Teflon flu: ನಾನ್- ಸ್ಟಿಕ್ ಪಾತ್ರೆಗಳನ್ನು ಬಳಸುವವರು ಈ ವಿಷಯಗಳನ್ನು ಎಂದಿಗೂ ಮರೆಯಬೇಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 28, 2024 | 12:22 PM

ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತಿದೆ. ಇದರಿಂದ ಜನರಿಗೆ ತಮ್ಮ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬ ಭೀತಿ ಆರಂಭವಾಗಿದೆ. ಅದರ ಜೊತೆ ಜೊತೆಗೆ ಇದೀಗ ಹೊಸ ಜ್ವರದ ಬಗ್ಗೆ ವರದಿಯಾಗಿದ್ದು ಜನರನ್ನು ಕಳವಳಕ್ಕೀಡು ಮಾಡಿದೆ. ತಜ್ಞರ ಹೇಳಿಕೆ ಆಧರಿಸಿ ನ್ಯೂ ಇಂಡಿಯನ್​ ಎಕ್ಸ್ಪ್ರೆಸ್​ ವರದಿ ಮಾಡಿರುವಂತೆ, ಅತಿಯಾಗಿ ಬಿಸಿಯಾಗಿರುವ ನಾನ್- ಸ್ಟಿಕ್ ಟೆಫ್ಲಾನ್ ಲೇಪಿತ ಪಾತ್ರೆಗಳಿಂದ ಬರುವ ವಿಷಕಾರಿ ಹೊಗೆಯು "ಟೆಫ್ಲಾನ್ ಫ್ಲೂ" ಎಂದು ಕರೆಯಲ್ಪಡುವ ಜ್ವರಕ್ಕೆ ಕಾರಣವಾಗಬಹುದು ಎಂದು ತಿಳಿಸಿದೆ. ಇದು ಹೇಗೆ ಬರುತ್ತದೆ? ರೋಗ ಲಕ್ಷಣಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Teflon flu: ನಾನ್- ಸ್ಟಿಕ್ ಪಾತ್ರೆಗಳನ್ನು ಬಳಸುವವರು ಈ ವಿಷಯಗಳನ್ನು ಎಂದಿಗೂ ಮರೆಯಬೇಡಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತಿದೆ. ಇದರಿಂದ ಜನರಿಗೆ ತಮ್ಮ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬ ಭೀತಿ ಆರಂಭವಾಗಿದೆ. ಅದರ ಜೊತೆ ಜೊತೆಗೆ ಇದೀಗ ಹೊಸ ಜ್ವರದ ಬಗ್ಗೆ ವರದಿಯಾಗಿದ್ದು ಜನರನ್ನು ಕಳವಳಕ್ಕೀಡು ಮಾಡಿದೆ. ತಜ್ಞರ ಹೇಳಿಕೆ ಆಧರಿಸಿ ನ್ಯೂ ಇಂಡಿಯನ್​ ಎಕ್ಸ್ಪ್ರೆಸ್​ ವರದಿ ಮಾಡಿರುವಂತೆ, ಅತಿಯಾಗಿ ಬಿಸಿಯಾಗಿರುವ ನಾನ್- ಸ್ಟಿಕ್ ಟೆಫ್ಲಾನ್ ಲೇಪಿತ ಪಾತ್ರೆಗಳಿಂದ ಬರುವ ವಿಷಕಾರಿ ಹೊಗೆಯು “ಟೆಫ್ಲಾನ್ ಫ್ಲೂ” ಎಂದು ಕರೆಯಲ್ಪಡುವ ಜ್ವರಕ್ಕೆ ಕಾರಣವಾಗಬಹುದು ಎಂದು ತಿಳಿಸಿದೆ. ಅದರಲ್ಲಿಯೂ ನಮ್ಮ ದೇಶದಲ್ಲಿ ನಾನ್- ಸ್ಟಿಕ್ ಪಾತ್ರೆಗಳನ್ನು ನಾವು ಹೆಚ್ಚು ಹೆಚ್ಚು ಬಳಸುವುದರಿಂದ ಈ ಬಗ್ಗೆ ಹೆಚ್ಚಿನ ಗಮನ ಹರಿಸುವುದು ತುಂಬಾ ಮುಖ್ಯವಾಗಿದೆ. ಏಕೆಂದರೆ ಈ ವಿಷಯದ ಬಗ್ಗೆ ನಮಗಿರುವ ಅರಿವಿನ ಕೊರತೆ ಅಥವಾ ರೋಗನಿರ್ಣಯಗಳನ್ನು ತಪ್ಪಾಗಿ ಗ್ರಹಿಸುವುದರಿಂದ ಇದು ಆರೋಗ್ಯವನ್ನು ಹಾಳು ಮಾಡಬಹುದು.

ವೃಷಣ ಕ್ಯಾನ್ಸರ್​​​ಗೆ ಕಾರಣವಾಗಬಹುದು!

ಪ್ರತಿದಿನ ಟೆಫ್ಲಾನ್ ಲೇಪಿತ ಪಾತ್ರೆಗಳಿಂದ ಬರುವ ವಿಷಕಾರಿ ಹೊಗೆಗೆ ಒಡ್ಡಿಕೊಳ್ಳುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಾಗಾಗಿ ತಜ್ಞರ ಸಲಹೆಯ ಪ್ರಕಾರ, ಮನೆಗಳಲ್ಲಿ ‘ಸ್ಟೇನ್ಲೆಸ್ ಸ್ಟೀಲ್’ ಅಥವಾ ‘ಕ್ಯಾಸ್ಟ್ ಐರನ್’ ನಿಂದ ತಯಾರಿಸಿದ ಅಡುಗೆ ಪಾತ್ರೆಗಳನ್ನು ಬಳಸುವುದು ತುಂಬಾ ಉತ್ತಮವಾಗಿದೆ. ಇದರ ಜೊತೆಗೆ ನಿಮ್ಮ ಮನೆಗಳಲ್ಲಿ ನಾನ್- ಸ್ಟಿಕ್ ಪಾತ್ರೆಗಳ ಮೇಲೆ ಗೀಚಿದ ಅಥವಾ ಹಾಳಾದ ಪ್ಯಾನ್ ಗಳಿದ್ದು ಅವುಗಳನ್ನು ನೀವು ಬಳಸುತ್ತಿದ್ದರೆ ಅದನ್ನು ಇಂದೇ ಬಿಟ್ಟು ಬಿಡಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಏಕೆಂದರೆ ಟೆಫ್ಲಾನ್ ಲೇಪಿತ ಪಾತ್ರೆಗಳಿಗೆ ಒಂದೇ ಒಂದು ಗೀರು ಬಿದ್ದರೂ ಸಹ ಅದು ಸಾವಿರಾರು ವಿಷದ ಕಣಗಳನ್ನು ಬಿಡುಗಡೆ ಮಾಡಬಹುದು. ಅಲ್ಲದೆ ಆ ರಾಸಾಯನಿಕಗಳು ದೇಹದಲ್ಲಿ ಉಳಿಯಬಹುದು ಜೊತೆಗೆ ಮೂತ್ರಪಿಂಡ ಮತ್ತು ವೃಷಣ ಕ್ಯಾನ್ಸರ್ ಸೇರಿದಂತೆ ಗಮನಾರ್ಹ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು.

ಜ್ವರ ಹೇಗೆ ಬರುತ್ತದೆ? ರೋಗ ಲಕ್ಷಣಗಳೇನು?

ಆಸ್ಟರ್ ಸಿಎಂಐ ಆಸ್ಪತ್ರೆಯ ಕ್ಲಿನಿಕಲ್ ನ್ಯೂಟ್ರಿಷನ್ ಎಡ್ವಿನಾ ರಾಜ್ ಅವರು ಹೇಳುವ ಪ್ರಕಾರ, “ಅತಿಯಾಗಿ ಬಿಸಿಯಾಗಿರುವ ಟೆಫ್ಲಾನ್ ಲೇಪಿತ ಪಾತ್ರೆಗಳಿಂದ ಬರುವ ಹೊಗೆಗೆ ಒಡ್ಡಿಕೊಂಡಾಗ ವ್ಯಕ್ತಿಗಳಿಗೆ “ಟೆಫ್ಲಾನ್ ಜ್ವರ” ಕಂಡು ಬರಬಹುದು” ಎಂದು ಹೇಳಿದ್ದಾರೆ. “ಸಾಮಾನ್ಯವಾಗಿ ಟೆಫ್ಲಾನ್ ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ, ಅದು ವಿಷಕಾರಿ ಕಣಗಳು ಮತ್ತು ಅನಿಲಗಳನ್ನು ಬಿಡುಗಡೆ ಮಾಡುತ್ತದೆ, ಇದು ತಲೆನೋವು, ಶೀತ, ಜ್ವರ, ಎದೆ ಬಿಗಿತ, ಕೆಮ್ಮು ಮತ್ತು ಗಂಟಲು ನೋವಿನಂತಹ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ” ಎಂದು ಎಡ್ವಿನಾ ಹೇಳಿದ್ದಾರೆ.

ನೀವು ಆ ವಿಷಕಾರಿ ಹೊಗೆಗೆ ಒಡ್ಡಿಕೊಂಡ ಕೆಲವೇ ಗಂಟೆಗಳಲ್ಲಿ ಇದರ ರೋಗಲಕ್ಷಣಗಳು ನಿಮಗೆ ಕಾಣಲು ಪ್ರಾರಂಭಿಸುತ್ತವೆ. ಜೊತೆಗೆ ಈ ಹೊಗೆಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಥೈರಾಯ್ಡ್ ಸಮಸ್ಯೆ, ಕೆಲವು ಕ್ಯಾನ್ಸರ್ ಸಂಬಂಧಿತ ರೋಗಲಕ್ಷಣಗಳು ಮತ್ತು ಬಂಜೆತನದಂತಹ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಈ ಕಾಳಿನಲ್ಲಿದೆ ಲೈಂಗಿಕ ಶಕ್ತಿಯೊಂದಿಗೆ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುವ ಶಕ್ತಿ

ಟೆಫ್ಲಾನ್ ಫ್ಲೂ ರೋಗಲಕ್ಷಣಗಳು, ಸಾಮಾನ್ಯ ಉಸಿರಾಟದ ಸಮಯದಲ್ಲಿ ಕಂಡು ಬರುವ ಲಕ್ಷಣಗಳಿಗೆ ಹೋಲುತ್ತವೆ, ಎಂದು ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರಜ್ಞ ಡಾ. ಮಂಜುನಾಥ್ ಪಿಎಚ್ ಹೇಳಿದ್ದಾರೆ. ಇವುಗಳನ್ನು ವೈರಲ್ ಸೋಂಕುಗಳು ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಇದರಿಂದ ಸರಿಯಾದ ರೀತಿಯಲ್ಲಿ ರೋಗನಿರ್ಣಯ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ರೀತಿಯ ಅಪಾಯವನ್ನು ಕಡಿಮೆ ಮಾಡಲು, ಅಡುಗೆ ಮಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಿ ಜೊತೆಗೆ ನೀವು ಬಳಸುವ ಪಾತ್ರೆಗಳು ಅತಿಯಾಗಿ ಬಿಸಿಯಾಗುವುದನ್ನು ತಪ್ಪಿಸುವುದು ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.

(ಸೂಚನೆ: ನಾನ್- ಸ್ಟಿಕ್ ಪಾತ್ರೆಗಳಲ್ಲಿ ಅಡುಗೆ ಮಾಡಿದ ನಂತರ ಯಾವುದೇ ರೀತಿಯ ಜ್ವರದ ರೋಗಲಕ್ಷಣಗಳು ಕಂಡು ಬಂದರೆ ವ್ಯಕ್ತಿಗಳು ತಕ್ಷಣ ವೈದ್ಯರನ್ನು ಸಂಪರ್ಕಿಸಿ.)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ