ಕೊರೊನಾ ಎರಡನೇ ಅಲೆ ನಡುವೆ ಶುರುವಾಯ್ತು ಮ್ಯೂಕೋಮೈಕೋಸಿಸ್ ಸೋಂಕು; ಕರ್ನಾಟಕದಲ್ಲಿ 35 ಪ್ರಕರಣಗಳು ಪತ್ತೆ

ಕೊರೊನಾ ಸೋಂಕು ನಿವಾರಣೆಯಾದ ಬೆನ್ನಲ್ಲೇ ಪತ್ತೆಯಾಗುವ ಈ ಸೋಂಕು ಕಣ್ಣಿನ ದೃಷ್ಟಿ ಕಳೆದುಕೊಳ್ಳಲು ಕಾರಣವಾಗಬಹುದು, ಬ್ರೇನ್ ಡ್ಯಾಮೇಜ್​ಗೆ ದಾರಿಯಾಗಬಹುದು ಅಥವಾ ಸಾವು ಸಂಭವಿಸುವಂತೆಯೂ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಕೊರೊನಾ ಎರಡನೇ ಅಲೆ ನಡುವೆ ಶುರುವಾಯ್ತು ಮ್ಯೂಕೋಮೈಕೋಸಿಸ್ ಸೋಂಕು; ಕರ್ನಾಟಕದಲ್ಲಿ 35 ಪ್ರಕರಣಗಳು ಪತ್ತೆ
ಪ್ರಾತಿನಿಧಿಕ ಚಿತ್ರ
Follow us
Skanda
| Updated By: Lakshmi Hegde

Updated on: May 10, 2021 | 12:39 PM

ಬೆಂಗಳೂರು: ಕೊರೊನಾ ಎರಡನೇ ಅಲೆಯ ಬಿಗಿ ಹೊಡೆತಕ್ಕೆ ಸಿಕ್ಕು ನಲುಗುತ್ತಿರುವ ಭಾರತದ ವೈದ್ಯಕೀಯ ವ್ಯವಸ್ಥೆಗೆ ಈಗ ಮತ್ತೊಂದು ಸವಾಲು ಎದುರಾಗಿದೆ. ಕೊರೊನಾ ಉಲ್ಬಣಿಸದರೇನೇ ರೋಗಿಗಳನ್ನು ಉಳಿಸಿಕೊಳ್ಳುವುದು ಕಷ್ಟ ಎನ್ನುತ್ತಿರುವ ವೈದ್ಯರಿಗೆ ಈಗ ಬ್ಲಾಕ್ ಫಂಗಸ್ ಸಮಸ್ಯೆ ನಿದ್ದೆಗೆಡುವಂತೆ ಮಾಡುತ್ತಿದೆ. ಕೊರೊನಾದಿಂದ ಗುಣಮುಖರಾದ ರೋಗಿಗಳಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗುತ್ತಿದ್ದು, ಇದರಿಂದಲೂ ಸಾವು ಸಂಭವಿಸಬಹುದಾದ ಸಾಧ್ಯತೆಗಳು ಇರುವುದರಿಂದ ವೈದ್ಯರೀಗ ಎರಡೆರಡು ಸಮಸ್ಯೆಗಳ ವಿರುದ್ಧ ಹೋರಾಡಬೇಕಿದೆ. ಮ್ಯೂಕೋಮೈಕೋಸಿಸ್ ಸೋಂಕು ಎಂದು ಇದನ್ನು ಕರೆಯಲಾಗುತ್ತಿದ್ದು, ಕೊರೊನಾದಿಂದ ಚೇತರಿಸಿಕೊಂಡರೂ ಇದು ಆ ರೋಗಿಗಳನ್ನು ಅತಿಯಾಗಿ ಕಾಡುವ ಮೂಲಕ ಪ್ರಾಣಾಪಾಯ ತಂದೊಡ್ಡುತ್ತಿದೆ.

ಈ ಮೊದಲು ವರ್ಷಕ್ಕೆ ಒಂದೆರೆಡು ಬ್ಲಾಕ್​ ಫಂಗಸ್ ಪ್ರಕರಣ ಮಾತ್ರ ಪತ್ತೆಯಾಗುತ್ತಿತ್ತಾದರೂ ಇದೀಗ ಕೊರೊನಾದ ಎರಡನೇ ಅಲೆಯಲ್ಲಿ ಈ ಸಮಸ್ಯೆ ಹೆಚ್ಚಾಗಲಾರಂಭಿಸಿದೆ. ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದ್ದು, ಗುಜರಾತ್​ನಲ್ಲಿ ನೂರಕ್ಕೂ ಹೆಚ್ಚು ಮಂದಿಯನ್ನು ಕಾಡಿದ ಈ ಸಮಸ್ಯೆ ಎಂಟು ಜನರ ದೃಷ್ಟಿಯನ್ನು ಕಿತ್ತುಕೊಂಡಿದೆ. ಹೀಗಾಗಿ ಬ್ಲಾಕ್ ಫಂಗಸ್ ರೋಗಿಗಳ ಚಿಕಿತ್ಸೆಗೆ ಗುಜರಾತ್ ಸರ್ಕಾರದಿಂದ ಆಸ್ಪತ್ರೆಯಲ್ಲಿ ಪ್ರತೇಕ ವಾರ್ಡ್ ಮಾಡಲಾಗಿದ್ದು, 5000 ಅಪಟೋರೇಸಿನ್ – ಬಿ ಇಂಜೆಕ್ಷನ್ ಖರೀದಿಗೆ 3.12 ಕೋಟಿ ರೂಪಾಯಿ ಹಣ ಖರ್ಚು ಮಾಡಿದೆ. ಸದ್ಯ ಸೂರತ್​ನಲ್ಲಿಯೇ 40ಕ್ಕೂ ಹೆಚ್ಚು ಬ್ಲಾಕ್ ಫಂಗಸ್ ಪ್ರಕರಣ ಪತ್ತೆಯಾಗಿದ್ದು, ಕರ್ನಾಟಕದಲ್ಲೂ ಸುಮಾರು 35 ಪ್ರಕರಣಗಳು ಕಂಡುಬಂದಿವೆ.

ಕೊರೊನಾ ಸೋಂಕು ನಿವಾರಣೆಯಾದ ಬೆನ್ನಲ್ಲೇ ಪತ್ತೆಯಾಗುವ ಈ ಸೋಂಕು ಕಣ್ಣಿನ ದೃಷ್ಟಿ ಕಳೆದುಕೊಳ್ಳಲು ಕಾರಣವಾಗಬಹುದು, ಬ್ರೇನ್ ಡ್ಯಾಮೇಜ್​ಗೆ ದಾರಿಯಾಗಬಹುದು ಅಥವಾ ಸಾವು ಸಂಭವಿಸುವಂತೆಯೂ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ. ಜತೆಗೆ, ಬ್ಲಾಕ್ ಫಂಗಸ್ ಸಮಸ್ಯೆ ತಡೆಗಟ್ಟಲು ಡಯಾಬಿಟಿಸ್ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಅತಿಯಾದ ಸ್ಟೀರಾಯ್ಡ್ ಬಳಕೆ ನಿಯಂತ್ರಿಸಬೇಕು. ಅನಗತ್ಯವಾಗಿ ಆ್ಯಂಟಿ ಬಯೋಟೆಕ್ ತೆಗೆದುಕೊಳ್ಳಬಾರದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ತಲೆನೋವು, ಕಣ್ಣಿನ ಸುತ್ತ ನೋವು, ಕಣ್ಣೀರು, ಮುಖದಲ್ಲಿ ನೋವು ಕಾಣಿಸಿಕೊಳ್ಳುವುದು ಬ್ಲಾಕ್ ಫಂಗಸ್ ಲಕ್ಷಣಗಳಾಗಿದ್ದು, ಈ ಲಕ್ಷಣಗಳ ಆಧಾರದ ಮೇಲೆ ENT ಅಥವಾ ನ್ಯೂರೋ ವೈದ್ಯರನ್ನ ಭೇಟಿ ಆಗಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯತನ ಒಳ್ಳೆಯದಲ್ಲ ಎಂದು ವೈದ್ಯರು ಹೇಳುತ್ತಾರೆ. ಬ್ಲಾಕ್ ಫಂಗಸ್ ಅಥವಾ ಮ್ಯೂಕೋಮೈಕೋಸಿಸ್ ಸೋಂಕು ಚಿಕಿತ್ಸೆಗೆ ಕೇಂದ್ರ ಸರ್ಕಾರ ಕೂಡ ಮಾರ್ಗಸೂಚಿ ನೀಡಿದ್ದು, ಕೊರೊನಾ ಎರಡನೇ ಅಲೆ ನಡುವೆ ಇದು ಏರಿಕೆಯಾಗದಂತೆ ನೋಡಿಕೊಳ್ಳಬೇಕಿದೆ.

ಇದನ್ನೂ ಓದಿ: ಜಗತ್ತಿನ ವಿರುದ್ಧ ಜೈವಿಕ ಅಸ್ತ್ರವಾಗಿ ಕೊರೊನಾ ವೈರಸ್ ಬಳಕೆ.. ಬಯಲಾಯ್ತು ಚೀನಾದ ಕುತಂತ್ರ!