ಹೃದ್ರೋಗವು ವಿಶ್ವದಾದ್ಯಂತ ವೇಗವಾಗಿ ಹೆಚ್ಚುತ್ತಿರುವ ಗಂಭೀರ ಕಾಯಿಲೆಗಳಲ್ಲಿ ಒಂದಾಗಿದೆ. ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿ, ದೈಹಿಕ ಚಟುವಟಿಕೆಗಳ ಕೊರತೆ, ಅತಿಯಾದ ಮದ್ಯಪಾನ ಮತ್ತು ಧೂಮಪಾನ ಇತ್ಯಾದಿಗಳು ಹೃದಯ ಸಂಬಂಧಿ ಕಾಯಿಲೆಯ ಅಪಾಯವು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ವರ್ಲ್ಡ್ ಹಾರ್ಟ್ ಫೆಡರೇಷನ್ ಪ್ರಕಾರ, 80% ಅಕಾಲಿಕ ಮರಣಗಳು ಹೃದಯ ರಕ್ತನಾಳಗಳ ಕಾಯಿಲೆಯಿಂದಾಗಿ ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ಹೃದಯರಕ್ತನಾಳಗಳ ಕಾಯಿಲೆಗಳು ಮತ್ತು ಅದರ ಅಪಾಯಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ನೀವು ನಿಮ್ಮ ದೈನಂದಿನ ಜೀವನದಲ್ಲಿ ಈ ಕೆಲವೊಂದು ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಹೃದಯದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು. ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬಾರದಂತೆ ನೋಡಿಕೊಳ್ಳಬಹುದು.
ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ಹೃದಯದಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ಹೃದಯದ ಆರೋಗ್ಯವನ್ನು ಉತ್ತೆಜಿಸಲು ನೀವು ನಿಮ್ಮ ದೈನಂದಿ ಜೀವನದಲ್ಲಿ ಈ ಕೆಲವು ಅಭ್ಯಾಸಗಳನ್ನು ತಪ್ಪದೆ ಪಾಲಿಸಿ.
ಹೃದಯದ ಆರೋಗ್ಯವನ್ನು ಬೆಂಬಲಿಸುವ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಆಹಾರಗಳನ್ನು ಸೇವನೆ ಮಾಡಿ. ಮತ್ತು ಎಣ್ಣೆಯಲ್ಲಿ ಕರಿದ ಆಹಾರಗಳು, ಸಂಸ್ಕರಿಸಿದ ತಿಂಡಿಗಳು, ಸ್ಯಾಚುರೇಟೆಡ್ ಕೊಬ್ಬು ಟ್ರಾನ್ಸ್ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಆಹಾರ ಸೇವನೆಯನ್ನು ಮಿತಿಗೊಳಿಸಿ.
ನಿಯಮಿತ ದೈಹಿಕ ಚಟುವಟಿಕೆಗಳ ಅಭ್ಯಾಸದ ಮೂಲಕ ಹೃದಯದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು. ಹಾಗಾಗಿ ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಚುರುಕಾದ ನಡಿಗೆ, ಜಾಗಿಂಗ್, ಈಜು, ಸೈಕ್ಲಿಂಗ್ ಮತ್ತು ನೃತ್ಯದಂತಹ ಚಟುವಟಿಕೆಗಳು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಲು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ವಿಶ್ವ ಹೃದಯ ದಿನವನ್ನು ಏಕೆ ಆಚರಿಸಲಾಗುತ್ತದೆ? ಅದರ ಇತಿಹಾಸ, ಪ್ರಾಮುಖ್ಯತೆ ಇಲ್ಲಿದೆ
ಅಧಿಕ ತೂಕ ಅಥವಾ ಬೊಜ್ಜು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಆರೋಗ್ಯಕ ತೂಕವನ್ನು ಕಾಪಾಡಿಕೊಳ್ಳಲು ನಿಮ್ಮ ಆಹಾರ ಕ್ರಮಕ್ಕೆ ಗಮನಕೊಡಿ ಮತ್ತು ದೈಹಿಕ ಚಟುವಟಿಕೆಯನ್ನು ಜೀವನಶೈಲಿಯ ಭಾಗವನ್ನಾಗಿಸಿ.
ಧೂಮಪಾನವು ಹೃದಯ ಸಂಬಂಧಿ ಕಾಯಿಲೆಗಳನ್ನು ಹೆಚ್ಚಿಸುವ ಪ್ರಮುಖ ಅಂಶವಾಗಿದೆ. ಹಾಗಾಗಿ ಧೂಮಪಾನವನ್ನು ತ್ಯಜಿಸುವುದು ಅತ್ಯಗತ್ಯ. ಅಲ್ಲದೆ ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸುವುದು ಕೂಡ ಬಹಳ ಮುಖ್ಯ.
ದೀರ್ಘಕಾಲದ ಒತ್ತಡವು ಹೃದಯ ರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಧ್ಯಾನ, ಆಳವಾದ ಉಸಿರಾಟದ ವ್ಯಾಯಾಮಗಳು, ಯೋಗ ಮುಂತಾದ ಒತ್ತಡ ನಿಯಂತ್ರಣ ತಂತ್ರಗಳನ್ನು ಅಭ್ಯಾಸ ಮಾಡಿ. ಮತ್ತು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಿ.
ಒಂದು ನಿರ್ಧಿಷ್ಟ ವಯಸ್ಸಿನ ನಂತರ ಅಂದರೆ 30 ವರ್ಷಗಳ ಬಳಿಕ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗುತ್ತದೆ. ಇದು ಹೃದಯಾಘಾತ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ