ವೈದ್ಯರು ಕೇವಲ ರೋಗ ಪರಿಹಾರ ಮಾಡುವುದಲ್ಲದೆ ರೋಗಿಯ ಸಹಚಿಂತಕರೂ ಆಗಿರುತ್ತಾರೆ. ಅದಕ್ಕಾಗಿ ಅವರನ್ನು ದೇವರಿಗೆ ಹೊಲಿಸಲಾಗುತ್ತದೆ. ಇಂತಹ ವೈದ್ಯರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಬಿ ಸಿ ರಾಯ್ (ಡಾ. ಬಿಧನ್ ಚಂದ್ರ ರಾಯ್) ಅವರು ವೈದ್ಯಕೀಯ ರಂಗಕ್ಕೆ ನೀಡಿದ ಅಮೋಘ ಕೊಡುಗೆಗಳನ್ನು ನೆನೆಯಲು ಮತ್ತು ಪ್ರತಿಯೊಬ್ಬ ವೈದ್ಯರಿಗೂ ಗೌರವ ಸಲ್ಲಿಸಲು ಆಚರಣೆ ಮಾಡಲಾಗುತ್ತದೆ. ಈ ವಿಶೇಷ ದಿನದಂದು, ಸರಿಸುಮಾರು 45 ವರ್ಷಗಳಿಂದ ವೈದ್ಯಕೀಯ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವಂತಹ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಡಾ। ಅಶೋಕ್ ಕೃಷ್ಣ ಭಟ್, ಹಳಕಾರ ಇವರು ತಮ್ಮ ವೃತ್ತಿ ಜೀವನದಲ್ಲಿ ನಡೆದಿರುವ ಅದರಲ್ಲಿಯೂ ಹೆರಿಗೆಗೆ ಸಂಬಂಧ ಪಟ್ಟಂತೆ ಮರೆಯಲಾಗದ ಕೆಲವು ಅನುಭವಗಳನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.
“ನನ್ನ ವೃತ್ತಿ ಜೀವನದ ಆರಂಭದ ಹತ್ತು ಹದಿನೈದು ವರ್ಷಗಳ ಕಾಲ ರಸ್ತೆ, ವಿದ್ಯುತ್ ಸಂಪರ್ಕ, ದೂರವಾಣಿ ಕೊರತೆಗಳಿದ್ದ ಕಾರಣ ಗ್ರಾಮಾಂತರ ಪ್ರದೇಶಗಳಿಗೆ ಹೋಗಿ ಎಲ್ಲಾ ರೀತಿಯ ಸೇವೆ ನೀಡುವುದು ಅನಿವಾರ್ಯವಾಗಿತ್ತು. ಆಗ ಹೆರಿಗೆ ಮಾಡಿಸುವುದಕ್ಕೆ ಸರಿಯಾದ ಉಪಕರಣಗಳಿರಲಿಲ್ಲ ಆದರೂ ಅಗತ್ಯವಿರುವಾಗ ಹಳ್ಳಿ ಪ್ರದೇಶಗಳಿಗೆ ಹೋಗಿ ಅಲ್ಲಿಯೇ ಹೆರಿಗೆ ಮಾಡಿಸಿದ್ದೇನೆ. ಆ ಸಮಯದಲ್ಲಿ ಕೆಲವು ಕಡೆಗಳಲ್ಲಿ ದೋಣಿಗಳಲ್ಲಿ ಹೋಗಬೇಕಾದಂತಹ ಪರಿಸ್ಥಿತಿ ಇತ್ತು, ಗರ್ಭಿಣಿಯರು ಆಸ್ಪತ್ರೆಗೆ ಬರಲು ಸಾಧ್ಯವಿಲ್ಲದಂತಹ ಪ್ರದೇಶಗಳಿಗೆ ಹೋಗಿ ಹೆರಿಗೆ ಮಾಡಬೇಕಿತ್ತು. ಅಂತಹ ಹಲವಾರು ಘಟನೆಗಳನ್ನು ಮರೆಯಲು ಸಾಧ್ಯವಿಲ್ಲ.
“ಹೆರಿಗೆ ಮಾಡುವಾಗ ತಾಯಿ ಮಗುವನ್ನು ಉಳಿಸಲು ಸಾಧ್ಯವಿಲ್ಲ ಎಂಬಂತಹ ಪ್ರಸಂಗ ಬಂದಿದೆ. ಅದರಲ್ಲಿಯೂ ಒಮ್ಮೆ ಅವಳಿ ಮಕ್ಕಳಲ್ಲಿ ಒಂದು ಮಗು ತಾಯಿಯ ಹೊಟ್ಟೆಯಲ್ಲಿ ಸತ್ತು ಹೋಗಿತ್ತು, ಜೀವಂತ ಇರುವ ಇನ್ನೊಂದು ಮಗುವನ್ನು ಹೊರತೆಗೆಯಬೇಕಿತ್ತು. ಆಗ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬರಲು ದೋಣಿ ದಾಟಬೇಕಿತ್ತು. ಬರುವ ಸಮಯದಲ್ಲಿ ಒಂದು ಮಗುವಿನ ಹೆರಿಗೆ ಆಯಿತು. ದಡಕ್ಕೆ ಬರುವಾಗ ಇನ್ನೊಂದು ಮಗು ಕೂಡ ಹೊರಗೆ ಬಂತು. ಅಂತಹ ಪರಿಸ್ಥಿತಿಯಲ್ಲಿ ನನ್ನ ಶಕ್ತಿ ಮೀರಿ ಆ ಜೀವಗಳನ್ನು ಉಳಿಸಲು ಪ್ರಯತ್ನಿಸಿದ್ದೇನೆ. ಈಗಲೂ ಇಂತಹ ಘಟನೆಗಳು ನನ್ನನ್ನು ಕಾಡುತ್ತದೆ.”
“ಒಮ್ಮೆ ಒಂದು ಹಳ್ಳಿಗೆ ಹೆರಿಗೆ ಮಾಡಿಸಲು ಹೋಗಿದ್ದೆ ಆಕೆಗೆ ನೋವು ಆರಂಭವಾಗಿತ್ತು ನಾನು ಎಲ್ಲಾ ಸಿದ್ಧತೆ ಮಾಡಿಸಿಕೊಂಡು ಅವಳಿಗೆ ಹೇಳಿದೆ ನಿನ್ನ ಶಕ್ತಿ ಮೀರಿ ತಳ್ಳು ಎಂದೇ, ಆಕೆ ತನ್ನ ಕೈಲಾದಷ್ಟು ತಳ್ಳಿದಳು. ಮಗು ಹೊರಗೆ ಬರುತ್ತಿರಲಿಲ್ಲ. ಆಗಿನ ಸಮಯದಲ್ಲಿ ಅನಸ್ತೇಶಿಯಾಗಳಿಲ್ಲ, ತಾಯಿಯಾಗುವವಳು ನೋವು ನುಂಗಬೇಕಿತ್ತು. ಹಾಗೆ ಮಾಡುವಾಗ ನಾನು ಸ್ವಲ್ಪ ಏರು ಧ್ವನಿಯಲ್ಲಿ ಆಕೆಗೆ ಜೋರಾಗಿ ತಳ್ಳು ಎಂದೆ. ಆಕೆ ತಡಮಾಡದೆ ಡಾಕ್ಟ್ರೇ ಗಂಡಸಿರಿಗೆ ಈ ನೋವು ಗೊತ್ತಿಲ್ಲ ಸುಮ್ಮನಿರಿ ಎಂದಿದ್ದಳು, ಆಕೆ ಅಂದು ಹೇಳಿದ ಮಾತನ್ನು ನಾನು ಎಂದಿಗೂ ಮರೆಯುವುದಿಲ್ಲ. ವೈದ್ಯನಾಗಲಿ ಯಾರೇ ಆಗಲಿ ಗಂಡಸರಿಗೆ ಆ ನೋವು ಅರಿವಿಗೆ ಬರುವುದಿಲ್ಲ ಅದು ಅಕ್ಷರಶಃ ಸತ್ಯ. ಅದನ್ನು ಈಗಿನವರು ಕೂಡ ಅರ್ಥ ಮಾಡಿಕೊಳ್ಳಬೇಕು. ಹೆರಿಗೆ ಸಮಯದಲ್ಲಿ ತಾಳ್ಮೆ ಕಳೆದುಕೊಳ್ಳಬಾರದು. ಜೊತೆಗೆ ಗರ್ಭವಾಸ್ಥೆಯಲ್ಲಿರುವಾಗ ಅವರನ್ನು ಮನೆಯವರು ಹೆಚ್ಚು ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳಬೇಕು. ಆ ಸಮಯದಲ್ಲಿ ಅವರಿಗೆ ಸಾಂತ್ವನದ ಅವಶ್ಯಕತೆ ಇರುತ್ತದೆ.”
ಇದನ್ನೂ ಓದಿ: ವೈದ್ಯನಾಗಿ, ಮಂಗಳೂರಿನಲ್ಲಿ ನಡೆದ ಈ ದುರಂತವನ್ನು ನಾನು ಎಂದಿಗೂ ಮರೆಯುವುದಿಲ್ಲ: ಡಾ. ಅಣ್ಣಯ್ಯ ಕುಲಾಲ್
“ನಾನು ಸರಿಸುಮಾರು 5 ರಿಂದ 6 ಸಾವಿರ ಹೆರಿಗೆಗಳನ್ನು ಆಸ್ಪತ್ರೆಯಲ್ಲಿ ಮಾಡಿಸಿದ್ದೇನೆ. ಇನ್ನು ನೂರಾರು ಹೆರಿಗೆಗಳನ್ನು ಅವರ ಮನೆಗಳಿಗೆ ಹೋಗಿ ಅಲ್ಲಿಯೇ ಹೆರಿಗೆ ಮಾಡಿಸಿದ್ದೇನೆ. ಕೆಲವು ಗುಡ್ಡಗಾಡು ಪ್ರದೇಶಗಳು, ಅಲ್ಲಿನವರಿಗೆ ಪೇಟೆಗೆ ಬರುವುದು ತುಂಬಾ ಕಷ್ಟ. ಕೆಲವೊಮ್ಮೆ ಜನರ ಅಸಡ್ಡೆಯಿಂದ ತಾಯಿ, ಮಗು ಪ್ರಾಣ ಕಳೆದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಸೌಲಭ್ಯಗಳಿವೆ. ಆದರೆ ಹಿಂದೆ ತುಂಬಾ ಕಷ್ಟವಿತ್ತು. ಓಡಾಡಲು ಅಥವಾ ಹೆಚ್ಚಿನ ಚಿಕಿತ್ಸೆ ನೀಡಲು ಹತ್ತಿರ ಯಾವುದೇ ಸುಸಜ್ಜಿತ ಆಸ್ಪತ್ರೆಗಳು ಇರಲಿಲ್ಲ. ಮನೆಯಲ್ಲಿಯೇ ಹೊರಗಡೆ ಹೆರಿಗೆಗೆ ಮಾಡಿಸಬೇಕಿತ್ತು. ಆಗಕ್ಕೆ ಹೊಲಿಸಿದರೆ ಈಗ ಅನೇಕ ರೀತಿಯ ತಂತ್ರಜ್ಞಾನಗಳು ಬಂದಿವೆ. ಇದರಿಂದ ಗರ್ಭಿಣಿಯರಿಗೂ ಅನುಕೂಲವಾಗಿದೆ.”
ವೈದ್ಯಕೀಯ ರಂಗದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲ್ಲಾ ವೈದ್ಯರುಗಳಿಗೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:57 am, Mon, 1 July 24