ಇತ್ತೀಚಿನ ದಿನಗಳಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲಾಗಿದೆ. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಮ್ಮ ಬಗ್ಗೆ ನಾವು ಕಾಳಜಿ ವಹಿಸುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡಬಹುದು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತ ತಪಾಸಣೆ, ವ್ಯಾಯಾಮ ಮಾಡುವುದು, ಯೋಗ, ಧ್ಯಾನ ಮತ್ತು ಸಾಕಷ್ಟು ನಿದ್ರೆ ಪಡೆಯುವುದರ ಜೊತೆಗೆ ಆರೋಗ್ಯಕರ ಆಹಾರವನ್ನು ಸೇವಿಸುವುದು ಕೂಡ ಬಹಳ ಮುಖ್ಯವಾಗುತ್ತದೆ. ಇಲ್ಲವಾದಲ್ಲಿ ಆರೋಗ್ಯ ಹದಗೆಡುತ್ತದೆ. ಮನುಷ್ಯನಿಗೆ ಆಹಾರವೇ ಅಮೃತ. ಆದರೆ ಅದನ್ನು ಸರಿಯಾಗಿ ಅಥವಾ ಯೋಗ್ಯ ಆಹಾರಗಳ ಸೇವನೆ ಮಾಡದಿದ್ದರೆ ಅದುವೇ ವಿಷವಾಗಬಹುದು. ಹಾಗಾದರೆ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ಯಾವುದು ಒಳ್ಳೆಯದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಲು ಬೆಳಿಗ್ಗೆ ತಿಂಡಿ ಬಹಳ ಮುಖ್ಯವಾಗುತ್ತದೆ. ಈ ಸಮಯದಲ್ಲಿ ಸೇವನೆ ಮಾಡುವ ಆಹಾರ ಸರಿಯಾಗಿ ಇದ್ದರೆ ಒಳ್ಳೆಯದು. ಹಾಗಾಗಿ ತಿಂಡಿ ತಿನ್ನುವಾಗ ತರಕಾರಿ, ಹಣ್ಣು, ಧಾನ್ಯ, ಒಣಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳಿ. ಈ ರೀತಿಯ ಆಹಾರ ಪದ್ಧತಿ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಇದೇ ರೀತಿ ಮೊಳಕೆಯೊಡೆದ ಹೆಸರು ಕಾಳುಗಳು ಸಹ ಈ ಸಾಲಿಗೆ ಉತ್ತಮ ಸೇರ್ಪಡೆಯಾಗಿದೆ. ಇವು ನಿಮ್ಮ ದೇಹವನ್ನು ಆರೋಗ್ಯಕರವಾಗಿಡಲು ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಜೊತೆಗೆ ಹಲವಾರು ರೋಗಗಳಿಂದ ನಿಮ್ಮನ್ನು ದೂರವಿಡುತ್ತದೆ. ಮೊಳಕೆಯೊಡೆದ ಕಾಳುಗಳನ್ನು ಸೇವಿಸುವುದರಿಂದ ಸಿಗುವ ಪ್ರಯೋಜನಗಳು ಈ ಕೆಳಗಿನಂತಿವೆ.
ಮಧುಮೇಹವನ್ನು ನಿಯಂತ್ರಿಸುತ್ತದೆ: ಮೊಳಕೆಯೊಡೆದ ಹಸಿರು ಹೆಸರು ಕಾಳುಗಳನ್ನು ಸೇವಿಸುವುದು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಸಕ್ಕರೆ ರೋಗಿಗಳಿಗೆ ರಾಮಬಾಣ. ಪ್ರತಿನಿತ್ಯ ಈ ಕಾಳುಗಳನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಬಹುದು.
ಹೃದ್ರೋಗದ ವಿರುದ್ಧ ರಕ್ಷಣೆ ನೀಡುತ್ತದೆ: ಹೃದ್ರೋಗಗಳಿಂದ ದೂರವಿರಲು ಮೊಳಕೆಯೊಡೆದ ಹೆಸರು ಕಾಳುಗಳನ್ನು ಸೇವಿಸುವುದು ಬಹಳ ಮುಖ್ಯ. ಇದನ್ನು ಸೇವಿಸುವ ಮೂಲಕ, ಗಂಭೀರ ಕಾಯಿಲೆಗಳನ್ನು ದೂರವಿಡಬಹುದು. ಜೊತೆಗೆವ ನಿಮ್ಮ ಹೃದಯವು ಆರೋಗ್ಯವಾಗಿರುತ್ತದೆ.
ಫಲವತ್ತತೆಯನ್ನು ಹೆಚ್ಚಿಸುತ್ತದೆ: ವಿವಾಹಿತರು ಮೊಳಕೆಯೊಡೆದ ಹೆಸರು ಕಾಳುಗಳನ್ನು ಸೇವಿಸುವುದು ಬಹಳ ಉತ್ತಮ. ಇದು ಫಲವತ್ತತೆಗೆ ಸಹಾಯ ಮಾಡುತ್ತದೆ. ಇದನ್ನು ಸೇವಿಸುವ ಮೂಲಕ, ದೇಹವು ಒಳಗಿನಿಂದ ಶಕ್ತಿಯುತವಾಗಿರುತ್ತದೆ. ಹಾಗಾಗಿ ನವದಂಪತಿ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಪ್ರತಿನಿತ್ಯ ಮೊಳಕೆಯೊಡೆದ ಹೆಸರು ಕಾಳುಗಳನ್ನು ಸೇವಿಸುವುದು ಉತ್ತಮ ಆಯ್ಕೆಯಾಗಿದೆ.
ಗರ್ಭಿಣಿಯರಿಗೆ ಒಳ್ಳೆಯದು: ಮೊಳಕೆಯೊಡೆದ ಹೆಸರು ಕಾಳುಗಳು ಗರ್ಭಿಣಿಯರಿಗೆ ತುಂಬಾ ಪ್ರಯೋಜನಕಾರಿ. ಗರ್ಭಾವಸ್ಥೆಯಲ್ಲಿ, ಮಹಿಳೆಯರ ದೇಹಕ್ಕೆ ಫೋಲೇಟ್ ಎಂಬ ಪೋಷಕಾಂಶದ ಅಗತ್ಯವಿದೆ. ಇದು ತಾಯಿಯ ಹೊಟ್ಟೆಯೊಳಗೆ ಮಗುವಿನ ಬೆಳವಣಿಗೆಗೆ ಕೆಲಸ ಮಾಡುತ್ತದೆ. ಹಾಗಾಗಿ ಗರ್ಭಿಣಿಯರು ವಾರಕ್ಕೆ ಎರಡು ಬಾರಿಯಾದರೂ ಮೊಳಕೆಯೊಡೆದ ಹೆಸರುಕಾಳುಗಳನ್ನು ಸೇವಿಸಬಹುದು. ಆದರೆ ಅದನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.
ತೂಕ ಇಳಿಸಿಕೊಳ್ಳಲು ಉತ್ತಮ ಆಹಾರ: ತೂಕ ಕಡಿಮೆ ಮಾಡಿಕೊಳ್ಳಲು ಮೊಳಕೆಯೊಡೆದ ಹೆಸರುಕಾಳುಗಳನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಅನಗತ್ಯ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ. ಅದಲ್ಲದೆ ಇದರ ಸೇವನೆಯು ದೀರ್ಘಕಾಲದ ವರೆಗೆ ಹಸಿವನ್ನು ಉಂಟುಮಾಡುವುದಿಲ್ಲ, ಇದರಿಂದಾಗಿ ತೂಕವು ಸಮತೋಲನದಲ್ಲಿರುತ್ತದೆ.
ಇದನ್ನೂ ಓದಿ: ಫ್ರಿಡ್ಜ್ ನಲ್ಲಿ ನಿಂಬೆಹಣ್ಣಿನ ತುಂಡನ್ನು ಇಟ್ಟರೆ ಏನಾಗುತ್ತೆ ತಿಳಿದಿದೆಯೇ?
ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ: ಚಳಿಗಾಲದಲ್ಲಿ ಶೀತ, ವೈರಲ್ ಕಫದಂತಹ ರೋಗಗಳು ಇದ್ದಾಗ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸುವುದು ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಮೊಳಕೆಯೊಡೆದ ಕಡಲೆಕಾಯಿಯಲ್ಲಿ ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್ಗಳು, ಕ್ಯಾಲ್ಸಿಯಂ, ಕಬ್ಬಿಣ, ಖನಿಜ ಮತ್ತು ಜೀವಸತ್ವಗಳು ಹೆಚ್ಚಾಗಿರುತ್ತವೆ. ಹಾಗಾಗಿ ಇದರ ಸೇವನೆ ದೇಹಕ್ಕೆ ಬಹಳ ಒಳ್ಳೆಯದು.
ಅತ್ಯಧಿಕ ಪೌಷ್ಠಿಕಾಂಶ ನೀಡುವ ಆಹಾರ: ಮೊಳಕೆಯೊಡೆದ ಹೆಸರು ಕಾಳಿನಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್ ಪ್ರಮಾಣ ಹೆಚ್ಚಾಗಿರುತ್ತದೆ. ಅಲ್ಲದೆ ಇದು ವಿಟಮಿನ್ ಸಿ ಮತ್ತು ವಿಟಮಿನ್ ಬಿ ನಂತಹ ಪ್ರಮುಖ ಪೋಷಕಾಂಶಗಳನ್ನು ನೀಡುತ್ತದೆ.
ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ: ಮೊಳಕೆಯೊಡೆದ ಹೆಸರುಕಾಳಿನಲ್ಲಿ ಫೈಬರ್ ಹೆಚ್ಚಾಗಿದ್ದು ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಅಲ್ಲದೆ ಈ ಕಾಳುಗಳ ಸೇವನೆ ಮಲಬದ್ಧತೆ ಮತ್ತು ಆಮ್ಲೀಯತೆ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ