ಬೆಂಗಳೂರು, ಜುಲೈ 1: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಡೆಂಗ್ಯೂ ಹಾವಳಿ ಮಿತಿ ಮೀರಿದೆ. ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ತಾಂಡವವಾಡುತ್ತಿದ್ದರೆ ಅದರ ವೇಗಕ್ಕೆ ಲಗಾಮು ಹಾಕಲು ಕ್ರಮ ಕೈಗೊಳ್ಳಬೇಕಿದ್ದ ಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟೆಸ್ಟಿಂಗ್ ಕಿಟ್ ಕೊರತೆ ಎದುರಾಗಿದೆ. ಸದ್ಯ ಇದೇ ವಿಚಾರ ಈಗ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ, ಬೆಂಗಳೂರಿನಲ್ಲಿ ಪ್ರತಿ 2 ಗಂಟೆಗೆ ಇಬ್ಬರಲ್ಲಿ ಡೆಂಗ್ಯೂ ಲಕ್ಷಣಗಳು ಪತ್ತೆಯಾಗುತ್ತಿವೆ. ಕಳೆದ 6 ತಿಂಗಳಲ್ಲಿ 6 ಸಾವಿರದ 900ಕ್ಕೂ ಹೆಚ್ಚು ಜನ ಡೆಂಗ್ಯೂ ಟೆಸ್ಟ್ಗೆ ಒಳಗಾಗಿದ್ದಾರೆ. ಈ ಪೈಕಿ 2457 ಜನರಲ್ಲಿ ಡೆಂಗ್ಯೂ ದೃಢಪಟ್ಟಿದೆ. ಬೆಂಗಳೂರು ಪೂರ್ವ ವಲಯದಲ್ಲಿ ಓರ್ವ ವೃದ್ಧ, ಓರ್ವ ಯುವಕನನ್ನ ಡೆಂಗ್ಯೂ ಬಲಿ ಪಡೆದಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಶಂಕಿತ ಡೆಂಗ್ಯೂ ಪ್ರಕರಣಗಳ ಹೆಚ್ಚಳ ಆತಂಕ ಮೂಡಿಸಿದೆ.
ರೋಗವನ್ನು ತ್ವರಿತವಾಗಿ ಪತ್ತೆ ಹಚ್ಚಲು ಪಾಲಿಕೆಯಿಂದ ಇದೀಗ ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ನಗರದ ಆರೋಗ್ಯ ಕೇಂದ್ರಗಳಲ್ಲಿ ಡೆಂಗ್ಯೂ ಟೆಸ್ಟಿಂಗ್ಗೆ ಬೇಕಾದ ಎನ್ಎಸ್1 ಕಿಟ್ಗಳೇ ಸಾಕಷ್ಟು ಇಲ್ಲವಂತೆ. ಆಸ್ಪತ್ರೆಗಳಲ್ಲಿ ನಿತ್ಯ 200 ರಿಂದ 250 ಟೆಸ್ಟ್ ಮಾತ್ರ ಮಾಡಲಾಗುತ್ತಿದೆ. ಇದೀಗ, ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ, 30 ಸಾವಿರ ಟೆಸ್ಟಿಂಗ್ ಕಿಟ್ ಪೂರೈಸುವಂತೆ ಕೆಎಸ್ಎಂಸಿಗೆ ಪಾಲಿಕೆ ಬೇಡಿಕೆ ಇಟ್ಟಿದೆ. ಈ ಬಗ್ಗೆ ಬಿಬಿಎಂಪಿ ಆರೋಗ್ಯ ಇಲಾಖೆ ವಿಶೇಷ ಆಯುಕ್ತ ಸೂರಲ್ಕರ್ ವಿಕಾಸ್ ಕಿಶೋರ್ ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ ಗದಗ, ಚಿತ್ರದುರ್ಗ, ಮೈಸೂರು ಸೇರಿ ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ. ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ ಡೆಂಗ್ಯೂ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ಗಳ ವ್ಯವಸ್ಥೆ ಮಾಡಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ಆರೇ ತಿಂಗಳಲ್ಲಿ 170 ಪ್ರಕರಣಗಳು ಪತ್ತೆಯಾಗಿದ್ದರೆ, ಗದಗದಲ್ಲಿ ಇದೇ ತಿಂಗಳಲ್ಲಿ ಒಟ್ಟು 31 ಮಕ್ಕಳಿಗೆ ಡೆಂಗ್ಯೂ ಶಂಕೆ ವ್ಯಕ್ತವಾಗಿದೆ. ಇನ್ನು ಮಂಡ್ಯದಲ್ಲಿ ಎರಡು ತಿಂಗಳಲ್ಲಿ 150ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂವಕ್ಕರಸಿಕೊಂಡಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರಕ್ಕೆ ಇಬ್ಬರು ಸಾವು
ಸದ್ಯ ಪ್ರತಿ ಶುಕ್ರವಾರ ಮಾತ್ರ ಮನೆ ಮನೆ ಸರ್ವೇ ನಡೆಯುತ್ತಿದೆ. ಮನೆಗಳಿಗೆ ಹೋಗಿ ಜನರಿಗೆ ತಿಳಿಹೇಳುವ ಕಾರ್ಯವೂ ಬೆಂಗಳೂರು ವ್ಯಾಪ್ತಿಯಲ್ಲಿ ನಡೆಯುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ