಕಾಣಿಸಿಕೊಳ್ಳುವುದು
ಮ್ಯೂಕೋಮೈಕೋಸಿಸ್ ಅಥವಾ ಬ್ಲಾಕ್ ಫಂಗಸ್ ಸೋಂಕಿಗೆ ಕಾರಣಗಳು
ಅನಿಯಂತ್ರಿತ ಮಧುಮೇಹ
ಅತಿಯಾದ ಸ್ಟೀರಾಯ್ಡ್ ಬಳಕೆ
ದೀರ್ಘಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದಿರುವುದು
ಅನೇಕ ಸಮಸ್ಯೆಗಳಿಂದ ದೇಹ ಬಳಲುತ್ತಿರುವುದು
ಮ್ಯೂಕೋಮೈಕೋಸಿಸ್ ಅಥವಾ ಬ್ಲಾಕ್ ಫಂಗಸ್ ಸೋಂಕು ಕಾಣಿಸಿಕೊಂಡರೆ ಏನು ಮಾಡಬೇಕು?
ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬೇಕು
ಕೊವಿಡ್ ಚಿಕಿತ್ಸೆ ಪಡೆದು ಬಂದ ನಂತರ ಗ್ಲೂಕೋಸ್ ಮಟ್ಟ ಹಾಗೂ ಮಧುಮೇಹ ನಿಯಂತ್ರಿಸುವತ್ತ ಗಮನ ನೀಡಬೇಕು
ಸ್ಟೀರಾಯ್ಡ್ ಬಳಕೆ ಅತಿಯಾಗದಂತೆ ನಿಗಾ ವಹಿಸಬೇಕು
ಉಸಿರಾಟದ ಸಮಸ್ಯೆಗೆ ಸಂಬಂಧಿಸಿದಂತೆ ಆವಿ ಅಥವಾ ಹಬೆ ತೆಗೆದುಕೊಳ್ಳುವಾಗ ಸ್ವಚ್ಛ ನೀರು ಬಳಕೆ ಮಾಡಬೇಕು
ಆ್ಯಂಟಿಬಾಡಿ ಹಾಗೂ ಆ್ಯಂಟಿಫಂಗಲ್ ಔಷಧಿಗಳನ್ನು ಬಳಸಬಹುದು
ಮ್ಯೂಕೋಮೈಕೋಸಿಸ್ ಅಥವಾ ಬ್ಲಾಕ್ ಫಂಗಸ್ ಸೋಂಕು ಕಾಣಿಸಿಕೊಂಡರೆ ಏನು ಮಾಡಬಾರದು?
ಯಾವುದೇ ಕಾರಣಕ್ಕೂ ಸೋಂಕಿನ ಲಕ್ಷಣಗಳನ್ನು ಕಡೆಗಣಿಸಬೇಡಿ
ಮೂಗು ಕಟ್ಟುವುದು, ನೆಗಡಿಯಾಗುವುದು ಆದರೆ ಈ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡಕೂಡದು
ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಲು ಹಿಂಜರಿಯಬೇಡಿ
ಆರಂಭಿಕ ಹಂತದಲ್ಲಿ ನೀಡಬೇಕಾದ ಚಿಕಿತ್ಸೆಗಳಿಂದ ತಪ್ಪಿಸಿಕೊಳ್ಳಬೇಡಿ
ತಡೆಗಟ್ಟಲು ಇರುವ ಮಾರ್ಗಗಳೇನು?
ಕಡ್ಡಾಯವಾಗಿ ಮಾಸ್ಕ್ ಧರಿಸಿ, ದೂಳು ನಿಮ್ಮ ಮೂಗು ಪ್ರವೇಶಿಸದಂತೆ ತಡೆಯುವುದು ಅತ್ಯವಶ್ಯಕ
ಸ್ವಚ್ಛತೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಿ
ಶೂ, ಉದ್ದ ಕೈತೋಳಿನ ಬಟ್ಟೆ, ಪಾದದ ತನಕ ಕಾಲನ್ನು ಮುಚ್ಚುವ ಉಡುಪು, ಕೈಗವಸು ಬಳಕೆ ಮಾಡಿ
ಸ್ನಾನ ಮಾಡುವಾಗ ದೇಹದ ಎಲ್ಲಾ ಅಂಗಾಂಗಗಳನ್ನೂ ಸರಿಯಾಗಿ ಉಜ್ಜಬೇಕು
ಯಾವಾಗ ಜಾಗ್ರತೆ ವಹಿಸಬೇಕು?
ಮೂಗು ಕಟ್ಟುವುದು, ಸೋರುವುದು ಆದಾಗ ಅಥವಾ ಕೆನ್ನೆ, ಗಲ್ಲದ ಬಳಿ ನೋವು, ಊತ ಕಾಣಿಸಿಕೊಂಡಾಗ
ಹಲ್ಲು ನೋವು, ಹಲ್ಲು ಉದುರುವುದು ಕಂಡುಬಂದಾಗ
ಕಣ್ಣುರಿ, ನೋವು, ಮಂದದೃಷ್ಟಿ, ಎರಡೆರಡು ವಸ್ತು ಕಂಡಂತಾಗುವುದು, ಕಣ್ಣೀರು ಬರುವುದು, ಮುಖ ನೋವು ಉಂಟಾದಾಗ
ಉಸಿರಾಟದ ಸಮಸ್ಯೆ, ಎದೆ ನೋವು, ಜ್ವರ, ಚರ್ಮದ ಸಮಸ್ಯೆ ಎದುರಾದಾಗ
ಯಾರನ್ನು ಸಂಪರ್ಕಿಸಬೇಕು?
ಬ್ಲಾಕ್ ಫಂಗಸ್ ಅಥವಾ ಮ್ಯೂಕೋಮೈಕೋಸಿಸ್ ಸೋಂಕಿಗೆ ಆರಂಭಿಕ ಹಂತದಲ್ಲೇ ಮದ್ದು ನೀಡುವುದು ಉತ್ತಮವಾದ ಕಾರಣ ತಕ್ಷಣ ವೈದ್ಯರು, ದಂತ ತಜ್ಞರು, ಕಿವಿ, ಮೂಗು, ನಾಲಗೆ ತಜ್ಞರು, ನರರೋಗ ತಜ್ಞರು ಸೇರಿದಂತೆ ಯಾವುದೇ ಸೂಕ್ತ ವೈದ್ಯರನ್ನು ಕೂಡಲೇ ಸಂಪರ್ಕಿಸಬೇಕು.
ಇದನ್ನೂ ಓದಿ:
ಕೊರೊನಾ ಎರಡನೇ ಅಲೆ ನಡುವೆ ಶುರುವಾಯ್ತು ಮ್ಯೂಕೋಮೈಕೋಸಿಸ್ ಸೋಂಕು; ಕರ್ನಾಟಕದಲ್ಲಿ 35 ಪ್ರಕರಣಗಳು ಪತ್ತೆ